ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ವಿ. ಗುಂಡಪ್ಪನವರ ಚೊಚ್ಚಿಲ ಕೃತಿ ‘ವೇದಾಂತ ಅಂಡ್ ನ್ಯಾಷನಲಿಸಂ’

ಹಳತು ಹೊನ್ನು
Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ಡಿ. ವಿ. ಗುಂಡಪ್ಪ ಅವರ ‘Vedanta and Nationalism’ ಇಂಗ್ಲಿಷ್ ಕೃತಿಯು 1909ರಲ್ಲಿ ಬೆಂಗಳೂರು ಸಿಟಿಯ ‘ದ ಸ್ವದೇಶಿ ಲೈಬ್ರೆರಿ’ಯ ವತಿಯಿಂದ ಪ್ರಕಟವಾಯಿತು. ನಾಲ್ಕು ಆಣೆ ಬೆಲೆಯ, 62 ಪುಟಗಳ ಈ ಪುಸ್ತಕದ ಜೊತೆಗೆ ಡಿ.ವಿ.ಜಿ. ಇನ್ನೂ ಏಳು ಇಂಗ್ಲಿಷ್ ಕೃತಿಗಳನ್ನು ರಚಿಸಿರುವುದು ತಿಳಿದುಬಂದಿದೆ. ಅವುಗಳೆಂದರೆ:  The Problems of Indian Native States (1917),  The Native States in the Empire (1918),  The Indian Native States and the Montagu-Chelmsford Report (1918), The Government of India and the Indian States, The Indian States Committee : A Note on its Terms of Reference and Their Implications (1928), All About Mysore (1931) ಹಾಗೂ The States and their People in the Indian Constitution (1931).

ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿಯವರಿಗೆ ಆಪ್ತರಾಗಿದ್ದ ಗುಂಡಪ್ಪನವರು ಹೊಸಗನ್ನಡ ಸಾಹಿತ್ಯಾರಂಭದ ಧೀಮಂತರಲ್ಲಿ ಅಗ್ರಗಣ್ಯರು. ಸಾರ್ವಜನಿಕ ಜನಜೀವದಲ್ಲಿ ರುಚಿ-ಶುಚಿಗಳಿರಬೇಕೆಂಬ ಹಂಬಲದ ಅವರು, ಅದಕ್ಕಾಗಿ ದುಡಿದವರು. 1945ರಲ್ಲಿ ಬೆಂಗಳೂರಿನಲ್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯನ್ನು ಪ್ರಾರಂಭಿಸಿ, ಕೊನೆಯವರೆಗೂ ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು. 1930ರ ದಶಕದಲ್ಲಿ ದೇಶದ ಅನೇಕ ಮಹನೀಯರು ‘ಗೋಖಲೆ ಸಂಸ್ಥೆ’ಗಾಗಿ ಸ್ವಪ್ರೇರಣೆಯಿಂದ ವಂತಿಗೆ ನೀಡಿದ್ದರೂ ಆ ಚೆಕ್‌ಗಳನ್ನು ಡಿ.ವಿ.ಜಿ ನಗದು ಮಾಡಿಸಲೇ ಇಲ್ಲ.

1960ರ ದಶಕದಲ್ಲಿ ಮೈಸೂರು ಸರ್ಕಾರ ಅವರಿಗೆ ತಿಂಗಳಿಗೆ 500 ರೂಪಾಯಿ ಮಾಸಾಶನ ನೀಡಿದ್ದನ್ನು ಸದ್ದುಗದ್ದಲಗಳಿಲ್ಲದೆ ನಿರಾಕರಿಸಿದ್ದರು. ಈ ನಿರಾಕರಣೆಯನ್ನು ಪತ್ರಿಕೆಗಳಿಗೆ ನೀಡಬಾರದಾಗಿ ವಿನಂತಿಸಿಕೊಂಡಿದ್ದರು. ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಅಂದಿನ ಕಾಲಘಟ್ಟದ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ‘ಸರ್ವೆಂಟ್ ಆಫ್ ಇಂಡಿಯ’ ಹಾಗೂ ‘ಬಾಂಬೆ ಕ್ರಾನಿಕಲ್’ ಪತ್ರಿಕೆಗಳು ಮನಸೋಕ್ತವಾಗಿ ಮೆಚ್ಚಿಕೊಂಡಿವೆ.

1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದ ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು. ‘ಭಾರತಿ’, ‘ವೀರಕೇಸರಿ’, ‘ಸೂರ್ಯೋದಯ ಪ್ರಕಾಶಿಕಾ’, ‘ಈವೆನಿಂಗ್ ಮೈಲ್’, ‘ಸುಮತಿ’, ‘ಮೈಸೂರು ಟೈಮ್ಸ್’, ‘ಕರ್ನಾಟಕ’ (ಇಂಗ್ಲಿಷ್ ಮತ್ತು ಕನ್ನಡ), ‘ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’, ‘ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆ’, ‘ಪಬ್ಲಿಕ್ ಅಫೇರ್ಸ್’ ಪತ್ರಿಕೆಗಳನ್ನು ನಡೆಸಿದ ಕೀರ್ತಿ ಗುಂಡಪ್ಪನವರದ್ದು.

ಪ್ರಸಕ್ತ ಪುಸ್ತಕವನ್ನು ಡಿ.ವಿ.ಜಿ. ತಮ್ಮ 22ನೇ ವಯಸ್ಸಿನಲ್ಲಿ ಬರೆದದ್ದು ಗಮನಾರ್ಹ ಸಂಗತಿ. ಇದು ಅವರ ಮೊತ್ತಮೊದಲ ಪುಸ್ತಕ.  ಅಹಂ (Self) ಕುರಿತ ವಿಸ್ತೃತ ವಿವರಣೆ ಮೊದಲ ಅಧ್ಯಾಯದಲ್ಲಿದೆ. ಇಲ್ಲಿ 15 ಒಳ ವಿಭಾಗಗಳಿದ್ದು, ಅವುಗಳಿಗೆ ಶೀರ್ಷಿಕೆ ನೀಡಿಲ್ಲ. ‘ಭಗವದ್ಗೀತೆಯ’ ಹಲವಾರು ಶ್ಲೋಕಗಳನ್ನು ಉಲ್ಲೇಖಿಸಿ, ‘ಅಹಂ’ ಶಬ್ದದ ಹಲವು ಮಗ್ಗುಲುಗಳ ಅರ್ಥದ ಛಾಯೆಗಳನ್ನು ಲೇಖಕರು ಉದಾಹರಣೆಗಳೊಂದಿಗೆ ನೀಡಿದ್ದಾರೆ. ದೈವ ಮತ್ತು ಮಾನವನ ಸಂಬಂಧವನ್ನು ತಾಯಿ–ಮಗುವಿನ ಆತ್ಮೀಯ ನೆಲೆಯಲ್ಲಿ ಪರಿಭಾವಿಸಿದ್ದಾರೆ. ಮಗುವು ಮೊದಲು ಸಂಪೂರ್ಣವಾಗಿ ತಾಯಿಯನ್ನು ಅವಲಂಬಿಸುತ್ತದೆ. ಕ್ರಮಕ್ರಮೇಣ ತಾಯಿಯು ಮಗುವಿನ ಭೌತಿಕ ವಿಚಾರಗಳನ್ನು ಗಮನಿಸುತ್ತಿದ್ದವಳು, ಮುಂದೆ ಅದರ ಮಾನಸಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಜಗತ್ತಿನ ಬೆಳೆವಣಿಗೆಗೆ ಸಹಾಯಕಳಾಗುವಂತೆ ದೈವ-ಭಕ್ತನ ಸಂಬಂಧಗಳಿರುತ್ತವೆ ಎನ್ನುವ ಹೋಲಿಕೆ ಔಚಿತ್ಯಪೂರ್ಣವಾಗಿದೆ. ಈ ಸಂದರ್ಭದಲ್ಲಿ ಪುರುಷಸೂಕ್ತದಲ್ಲಿ ಬರುವ ‘ಶಾಶ್ವತ ಶಕ್ತಿ’ಯ ಪ್ರಸ್ತಾಪ ಬರುತ್ತದೆ. ಆರ್ಷೇಯ ಕೃತಿಗಳ ಜೊತೆಗೆ ಲೇಖಕರು ಪಾಶ್ಚಾತ್ಯ ಚಿಂತಕರಾದ ಬಾಲಫೌರ್ ಮುಂತಾದವರ ಚಿಂತನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯತೆಯ ವಿಚಾರಗಳನ್ನು ಚಿಂತಿಸಿರುವುದು ವಿಶೇಷ.

ವೇದಾಂತದ ರೀತ್ಯ, ‘ರಾಷ್ಟ್ರೀಯತೆ ದೇವರಿಂದ ಒದಗಿಬಂದ ಒಂದು ಧರ್ಮ’ ಎಂದು ಡಿ.ವಿ.ಜಿ. ಹೇಳುತ್ತಾರೆ. ರಾಷ್ಟ್ರೀಯತೆ ಎನ್ನುವುದು ತನ್ನ ತಾಯ್ನಾಡನ್ನು ಕುರಿತ ಪ್ರೀತಿ ಅಥವಾ ದೇಶಪ್ರೇಮದ ಉತ್ಪನ್ನವಾದ ಒಂದು ಉದಾತ್ತ ಪರಿಕಲ್ಪನೆ. ಅದು ಒಳ್ಳೆಯದೂ ಶುದ್ಧವಾದದ್ದೂ ಆಗುವುದು ಜಾಗತಿಕ ನೆಲೆಗೆ ತಲುಪಿ ಒಟ್ಟು ಮನುಕುಲದೊಂದಿಗೆ ಮಿಳಿತವಾದಾಗ ಮಾತ್ರ. ಈ ಅಂಶವು ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯೇ ಆಗಿದೆ. ಆದರೆ ಮಾನವೀಯತೆಯಿಂದ ಬೇರ್ಪಟ್ಟ ರಾಷ್ಟ್ರೀಯತೆಯು ದುರ್ಬಲವೂ ಕೆಡುಕನ್ನುಂಟು ಮಾಡುವುದೂ ಆಗಿರುತ್ತದೆ.

ಎರಡನೆಯ ಭಾಗದಲ್ಲಿ ಭಾರತೀಯ ಮೂಲದ ಪ್ರಾಚೀನ ಕೃತಿಗಳ ಜೊತೆಗೆ ಪಾಶ್ಚಾತ್ಯ ಆಧುನಿಕ ಕೃತಿಗಳಲ್ಲಿ ಬರುವ ಆಧ್ಯಾತ್ಮಿಕ ವಿಚಾರಗಳ ಚಿಂತನೆಯನ್ನು ನಡೆಸಿದ್ದಾರೆ. Sociology ಎನ್ನುವ ಈ ಭಾಗದಲ್ಲಿ ವೇದ, ಉಪನಿಷತ್ತು, ಭಗವದ್ಗೀತೆ ಹಾಗೂ ಪುರಾಣಗಳಲ್ಲಿ ಬರುವ ಚಿಂತನೆಗಳನ್ನು ಪಾಶ್ಚಾತ್ಯ ಚಿಂತಕರಾದ ಮ್ಯಾಥ್ಯೂ ಆರ್ನಾಲ್ಡ್, ಹಕ್ಸ್ಲಿ, ವರ್ಡ್ಸವರ್ತ್, ರಾಲ್ಫ್ ವಾಲ್ಡೋ ಎಮರ್ಸನ್, ಗಯತೆ ಮುಂತಾದವರ ಚಿಂತನೆಗಳೊಂದಿಗೆ ತೌಲನಿಕವಾಗಿ ವಿಶ್ಲೇಷಿಸಿರುತ್ತಾರೆ. ಗಯತೆಯು ಹೇಳುವ To me the external existence of my soul is proved from my idea of activity. If I work incessantly till my death, nature is bound to give me another form of existence when the present can no longer sustair my spirit. ಎನ್ನುವ ಮಾತುಗಳನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದ ಇಪ್ಪತ್ತೆರಡನೆಯ ಶ್ಲೋಕದೊಂದಿಗೆ ಡಿ.ವಿ.ಜಿ. ಸಮನ್ವಯಿಸಿದ್ದಾರೆ. ಆ ಶ್ಲೋಕವು ಹೀಗಿದೆ: ವಾಸಾಂಸಿ ಜೀರ್ಣಾನಿ ಯಥಾ ವಿಹಾಯನವಾನಿ ಗೃಹ್ಣಾತಿ ನರೋರಾಣಿ | ತಥಾ ಶರೀರಾಣಿ ವಿಹಾಯ ಜೀರ್ಣಾನ್ಯ ನ್ಯಾನಿ ಸಂಯಾಶಿನವಾಣಿದೇಹಿ. (ಮನುಷ್ಯನು ಹಳೆಯ ವಸ್ತ್ರಗಳನ್ನು ಬಿಟ್ಟು ಹೊಸವಸ್ತ್ರಗಳನ್ನು ಹೇಗೆ ಧರಿಸುವನೋ ಹಾಗೆಯೇ ಜೀರ್ಣವಾದ ಶರೀರಗಳನ್ನು ಬಿಟ್ಟು ಈ ಜೀವನು ಹೊಸದಾದ ಶರೀರಗಳನ್ನು ಹೊಂದುತ್ತಾನೆ. ಕನ್ನಡಾನುವಾದ: ಜಾನ್ ಗ್ಯಾರೆಟ್, 1846). ಈ ತುಲನೆ ಅತ್ಯಂತ ಸೂಕ್ತವಾಗಿದೆ.

ಪುಸ್ತಕದ ಮೂರನೆಯ ಭಾಗದಲ್ಲಿ ಭಾರತೀಯ ತತ್ತ್ವಜ್ಞಾನದ ಅಂಶಗಳನ್ನು ಹೋಲುವ ಹಾಗೂ ಪುಷ್ಟೀಕರಿಸುವ ಪಾಶ್ಚಾತ್ಯ ಚಿಂತಕರಾದ ಸ್ಪೆನ್ಸರ್, ಸ್ಟೆಡ್, ಜೆ. ಆರ್. ಸೀಲೆ, ಲೂಯಿಸ್, ಆರ್. ಬ್ರೋಡ, ಜೆ.ಎ. ಫ್ರೌಡ್, ಎಡ್ವರ್ಡ್ ಕಾರ್ಪೆಂಟರ್ ಮುಂತಾದವರ ಚಿಂತನೆಗಳನ್ನು ಪರಾಮರ್ಶನೆಗಾಗಿ ನೀಡಿದ್ದಾರೆ. ಭಾರತೀಯ ವೇದಾಂತದ ಅಂಶಗಳು ಕಾಲಪರೀಕ್ಷೆಯನ್ನು ಎದುರಿಸಿ ಉಳಿದುಕೊಂಡು ಬಂದಿದೆ ಎನ್ನುವುದನ್ನು ಪ್ರತಿಪಾದಿಸುವುದು ಲೇಖಕರ ಮುಖ್ಯ ಉದ್ದೇಶ. ಒಂದು ಶತಮಾನದಷ್ಟು ಹಿಂದೆಯೇ ರಾಷ್ಟ್ರೀಯತೆ, ದೇಶಭಕ್ತಿ ಮುಂತಾದ ವಿಚಾರಗಳನ್ನು ಅದರ ಗುಣಾತ್ಮಕ ನೆಲೆಗಳಲ್ಲಿ ಡಿ.ವಿ.ಜಿ ಅವರು ಚಿಂತಿಸಿರುವುದು, ನಮ್ಮ ಸಮಕಾಲೀನ ಸಂದರ್ಭದ ಸೂಕ್ಷ್ಮ ಚರ್ಚೆಗಳನ್ನು ವಿಸ್ತರಿಸಲು ಸಹಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT