ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ದರ ಭಾಗಶಃ ನಿಯಂತ್ರಣಮುಕ್ತ: ಎಲ್‌ಪಿಜಿ ಸಬ್ಸಿಡಿ ಕಡಿತಕ್ಕೆ ಕ್ರಮ

Last Updated 18 ಜುಲೈ 2012, 15:15 IST
ಅಕ್ಷರ ಗಾತ್ರ

ಬೆಂಗಳೂರು: `ಅಡುಗೆ ಅನಿಲ    (ಎಲ್‌ಪಿಜಿ) ಸಬ್ಸಿಡಿ ಹೊರೆಯನ್ನು ವಾರ್ಷಿಕ ರೂ. 8ರಿಂದ ರೂ. 10 ಸಾವಿರ ಕೋಟಿಗಳಷ್ಟು  ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಆರ್.ಪಿ.ಎನ್ ಸಿಂಗ್ ಬುಧವಾರ ಇಲ್ಲಿ ತಿಳಿಸಿದರು.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್)  ಮತ್ತು ಉನ್ನತ ತಂತ್ರಜ್ಞಾನ ಕೇಂದ್ರ (ಸಿಎಚ್‌ಟಿ) ಜಂಟಿಯಾಗಿ ಇಲ್ಲಿ ಆಯೋಜಿಸಿದ್ದ `17ನೇ ತೈಲ ಶುದ್ಧೀಕರಣ ತಂತ್ರಜ್ಞಾನ ಸಮ್ಮೇಳನ (ಆರ್‌ಟಿಎಂ) ಉದ್ಘಾಟಿಸಿ ಅವರು ಮಾತನಾಡಿದರು.

`ಸಬ್ಸಿಡಿ ಸಿಲಿಂಡರ್~ಗೆ  ನಿಯಂತ್ರಣ

ಸದ್ಯ `ಎಲ್‌ಪಿಜಿ ಸಬ್ಸಿಡಿಗಾಗಿ ವಾರ್ಷಿಕ ರೂ. 36 ಸಾವಿರ ಕೋಟಿ ವ್ಯಯವಾಗುತ್ತಿದೆ. ಈ ಹೊರೆ ತಪ್ಪಿಸಲು ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಹೊರತು ಪಡಿಸಿ ಇತರೆ ಫಲಾನುಭವಿಗಳು ಪಡೆದಿರುವ `ಸಬ್ಸಿಡಿ ಸಿಲಿಂಡರ್~ಗೆ  ನಿಯಂತ್ರಣ  ವಿಧಿಸಲು ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ  ಎಂದರು.

ಆರ್ಥಿಕವಾಗಿ  ಹಿಂದುಳಿದ ವರ್ಗಕ್ಕೆ ಸೇರದ ಅನೇಕರು ಸಬ್ಸಿಡಿ ಸಿಲಿಂಡರ್ ಲಾಭ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಸಬ್ಸಿಡಿ ದರದಲ್ಲಿ ನೀಡುವಸಿಲಿಂಡರ್ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಯೋಚಿಸುತ್ತಿದೆ. ಇದರಿಂದ ವಾರ್ಷಿಕ ರೂ. 8ರಿಂದ ರೂ. 10 ಸಾವಿರ ಕೋಟಿಗಳಷ್ಟು ಸಬ್ಸಿಡಿ ಹಣ ಉಳಿಯಲಿದೆ ಎಂದರು.

ಡೀಸೆಲ್ ಭಾಗಶಃ ನಿಯಂತ್ರಣ ಮುಕ್ತ

ಡೀಸೆಲ್ ದರ ಭಾಗಶಃ ನಿಯಂತ್ರಣ ಮುಕ್ತಗೊಳಿಸುವ ಕುರಿತೂ ಸರ್ಕಾರ ಚಿಂತಿಸುತ್ತಿದೆ. ಆದರೆ, ಇದು ಅತ್ಯಂತ ಸಂಕೀರ್ಣ ವಿಚಾರ. ದರ ನಿಯಂತ್ರಣಮುಕ್ತಗೊಂಡ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗೆ ತಕ್ಕಂತೆ ದೇಶೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟ ಕಂಪೆನಿಗಳು ದರ ನಿಗದಿ ಮಾಡಬಹುದು.  ಆದರೆ, ಇದು ಒಟ್ಟಾರೆ ಆರ್ಥಿಕತೆಯ ಮೇಲೆ  ಪರಿಣಾಮ ಬೀರಲಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಡೀಸೆಲ್ ದರವನ್ನು ಸಂಪೂರ್ಣವಾಗಿ ನಿಯಂತ್ರಣಮುಕ್ತಗೊಳಿಸುವುದು ಕಷ್ಟದ ಸಂಗತಿ ಎಂದರು.

ದೇಶದ ವಿತ್ತೀಯ ಕೊರತೆ ಅಂತರ ತಗ್ಗಿಸುವ ನಿಟ್ಟಿನಲ್ಲಿ `ಎಲ್‌ಪಿಜಿ~ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ತಗ್ಗಿಸುವುದು ಅನಿವಾರ್ಯ. ಜನಸಾಮಾನ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರದಂತೆ ಸರ್ಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಕಾರ್ಯದರ್ಶಿ ಜಿ.ಸಿ ಚರ್ತುವೇದಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT