ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಎದುರು ಜಲಸಂಪನ್ಮೂಲ ಅಧಿಕಾರಿಗಳ ರಂಪಾಟ!

Last Updated 22 ಫೆಬ್ರುವರಿ 2013, 7:55 IST
ಅಕ್ಷರ ಗಾತ್ರ

ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ನೀರು ನಿರ್ವಹಣೆ ಸಂಬಂಧ ಜಲಸಂಪನ್ಮೂಲ ಇಲಾಖೆಯ ಸಿರವಾರ ಹಾಗೂ ಮಸ್ಕಿ ಉಪ ವಿಭಾಗದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮುಂದೆಯೇ ನೀರಿಗಾಗಿ ರಂಪಾಟ ಮಾಡಿಕೊಂಡ ಘಟನೆ ಬುಧವಾರ ಸಂಜೆ ಇಲ್ಲಿ ನಡೆದಿದೆ.

ಕಾಲುವೆಯಲ್ಲಿ ನೀರು ನಿರ್ವಹಣೆ ಪರಿಶೀಲನೆಗಾಗಿ ಮಸ್ಕಿ ಸಮೀಪದ ಮೈಲ್ 69ಕ್ಕೆ ಭೇಟಿ ನೀಡಿದ್ದ ರಾಯಚೂರಿನ ನೂತನ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿಯೇ ಸಿರವಾರ ವಿಭಾಗದ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರಸಿಂಗ್ ಮಾತನಾಡಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವ ಕಾರಣ ಭತ್ತದ ಬೆಳೆಗಾಗಿ ಉಪ ಕಾಲುವೆಗಳಿಗೆ ನೀರು ಬಿಡಬಾರದು ಎಂಬ ಸ್ಪಷ್ಟ ಆದೇಶ ಇದ್ದರೂ ಸಹ ಮಸ್ಕಿ ಉಪ ವಿಭಾಗದಲ್ಲಿ ಉಪ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ದೂರಿದರು.

ಈ ವಿಷಯವಾಗಿ ಮಸ್ಕಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರಸ್ವಾಮಿ ಹಾಗೂ ವೀರಸಿಂಗ್ ನಡುವೆ ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ನಡುವೆಯೇ ನೀರಿಗಾಗಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಒಬ್ಬರ ಮೇಲೆ ಒಬ್ಬರು ಪ್ರತ್ಯಾರೋಪ ಮಾಡಿ ರಂಪಾಟ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಇಲಾಖೆಯ ಹಿರಿಯ ಅಧಿಕಾರಿಗಳು ಇಬ್ಬರನ್ನು ಸಮಾಧಾನ ಪಡಿಸಿದರು.

ಜಿಲ್ಲಾಧಿಕಾರಿ ಆದೇಶ: ಬರುವ ಬೇಸಿಗೆಯಲ್ಲಿ ರಾಯಚೂರು, ಸಿರವಾರ ಮತ್ತಿತರ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿಸುವ ಸಂಬಂಧ ಎಡದಂಡೆ ಮುಖ್ಯ ಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ರಾಯಚೂರು ಸಮೀಪದ 104ನೇ ಮೈಲ್‌ಗೆ ಇನ್ನೂ ಸಮರ್ಪಕ ನೀರು ಮುಟ್ಟಿಲ್ಲ. ಕೂಡಲೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮೇಲ್ಬಾಗದಲ್ಲಿನ ಉಪ ಕಾಲುವೆಗಳ ಗೇಟ್‌ಗಳನ್ನು ಮುಚ್ಚುವ ಮೂಲಕ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಕೆರೆಗಳು ತುಂಬವವರೆಗೆ ಉಪ ಕಾಲುವೆ ಹಾಗೂ ವಿತರಣಾ ಕಾಲುವೆಯಲ್ಲಿನ ನೀರಿನ ಪ್ರಮಾಣ ಕುಗ್ಗಿಸುವಂತೆ ಆದೇಶಿಸಿದರು. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಕುಡಿಯುವ ನೀರಿಗಾಗಿ ಮಾರ್ಚ್ ಅಂತ್ಯದವರೆಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು ಕೊನೆ ಭಾಗಕ್ಕೆ ನೀರು ತಲುಪಿದ ನಂತರ ಮೇಲ್ಭಾಗದವರು ನೀರು ಪಡೆಯಬೇಕು ಎಂದರು. ಮಸ್ಕಿ ಉಪ ವಿಭಾಗದಲ್ಲಿನ ಎಲ್ಲಾ ಉಪ ಕಾಲುವೆಗಳ ಗೇಟ್‌ಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಆಯುಕ್ತ ಟಿ. ಯೋಗೇಶ ಸೇರಿದಂತೆ ಸಿಂಧನೂರು, ಸಿರವಾರ, ಮಸ್ಕಿ, ಕವಿತಾಳ ವಿಭಾಗಗಳ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT