ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟೈಸ್ಡ್ ಮೌಲ್ಯಮಾಪನ: ಒಂದೇ ವಾರದಲ್ಲಿ ಫಲಿತಾಂಶ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷೆ ಮುಗಿದ ಒಂದು ವಾರದಲ್ಲಿಯೇ ಫಲಿತಾಂಶ ಪ್ರಕಟಿಸಲು ಅನುಕೂಲವಾಗುವಂತೆ `ಡಿಜಿಟೈಸ್ಡ್~ ಮೌಲ್ಯಮಾಪನ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಿದೆ.

`ಪರೀಕ್ಷಾರ್ಥ ಯೋಜನೆ ಯಶಸ್ವಿಯಾಗಿದೆ. ಪ್ರಸ್ತುತ ಬೆಂಗಳೂರಿನ ನ್ಯೂ ಹೊರೈಜಾನ್ ಎಂಜಿನಿಯರಿಂಗ್ ಕಾಲೇಜು, ಎಸ್‌ಜೆಬಿಐಟಿ ಕಾಲೇಜು ಮತ್ತು ಕೆ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಜಿಟೈಸ್ಡ್ ಮೌಲ್ಯಮಾಪನ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಇಪ್ಪತ್ತು ಕಾಲೇಜುಗಳಿಗೆ ವಿಸ್ತರಿಸುವ ಯೋಜನೆ ಇದೆ.

ವರ್ಷದ ಅಂತ್ಯಕ್ಕೆ ರಾಜ್ಯದ ಎಲ್ಲ ಕಾಲೇಜುಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಈ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ನಮ್ಮ ವಿಶ್ವವಿದ್ಯಾಲಯದ್ದಾಗಲಿದೆ~ ಎಂದು ವಿಟಿಯು ಕುಲಪತಿ ಪ್ರೊ. ಎಚ್. ಮಹೇಶಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಅತ್ಯುತ್ತಮ ಕ್ಷಮತೆ (ಹೈಸ್ಪೀಡ್) ಇರುವ ಸ್ಕಾನರ್‌ಗಳಲ್ಲಿ ಎಂಟು ಗಂಟೆಯ ಅವಧಿಯಲ್ಲಿ ಎಂಟುನೂರು ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಸ್ಕ್ಯಾನ್ ಮಾಡಿದ ನಂತರ ಉತ್ತರ ಪತ್ರಿಕೆಯನ್ನು ಡಿಕೋಡ್ ಮಾಡಲಾಗುತ್ತದೆ. ಎಲ್ಲ ಉತ್ತರ ಪತ್ರಿಕೆಗಳು ವಿಟಿಯು ಸರ್ವರ್‌ನಲ್ಲಿ ಲೋಡ್ ಆಗುತ್ತದೆ. ಆ ನಂತರ ಅದನ್ನು ಮೌಲ್ಯಮಾಪಕರಿಗೆ ಹಂಚಲಾಗುತ್ತದೆ~ ಎಂದು ಅವರು ಮಾಹಿತಿ ನೀಡಿದರು. `ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಎರಡೂ ಕಂಪ್ಯೂಟರ್‌ನಲ್ಲಿ ಲಭ್ಯವಾಗುತ್ತದೆ.
 
ಆದ್ದರಿಂದ ಸುಲಭವಾಗಿ ಮೌಲ್ಯಮಾಪನ ಮಾಡಿ ಅಂಕವನ್ನು  ಕಂಪ್ಯೂಟರ್‌ನಲ್ಲೇ ದಾಖಲಿಸಬಹುದು. ಎಲ್ಲ ಉತ್ತರಗಳಿಗೆ ಅಂಕಗಳನ್ನು ನೀಡಿದ ಒಟ್ಟು ಅಂಕವನ್ನು ಲೆಕ್ಕ ಹಾಕಲು ಕಂಪ್ಯೂಟರ್‌ನಲ್ಲೇ ಆಯ್ಕೆ ಇದೆ. ಒಂದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ವಿದ್ಯಾರ್ಥಿ ಉತ್ತರ ನೀಡಿದ್ದರೆ ಅತ್ಯುತ್ತಮ ಉತ್ತರವನ್ನು ಸ್ವಯಂಚಾಲಿತವಾಗಿ ಕಂಪ್ಯೂಟರ್ ಆಯ್ಕೆ ಮಾಡಲಿಕೊಳ್ಳಲಿದೆ.

ಆದ್ದರಿಂದ ಒಟ್ಟು ಅಂಕಗಳನ್ನು ಲೆಕ್ಕ ಹಾಕುವಾಗ ಆಗುತ್ತಿದ್ದ ತಪ್ಪುಗಳು ಆಗುವುದಿಲ್ಲ~ ಎಂದು ಅವರು ಮಾಹಿತಿ ನೀಡಿದರು.

5 ಕೋಟಿ ಉಳಿತಾಯ: ಮೌಲ್ಯಮಾಪನಕ್ಕಾಗಿ ವಾರ್ಷಿಕ ಸುಮಾರು ಐದು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಎಲ್ಲ ಕಾಲೇಜುಗಳಲ್ಲೂ ಈ ಪದ್ಧತಿ ಜಾರಿಗೆ ತಂದ ಮೇಲೆ ಐದು ಕೋಟಿ ರೂಪಾಯಿ ಉಳಿತಾಯ ಆಗಲಿದೆ~ ಎಂದು ಮಹೇಶಪ್ಪ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಪ್ರತಿ ಬೇಕೆಂದು ಅರ್ಜಿ ಸಲ್ಲಿಸಿದರೆ ಸಾಕು ವಿದ್ಯಾರ್ಥಿಯ ಇ ಮೇಲ್ ವಿಳಾಸಕ್ಕೆ ಕೆಲವೇ ನಿಮಿಷಗಳಲ್ಲಿ ಉತ್ತರ ಪತ್ರಿಕೆಯನ್ನು ಕಳುಹಿಸಲಾಗುತ್ತದೆ. ಎಲ್ಲ ಉತ್ತರ ಪತ್ರಿಕೆಗಳು ಸರ್ವರ್‌ನಲ್ಲಿ ಇರುವುದರಿಂದ ಈ ಕೆಲಸ ಸುಲಭವಾಗಲಿದೆ ಎಂದರು.

ವರ್ಷಕ್ಕೆ 1600 ಮಾತ್ರ: ವಿದ್ಯಾರ್ಥಿಗಳ ಮೇಲಿನ ಶುಲ್ಕದ ಹೊರೆಯನ್ನು ಕಡಿಮೆ ಮಾಡುವ ಚಿಂತನೆ ಇದ್ದು ಪ್ರತಿ ವರ್ಷ ಒಟ್ಟು 1,600 ರೂಪಾಯಿ ಮಾತ್ರ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ. ಆತ ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣನಾದರೆ ಮತ್ತೆ ಶುಲ್ಕ ನೀಡದೆ ಪರೀಕ್ಷೆ ಬರೆಯಬಹುದು.
 
ಆದರೆ ಪ್ರತಿ ವರ್ಷ 1,600 ರೂಪಾಯಿ ಕಟ್ಟಲೇಬೇಕು. ಇದರಿಂದಾಗಿ ವಿದ್ಯಾರ್ಥಿ ಪರೀಕ್ಷೆ ಕಟ್ಟಲು ಅರ್ಜಿ ಭರ್ತಿ ಮಾಡುವುದು, ಬ್ಯಾಂಕ್‌ನಲ್ಲಿ ಶುಲ್ಕ ಕಟ್ಟುವುದು ತಪ್ಪಲಿದೆ ಎಂದರು. ವಿಶ್ವವಿದ್ಯಾಲಯದ ವಿಶೇಷ ಆಧಿಕಾರಿ ಪ್ರೊ. ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಪಾಲರು ತಿರ್ಮಾನ ಕೈಗೊಳ್ಳುತ್ತಾರೆ: `ನಕಲಿ ಅಂಕಪಟ್ಟಿ~ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶಪ್ಪ `ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸಿದೆ. ಆದ್ದರಿಂದ ನಾನೇನೂ ಮಾತನಾಡಲು ಇಷ್ಟಪಡುವುದಿಲ್ಲ. ಈ ಕುರಿತು ಏನು ಮಾಡಬೇಕೆಂದು ರಾಜ್ಯಪಾಲರು ನಿರ್ಧರಿಸಲಿದ್ದಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT