ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ಪುಂಡಾನೆ ಸ್ಥಳಾಂತರ: ಯೋಗೇಶ್ವರ್

Last Updated 18 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ಸಕಲೇಶಪುರ: ಆಲೂರು-ಸಕಲೇಶಪುರ ತಾಲ್ಲೂಕಿನಲ್ಲಿ ರೈತರ ಬೆಳೆ ಹಾಗೂ ಪ್ರಾಣ ಹಾನಿ ಮಾಡುತ್ತಿರುವ 25 ಪುಂಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಅರಣ್ಯ ಹಾಗೂ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಕಾಡಾನೆ ಸಮಸ್ಯೆ ಹಾಗೂ ಬಿಸಿಲೆ ಅರಣ್ಯ ವಿಸ್ತರಣೆ ಸಂಬಂಧ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಗ್ರಾಮಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಕಾಡಾನೆ ಸಮಸ್ಯೆಯ ಗಂಭೀರತೆ ಬಗ್ಗೆ ರಾಜ್ಯದ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಡಿಸೆಂಬರ್ ಅಂತ್ಯದ ಒಳಗೆ 25 ಕಾಡಾನೆಗಳನ್ನು ಸ್ಥಳಾಂತರ ಮಾಡಲು ಅನುಮತಿ ನೀಡುವುದಾಗಿ ಕೇಂದ್ರ ಪರಿಸರ ಮಂತ್ರಾಲಯ ರಾಜ್ಯ ಸರ್ಕಾರಕ್ಕೆ ಈಗಾಗಲೆ ಮೌಖಿಕ ಒಪ್ಪಿಗೆ ನೀಡಿದ್ದು. ಶೀಘ್ರದಲ್ಲಿ ಲಿಖಿತ ಒಪ್ಪಿಗೆ ಪತ್ರ ಸರ್ಕಾರದ ಕೈ ಸೇರಲಿದೆ ಎಂದರು.

ಪುಂಡಾನೆಗಳನ್ನು ಎಲ್ಲಿಗೆ ಸ್ಥಳಾಂತರ ಮಾಡುವುದು ಎಂಬ ಬಗ್ಗೆ ಇದೀಗ ತಜ್ಞರ ತಂಡ ವೈಜ್ಞಾನಿಕ ಅಧ್ಯಯನ ನಡೆಸುತ್ತಿದ್ದು, ಆ ವರದಿ ಆಧರಿಸಿ ಅವುಗಳು ಪುನಃ ರೈತರ ಜಮೀನುಗಳತ್ತ ಬರದಂತಹ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದರು.

ಅರಣ್ಯ ವಿಸ್ತರಣೆ: ರೈತರ ಬೆಳೆ ಹಾನಿ ಹಾಗೂ ಪ್ರಾಣ ಹಾನಿ ಮಾಡುತ್ತಿರುವ ಕಾಡು ಪ್ರಾಣಿಗಳ ಸಮಸ್ಯೆ ಪರಿಹರಿಸಲು ಬಿಸಿಲೆ ಅರಣ್ಯಪ್ರದೇಶ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ತಳೆದಿದೆ. ಈ ರಕ್ಷಿತ ಅರಣ್ಯದ ಆಸು-ಪಾಸಿನಲ್ಲಿ 14 ಸಾವಿರ ಎಕರೆ ಕಂದಾಯ ಭೂಮಿ ಇದೆ. ಜತೆಗೆ 10 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿ ಇದ್ದು, ಅದನ್ನೂ ಕೂಡ ತೆರವುಗೊಳಿಸಿ ಅರಣ್ಯಕ್ಕೆ ಸೇರಿಸಿಕೊಳ್ಳಲಾಗುವುದು. ಈ ವ್ಯಾಪ್ತಿಯಲ್ಲಿ 2300 ಎಕರೆ     ಹಿಡುವಳಿ ಜಮೀನು ಇದ್ದು, ಸೂಕ್ತ ಪರಿಹಾರ ನೀಡಿ ಖರೀದಿ ಮಾಡಿದರೆ  25 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಬಿಸಿಲೆ ರಕ್ಷಿತ ಅರಣ್ಯಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು.

ಈ ವ್ಯಾಪ್ತಿಯಲ್ಲಿ ಹಿಡುವಳಿ ಭೂಮಿ ಇಲ್ಲದೇ ಇರುವ ಕೂಲಿ ಕಾರ್ಮಿಕರು ಹಾಗೂ ಬಡವರನ್ನು ಸ್ಥಳಾಂತರ ಮಾಡುವ ಮುನ್ನ ಆ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ವಸತಿ ವ್ಯವಸ್ಥೆ   ಮಾಡಿಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT