ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ ವೇಳೆಗೆ ಸೂಕ್ತ ನಿರ್ಧಾರ: ಯಡಿಯೂರಪ್ಪ

Last Updated 4 ಅಕ್ಟೋಬರ್ 2012, 5:40 IST
ಅಕ್ಷರ ಗಾತ್ರ

ತರೀಕೆರೆ: ರಾಜ್ಯದ ಎಲ್ಲಾ ಕಡೆ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿ ಡಿಸೆಂಬರ್ ಅಂತ್ಯದೊಳಗೆ ರಾಜ್ಯ ರಾಜಕಾರಣದಲ್ಲಿ ಸೂಕ್ತ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತರೀಕೆರೆ ಪಟ್ಟಣಕ್ಕೆ ಬುಧವಾರ ಆಗಮಿಸಿದ್ದ ಅವರು ಇಲ್ಲಿನ ಶಾಸಕ ಡಿ.ಎಸ್.ಸುರೇಶ್ ಅವರ ನಿವಾಸದಲ್ಲಿ ನೆರದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ ಅಧಿಕಾರದ ಅಮಲನ್ನು ಏರಿಸಿಕೊಳ್ಳದೆ ಎಲ್ಲಾ ವರ್ಗದ ಜನರ ಹಿತಕ್ಕಾಗಿ ದುಡಿದಿದ್ದೇನೆ. ರೈತರ, ದಲಿತರ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಉದ್ಧಾರಕ್ಕಾಗಿ ಹಲವು ಕನಸನ್ನು ಕಂಡಿದ್ದ ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವ ವ್ಯವಸ್ಥಿತ ಪ್ರಯತ್ನವನ್ನು ಪಕ್ಷದವರು ಮಾಡಿದ್ದರು ಎಂದು ಆಪಾದಿಸಿದ ಅವರು, ರಾಜ್ಯದ ನಾಯಕರ ಮಾತಿಗೆ ಮಣೆಹಾಕಿದ ಪಕ್ಷದ ವರಿಷ್ಠರು ನನಗೆ ಅನ್ಯಾಯ ಮಾಡಿದರು ಎಂದರು.

ಕಾವೇರಿ ಸಮಸ್ಯೆಯನ್ನು ಕಾಂಗ್ರೆಸ್ ಹುಟ್ಟುಹಾಕಿದೆ. ಪ್ರಧಾನಮಂತ್ರಿಯವರು ಸಂಯಮದಿಂದ ವರ್ತಿಸಿದ್ದಲ್ಲಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಎಂದು ಹೇಳಿದ ಅವರು, ತಮಿಳುನಾಡಿನ ಮುಖ್ಯಮಂತ್ರಿಯವರನ್ನು ಸಂತೃಪ್ತಿ ಗೊಳಿಸಲು ಹೋಗಿ ರಾಜ್ಯಕ್ಕೆ ಅನ್ಯಾ ಯವನ್ನು ಎಸಗುತ್ತಿದ್ದಾರೆ ಎಂದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಯಡಿಯೂರಪ್ಪ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಮತ್ತು ನಮ್ಮ ಬೆಂಬಲಿಗರು ಬದ್ಧರಾಗುತ್ತೇವೆ ಎಂದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ಅನಂತಕುಮಾರ ಅವರನ್ನು ಮುಖ್ಯಮಂತ್ರಿ ಮಾಡಲು ಇಲ್ಲದ ಕಸರತ್ತನ್ನು ಮಾಡುತ್ತಿರುವ ವರಿಷ್ಠರು ನೇರವಾಗಿ ನನ್ನನ್ನು ಕೆಳಗಿಳಿಸಿ ಅವರನ್ನೇ ಮುಖ್ಯಮಂತ್ರಿ ಮಾಡಬಹುದಿತ್ತು.  ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೆಂಡ, ಜಾತಿ ರಾಜಕಾರಣ ಮಾಡಿ ಯಡಿಯೂರಪ್ಪ ಅಧಿಕಾರಕ್ಕೆ ಬಂದರು ಎಂದು ಮಾದ್ಯಮದ ಮುಂದೆ ಆರೋಪಿಸಿದರೂ ವರಿಷ್ಠರು ಅದೆ ಯಂಕ, ನಾಣಿ, ಸೀನನ ಮಾತುಕೇಳಿ ಕೈಕಟ್ಟಿ ಕುಳಿತ್ತಿದ್ದಾರೆ ಎಂದರು.


ಶಾಸಕ ಡಿ.ಎಸ್.ಸುರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಂಬೈನೂರು ಆನಂದಪ್ಪ, ಸ್ಥಾಯಿ ಸಮಿತಿ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾಜಶೇಖರ್, ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಶಾಂತರಾಜ್, ಆರ್.ದೇವಾನಂದ್, ಬಿ.ಆರ್.ರವಿ ಮತ್ತು ತಾಲ್ಲೂಕಿನ ವಿವಿಧ ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT