ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಡಿಪಿಐ ವಿರುದ್ಧ ತನಿಖೆಗೆ ಆದೇಶ

ರೂ1.79 ಕೋಟಿ ದುರ್ಬಳಕೆ ಆರೋಪ
Last Updated 21 ಡಿಸೆಂಬರ್ 2013, 9:34 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ವೀರಣ್ಣ ಅವರು ಸರ್ವ ಶಿಕ್ಷಣ ಅಭಿಯಾನದ ಅನುದಾನದಲ್ಲಿ ರೂ1.79 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ತಕ್ಷಣವೇ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ್ ಮೇಲನಮನಿ ಆಗ್ರಹಿಸಿ, ಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ಶುಕ್ರವಾರ ಇಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿತು.

ಸಭೆ ಆರಂಭಗೊಂಡು, ಅನುಪಾಲನಾ ವರದಿ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ಹಾಗೂ ಇತರ ಅಧಿಕಾರಿಗಳು ಕುಳಿತಿದ್ದ ವೇದಿಕೆ ಬಳಿ ಬಂದ ವಿನಯಕುಮಾರ್‌, ತಮ್ಮ ಆರೋಪಕ್ಕೆ ಪೂರಕವಾಗಿ ದಾಖಲೆಗಳನ್ನು ಅಧ್ಯಕ್ಷರ ಮೇಜಿನ ಮೇಲಿಟ್ಟರು.

ಡಿಡಿಪಿಐ ವೀರಣ್ಣ ಅವರನ್ನು ಉದ್ದೇ­ಶಿಸಿ ಏರಿದ ಧ್ವನಿಯಲ್ಲಿ ಮಾತ­ನಾ­ಡಿದ ವಿನಯಕುಮಾರ್, ‘ನಿಮಗೆ ಎಷ್ಟು ಮೊತ್ತದ ಹಣವನ್ನು ನಿಮ್ಮ ವಿವೇಚನಾ­ಧಿಕಾರದ ಮೂಲಕ ವೆಚ್ಚ ಮಾಡಲು ಅವಕಾಶವಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ‘ನಿಯಮಗಳ ಅನ್ವಯವೇ ಎಲ್ಲ ಅನುದಾನ ಖರ್ಚು ಮಾಡಲಾಗುತ್ತದೆ’ ಎಂಬ ವೀರಣ್ಣ ಅವರ ಉತ್ತರದಿಂದ ತೃಪ್ತರಾಗದ ವಿನಯಕುಮಾರ್, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾ­ಹಿನಿಗೆ ತರುವ ಸಂಬಂಧ ಜಾರಿಗೊ­ಳಿಸಲಾದ ಕಾರ್ಯಕ್ರಮದಡಿ ರೂ1.79 ಕೋಟಿಯನ್ನು ವೈ.ಸುದರ್ಶನರಾವ್‌ ಅವರ ಖಾತೆಗೆ ಜಮಾ ಮಾಡಿರುವುದು ನಿಯಮ ಬಾಹಿರ. ವಾಸ್ತವವಾಗಿ ಆ ಹಣವನ್ನು ಬಿಇಒ ಮತ್ತು ಬಿಆರ್‌ಸಿ ಅವರ ಜಂಟಿ ಖಾತೆಗೆ ಜಮೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಡಿಡಿಪಿಐ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ವಿನಯಕುಮಾರ್‌ ಪಟ್ಟು ಹಿಡಿದರು.

ಈ ಬೇಡಿಕೆಯನ್ನು ತಳ್ಳಿ ಹಾಕಿದ ಅಧ್ಯಕ್ಷ ಜನಾರ್ದನ ಹುಲಗಿ, ಕಾನೂನು ಪ್ರಕಾರ, ಈ ವಿಷಯ ಕುರಿತಂತೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನೀವು ವೇದಿಕೆ ಮೇಲೆ ಬಂದು ಸಭೆಯಲ್ಲಿ ಪಾಲ್ಗೊಳ್ಳಿ ಎಂದು ವಿನಯಕುಮಾರ್‌ಗೆ ಮನವಿ ಮಾಡಿದರು.
ಈ ಮಾತಿಗೆ ಮಣಿಯದ ವಿನಯಕುಮಾರ್‌, ಈ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ಹೇಳಿದ­ರಲ್ಲದೇ, ಎಲ್ಲ ದಾಖಲೆಗಳು ನಿಮ್ಮ ಮುಂದೆಯೇ ಇರುವಾಗ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂದು ಪ್ರಶ್ನಿಸಿದರು.

’ಯಾವುದೇ ಅಧಿಕಾರಿ ವಿರುದ್ಧ ಆರೋಪ ಕೇಳಿ ಬಂದಾಗ, ಆ ಬಗ್ಗೆ ಕಾನೂನೂ ಪ್ರಕಾರ ತನಿಖೆ ನಡೆಸಿಯೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ವಾರದ ಒಳಗಾಗಿ ಡಿಡಿಪಿಐ ವಿರುದ್ಧ ನೀವು ಮಾಡಿರುವ ಆರೋಪ ಕುರಿತಂತೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ’ ಜನಾರ್ದನ ಹುಲಿಗಿ ಆದೇಶ ನೀಡಿದ ನಂತರ, ವಿನಯಕುಮಾರ್‌ ಸಭೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT