ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಮ್ಮಿ - ಫ್ರಿಡ್ಜ್ ಜಗಳಕ್ಕೆ ಮುರಿದು ಬಿದ್ದ ದಾಂಪತ್ಯ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ವಾಷಿಂಗ್ ಮಷಿನ್, ಫ್ರಿಡ್ಜ್ ಕೊಡಿಸೋ ತಾಕತ್ತು ಇಲ್ಲದ ನಿಮಗೆ ನಾನು ಅಡುಗೆ ಮಾಡಿ ಬಡಿಸಬೇಕಾ, ಸಾಧ್ಯವೇ ಇಲ್ಲ~ ಎನ್ನುವುದು ಪತ್ನಿಯ ವಾದ. `ನಾನು ಮಾಡಿರುವ ಅಡುಗೆ ತಿಂದೂ ತಿಂದೂ ಡುಮ್ಮಿಯಾಗಿದ್ದೀಯಾ. ಮೊದಲು `ಸ್ಲಿಮ್~ ಆಗು. ಆಮೇಲೆ ಎಲ್ಲ ಕೊಡಿಸುವೆ~ ಎನ್ನೋದು ಪತಿಯ ಪ್ರತಿವಾದ.

ಈತ ಸಲಕರಣೆ ತಂದು ಕೊಡಲಿಲ್ಲ, ಆಕೆ ಅಡುಗೆ ಮನೆಗೆ ಕಾಲು ಇಡಲಿಲ್ಲ. ಇವರಿಬ್ಬರ ವಾದ, ಪ್ರತಿವಾದ ನಗರದ ಕೌಟುಂಬಿಕ ಕೋರ್ಟ್‌ನಲ್ಲಿ ಅಂತ್ಯ ಕಂಡಿದೆ, ಅದೂ ವಿಚ್ಛೇದನದ ಮೂಲಕ. ಉದ್ಯೋಗವಿಲ್ಲದ ಪತ್ನಿ ಹಾಗೂ ಮಗಳಿಗೆ ಜೀವನಾಂಶದ ರೂಪದಲ್ಲಿ ಕೋರ್ಟ್ ಆದೇಶದ ಮೇರೆಗೆ ಪತಿ ಈಗ  ರೂ 12 ಲಕ್ಷ  ಪರಿಹಾರವೂ ನೀಡಬೇಕಿದೆ!

ಬೆಂಗಳೂರಿನ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿರುವ ರಾಜು ಹಾಗೂ ರಶ್ಮಿ  (ಇಬ್ಬರ ಹೆಸರು ಬದಲಾಯಿಸಲಾಗಿದೆ) ನಡುವಿನ ದಾಂಪತ್ಯದ ಪ್ರಕರಣ ಇದು.

`ಸ್ಲಿಮ್ ಹುಡುಗಿಯೇ ಬೇಕೆಂದು ಹುಡುಕಿ ಹುಡುಕೀ ವಿವಾಹವಾದೆ.  ಸ್ವಲ್ಪವೂ ಕೆಲಸ ಮಾಡುವುದಿಲ್ಲ. ಶುದ್ಧ ಸೋಮಾರಿ. ಇಡೀ ದಿನ ಮೊಬೈಲ್ ದೂರವಾಣಿಯಲ್ಲಿ ಸ್ನೇಹಿತರ ಜೊತೆ ಹರಟುತ್ತಲೇ ಇರುತ್ತಾಳೆ. ಮನೆ ಕೆಲಸ ಮಾಡದೆ, ದಿನದಿಂದ ದಿನಕ್ಕೆ ದಡೂತಿಯಾಗುತ್ತಿದ್ದಾಳೆ. ಇವಳು ನನಗೆ ಬೇಡ~ ಎಂದು ವಿಚ್ಛೇದನ ಕೋರಿ ರಾಜು ಕೌಟುಂಬಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

`ಇವರು ಹೇಳುತ್ತಿರುವುದು ಸುಳ್ಳು. ಮನೆಗೆ ಬೇಕಾಗುವ ಸಾಮಾನುಗಳನ್ನು ಇವರು ತಂದು ಕೊಟ್ಟಿಲ್ಲ. ಕೇಳಿದರೆ `ಡುಮ್ಮಿ~ ಎಂದು ಹೀಯಾಳಿಸುತ್ತಾರೆ. ಅಷ್ಟಕ್ಕೂ ಇವರು ಕೂಡ ಏನು ಕಮ್ಮಿ ಇಲ್ಲ. ಹೆಚ್ಚು ಕಡಿಮೆ ನನ್ನಷ್ಟೇ 85-90 ಕೆ.ಜಿ. ತೂಕದವರು. ಮನೆಯಲ್ಲಿ ಅಗತ್ಯ ಸಾಮಾನು ಇಲ್ಲದ ಮೇಲೆ ನಾನ್ಯಾಕೆ ಇವರ ಜೊತೆ ಇರಬೇಕು. ಇವರೂ ನನಗೆ ಬೇಡ~ ಎಂದು ರಶ್ಮಿ ತಿರುಗೇಟು ನೀಡಿದರು. ಎಷ್ಟೆಂದರೂ ಪತ್ನಿ, ಜೊತೆಗೊಂದು ಪುಟ್ಟ ಮಗಳು.

ಹೀಗಾಗಿ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ ರಾಜು, ಪತ್ನಿಯನ್ನು ಕರೆದುಕೊಂಡು ಹೋಗಲು ನ್ಯಾಯಾಲಯದಲ್ಲಿ ಮನಸ್ಸು ಮಾಡಿದರು. ಆದರೆ ರಶ್ಮಿ ಸುತಾರಾಂ ಒಪ್ಪಲಿಲ್ಲ.  ಇವರಿಬ್ಬರ ನಡುವೆ ರಾಜಿ ಸಂಧಾನ ವಿಫಲವಾಯಿತು. ಕೌಟುಂಬಿಕ ಕೋರ್ಟ್ ವಿಚ್ಛೇದನ ನೀಡಿತು. ರಶ್ಮಿ ಅವರಿಗೆ ಉದ್ಯೋಗ ಇಲ್ಲದ ಕಾರಣ, ಅವರ ಹಾಗೂ ಮಗಳ ಪೋಷಣೆಗಾಗಿ ರೂ 12 ಲಕ್ಷ  ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿತು.

ಪ್ರಕರಣದ ವಿವರ: ವಿಚ್ಛೇದನ ಕೋರಿ ರಾಜು ಕೌಟುಂಬಿಕ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, `ನಮ್ಮ ವಿವಾಹ 2008ರ ಫೆಬ್ರುವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದಿದೆ. ನನ್ನ ಕುಟುಂಬ ವರ್ಗದವರು ಮನೆಗೆ ಬರಬಾರದು ಎಂದು ವಿವಾಹವಾದ ಕೆಲವು ತಿಂಗಳುಗಳಲ್ಲಿಯೇ ರಶ್ಮಿ ಒತ್ತಾಯ ಮಾಡುತ್ತಿದ್ದಳು. ಮಾನಸಿಕವಾಗಿ ಹಿಂಸೆ ನೀಡತೊಡಗಿದಳು. ನನಗೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಮಾಮೂಲು.

ಮೊದಲು ಕೋಲ್ಕತ್ತ, ನಂತರ ಚೆನ್ನೈ ಅಲ್ಲಿಂದ ದೆಹಲಿಗೆ ವರ್ಗವಾಯಿತು. 2009ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿದ್ದಾಗ ನಮಗೆ ಹೆಣ್ಣು ಮಗುವಾಯಿತು. ಮೊದಲೇ ಸೋಮಾರಿಯಾಗಿದ್ದ ರಶ್ಮಿ ಮಗುವಾದ ಮೇಲೆ ಆಕೆ ಇನ್ನಷ್ಟು ಸೋಮಾರಿಯಾದಳು. ಫ್ರಿಡ್ಜ್, ವಾಷಿಂಗ್ ಮಷಿನ್‌ಗಳು ಇರಲಿಲ್ಲ.

ಅವೆಲ್ಲ ಬೇಕೆಂದು ಹಠ ಮಾಡತೊಡಗಿದಳು. ಇದನ್ನೇ ನೆಪವಾಗಿಟ್ಟುಕೊಂಡು ನನಗೆ ಯಾವ ರೀತಿಯಲ್ಲಿಯೂ ನೆರವು ಮಾಡುತ್ತಿರಲಿಲ್ಲ. ಕೆಲಸಕ್ಕೆ ಹೋಗಿ ಬಂದು ನಾನೇ ಅಡುಗೆ ಮಾಡಿ ಆಕೆಗೂ ನೀಡಬೇಕಾಯಿತು. ಸ್ವಲ್ವ ದಿನ ಇದೇ ಮುಂದುವರಿಯಿತು. ನಂತರ ನಮಗೆ ಹೋಟೆಲ್ ಊಟವೇ ಗತಿಯಾಯಿತು. ಇದರಿಂದ ಇನ್ನಷ್ಟು ಬೊಜ್ಜು ಬೆಳೆಸಿಕೊಂಡಿದ್ದಾಳೆ. ಅವಳು ನನಗೆ ಬೇಡ~ ಎಂದು ವಿವರಿಸಿದ್ದಾರೆ.

ಇವೆಲ್ಲ ಆರೋಪಗಳನ್ನು ರಶ್ಮಿ ನ್ಯಾಯಾಲಯದಲ್ಲಿ ಅಲ್ಲಗಳೆದರು. `ವಿವಾಹದ ವೇಳೆ ಮೂರುವರೆ ಲಕ್ಷ ವರದಕ್ಷಿಣೆ ನೀಡಲಾಗಿದೆ. ಇನ್ನೂ ಹೆಚ್ಚಿಗೆ ವರದಕ್ಷಿಣೆ ತರುವಂತೆ ರಾಜು ಹಾಗೂ ಅವರ ಪೋಷಕರು ಹಿಂಸೆ ನೀಡತೊಡಗಿದರು.

ಇಷ್ಟೆಲ್ಲ ವರದಕ್ಷಿಣೆ ನೀಡಿದರೂ ಮನೆಗೆ ಅಗತ್ಯ ಇರುವ ಸಾಮಾನು ತಂದು ಕೊಡದೆ ಹೋದರೆ ಅಡುಗೆ ಮಾಡುವುದು ಹೇಗೆ, ಸಾಮಾನು ತಂದುಕೊಡಿ ಎಂದರೆ ಇಲ್ಲದ ಆರೋಪ ಮಾಡುತ್ತಾರೆ. ನನಗೂ ಇವರ ಜೊತೆ ಬಾಳಲು ಇಷ್ಟವಿಲ್ಲ~ ಎಂದರು.

ಈ ಮಧ್ಯೆ, ಪತಿಯ ಪರ ವಕೀಲ ರಮೇಶ್ಚಂದ್ರ ಅವರು ನೀಡಿದ ಸಲಹೆಯ ಮೇರೆಗೆ ಪತ್ನಿಯನ್ನು ವಾಪಸು ಕರೆಸಿಕೊಳ್ಳಲು ರಾಜು ತಯಾರಾದರು. ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಸಂಧಾನಕ್ಕಾಗಿ ವಹಿಸಿಕೊಡಲಾಯಿತು. ಆದರೆ, ರಶ್ಮಿ ಮಾತ್ರ ಪತಿಯ ಬಳಿ ಹೋಗಲು ಒಪ್ಪಲಿಲ್ಲ. ಸಂಧಾನ ವಿಫಲವಾದ ಕಾರಣ, ವಿಚ್ಛೇದನ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT