ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ನಂತರ ಎಸ್‌ಪಿ ನಗರ ಸಂಚಾರ

Last Updated 15 ಡಿಸೆಂಬರ್ 2012, 11:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರಪ್ರದೇಶದ ನಿವಾಸಿಗಳಲ್ಲಿ ಶುಕ್ರವಾರ ಮಧ್ಯಾಹ್ನ 12.30ರಿಂದ 1.30ರ ವರೆಗಿನ ಅವಧಿ ಅಚ್ಚರಿ ಮೂಡಿಸಿತ್ತು.

ಎಂ.ಜಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಶಿಡ್ಲಘಟ್ಟ ವೃತ್ತ ಮುಂತಾದ ಕಡೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಪೊಲೀಸರ ಓಡಾಟ ಜೋರಾಗಿತ್ತು. ಅಲ್ಲಲ್ಲಿ ಜನಜಂಗುಳಿ ಸೇರುತ್ತಿದ್ದ, ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತಿದ್ದ ಕಾರಣ ಬಹುತೇಕ ಜನರಲ್ಲಿ ಕುತೂಹಲ ಮೂಡಿಸುತ್ತಿತ್ತು. `ಇಲ್ಲಿ ಏನು ನಡೆಯುತ್ತಿದೆ' ಎಂದು ಪರಸ್ಪರ ಪ್ರಶ್ನಿಸಿಕೊಂಡರು.

ಇಷ್ಟೆಲ್ಲ ಅಚ್ಚರಿಗೆ ಕಾರಣವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್ ನಗರ ಪ್ರದಕ್ಷಿಣೆ.ನಗರದಲ್ಲಿನ ಸಮಸ್ಯೆ ಪರಿಶೀಲಿಸಲು, ವಾಹನ ಸಂಚಾರ ವ್ಯವಸ್ಥೆ ಸುಧಾರಿಸಲು ಮತ್ತು ಮೂಲಸೌಕರ್ಯ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಅವರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆ ಕೈಗೊಂಡರು. ಬಡಾವಣೆಗಳ ಜನರೊಂದಿಗೆ ಸಂವಾದ ನಡೆಸಿದರು. ಎಲ್ಲಿ ಸಮಸ್ಯೆಗಳಿವೆ ಮತ್ತು ಯಾವ ಸೌಕರ್ಯಗಳು ಪೂರೈಸಬೇಕಿದೆ ಎಂಬ ಕುರಿತು ಪಟ್ಟಿಯನ್ನೆ ಸಿದ್ಧಪಡಿಸಿಕೊಂಡರು.

ನಗರದ ಎಂ.ಜಿ.ರಸ್ತೆ ಬಳಿಯಿರುವ ಎಪಿಎಂಸಿ ಬಳಿ ಮಧ್ಯಾಹ್ನ 12.30ರ ವೇಳೆಗೆ ನಗರಪ್ರದಕ್ಷಿಣೆ ಕೈಗೊಂಡರು. ಎಪಿಎಂಸಿ ಮಾರುಕಟ್ಟೆ ಬಳಿ ಮನಬಂದಂತೆ ವಾಹನಗಳು ನಿಲುಗಡೆಯಾಗಿರುವುದು, ಖಾಲಿಯಿರುವ ಸ್ಥಳಾವಕಾಶ ವ್ಯರ್ಥವಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ಎಪಿಎಂಸಿ ಮಾರುಕಟ್ಟೆ ಸುತ್ತಮುತ್ತಲಿನ ವಾಹನ ಸಂಚಾರ ವ್ಯವಸ್ಥೆ ಸುಧಾರಿಸಬೇಕು ಮತ್ತು ಇನ್ನಿತರ ಸಮಸ್ಯೆಗಳು ನಿವಾರಣೆಯಾಗಬೇಕು ಎಂದು ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲಿಂದ ಮರುಳಸಿದ್ದೇಶ್ವರ ದೇವಾಲಯ ವೃತ್ತದ ಬಳಿಗೆ ಆಗಮಿಸಿ, ಅಲ್ಲಿ ರಸ್ತೆಯ ಮೇಲೆ ವೇಗ ನಿಯಂತ್ರಕ (ಹಂಪ್) ಮತ್ತು ಸಂಚಾರಿ ಕಾನ್ಸ್‌ಟೇಬಲ್ ನಿಯೋಜಿಸುವ ಕುರಿತು ಚರ್ಚಿಸಿದರು. ಅದಕ್ಕಾಗಿ ಸ್ಥಳವನ್ನು ಸಹ ಗುರುತಿಸಿದರು. ವೃತ್ತದಲ್ಲಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದರು. `ವೃತ್ತದ ಮಧ್ಯದಲ್ಲಿ ಅಳವಡಿಸಿರುವ ಹೈಮಾಸ್ಟ್ ಬೆಳಕಿನಿಂದ ಎಲ್ಲರಿಗೂ ಅನುಕೂಲವಾಗಬೇಕೆ ಹೊರತು ಅದು ಪಾಳು ಬೀಳಬಾರದು' ಎಂದರು.

ತಮ್ಮ ಕಚೇರಿ ಎದುರಿನ ವೃತ್ತದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಎಸ್ಪಿ ಕಚೇರಿ ಎದುರೇ ವೃತ್ತವು ಇಂತಹ ದುಃಸ್ಥಿತಿಯಲ್ಲಿದ್ದರೆ, ಇತರ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಸಾಧ್ಯ? ವೃತ್ತದಲ್ಲಿರುವ ಹದಗೆಟ್ಟಿರುವ ರಸ್ತೆಯು ಮೊದಲು ದುರಸ್ತಿಯಾಗಬೇಕು. ವಾಹನಗಳ ಸಂಚಾರ ಸುಗಮಗೊಳಿಸಲು ವೃತ್ತದಲ್ಲಿ ಸಂಚಾರ ಕಾನ್ಸ್‌ಟೇಬಲ್ ನಿಯೋಜಿತರಾಗಬೇಕು. ರಸ್ತೆಗಳನ್ನು ದುರಸ್ತಿಗೊಳಿಸುವಲ್ಲಿ ಪಕ್ಕದಲ್ಲೇ ಇರುವ ಜಿಲ್ಲಾ ಪಂಚಾಯಿತಿ ಕಚೇರಿ ಅಧಿಕಾರಿಗಳು ಕೂಡ ಮುಂದಾಗಬೇಕು ಎಂದು ಹೇಳಿದರು.

ಬಳಿಕ ಹಳೆಯ ಬಸ್ ನಿಲ್ದಾಣದತ್ತ ತೆರಳಿದ ಎನ್.ಶಿವಪ್ರಸಾದ್, ಅಲ್ಲಿನ ದ್ವಿಚಕ್ರವಾಹನಗಳ ನಿಲುಗಡೆಯನ್ನು ತೆರವುಗೊಳಿಸುವಂತೆ ಸೂಚಿಸಿದರು. ಬಾಗೇಪಲ್ಲಿ, ಗುಡಿಬಂಡೆ ಮುಂತಾದ ಕಡೆ ಹೋಗುವ ಬಸ್‌ಗಳ ನಿಲುಗಡೆಯಲ್ಲೂ ಸುಧಾರಣೆ ತರಬೇಕಿದೆ ಎಂದು ಹೇಳಿದರು. ಕೊನೆಗೆ ಶಿಡ್ಲಘಟ್ಟ ವೃತ್ತಕ್ಕೆ ಬಂದು ವೃತ್ತದಲ್ಲಿ `ಜೀಬ್ರಾ ಕ್ರಾಸಿಂಗ್' ಕಲ್ಪಿಸುವ, ಸಿಗ್ನಲ್ ದೀಪಗಳಿಗೆ ಮರುಚಾಲನೆ ನೀಡುವ ಮತ್ತು ವೃತ್ತವನ್ನು ಸುಸ್ಥಿತಿಗೆ ತರುವ ಕುರಿತು ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ನಗರಸಭೆ ಆಯುಕ್ತ ಡಿ.ಎಚ್.ರಾಯ, ಡಿವೈಎಸ್‌ಪಿ ಎ.ಬಿ.ದೇವಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್, ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್, ಸಂಚಾರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತಿತರರು ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT