ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್, ಸೀಮೆಎಣ್ಣೆ ತುಟ್ಟಿ?

Last Updated 28 ಡಿಸೆಂಬರ್ 2012, 11:23 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):  ಇಂಧನ ಸಚಿವಾಲಯದ ಪ್ರಸ್ತಾವಕ್ಕೆ ಅನುಮೋದನೆ ದೊರೆತರೆ, ಮುಂದಿನ 10 ತಿಂಗಳ ಅವಧಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಲೀಟರ್ ಸೀಮೆ ಎಣ್ಣೆ ಬೆಲೆ 10 ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಡೀಸೆಲ್, ಎಲ್‌ಪಿಜಿ ಹಾಗೂ ಸೀಮೆ ಎಣ್ಣೆ ಮಾರಾಟದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿರೂ 1,60,000 ಕೋಟಿ  ಕೊರತೆ ಬೀಳಲಿದೆ ಎಂದು ಅಂದಾಜಿಸಲಾಗಿದ್ದು, ಇದನ್ನು ಸರಿದೂಗಿಸಲು ಬೆಲೆ ಏರಿಕೆಗೆ ಚಿಂತಿಸಲಾಗಿದೆ.

ಸದ್ಯಕ್ಕೆ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ರೂ  47.15ಗೆ ಮಾರಾಟವಾಗುತ್ತಿದೆ. ಸೆಪ್ಟೆಂಬರ್ 14ರಂದು ಡೀಸೆಲ್ ಬೆಲೆಯನ್ನು ರೂ  5.63ರಷ್ಟು ಹೆಚ್ಚಿಸಲಾಗಿತ್ತು. ಕಳೆದ ವರ್ಷದ ಜೂನ್‌ನಿಂದ ಸೀಮೆ ಎಣ್ಣೆ ದರದಲ್ಲಿ ಬದಲಾವಣೆಯಾಗಿಲ್ಲ. ಸದ್ಯ ದೆಹಲಿಯಲ್ಲಿ ಪ್ರತಿ ಲೀಟರ್ ಸೀಮೆಎಣ್ಣೆ ರೂ 14.79 ಗೆ ಮಾರಾಟವಾಗುತ್ತಿದೆ.

ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ: `ಸರ್ಕಾರವು ಮುಂದಿನ ಹತ್ತು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ಡೀಸೆಲ್ ದರವನ್ನು ರೂ 1 ರಷ್ಟು  ಹೆಚ್ಚಳ ಮಾಡಲು ಚಿಂತನೆ ನಡೆಸಿದೆ' ಎಂದು ಇಂಧನ ಸಚಿವಾಲಯದ ಮೂಲಗಳು ತಿಳಿಸಿವೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ಲೀಟರ್ ಡೀಸೆಲ್ ಅನ್ನು ರೂ  9.28 ನಷ್ಟದಲ್ಲಿ ಮಾರಾಟ ಮಾಡುತ್ತಿವೆ. ಬೆಲೆ ಹೆಚ್ಚಳದಿಂದ ಈ ನಷ್ಟವನ್ನು ಭರಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಬಡವರು ಸೀಮೆ ಎಣ್ಣೆಯನ್ನು ಅಡುಗೆ ಇಂಧನವಾಗಿ ಬಳಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ಲೀಟರ್ ಸೀಮೆ ಎಣ್ಣೆ ಬೆಲೆಯನ್ನು ರೂ  10 ಹೆಚ್ಚಿಸಲಾಗುತ್ತದೆ. ಇದರ ಜತೆಗೆ, ಅಡುಗೆ ಅನಿಲ ಹಾಗೂ ನೈಸರ್ಗಿಕ ಅನಿಲ ಬಳಕೆಗೆ ಉತ್ತೇಜನ ನೀಡುವುದರಿಂದ ಸೀಮೆ ಎಣ್ಣೆ ಬಳಕೆಯನ್ನು ಶೇ 20ರಷ್ಟು ಕಡಿಮೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಎಲ್‌ಪಿಜಿ ಮಿತಿ ಹೆಚ್ಚಳ?: ಸರ್ಕಾರವು ಶೀಘ್ರವೇ, ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಮಿತಿಯನ್ನು 6ರಿಂದ 9ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಎಲ್‌ಪಿಜಿಗೆ ಈಗಿನಂತೆ ನಾಲ್ಕು ದರಗಳ ಬದಲು ಎರಡು ದರಗಳನ್ನು ( ಸಬ್ಸಿಡಿ ಹಾಗೂ ಮಾರುಕಟ್ಟೆ ದರ) ನಿಗದಿ ಮಾಡಲು ಸರ್ಕಾರ ಉದ್ದೇಶಿಸಿದೆ.

ಸಬ್ಸಿಡಿಯಲ್ಲಿ ನೀಡುವ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ಬೆಲೆ ರೂ 410.50.   ಮಿತಿಗಿಂತ ಹೆಚ್ಚಿನ ಸಿಲಿಂಡರ್‌ಗಳಿಗೆ ಮಾರುಕಟ್ಟೆ ದರ ಅನ್ವಯವಾಗುತ್ತದೆ (ಪ್ರತಿ ಸಿಲಿಂಡರ್‌ಗೆ ರೂ 1,156).

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಕಂಪೆನಿಗಳು ಡಿಸೇಲ್ ಮಾರಾಟದಲ್ಲಿ ರೂ 85,586 ಕೋಟಿ ನಷ್ಟ ಮಾಡಿಕೊಂಡಿವೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಆದ ಈ ನಷ್ಟಕ್ಕೆ ರೂ  30,000 ಕೋಟಿ  ನಗದು ಬೆಂಬಲ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. 

ಇಂಧನ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಡೀಸೆಲ್ ಹಾಗೂ ಅಡುಗೆ ಇಂಧನ ಸಬ್ಸಿಡಿಗಾಗಿ ಹಣಕಾಸು ಸಚಿವಾಲಯದ ಮುಂದೆ ರೂ  1,05,525 ಕೋಟಿ ಬೇಡಿಕೆ ಇಟ್ಟಿದೆ.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಡೀಸೆಲ್, ಎಲ್‌ಪಿಜಿ ಹಾಗೂ ಸೀಮೆ ಎಣ್ಣೆ ಮಾರಾಟದಲ್ಲಿ ರೂ  1,63,000 ಕೋಟಿ ರೂಪಾಯಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ.  ಒಎನ್‌ಜಿಸಿ, ಆಯಿಲ್ ಇಂಡಿಯಾ ಲಿಮಿಟೆಡ್ ಹಾಗೂ ಗೇಲ್ ಇಂಡಿಯಾ ಕಂಪೆನಿಗಳಿಂದ ಬರುವ 60,000 ಕೋಟಿ ರೂಪಾಯಿ ಮೊತ್ತದಿಂದ ಈ ನಷ್ಟವನ್ನು ಸ್ವಲ್ಪ ಸರಿದೂಗಿಸಿಕೊಳ್ಳಬಹುದು. ಉಳಿದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ನಗದು ಸಬ್ಸಿಡಿ ನೀಡುವಂತೆ ಇಂಧನ ಸಚಿವಾಲಯವು ಹಣಕಾಸು ಸಚಿವಾಲಯವನ್ನು ಕೋರಿದೆ.

ಹಂತ, ಹಂತವಾಗಿ ಏರಿಕೆ ಅನಿವಾರ್ಯ
ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು ಮತ್ತು ವಿದ್ಯುತ್ ದರಗಳನ್ನು ಹಂತ, ಹಂತವಾಗಿ ಹೆಚ್ಚಿಸುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ 57ನೇ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಪೆಟ್ರೋಲಿಯಂ ಉತ್ಪನ್ನ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ವಿದ್ಯುತ್ ಅನ್ನು ನಾವು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಇದರಿಂದಾಗಿ ಸಬ್ಸಿಡಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದು ಅಂತಿಮವಾಗಿ ಯೋಜನಾ ವೆಚ್ಚಗಳ ಕಡಿತಕ್ಕೆ ಕಾರಣವಾಗುತ್ತದೆ ಎಂದು ಅವರು ಬೆಲೆ ಏರಿಕೆ ವಾದ  ಸಮರ್ಥಿಸಿಕೊಂಡರು. `ತಕ್ಷಣ ಬೆಲೆ ಏರಿಕೆ ಮಾಡುವುದು ಸಮಂಜಸವಲ್ಲ ಎಂಬುದು ಗೊತ್ತು. ಆದರೆ, ನಷ್ಟ ಸರಿದೂಗಿಸಬೇಕಾದರೆ ಬೆಲೆ ಏರಿಕೆಯನ್ನು ಹಂತ, ಹಂತವಾಗಿ ಜಾರಿ ಮಾಡುವುದು ಅನಿವಾರ್ಯ' ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT