ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಎಂಬ ಉತ್ಸವಮೂರ್ತಿ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರವೇ ಪತನದ ಅಂಚಿಗೆ ತಲುಪಿದಾಗಲೂ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಬಿಜೆಪಿ ಹೈಕಮಾಂಡ್ ನಿರಾಕರಿಸಿತ್ತು. ಆದರೆ, ಚುನಾವಣೆ  ಗುರಿಯಾಗಿಸಿಕೊಂಡು ಜಾತಿ ಸಮೀಕರಣ ರೂಪಿಸಿ ಈ ಬಾರಿ ಎರಡು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆ.

ಲಿಂಗಾಯತ, ಕುರುಬ, ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಸಂಪುಟ ರಚನೆ ಸೂತ್ರ ಹೆಣೆಯಲಾಗಿದೆ. ಇದರಂತೆ ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾರೆ. ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಮತ್ತು ಒಕ್ಕಲಿಗ ಸಮುದಾಯದ ಆರ್.ಅಶೋಕ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬರುತ್ತಿವೆ.

`ಉಪ ಮುಖ್ಯಮಂತ್ರಿ~ ಹುದ್ದೆ ಆಡಳಿತಾರೂಢ ರಾಜಕೀಯ ಪಕ್ಷಗಳು ಆಂತರಿಕವಾಗಿ ಮಾಡಿಕೊಳ್ಳುವ ವ್ಯವಸ್ಥೆ ಮಾತ್ರ. ಇದಕ್ಕೆ ಸಂವಿಧಾನದಲ್ಲಿ ಯಾವುದೇ ಮನ್ನಣೆ ಇಲ್ಲ. ಸಂಪುಟ ರಚನೆಗೆ ಅವಕಾಶ ಕಲ್ಪಿಸುವ ಸಂವಿಧಾನದ 163 ಮತ್ತು 164ನೇ ವಿಧಿಗಳಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನದ ಬಗ್ಗೆ ಮಾತ್ರವೇ ಪ್ರಸ್ತಾಪವಿದೆ. ಎಲ್ಲಿಯೂ `ಉಪ ಮುಖ್ಯಮಂತ್ರಿ~ ಎಂಬ ಹುದ್ದೆಯ ವಿವರವೇ ಇಲ್ಲ.

ರಾಜ್ಯದಲ್ಲಿ ಎಂ.ವೀರಪ್ಪ ಮೊಯಲಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಸ್.ಎಂ.ಕೃಷ್ಣ ಅವರನ್ನು ಸಮಾಧಾನಪಡಿಸಲು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಕೃಷ್ಣ ರಾಜ್ಯದ ಮೊದಲ ಉಪ ಮುಖ್ಯಮಂತ್ರಿ ಆಗಿದ್ದವರು. ನಂತರ ಎಚ್.ಡಿ.ದೇವಗೌಡರ ಸರ್ಕಾರದಲ್ಲಿ ಜೆ.ಎಚ್.ಪಟೇಲರು ಉಪ ಮುಖ್ಯಮಂತ್ರಿಯಾಗಿದ್ದರು.

ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿ ಹುದ್ದೆಗೇರಿದಾಗ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಯಿತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಈಗ ಇಬ್ಬರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯಾಗಿದೆ.

`ಬಿಳಿ ಆನೆಯಂತೆ~: `ಉಪ ಮುಖ್ಯಮಂತ್ರಿ ಹುದ್ದೆಗೆ ಸಂವಿಧಾನದತ್ತವಾಗಿ ಯಾವುದೇ ಹೆಚ್ಚಿನ ಅಧಿಕಾರವೂ ಇಲ್ಲ. ಸಂಪುಟ ದರ್ಜೆ ಸಚಿವರಿಗೆ ಇರುವಷ್ಟೇ ಅಧಿಕಾರ ಉಪ ಮುಖ್ಯಮಂತ್ರಿಗೆ ಇರುತ್ತದೆ. ಅವರು ತಮ್ಮ ಅಧೀನದ ಖಾತೆಗಳ ವಿಷಯದಲ್ಲಿ ಮಾತ್ರವೇ ವ್ಯವಹರಿಸಲು ಸಾಧ್ಯ. ಇತರೆ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಮುಖ್ಯಮಂತ್ರಿಗೆ ಮಾತ್ರ ಅಂತಹ ಅಧಿಕಾರ ಇದೆ~ ಎನ್ನುತ್ತಾರೆ ವಿಧಾನ ಪರಿಷತ್ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ.

`ಸರ್ಕಾರದಲ್ಲಿ ಗೊಂದಲಗಳು ಸೃಷ್ಟಿ ಆದಾಗ ಆಂತರಿಕವಾಗಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಲಾಗುತ್ತದೆ. ಇದು ಆಯಾ ಪಕ್ಷಗಳು ಮಾಡಿಕೊಳ್ಳುವ ವ್ಯವಸ್ಥೆ. ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವವರಿಗೆ ಸಿಗ್ನಲ್ ರಹಿತ ಸಂಚಾರ, ಹೆಚ್ಚಿನ ಭದ್ರತೆ ಸೇರಿದಂತೆ ಕೆಲ ಸೌಲಭ್ಯಗಳನ್ನು ಸರ್ಕಾರಿ ಆದೇಶದ ಮೂಲಕ ನೀಡುವುದು ರೂಢಿ. ಇದರಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳಬಹುದು. ಉಳಿದಂತೆ ಅವರು ಸಚಿವರಷ್ಟೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT