ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜೆ.ಗಳ ಹುಚ್ಚಾಟಕ್ಕೆ ಅಮಾಯಕಳ ಬಲಿ

ಯುವರಾಣಿಯ ಆರೋಗ್ಯ ಸ್ಥಿತಿ ಬಹಿರಂಗ: ಲಂಡನ್‌ನಲ್ಲಿ ಮಂಗಳೂರಿನ ನರ್ಸ್ ನಿಗೂಢ ಸಾವು
Last Updated 8 ಡಿಸೆಂಬರ್ 2012, 20:23 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಗರ್ಭಿಣಿಯಾಗಿರುವ ಬ್ರಿಟನ್ ಯುವರಾಣಿ ಕೇಟ್ ಮಿಡ್ಲ್‌ಟನ್ ಅವರ ಆರೋಗ್ಯ ಸ್ಥಿತಿಯ ಮಾಹಿತಿ ಬಹಿರಂಗವಾಗಲು `ಕಾರಣವಾದ' ಮಂಗಳೂರು ಮೂಲದ ನರ್ಸ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

46 ವರ್ಷದ ಜೆಸಿಂತಾ ಸಲ್ಡಾನ ಸಾವಿಗೀಡಾದ ದುರ್ದೈವಿ. ಅವರ ಶವವು ಕಿಂಗ್ ಎಡ್ವರ್ಡ್-7 ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿ ಶುಕ್ರವಾರ ಬೆಳಿಗ್ಗೆ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಜೆಸಿಂತಾ ಸಾವಿನ ಕಾರಣ ಖಚಿತವಾಗಿಲ್ಲ ಎಂಬುದು ಪೊಲೀಸರ ಹೇಳಿಕೆ. ಆದರೆ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ `2ಡೆ ಎಫ್‌ಎಂ' ಎಂಬ ವಾಣಿಜ್ಯ ರೇಡಿಯೊದ ನಿರೂಪಕರಿಬ್ಬರು (ಡಿ.ಜೆಗಳು) ಸೃಷ್ಟಿಸಿದ ಅವಾಂತರ ಇದಾಗಿದೆ. ಕೇಟ್ ಗರ್ಭಿಣಿಯಾಗಿರುವುದನ್ನು ಬ್ರಿಟನ್ ಅರಮನೆ ಸೋಮವಾರ ಖಚಿತಪಡಿಸುತ್ತಿದ್ದಂತೆ ಡಿ.ಜೆ.ಗಳಾದ  30 ವರ್ಷದ ಯುವತಿ ಮೆಲ್ ಗ್ರೇಗ್ ಮತ್ತು ಯುವಕ ಮೈಕೆಲ್ ಕ್ರಿಸ್ಟಿಯನ್ ಸೇರಿ ಯೋಜನೆಯೊಂದನ್ನು ರೂಪಿಸಿದರು. ಆ ಪ್ರಕಾರ, ಬುಧವಾರ ಬೆಳಗಿನ ಜಾವ, ಕೇಟ್ ದಾಖಲಾಗಿದ್ದ ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ಕರೆ ಮಾಡಿದರು. ಆಗ ಜೆಸಿಂತಾ ಅಲ್ಲಿನ ಕೌಂಟರ್‌ನಲ್ಲಿ ಸ್ವಾಗತಕಾರಿಣಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಿ.ಜೆ.ಗಳು ಕರೆ ಸ್ವೀಕರಿಸಿದ ಜೆಸಿಂತಾ ಬಳಿ, ತಮ್ಮನ್ನು ಕ್ರಮವಾಗಿ `ರಾಣಿ ಎಜಿಜಬೆತ್ ಮತ್ತು ರಾಜಕುಮಾರ ಚಾರ್ಲ್ಸ್' ಎಂದು ಹೇಳಿಕೊಂಡು, ಯುವರಾಣಿ ಕೇಟ್ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ನೀಡುವಂತೆ ಕೋರಿದರು.

ರಾಜ ಮನೆತನದ ಬಗ್ಗೆ ಗೌರವ ಹೊಂದಿದ್ದ ಜೆಸಿಂತಾ ಅದನ್ನು ಹುಸಿ ಕರೆ ಎಂದು ತಿಳಿಯಲಾಗದೆ, ಕೇಟ್ ದಾಖಲಾಗಿದ್ದ ವಾರ್ಡ್‌ಗೆ ವರ್ಗಾಯಿಸಿದ್ದರು. ಆಗ ಅಲ್ಲಿ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಕೇಟ್‌ರ `ಬೆಳಗಿನ ಬಳಲಿಕೆ' ಕುರಿತು ವಿವರವಾಗಿ ಹೇಳಿದ್ದರು.

ನಂತರ ಸಿಡ್ನಿಯ ಎಫ್‌ಎಂನಲ್ಲಿ ಇದು ಬಿತ್ತರವಾಯಿತು. ಮುಂದಿನ ಪರಿಣಾಮಗಳನ್ನು ಅರಿಯದ ಡಿ.ಜೆ.ಗಳು, ತಮ್ಮ `ಹುಸಿ ಕರೆಯ ಸಾಹಸ'ವನ್ನು ಅತ್ಯಂತ ದೊಡ್ಡ ಸಾಧನೆ ಎಂದೇ ಬಣ್ಣಿಸಿಕೊಂಡು ಬೀಗಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವೇ ಪ್ರಶಂಸೆ ಮಾಡಿಕೊಂಡಿದ್ದರು.

ಎಫ್.ಎಂ ರೇಡಿಯೊ ನಿರೂಪಕರು ಹುಸಿ ಕರೆಗಳನ್ನು, ಕುಚೇಷ್ಟೆಗಳನ್ನು ಮಾಡುವುದು ಸಾಮಾನ್ಯವಾದರೂ, ಬ್ರಿಟನ್ ಮಾಧ್ಯಮಗಳು ಮಾತ್ರ ಈ ವಿಷಯದಲ್ಲಿ ಡಿ.ಜೆ.ಗಳ `ಸಾಹಸ'ವನ್ನು ತೀವ್ರವಾಗಿ ಖಂಡಿಸಿ ಮುಖಪುಟದಲ್ಲಿ ಮುದ್ರಿಸಿದವು. `ಸೂಕ್ಷ್ಮ ಮನಃಸ್ಥಿತಿಯ ಗರ್ಭಿಣಿಯೊಬ್ಬರ ವಿವರಗಳನ್ನು ಹುಸಿ ಕರೆಯ ನೆರವಿನಿಂದ ಸಂಗ್ರಹಿಸಿ, ಆ ಸಂಗತಿಗಳನ್ನು ಪ್ರಸಾರ ಮಾಡಿದ್ದು ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯ ಪರಮಾವಧಿ' ಎಂದು ಅಭಿಪ್ರಾಯಪಟ್ಟವು.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಡಿ.ಜೆ.ಗಳ ವಿರುದ್ಧ ಟೀಕಾಪ್ರವಾಹ ಹರಿಯಿತು.

`ಟೀಕೆಗಳ ಸುರಿಮಳೆಯಾದದ್ದು ಡಿ.ಜೆ.ಗಳ ವಿರುದ್ಧವಾದರೂ ಜೆಸಿಂತಾ ಮಾನಸಿಕ ಒತ್ತಡಕ್ಕೆ ಒಳಗಾದರು. ರಾಜ ಮನೆತನವನ್ನು ಮುಜುಗರಕ್ಕೆ ಸಿಲುಕಿಸಿದ್ದಕ್ಕೆ ತಾನು ಕಾರಣ ಎಂಬ ಪಾಪಪ್ರಜ್ಞೆಯ ಒತ್ತಡದಲ್ಲಿ ಆತ್ಮಹತ್ಯೆಯ ಮೊರೆ ಹೋದರು' ಎಂದು ಬ್ರಿಟನ್‌ನ ಅತಿ ಹೆಚ್ಚು ಪ್ರಸಾರದ ಪತ್ರಿಕೆ `ದಸನ್' ಅಭಿಪ್ರಾಯಪಟ್ಟಿದೆ.

ಸಂತಾಪದ ಮಹಾಪೂರ: ಜೆಸಿಂತಾ ಸಾವಿನ ಬಗ್ಗೆ ಬ್ರಿಟನ್ ಸೇರಿದಂತೆ ಎಲ್ಲೆಡೆಯಿಂದ ಸಂತಾಪ ವ್ಯಕ್ತವಾಗಿದೆ.  ಸೇಂಟ್ ಜೇಮ್ಸ ಅರಮನೆಯು ಹೇಳಿಕೆ ನೀಡಿ, `ಜೆಸಿಂತಾ ಸಾವಿನ ಸುದ್ದಿ ತಿಳಿದು ಯುವರಾಣಿ ಕೇಟ್ ಮಿಡ್ಲ್‌ಟನ್ ಅವರಿಗೆ ನೋವಾಗಿದೆ. ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ಹೋದಾಗಲೆಲ್ಲಾ ಆಕೆ ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಿದ್ದರು' ಎಂದು ಸ್ಮರಿಸಿದೆ.

`ಜೆಸಿಂತಾ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯದಿಂದ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೊಬ್ಬ ಅತ್ಯುತ್ತಮ ನರ್ಸ್. ಎಲ್ಲರೂ ಅವರನ್ನು ಗೌರವಿಸುತ್ತಿದ್ದರು. ತಮ್ಮ ವೃತ್ತಿಪರತೆ ಹಾಗೂ ಸ್ವಭಾವದಿಂದಾಗಿ ಸಹೋದ್ಯೋಗಿಗಳ ನಡುವೆ ಅವರು ಜನಪ್ರಿಯರಾಗಿದ್ದರು' ಎಂದು ಆಸ್ಪತ್ರೆ ಹೇಳಿದೆ.

ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲಾರ್ಡ್ ಸಹ ಜೆಸಿಂತಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

ನಿರೂಪಕರು ನಾಪತ್ತೆ: ಜೆಸಿಂತಾ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಫ್.ಎಂ ರೇಡಿಯೊ ಸಂಸ್ಥೆಯು ನಿರೂಪಕರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ. ಅವರಿಬ್ಬರೂ ಟ್ವಿಟರ್ ಖಾತೆಗಳನ್ನು ರದ್ದುಗೊಳಿಸಿ ನಾಪತ್ತೆಯಾಗಿದ್ದಾರೆ. ರೇಡಿಯೊದ ಫೇಸ್‌ಬುಕ್ ಪುಟಕ್ಕೆ, ಇಬ್ಬರನ್ನೂ ಕೆಲಸದಿಂದ ವಜಾ ಮಾಡಲು ಒತ್ತಾಯಿಸುವ ಹೇಳಿಕೆಗಳು ದಾಖಲಾಗುತ್ತಿವೆ.

ರೇಡಿಯೊ ಸಂಸ್ಥೆಯ ಸಿಇಒ ರ‌್ಹಿಸ್ ಹೊಲೆರ‌್ಯಾನ್ ಜೆಸಿಂತಾ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದರೂ, ತಮ್ಮ ಸಂಸ್ಥೆ ಯಾವುದೇ ನೀತಿಬಾಹಿರ ಕೃತ್ಯ ಎಸಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಜನಾಭಿಪ್ರಾಯಕ್ಕೆ ಗೌರವ ನೀಡುವ ಸಲುವಾಗಿ, ದೂಷಣೆಗೆ ಗುರಿಯಾಗಿರುವ ನಿರೂಪಕರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಡಿ.ಜೆ. ಯುವತಿ ಮೆಲ್ ಗ್ರೇಗ್ ಈ ಸಂಸ್ಥೆಗೆ ಹೊಸಬರೇನಲ್ಲ. ಆದರೆ ಮತ್ತೊಬ್ಬ ಡಿ.ಜೆ. ಮೈಕೆಲ್ ಕೇವಲ ಒಂದು ವಾರದ ಹಿಂದಷ್ಟೇ ಈ ಸಂಸ್ಥೆ ಸೇರಿದ್ದ ಎನ್ನಲಾಗಿದೆ.

ಪುಟ್ಟ ಸಮುದಾಯ ರೇಡಿಯೊ ಸಂಸ್ಥೆಯೊಂದರಲ್ಲಿ ಕೆಲವು ವರ್ಷಗಳ ಹಿಂದೆ ವೃತ್ತಿ ಆರಂಭಿಸಿದ್ದ ಈತ ಮಹತ್ವಾಕಾಂಕ್ಷಿಯಾಗಿದ್ದ ಎನ್ನಲಾಗಿದೆ.

ಜೆಸಿಂತಾ ಹೇಳಿದ್ದೇನು?
ಡಿ.ಜೆ.ಗಳ ಹುಸಿ ಕರೆಗೆ ಪ್ರತಿಕ್ರಿಯಿಸಿದ ಜೆಸಿಂತಾ, ಅದನ್ನು ಕೇಟ್ ದಾಖಲಾಗಿದ್ದ ವಾರ್ಡ್‌ಗೆ ವರ್ಗಾಯಿಸುವ ಮುನ್ನ, `ಓಹ್ ನೀವಾ, ಒಂದು ಕ್ಷಣ ನಿಲ್ಲಿ, ಮೇಡಮ್...'

(ಓಹ್ ಯು, ಜಸ್ಟ್ ಹೋಲ್ಡ್ ಆನ್, ಮ್ಯಾಮ್) ಎಂದಷ್ಟೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT