ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್‌ಪಿ ವಿರುದ್ಧ ಸಿಎಂಗೆ ದೂರು: ಮುನಿಯಪ್ಪ

Last Updated 18 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಕೋಲಾರ: ಇಟ್ಟಿಗೆ ಕಾರ್ಖಾನೆ ಕಾರ್ಮಿಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೋಲಾರ ಡಿವೈಎಸ್‌ಪಿ ಶ್ರೀಹರಿ ಬರಗೂರು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಡನೆ ಮಾತನಾಡಿ, ಅಮಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಅಮಾನವೀಯ. ಮಾರಣಾಂತಿಕವಾಗಿ ತಾವೇ ಶಿಕ್ಷಿಸಲು ಮುಂದಾಗಿದ್ದು ಅಕ್ಷಮ್ಯ. ಡಿವೈಎಸ್‌ಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ ನಡೆಸಿದ್ದು ಸರಿಯಾಗಿಯೇ ಇದೆ ಎಂದು ಪ್ರತಿಪಾದಿಸಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವುದರ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಅಕ್ರಮ ಮರಳು ಸಾಗಣೆ ದಂಧೆ ತಡೆಯುವಲ್ಲಿ ಜಿಲ್ಲಾಡಳಿತದ ಜತೆ ಸಹಕರಿಸಬೇಕು ಎಂದು ಕೋರಿದರು.
ಚಿಂತಾಮಣಿಯಲ್ಲಿ ಗಣೇಶ ಪ್ರತಿಮೆ ವಿಸರ್ಜನೆ ಸಂದರ್ಭ ಹೆಡ್‌ಕಾನ್ಸ್‌ಟೆಬಲ್ ಮೃತಪಟ್ಟ ಘಟನೆ ಇನ್ನೂ ಹಸಿರಾಗಿದೆ.

ಯಾವುದೇ ದುರ್ಘಟನೆ ನಡೆದರೂ ನಿರಪರಾಧಿಗಳಿಗೆ ಅನ್ಯಾಯವಾಗಬಾರದು. ಅಪರಾಧಿಗಳು ಶಿಕ್ಷೆಯಿಂದ ಹೊರತಾಗಬಾರದು. ಹೆಡ್‌ಕಾನ್ಸ್‌ಟೆಬಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, `ನಮಗೆ ಅವರು ಬೇಕಾಗಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ವದಂತಿ ಸತ್ಯಕ್ಕೆ ದೂರವಾಗಿದೆ ಎಂದು ನುಡಿದರು.

ಸಿಎಂಗೆ ಪತ್ರ: ಮಳೆ ಅಸಮರ್ಪಕವಾಗಿರುವ ಕಾರಣ ಬರ ಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ 9 ತಿಂಗಳಿಗೆ ಅಗತ್ಯವಿರುವ ಮೇವನ್ನು ಪೂರೈಸಲು, ನೀರಿನ ಸಮಸ್ಯೆ ಬಗೆಹರಿಸಲು ತುರ್ತು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ನೆರವಾಗಬೇಕು ಎಂದು ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ ಎಂದು ತಿಳಿಸಿದರು. ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಮಾಜಿ ಸಚಿವ ನಿಸಾರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಮುಖಂಡರಾದ ವೆಂಕಟಮುನಿಯಪ್ಪ, ಪ್ರಸಾದ್‌ಬಾಬು, ಬಿಸಪ್ಪಗೌಡ, ಕುಮಾರ್, ಜಯದೇವ್ ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ `ಗ್ರಾಮ ದರ್ಶನ~
ಮುಳಬಾಗಲು:
ಪ್ರಾಕೃತಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಎಇಸಿಎಸ್ ರಾಮಪ್ರಿಯ ಮತ್ತು ಮ್ಯೋಗ್ನೋಲಿಯಾ ಶಿಕ್ಷಣ ಸಂಸ್ಥೆ ಈಚೆಗೆ ವಿದ್ಯಾರ್ಥಿಗಳಿಗೆ `ಗ್ರಾಮ ದರ್ಶನ~ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪ್ರಾಂಶುಪಾಲ ಸುಬ್ರಮಣ್ಯಂ. ಜಿ.ನಾರಾಯಣಪ್ಪ ಗ್ರಾಮೀಣ ಸೊಗಡು ಪರಿಸರ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT