ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್ಪಿ ಲೋಕಾಯುಕ್ತ ಬಲೆಗೆ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯಿಂದ ರೂ.25 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಸೋಮವಾರಪೇಟೆ ಉಪ ವಿಭಾಗದ ಕುಶಾಲನಗರ ಡಿವೈಎಸ್ಪಿ ಎಂ.ನಾರಾಯಣ್ ಭಾನುವಾರ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.

ನಗರದ ಕೆಫೆ ಅರಮನೆ ಹೋಟೆಲ್‌ನಲ್ಲಿ ನಾರಾಯಣ್ ಅವರು ಆರ್. ಮೋಹನ್ ಅವರಿಂದ ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಲಂಚ ಪಡೆಯುವಾಗ  ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.

ಕುಶಾಲನಗರದ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನವರು ದಾನಿಗಳಿಂದ ಹಣ ವಸೂಲಿ ಮಾಡಿ ವಂಚಿಸಿದೆ ಎಂದು ಆರೋಪಿಸಿ ಎರಡೂವರೆ ತಿಂಗಳ ಹಿಂದೆ  ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ನ ಪ್ರಮುಖರಾದ ಡಾ.ಸುರೇಶ್‌ಕುಮಾರ್, ಪ್ರಭು  ಎಂಬುವರನ್ನು ಬಂಧಿಸಲಾಗಿತ್ತು.

ಟ್ರಸ್ಟ್‌ನ ಸದಸ್ಯರಲ್ಲಿ ಒಬ್ಬರಾದ ಪದ್ಮಾವತಿ ಅವರನ್ನು ಸಹ ಪೊಲೀಸರು ಬಂಧಿಸಬಹುದೆಂಬ ಶಂಕೆ ಇತ್ತು. ಹೀಗಾಗಿ ಪದ್ಮಾವತಿ  ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ  ಅವರ ಅಳಿಯ ಮೋಹನ್ ಈ ಹಿಂದೆ ಎರಡು ಕಂತುಗಳಲ್ಲಿ ರೂ.4 ಲಕ್ಷ ಹಣವನ್ನು ನಾರಾಯಣ್ ಅವರಿಗೆ ನೀಡಿದ್ದರು. ನಾರಾಯಣ್ ಮತ್ತೆ ರೂ.50 ಸಾವಿರ ನೀಡುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಹಾಗಾಗಿ ಮೋಹನ್ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು
.
ಒಂದು ವರ್ಷದ ಹಿಂದೆ ಕುಶಾಲನಗರದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ್ ಮೈಸೂರಿಗೆ ವರ್ಗವಾಗಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಮತ್ತೆ ಕುಶಾಲನಗರಕ್ಕೆ ವರ್ಗವಾಗಿದ್ದರು.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಎಸ್.ಇ.ಡಿಸೋಜಾ ಮಾರ್ಗದರ್ಶನದಲ್ಲಿ ಡಿಎಸ್ಪಿ ಸಿ.ಬಿ.ಪಾಟೀಲ್, ಇನ್‌ಸ್ಪೆಕ್ಟರ್‌ಗಳಾದ ಜಯರಾಮ್, ಗೋಪಾಲಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT