ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್ ಬಳಗಕ್ಕೆ ಹೋಂಡಾ ಅಮೇಸ್

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹೋಂಡಾ ಮೊಟ್ಟ ಮೊದಲ ಬಾರಿಗೆ ಕಡಿಮೆ ಬೆಲೆಯ ಸೆಡಾನ್ ಅನ್ನು ಪರಿಚಯಿಸೇ ಬಿಟ್ಟಿದೆ. ಅಲ್ಲದೇ ಡೀಸೆಲ್ ಕಾರ್ ಬೇರೆ. ಹೋಂಡಾ ತನ್ನ ಹೊಸ ಅಮೇಸ್ ಕಾರ್ ಅನ್ನು ಹೊರಬಿಟ್ಟಿದೆ. ಈ ಕಾರ್ ಮಾರುಕಟ್ಟೆಯ ಇತರ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಗೆ ಸಿಕ್ಕಲ್ಲಿ ರಸ್ತೆಗಳಲ್ಲಿ ಜಾದೂ ಆಗುವುದರಲ್ಲಿ ಸಂದೇಹವೇ ಇಲ್ಲ! ಹೋಂಡಾ ಅಮೇಸ್ ಟೆಸ್ಟ್‌ಡ್ರೈವ್ ಅನುಭವವಂತೂ ಈ ಕಾರಿನ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ.

ಅನೇಕ ಕಾರಣಗಳಿಗೆ ವಿಶ್ವಾದ್ಯಂತ ಪೆಟ್ರೊಲ್ ಕಾರ್‌ಗಳನ್ನು ಜನ ಇಷ್ಟ ಪಡುತ್ತಾರೆ. ಹಾಗಾಗಿ ಪೆಟ್ರೋಲ್ ಕಾರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಡೀಸೆಲ್‌ಗೆ ಹೋಲಿಸಿದಲ್ಲಿ ಪೆಟ್ರೋಲ್ ಶುಭ್ರ ಇಂಧನ. ಹಾಗಾಗಿ ಪೆಟ್ರೋಲ್ ಕಾರ್‌ಗಳು ನಯವಾಗಿರುತ್ತವೆ, ಹೆಚ್ಚು ಸದ್ದು ಮಾಡುವುದಿಲ್ಲ.

ಮಾಲಿನ್ಯ ಪ್ರಮಾಣವೂ ಕಡಿಮೆ. ಆದರೆ 2007ರಲ್ಲಿ ಡೀಸೆಲ್ ಕಾರ್‌ಗಳು ಪೆಟ್ರೋಲ್ ಕಾರ್‌ಗಳಿಗಿಂತ ಒರಟು ಎಂಬುದನ್ನು ಮಾರುತಿ ಸುಜುಕಿ ಬದಲಿಸಿ ಬಿಟ್ಟಿತು. ತನ್ನ ಡೀಸೆಲ್ ಕಾರ್‌ಗಳಲ್ಲಿ ಕಾಮನ್ ರೇಲ್ ಡೈರೆಕ್ಟ್ ಇಗ್ನಿಷನ್ ತಂತ್ರಜ್ಞಾನ (ಸಿಆರ್‌ಡಿಐ) ಅಳವಡಿಸುವ ಮೂಲಕ ನಯವಾದ, ಉತ್ಕೃಷ್ಟ ತಂತ್ರಜ್ಞಾನವನ್ನು ಬಳಕೆದಾರರ ಕೈಗಿತ್ತಿತು. ಆ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಡೀಸೆಲ್ ಕಾರ್‌ಗಳು ಪೆಟ್ರೋಲ್ ಕಾರ್‌ಗಳಷ್ಟೇ ಹೆಚ್ಚಾಗಿ ಮಾರಾಟವಾಗುತ್ತಿವೆ.

ಇಡೀ ಕಾರ್ ಮಾರುಕಟ್ಟೆಯ ಶೇ.75 ಭಾಗವನ್ನು ಈಗ ಡೀಸೆಲ್ ಕಾರುಗಳು ಆಕ್ರಮಿಸಿಕೊಂಡುಬಿಟ್ಟಿವೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಡೀಸೆಲ್ ತಂತ್ರಜ್ಞಾನದಲ್ಲಿ ಅತ್ಯುತ್ತಮ ಸುಧಾರಣೆಗಳಾಗಿ ಮೈಲೇಜ್ ಹೆಚ್ಚಾದದ್ದು. ಜತೆಗೆ ಡೀಸೆಲ್ ಪೆಟ್ರೋಲ್‌ಗೂ ಅಗ್ಗದ ಇಂಧನವಾಗಿರುವುದು. ಹಾಗಾಗಿ ಡೀಸೆಲ್ ಕಾರ್‌ಗಳ ಬೆಲೆ ಹೆಚ್ಚಾದರೂ ಜನರ ಆದ್ಯತೆ ಅದಕ್ಕೇ ಹೆಚ್ಚು.

ಇಷ್ಟೆಲ್ಲಾ ಆದರೂ ಜಪಾನ್ ಆಟೊಮೊಬೈಲ್ ದೈತ್ಯ ಹೋಂಡಾ ಮಾತ್ರ ಪೆಟ್ರೋಲ್ ಕಾರ್‌ಗಳ ಆಟವನ್ನೇ ಭಾರತದಲ್ಲಿ ಮುಂದುವರೆಸಿತ್ತು. ಆದರೆ ಬೇರೆಲ್ಲಾ ಕಂಪೆನಿಗಳು ಭಾರತದಲ್ಲಿ ಡೀಸೆಲ್ ಕಾರುಗಳನ್ನು ಪರಿಚಯಿಸಿದ ಮೇಲೆ ಹೋಂಡಾಗೆ ಡೀಸೆಲ್ ಕಾರ್‌ಗಳನ್ನು ಪರಿಚಯಿಸುವುದು ಅನಿವಾರ್ಯವಾಗಿಬಿಟ್ಟಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಇರುವ ವಿದೇಶಿ ಕಾರ್ ಕಂಪೆನಿಗಳೂ ಡೀಸೆಲ್ ಕಾರ್‌ಗಳನ್ನು ಭಾರತದಲ್ಲಿ ಹೊರಬಿಟ್ಟಿರುವಾಗ, ತಾನೂ ಡೀಸೆಲ್ ಕಾರ್ ಹೊರಬಿಡಬೇಕು ಎಂದು ಹೋಂಡಾಗೆ ಗಂಭೀರವಾಗಿ ಅನ್ನಿಸಿರಬೇಕು. ಹಾಗಾಗಿ ಇದೇ ತಿಂಗಳ ಮಧ್ಯಭಾಗದಲ್ಲಿ ಹೋಂಡಾದ ಅಮೇಸ್ ಕಾರ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಹೋಂಡಾದ ಹ್ಯಾಚ್‌ಬ್ಯಾಕ್ ಕಾರ್ ಬ್ರಿಯೊ ಅನ್ನು ಆಧಾರವಾಗಿಟ್ಟುಕೊಂಡು ಅಮೇಜ್ ಅನ್ನು ರೂಪಿಸಲಾಗಿದೆ. ಆದರೆ ಅಮೇಸ್ ಸೆಡಾನ್. ಹಾಗಾಗಿ ಇದು ಸಂಪೂರ್ಣ ಹೊಸ ಕಾರೇ.

ಹೋಂಡಾ ಇತ್ತೀಚಿಗಷ್ಟೇ ಗೋವಾದಲ್ಲಿ ಎರಡು ದಿನಗಳ ಟೆಸ್ಟ್‌ಡ್ರೈವ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇಲ್ಲಿ ಅಮೇಸ್ ಕಾರ್ ಅನ್ನು ಚಲಾಯಿಸುವ ಅವಕಾಶ ಸಿಕ್ಕಿತು. ಸತತ 6 ಗಂಟೆಗಳ ಕಾಲ ಅಮೇಸ್‌ನ ಡೀಸೆಲ್ ಹಾಗೂ ಪೆಟ್ರೋಲ್ ಕಾರ್‌ಗಳನ್ನು ಓಡಿಸಲಾಯಿತು. ಆದರೆ ಬಹುನಿರೀಕ್ಷಿತ ಡೀಸೆಲ್ ಕಾರ್ ಗಮನ ಸೆಳೆಯಿತು. ಅಚ್ಚರಿ ಎಂದರೆ ಅಮೇಸ್ ಕಾರ್‌ಗೆ ಹೆಚ್ಚೇನೂ ಬೆಲೆ ಇರುವುದಿಲ್ಲ. ಮಾರುತಿಯ ಸ್ವಿಫ್ಟ್ ಡಿಸೈರ್, ಟಾಟಾ ಇಂಡಿಗೊ ಸಿಎಸ್ ಕಾರ್‌ಗಳ ಆಸುಪಾಸಿನಲ್ಲಿ ಬೆಲೆ ನಿಗದಿಯಾಗಿದೆ.

ಚುರುಕು ಎಂಜಿನ್
ಮೊಟ್ಟ ಮೊದಲ ನೋಟಕ್ಕೇ ಅಮೇಸ್ ಚುರುಕು ಡೀಸೆಲ್ ಎಂಜಿನ್ ಹೊಂದಿದೆ ಎನ್ನುವುದು ತಿಳಿಯುತ್ತದೆ. ಅಂತಹ ಅದ್ಭುತ ಎಂಜಿನ್ ಹೋಂಡಾ ಅಳವಡಿಸಿದೆ. 1.5 ಲೀಟರ್‌ನ ಸಿಆರ್‌ಡಿಐ ಎಂಜಿನ್ ಅಳವಡಿಸಲಾಗಿದೆ. ಇದನ್ನು ಭಾರತೀಯ ರಸ್ತೆ ಸ್ಥಿತಿಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಹೋಂಡಾ ಅರ್ತ್ ಡ್ರೀಮ್ಸ ಟೆಕ್ನಾಲಜಿ ಎಂದು ಕರೆದಿದೆ.

ತೂಕವನ್ನು ಕಡಿಮೆ ಮಾಡಿ, ಮೈಲೇಜ್ ಹೆಚ್ಚಿಸಲು ಹೋಂಡಾ ಕಾರ್‌ನಲ್ಲಿ ಸಂಪೂರ್ಣ ಅಲ್ಯೂಮಿನಿಯಂ ಎಂಜಿನ್ ಅನ್ನು ಅಳವಡಿಸಿದೆ. ಆದರೆ ಇದರ ಅಡ್ಡ ಪರಿಣಾಮವೋ ಎಂಬಂತೆ ಕೆಳಮಟ್ಟದ ಗಿಯರ್‌ಗಳಲ್ಲಿ ಅಮೇಸ್ ಕೊಂಚ ಹೆಚ್ಚು ಸದ್ದು ಮಾಡುತ್ತದೆ.

ಕಡಿಮೆ ಆರ್‌ಪಿಎಂ (ರೆವೊಲ್ಯೂಷನ್ಸ್ ಪರ್ ಮಿನಿಟ್, ಎಂಜಿನ್ ವೇಗ) ನಲ್ಲಿ ಅಮೇಸ್ ಹೆಚ್ಚು ಶಕ್ತಿಯನ್ನು ಹೊಂದುವುದು ವಿಶೇಷ. ಜೊತೆಗೆ ಅದ್ಭುತ ಟಾರ್ಕ್ ಸಹ ಇದೆ. ಹಾಗಾಗಿ ಕಡಿಮೆ ವೇಗದಲ್ಲಿ ಕಾರ್ ಜರ್ಕ್ ಹೊಡೆಯುವುದಿಲ್ಲ. ಅಮೇಸ್‌ಗೆ 100 ಪಿಎಸ್ ಶಕ್ತಿ (3600 ಆರ್‌ಪಿಎಂ) ಹಾಗೂ 200 ಎನ್‌ಎಂ ಟಾರ್ಕ್ (1750 ಆರ್‌ಪಿಎಂ) ನೀಡಲಾಗಿದೆ. ಹೋಂಡಾ ಪ್ರಕಾರ ಇದು ಹದವಾದ ಮಿಶ್ರಣ. ಪರಿಣಾಮವಾಗಿಯೇ ಕಾರ್‌ಗೆ ಅತ್ಯುತ್ತಮ ಮೈಲೇಜ್ ದೊರೆಯುತ್ತದೆಯಂತೆ.

ಕಂಪೆನಿ ಹೇಳುವಂತೆ ಅಮೇಸ್ ಲೀಟರ್ ಡೀಸೆಲ್‌ಗೆ 25.8 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ರಸ್ತೆಯಲ್ಲಿ ಇದು ಕೊಂಚ ಕಡಿಮೆ ಆದರೂ ಆಗಬಹುದು. ಆದರೂ ಸೆಡಾನ್ ಕಾರೊಂದು ಇಷ್ಟರ ಮಟ್ಟದ ಮೈಲೇಜ್ ನೀಡುವುದು ಸಾಮಾನ್ಯ ಸಂಗತಿ ಅಲ್ಲ.

ಇದನ್ನು ಸರಳವಾಗಿ ಹೇಳುವುದಾದರೆ ಕಾರ್ ನಿಂತ ಜಾಗದಿಂದ ಹೊರಟಾಗ ಅತಿ ಹೆಚ್ಚು ಶಕ್ತಿಯೊಂದಿಗೆ ಮುನ್ನುಗ್ಗುತ್ತದೆ. ಆದರೆ ಒಮ್ಮೆ ವೇಗ ಪಡೆದ ನಂತರ ಅದರ ಶಕ್ತಿ ಕೊಂಚ ಕಡಿಮೆ ಆಗುತ್ತದೆ. ಕಾರ್‌ನಲ್ಲಿರುವ ಟರ್ಬೊ ಚಾರ್ಜರ್ ಅತ್ಯುತ್ತಮವಾಗಿದ್ದು, ಇಂಧನ ದಹನ ವ್ಯರ್ಥವಾಗದೇ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಹಾಗಾಗಿ ಶಕ್ತಿ ಮತ್ತು ಮೈಲೇಜ್‌ಗಳೆರಡೂ ಹೆಚ್ಚು. ಇದೇ ಸಿಆರ್‌ಡಿಐನ ಮ್ಯೋಜಿಕ್. ಜತೆಗೆ ಟರ್ಬೊ ತಂತ್ರಜ್ಞಾನವೂ ಸೇರುವ ಕಾರಣ ಮೈಲೇಜ್ ಹೆಚ್ಚು ಸಿಗಲು ಕಾರಣವಾಗುತ್ತದೆ. ಹಾಗಾಗಿ ನಗರ ಮಿತಿಯಲ್ಲಿ ಚಾಲಕನಿಗೆ ಅತ್ಯದ್ಭುತ ಫೀಲ್ ಸಿಗುತ್ತದೆ. ಹೆದ್ದಾರಿಗಳಲ್ಲಿ ಶ್ರೇಷ್ಠ ಮೈಲೇಜ್ ದೊರೆಯುತ್ತದೆ.

200 ಎನ್‌ಎಂ (ನ್ಯೂಟನ್ ಮೀಟರ್) ಟಾರ್ಕ್ ಇರುವುದು ಅಮೇಸ್‌ನ ವಿಶೇಷ. ಹಾಗಾಗಿ ಆಗಾಗ ಗಿಯರ್‌ಗಳನ್ನು ಬದಲಿಸದೇ ಸರಾಗವಾದ ಚಾಲನೆಗೆ ಇದು ಸಹಾಯಕಾರಿಯಾಗಿದೆ. ಡೀಸೆಲ್ ಕಾರನ್ನು ಮೇಲಿನ ಗಿಯರ್‌ನಲ್ಲಿ ಓಡಿಸುತ್ತಿರುವಾಗ ವೇಗವನ್ನ ಕಡಿಮೆ ಮಾಡಿದರೆ ತಕ್ಷಣ ಗಿಯರ್ ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ ಕಾರ್ ಜರ್ಕ್ ಹೊಡೆದು ನಿಂತುಹೋಗುತ್ತದೆ. ಇದಕ್ಕೆ ಸಹಾಯಕಾರಿಯಾಗುವುದು ಹೆಚ್ಚಿನ ಟಾರ್ಕ್.

ಪೆಟ್ರೋಲ್ ಎಂಜಿನ್ ಇರುವ ಕಾರ್‌ಗಳಿಗಿಂತ ಡೀಸೆಲ್ ಎಂಜಿನ್ ಇರುವ ಕಾರ್‌ಗಳಲ್ಲಿ ಹೆಚ್ಚು ಟಾರ್ಕ್ ಇರಲೇಬೇಕು. ಆಗ ಮಾತ್ರ ಸರಾಗ ಚಾಲನೆ ಸಾಧ್ಯ. ಅಮೇಸ್ ಈ ವಿಚಾರದಲ್ಲಿ ಬೇರೆಲ್ಲ ಪ್ರತಿಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಜತೆಗೆ ಹೋಂಡಾದ ಅಮೇಸ್‌ನಲ್ಲಿ ಅತಿ ತೆಳುವಾದ ಎಂಜಿನ್ ಆಯಿಲ್ ಬಳಸಲಾಗಿದೆ. ಇದನ್ನು ಯಾವುದೇ ಹೆಚ್ಚುವರಿ ಬೆಲೆಯಿಲ್ಲದೇ ಹೋಂಡಾ ನೀಡುತ್ತಿರುವುದು ವಿಶೇಷ. ಡೀಸೆಲ್ ಎಂಜಿನ್‌ಗಳಲ್ಲಿ ಎಂಜಿನ್ ಆಯಿಲ್ ತೆಳುವಾದಷ್ಟೂ ಒಳ್ಳೆಯದು. ಆಗಲೇ ಎಂಜಿನ್ ಮತ್ತಷ್ಟು ಚುರುಕಾಗುತ್ತದೆ.

ಅಮೇಸ್‌ನ ಪೆಟ್ರೋಲ್ ಕಾರ್ ಸಹ ಉತ್ತಮವಾಗೇ ಇದೆ. ಶಕ್ತಿಯೂ ಕೊಂಚ ಹೆಚ್ಚೇ ಇದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು 88 ಪಿಎಸ್ ಶಕ್ತಿ (6000 ಆರ್‌ಪಿಎಂ) ಮತ್ತು 109 ಎನ್‌ಎಂ ಟಾರ್ಕ್ (4000 ಆರ್‌ಪಿಎಂ) ಹೊಂದಿದೆ. ಪೆಟ್ರೋಲ್ ಕಾರ್ ಉತ್ತಮ ರಸ್ತೆ ಸ್ಥಿತಿಗತಿಯಲ್ಲಿ 18 ಲೀಟರ್ ಮೈಲೇಜ್ ನೀಡಲಿದೆ. ಸಾಮಾನ್ಯ ರಸ್ತೆ ಸ್ಥಿತಿಯಲ್ಲಿ 12ರಿಂದ 15 ಕಿಲೋಮೀಟರ್ ಮೈಲೇಜ್ ಸಿಗಲಿದೆ.

ಆರಾಮಕ್ಕೂ ಸೈ
ಎರಡೂ ಅಮೇಸ್‌ಗಳೂ 5 ಸ್ಪೀಡ್ ಗಿಯರ್ ಬಾಕ್ಸ್ ಒಳಗೊಂಡಿವೆ. ಹೋಂಡಾದ ಸಾಂಪ್ರದಾಯಿಕ ಅತಿ ನಯವಾದ ಗಿಯರ್ ಬಾಕ್ಸ್ ಇರುವ ಕಾರಣ ಆರಾಮವಾದ ಚಾಲನಾನುಭವ ಸಿಗುತ್ತದೆ. ಐಷಾರಾಮಿ ಕಾರ್‌ಗಳಲ್ಲಿ ಇರುವಂತೆ ಎತ್ತರ ಹೊಂದಿಸಿಕೊಳ್ಳಬಹುದಾದ ಚಾಲಕನ ಸೀಟ್ ಇದೆ. ಇದರಿಂದ ಕುಳ್ಳಗಿರುವ ಚಾಲಕರಿಗೆ ಅನುಕೂಲವಾಗುತ್ತದೆ. 50 ಮಿಲಿ ಮೀಟರ್ ಎತ್ತರದವರೆಗೆ ಎತ್ತರವನ್ನು ಹೊಂದಿಸಿಕೊಳ್ಳುವ ಸೌಲಭ್ಯ ಇದೆ.

ವೇಗವನ್ನು ಅರಿತು ಹೊಂದಿಕೊಳ್ಳುವ ಕಂಪ್ಯೂಟರ್ ನಿಯಂತ್ರಿತ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಇದ್ದು, ಆರಾಮದಾಯಕ ಚಾಲನೆಯ ಭರವಸೆ ಸಿಗುತ್ತದೆ. ಅತಿ ವೇಗದ ಹಾಗೂ ಕಡಿಮೆ ವೇಗದ ಚಾಲನೆಗಳಲ್ಲೂ ಸ್ಟೀರಿಂಗ್ ಅತ್ಯುತ್ತಮವಾಗಿ ಸ್ಪಂದಿಸುತ್ತದೆ.

ಪೆಟ್ರೋಲ್ ಅವತರಣಿಕೆಯಲ್ಲಿ ಮಾತ್ರ ಕಾರ್‌ಗೆ ಆಟೊಮ್ಯೋಟಿಕ್ ಗಿಯರ್ ವ್ಯವಸ್ಥೆ ಕಲ್ಪಿಸಲಾಗಿದೆ. ಡೀಸೆಲ್ ಎಂಜಿನ್‌ಗೆ ಈ ಸೌಲಭ್ಯ ನೀಡಿಲ್ಲ. ಸಾಮಾನ್ಯವಾಗಿ ಪುರುಷರು ಮ್ಯೋನ್ಯುಯಲ್ ಗಿಯರ್ ಬಯಸುತ್ತಾರೆ. ಬಹುತೇಕ ಮಹಿಳೆಯರು ಆಟೊಮ್ಯೋಟಿಕ್ ಗಿಯರ್ ಬಯಸುತ್ತಾರೆ. ಈ ಇಬ್ಬರಿಗೂ ಇಷ್ಟವಾಗುವಂತೆ ಕಾರ್ ನಿರ್ಮಿಸಿರುವುದು ಹೋಂಡಾ ಕಾಳಜಿಯನ್ನು ತೋರಿಸುತ್ತದೆ. ಆದರೆ ಆಟೊಮ್ಯೋಟಿಕ್ ಕಾರ್‌ಗಳಲ್ಲಿ ಮೈಲೇಜ್ ಹೆಚ್ಚು ಸಿಗುವುದಿಲ್ಲ.

ವಿನ್ಯಾಸ, ಸೌಂದರ್ಯ
ಬ್ರಿಯೊನ ಅಡಿಗಟ್ಟನ್ನು ಅಮೇಸ್ ಹೊಂದಿದ್ದರೂ, ಸೆಡಾನ್ ಕಾರ್ ಆಗಿರುವ ಕಾರಣ, ಬ್ರಿಯೊವನ್ನು ಹೆಚ್ಚಾಗಿ ಹೋಲುವುದಿಲ್ಲ. ಕೆಲವೇ ಕೆಲವು ಕೋನಗಳಲ್ಲಿ ಬ್ರಿಯೊವನ್ನು ನೆನಪಿಸುತ್ತದೆ. ಹೋಂಡಾ ಎಂಜಿನಿಯರ್‌ಗಳು ಅಮೇಸ್‌ಗೆ ವಿಭಿನ್ನ ನೋಟ ನೀಡಲು ಕಷ್ಟಪಟ್ಟಿದ್ದಾರೆ. ಎದುರಿನಿಂದ ತೆಳುವಾದ ಮಾಡರ್ನ್ ಲುಕ್ ಅಮೇಸ್‌ಗೆ ಸಿಕ್ಕಿದೆ. ಎದುರಿನ ಎಂಜಿನ್ ಗ್ರಿಲ್ ವಿಶಾಲವಾಗಿದ್ದು, ಗಾಳಿ ಉತ್ತಮವಾಗಿ ಆಡುವಂತೆ ರಚನೆಯಾಗಿದೆ.

ಇದು ಕಾರ್‌ಗೆ ಕೊಂಚ ಸ್ಪೋರ್ಟಿ ನೋಟವನ್ನೂ ನೀಡಿದೆ. ಹೆಡ್‌ಲೈಟ್‌ಗಳು ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿವೆ. ಹೊಸ ಹೋಂಡಾ ಸಿಟಿ ಕಾರ್‌ಗೆ ಇರುವಂತಹ ಹೆಡ್‌ಲೈಟ್‌ಗಳು ಕಾರ್‌ಗೆ ಇದ್ದು, ಅತ್ಯುತ್ತಮ ನೋಟವನ್ನು ನೀಡುತ್ತದೆ.

ಕಾರ್ ಅನ್ನು ಹೆಚ್ಚು ವಿಶಾಲವಾಗಿಸಲು ಹಾಗೂ ಹೆಚ್ಚು ಲೆಗ್‌ರೂಂ ನೀಡಲು ಕಾರ್‌ನಲ್ಲಿ 60 ಎಂಎಂ ಹೆಚ್ಚು ಉದ್ದದ ಚಾಸಿಸ್ ನೀಡಲಾಗಿದೆ. ಬ್ರಿಯೊದ ಉದ್ದ 2405 ಎಂಎಂ ಇತ್ತು. ಅಮೇಸ್ ಒಟ್ಟಾರೆ 3990 ಎಂಎಂ ಉದ್ದ ಇದ್ದು ಕಾರ್‌ಗೆ ದೊಡ್ಡ ಕಾರ್‌ನ ನೋಟ ನೀಡುತ್ತದೆ. ಜತೆಗೆ 1680 ಎಂಎಂ ಅಗಲದ ದೇಹವನ್ನೂ ಒಳಗೊಂಡಿದ್ದು, ಮೂರು ಮಂದಿ ಆರಾಮಾಗಿ ಕೂರುವ ಸೌಲಭ್ಯ ಸಿಕ್ಕಿದೆ.

ಹಿಂದಿನ ಸೀಟ್‌ನಲ್ಲಿ ಕೂರುವವರಿಗೆ ಕಾಲನ್ನು ನೀಡಿಕೊಳ್ಳಲು ಉತ್ತಮ ಜಾಗವಿದೆ. ಮಂಡಿ ಎದುರಿನ ಸೀಟ್‌ಗೆ ತಾಗುವುದಿಲ್ಲ. ಇದರ ಜತೆಗೆ ಹೋಂಡಾ ವಿಶಾಲವಾದ ಡಿಕ್ಕಿಯನ್ನೂ ನೀಡಿದೆ. 400 ಲೀಟರ್‌ಗಳ ಲಗ್ಗೇಜ್ ಅನ್ನು ಇಟ್ಟುಕೊಳ್ಳುವಷ್ಟು ಜಾಗ ಬೂಟ್‌ನಲ್ಲಿ ಇದೆ. ಅಮೇಸ್‌ನ ಹೆಚ್ಚಿನ ಬೆಲೆಯ ಕಾರ್‌ಗಳಲ್ಲಿ ಏರ್‌ಬ್ಯಾಗ್ ಹಾಗೂ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಸೌಲಭ್ಯವೂ ಇರುವುದು ವಿಶೇಷ.



(ಲೇಖಕರು ವಾಣಿಜ್ಯ ಪತ್ರಕರ್ತರು. ಕಳೆದ 10  ವರ್ಷಗಳಿಂದ ಕಾರ್ ಟೆಸ್ಟ್‌ಡ್ರೈವ್ ವರದಿ  ಬರೆಯುತ್ತಿದ್ದಾರೆ)
ಕನ್ನಡಕ್ಕೆ: ಎನ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT