ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಪಿ ಆಯ್ಕೆ ಕುತೂಹಲ

Last Updated 13 ಜನವರಿ 2011, 6:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರ    (ಡಿಜಿಪಿ- ಐಜಿಪಿ) ಆಯ್ಕೆ ಕುತೂಹಲ ಕೆರಳಿಸಿದ್ದು, ಡಿಜಿಪಿ ದರ್ಜೆಯ ಅಧಿಕಾರಿಯನ್ನು ಮಾತ್ರ ಈ ಹುದ್ದೆಗೆ ಪರಿಗಣಿಸಬೇಕೇ ಅಥವಾ ಐಪಿಎಸ್ ಅಧಿಕಾರಿಯಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿದವರನ್ನೂ ಆಯ್ಕೆ ಮಾಡಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ-ಐಜಿಪಿ) ಡಾ.ಅಜಯ್‌ಕುಮಾರ್ ಸಿಂಹ ಅವರು ಇದೇ 31ರಂದು ನಿವೃತ್ತಿಯಾಗುತ್ತಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ನೂತನ  ಡಿಜಿಪಿ- ಐಜಿಪಿಯನ್ನು ಆಯ್ಕೆ ಮಾಡಬೇಕಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಡಿಜಿಪಿ ದರ್ಜೆಯ ಮೂವರಿಗಿಂತ ಹೆಚ್ಚು ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಕಳುಹಿಸಿ ಮೂರು ಮಂದಿಯ ಪಟ್ಟಿಯನ್ನು ಕೇಳುವುದು ನಿಯಮ. ಸೇವಾ ಹಿರಿತನದಲ್ಲಿ ಅಜಯ್ ಅವರ ನಂತರದ ಸ್ಥಾನದಲ್ಲಿ ಇರುವ ಜೀಜಾ ಹರಿಸಿಂಗ್ ಮತ್ತು ಶರತ್ ಸಕ್ಸೇನಾ ಅವರು ಇದೇ ತಿಂಗಳ 31ರಂದೇ ನಿವೃತ್ತರಾಗುತ್ತಿದ್ದಾರೆ. ಸಿಐಡಿಯ ಮುಖ್ಯಸ್ಥ ಡಾ.ಡಿ.ವಿ.ಗುರುಪ್ರಸಾದ್ ಹಾಗೂ ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ.ಎಸ್.ಟಿ. ರಮೇಶ್ ಮಾತ್ರ ಈಗ ಉಳಿದಿರುವ ಡಿಜಿಪಿ ದರ್ಜೆಯ ಅಧಿಕಾರಿಗಳು. ಆದ್ದರಿಂದ ಇವರಿಬ್ಬರ ಹೆಸರನ್ನು ಮಾತ್ರ ಡಿಪಿಎಆರ್, ಯುಪಿಎಸ್‌ಸಿಗೆ ಕಳುಹಿಸಿಕೊಟ್ಟಿದೆ.

30 ವರ್ಷ ಆದವರನ್ನೂ ಪರಿಗಣಿಸಿ: ಕೇಂದ್ರ ಸರ್ಕಾರದ ನಿಯಮದಂತೆ 30 ವರ್ಷ ಸೇವೆ ಸಲ್ಲಿಸಿರುವ ಐಪಿಎಸ್ ಅಧಿಕಾರಿಗಳನ್ನೂ ಡಿಜಿಪಿ- ಐಜಿಪಿ ಹುದ್ದೆಗೆ ಪರಿಗಣಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮತ್ತು ಯುಪಿಎಸ್‌ಸಿಗೆ ಪತ್ರ  ಬರೆದಿದ್ದಾರೆ.

ಯುಪಿಎಸ್‌ಸಿ ಕಳುಹಿಸುವ ಪಟ್ಟಿಯನ್ನೇ ರಾಜ್ಯ ಸರ್ಕಾರ ಪರಿಗಣಿಸಿ ಗುರುಪ್ರಸಾದ್ ಅಥವಾ ರಮೇಶ್ ಅವರನ್ನು ಡಿಜಿಪಿ- ಐಜಿಪಿ ಆಗಿ ಆಯ್ಕೆ ಮಾಡಲಿದೆಯೇ ಅಥವಾ ಬಿದರಿ ಅವರ ಮನವಿಯನ್ನು ಪರಿಗಣಿಸಿ ನೂತನ ಪಟ್ಟಿಯನ್ನು ಯುಪಿಎಸ್‌ಸಿಗೆ ಕಳುಹಿಸಿ ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದೇ ಎಂದು ಕಾದು ನೋಡಬೇಕಿದೆ. 
 
ಬಿದರಿ ಅವರ ಮನವಿಯನ್ನು ಪರಿಗಣಿಸಿದರೆ ಈ ಕೆಳಕಂಡ ಅಧಿಕಾರಿಗಳನ್ನು ಹುದ್ದೆಗೆ ಪರಿಗಣಿಸಬೇಕಾಗುತ್ತದೆ. ಒಂಬತ್ತು ಅಧಿಕಾರಿಗಳ ಪಟ್ಟಿ ಮತ್ತು ಅವರ ದರ್ಜೆ:  ಡಿಜಿಪಿಗಳಾದ ಡಾ.ಡಿ.ವಿ.ಗುರುಪ್ರಸಾದ್, ಡಾ.ಎಸ್.ಟಿ.ರಮೇಶ್, ಎಡಿಜಿಪಿಗಳಾದ ಎನ್.ಅಚ್ಯುತರಾವ್, ಎಂ.ಕೆ.ಶ್ರೀವಾತ್ಸವ್, ಎ.ಆರ್.ಇನ್ಫೆಂಟ್, ಕುಚ್ಚಣ್ಣ ಶ್ರೀನಿವಾಸ್, ಶಂಕರ್ ಬಿದರಿ, ಸುಶಾಂತ್ ಮಹಾಪಾತ್ರ, ರೂಪಕ್ ಕುಮಾರ್ ದತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT