ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ: ಇಬ್ಬಣ ಪೈಪೋಟಿ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ರಚನೆಗೆ ಸಿದ್ಧತೆ ನಡೆದಿರುವ ಬೆನ್ನಿಗೇ ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಕಸರತ್ತು ಬಿರುಸು ಪಡೆದಿದೆ. ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಪಕ್ಷದ ಎರಡೂ ಬಣಗಳ ನಡುವೆ ಪೈಪೋಟಿ ತೀವ್ರಗೊಂಡಿದೆ.

ಸಂಪುಟದಲ್ಲಿ ಸ್ಥಾನ ಪಡೆಯಲು ಇದೇ ಕೊನೆಯ ಅವಕಾಶ ಎಂದು ಭಾವಿಸಿರುವ ಶಾಸಕರು, ಹೈಕಮಾಂಡ್ ಮನವೊಲಿಕೆಗೆ ಲಾಬಿ ಆರಂಭಿಸಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ಬಿಜೆಪಿ ವರಿಷ್ಠರು ಇನ್ನೂ ತೀರ್ಮಾನ ಪ್ರಕಟಿಸಿಲ್ಲ. ಆದರೆ, ಈ ಹುದ್ದೆಯನ್ನು ಪಡೆಯಲು ಇಬ್ಬಣಗಳೂ ಪರಿಶಿಷ್ಟ ಮುಖಂಡರ ಹೆಸರುಗಳನ್ನು ದಾಳವಾಗಿ ಉರುಳಿಸಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ, ಸಚಿವ ಸ್ಥಾನ ಹಂಚಿಕೆ ಕುರಿತು ಈಗಾಗಲೇ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ನಿಯೋಜಿತ ಮುಖ್ಯಮಂತ್ರಿ ಶೆಟ್ಟರ್ ತಮ್ಮದೇ ಪ್ರತ್ಯೇಕ ಪಟ್ಟಿ ಮಾಡಿದ್ದಾರೆ. ಸಚಿವ ಸ್ಥಾನಗಳ ಸಂಖ್ಯೆ ಮತ್ತು ಖಾತೆಗಳ ಹಂಚಿಕೆಯಲ್ಲಿ ತಮ್ಮ ಕಡೆಯವರಿಗೆ ಸಮಾನ ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬಣ ಪಟ್ಟು ಹಿಡಿದಿದೆ.

ದೆಹಲಿಯಿಂದ ಬಂದಿರುವ ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಅವರ ಜತೆ ಸದಾನಂದ ಗೌಡ, ಶೆಟ್ಟರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತುಕತೆ ನಡೆಸಿದರು.

ನಾಯಕತ್ವ ಬದಲಾವಣೆ ಬಳಿಕ ಯಡಿಯೂರಪ್ಪ ಬಣ ಸರ್ಕಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬ ಆತಂಕಕ್ಕೆ ಒಳಗಾಗಿರುವ ಸದಾನಂದ ಗೌಡರ ಬಣ ಹೊಸ ಸೂತ್ರವೊಂದನ್ನು ಹೈಕಮಾಂಡ್ ಮುಂದಿರಿಸಿದೆ. `ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ, ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರನ್ನು ಒಳಗೊಂಡ ಐವರು ಪ್ರಮುಖರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯೇ ಒಮ್ಮತದಿಂದ ಪ್ರಮುಖ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು~ ಎಂದು ಒತ್ತಾಯಿಸಿದೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೀಡುಬಿಟ್ಟಿರುವ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸೋಮವಾರ ಇಡೀ ದಿನ ಅಭಿಪ್ರಾಯ ಸಂಗ್ರಹಿಸಿದರು. ಸಚಿವರು, ಶಾಸಕರು ತಂಡೋಪತಂಡವಾಗಿ ಬಂದು ಪ್ರಧಾನ್ ಅವರನ್ನು ಭೇಟಿಯಾದರು.

ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ನೀಡಲೇಬೇಕು ಎಂಬ ಆಗ್ರಹವನ್ನು ಅವರ ಮುಂದಿಟ್ಟರು. ಎಲ್ಲರ ಅಭಿಪ್ರಾಯಗಳನ್ನೂ ಸಂಗ್ರಹಿಸಿರುವ ಪ್ರಧಾನ್, `ಪಕ್ಷದ ಸಚಿವರು ಮತ್ತು ಶಾಸಕರು ಸಂಪುಟ ರಚನೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೇಟ್ಲಿ ಮತ್ತು ರಾಜನಾಥ್ ಅವರಿಗೆ ಈ ವಿವರಗಳನ್ನು ನೀಡುತ್ತೇನೆ. ಅವರು ಶಾಸಕರ ಜೊತೆ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ~ ಎಂದು ಪ್ರಕಟಿಸಿದರು.

ಒಂದೆಡೆ ಪ್ರಧಾನ್ ಅಭಿಪ್ರಾಯ ಸಂಗ್ರಹಣೆಯಲ್ಲಿ ನಿರತರಾಗಿದ್ದರು. ಮತ್ತೊಂದೆಡೆ ಬಿಜೆಪಿಯ ವಿವಿಧ ಬಣಗಳ ಸರಣಿ ಸಭೆಗಳು ನಡೆಯುತ್ತಿದ್ದವು.ಸದಾನಂದ ಗೌಡರ ಬಣ ಸಚಿವ ಗೋವಿಂದ ಕಾರಜೋಳ ಅವರ ನಿವಾಸದಲ್ಲಿ ಸಭೆ ನಡೆಸಿತು. ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಅವರ ಬಣದ ಸಭೆಗೆ ವೇದಿಕೆಯಾಯಿತು. ಅನಂತಕುಮಾರ್, ಯಡಿಯೂರಪ್ಪ ಮತ್ತಿತರರನ್ನು ಭೇಟಿ ಮಾಡಿದ ಶೆಟ್ಟರ್, ಸಚಿವ ಸಂಪುಟ ರಚನೆ ಕುರಿತು ಚರ್ಚಿಸಿಸಿದರು.

ಡಿಸಿಎಂ ಹುದ್ದೆಗೆ ಲಾಬಿ: ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾದರೆ ಅದು ಸರ್ಕಾರದ ಪರ್ಯಾಯ ಅಧಿಕಾರ ಕೇಂದ್ರವಾಗುತ್ತದೆ ಎಂಬ ಭಾವನೆ ಎರಡೂ ಬಣಗಳಲ್ಲಿದೆ. ತಟಸ್ಥವಾಗಿ ಉಳಿದವರು ಕೂಡ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವರಾದ ಕಾರಜೋಳ ಮತ್ತು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಪ್ರಧಾನ್ ಅವರನ್ನು ಭೇಟಿಯಾದ ಶಾಸಕರು, ಸದಾನಂದ ಗೌಡರ ಬೆಂಬಲಿಗರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಒತ್ತಾಯಿಸಿದರು.

ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಕಾರಜೋಳ ಅವರನ್ನೇ ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. `39 ಶಾಸಕರಿರುವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ವರಿಷ್ಠರು ಸಮಜಾಯಿಷಿ ನೀಡಿದ್ದಾರೆ.
 
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಈ ಎರಡೂ ಸಮುದಾಯಗಳ 35 ಶಾಸಕರಿದ್ದಾರೆ. ಆ ಸಮುದಾಯಕ್ಕೆ ಸೇರಿರುವ ಕಾರಜೋಳ ಅವರಿಗೇ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಇದರಿಂದ ಮುಂದಿನ ಚುನಾವಣೆಗೂ ಅನುಕೂಲ ಆಗುತ್ತದೆ~ ಎಂಬ ವಾದವನ್ನು ಈ ಬಣ ಪ್ರಧಾನ್ ಮುಂದಿಟ್ಟಿದೆ.

ಮುಖ್ಯಮಂತ್ರಿಯವರ ಬಣ ಉಪ ಮುಖ್ಯಮಂತ್ರಿ ಹುದ್ದೆಗೆ ಕಾರಜೋಳ ಹೆಸರು ಪ್ರಸ್ತಾಪಿಸಿರುವುದು ತಿಳಿಯುತ್ತಿದ್ದಂತೆ ಯಡಿಯೂರಪ್ಪ ಬಣ ಅದಕ್ಕೆ ಅಡ್ಡಗಾಲು ಹಾಕುವ ತಂತ್ರ ರೂಪಿಸಿದೆ. ಪರಿಶಿಷ್ಟ ಸಮುದಾಯದವರೇ ಆಗಿರುವ ರೇವುನಾಯಕ ಬೆಳಮಗಿ ಮತ್ತು ರಾಜುಗೌಡ ಅವರ ಹೆಸರನ್ನು ಪ್ರಸ್ತಾಪಿಸಿದೆ.
 
ಇಬ್ಬರಲ್ಲಿ ಒಬ್ಬರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಸದಾನಂದ ಗೌಡರ ಬಣದಲ್ಲಿ ಗುರುತಿಸಿಕೊಂಡಿರುವವರಿಗೆ ಉಪ ಮುಖ್ಯಮಂತ್ರಿ ಹುದ್ದೆ ದೊರೆಯದಂತೆ ತಡೆಯಲು ಯಡಿಯೂರಪ್ಪ ಬಣ ಪ್ರಬಲ ಅಸ್ತ್ರಗಳನ್ನೇ ಪ್ರಯೋಗಿಸಲು ಮುಂದಾಗಿದೆ.

ಇನ್ನೊಂದೆಡೆ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಮಾತು ಕೇಳಿಬಂದ ದಿನದಿಂದಲೂ ಉಪ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಈಶ್ವರಪ್ಪ ಮತ್ತು ಗೃಹ ಸಚಿವ ಆರ್.ಅಶೋಕ ವೈಯಕ್ತಿಕ ಮಟ್ಟದಲ್ಲೇ ಲಾಬಿ ಮುಂದುವರೆಸಿದ್ದಾರೆ.


ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸದಾನಂದ ಗೌಡರನ್ನು ಬದಲಿಸುತ್ತಿರುವ ಕಾರಣಕ್ಕೆ ತಮ್ಮನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು ಎಂಬುದು ಅಶೋಕ ಅವರ ಬೇಡಿಕೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಸದಾನಂದ ಗೌಡರಿಗೆ ನೀಡುವುದಾದಲ್ಲಿ ತಮ್ಮನ್ನು ಉಪ ಮುಖ್ಯಮಂತ್ರಿ ಮಾಡಿ ಎಂದು ಈಶ್ವರಪ್ಪ ಕೇಳಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಸಿದ್ಧವಾಗುತ್ತಿದೆ ಪಟ್ಟಿ...

ಬೆಂಗಳೂರು:
ಸದಾನಂದ ಗೌಡರ ಸಚಿವ ಸಂಪುಟದಲ್ಲಿ ಇರುವವರನ್ನು ಮುಂದುವರೆಸಿ, ಉಳಿದ ಸ್ಥಾನಗಳಿಗೆ ಹೊಸಬರನ್ನು ನೇಮಿಸಬೇಕು ಎಂದು ಹಾಲಿ ಸಚಿವರೆಲ್ಲರೂ ಒತ್ತಡ ಹೇರುತ್ತಿದ್ದಾರೆ. ಆದರೆ, ಈವರೆಗೂ ಅವಕಾಶ ದೊರೆಯದೇ ಇರುವವರು ಮತ್ತು ಬಣ ರಾಜಕೀಯದಿಂದ ದೂರ ಉಳಿದ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯಬೇಕು ಎಂಬ ಕೂಗು ಮತ್ತೊಂದು ವಲಯದಿಂದ ಕೇಳಿಬಂದಿದೆ. ಯಡಿಯೂರಪ್ಪ ಅವರ ಬಣ ಹಾಲಿ ಸಚಿವರ ಖಾತೆಗಳನ್ನು ಬದಲಿಸಬಾರದು ಎಂಬ ಷರತ್ತನ್ನು ಹೈಕಮಾಂಡ್ ಮುಂದಿಡಲು ಅಣಿಯಾಗುತ್ತಿದೆ.

ಡಿ.ಎನ್.ಜೀವರಾಜ್, ಬೇಳೂರು ಗೋಪಾಲಕೃಷ್ಣ, ಶಿವನಗೌಡ ನಾಯಕ, ಸುನೀಲ್ ವಲ್ಯಾಪುರೆ ಅವರಿಗೆ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಡಲು ಯಡಿಯೂರಪ್ಪ ಬಣ ಸಿದ್ಧವಾಗಿದೆ. ಅಶ್ಲೀಲ ಚಿತ್ರ ಪ್ರಕರಣದಲ್ಲಿ  ಸಚಿವ ಸ್ಥಾನ ಕಳೆದುಕೊಂಡಿರುವ ಸಿ.ಸಿ.ಪಾಟೀಲ ಮತ್ತು ಲಕ್ಷ್ಮಣ ಸವದಿ ಅವರಿಗೂ ಸಂಪುಟದಲ್ಲಿ ಸ್ಥಾನ ದೊರಕಿಸಲು ಈ ಬಣ ಮುಂದಾಗಿದೆ ಎಂದು ಗೊತ್ತಾಗಿದೆ.

ಪಕ್ಷದ ಮೂಲಗಳ ಪ್ರಕಾರ ಶೆಟ್ಟರ್ ಪ್ರತ್ಯೇಕವಾಗಿಯೇ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸೊಗಡು ಶಿವಣ್ಣ, ಅಪ್ಪು ಪಟ್ಟಣಶೆಟ್ಟಿ, ಅಪ್ಪಚ್ಚು ರಂಜನ್, ಸಿ.ಟಿ.ರವಿ, ಜೀವರಾಜ್, ಕಳಕಪ್ಪ ಬಂಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಲವು ತೋರಿದ್ದಾರೆ. ಹಾಲಿ ಇರುವ ಸಚಿವರೂ ಸೇರಿದಂತೆ 32 ಸ್ಥಾನಗಳನ್ನು ಭರ್ತಿ ಮಾಡುವ ಚಿಂತನೆಯಲ್ಲಿದ್ದಾರೆ. ಎರಡು ಸ್ಥಾನಗಳನ್ನು ಖಾಲಿ ಇರಿಸಿಕೊಳ್ಳುವ ಯೋಚನೆ ಅವರಿಗೆ ಇದೆ.

ಪ್ರಧಾನ್, ಸಿ.ಎಂ ಭೇಟಿ
ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೋಮವಾರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು `ಅನುಗ್ರಹ~ದಲ್ಲಿ ಭೇಟಿಯಾಗಿ ಸುಮಾರು ಒಂದು ಗಂಟೆ ಕಾಲ ಸಮಾಲೋಚನೆ ನಡೆಸಿದರು. ಸಂಪುಟದಲ್ಲಿ ಅವರ ಬೆಂಬಲಿಗರಿಗೆ ಸ್ಥಾನ ಕಲ್ಪಿಸುವುದು, ಸದಾನಂದಗೌಡ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸುವ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT