ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ ಜ್ವರ ನಿಯಂತ್ರಿಸಿ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಡೆಂಗೆ ಜ್ವರದ ಭೀತಿ ಮತ್ತೆ ರಾಜ್ಯವನ್ನು ಆವರಿಸಿದೆ. ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರ ಪ್ರಕಾರ ಈ ವರ್ಷ ರಾಜ್ಯದಲ್ಲಿ 134 ಶಂಕಿತ ಡೆಂಗೆ ಪ್ರಕರಣಗಳು ವರದಿಯಾಗಿವೆ. ಸಚಿವರೇ ಹೇಳಿರುವ ಪ್ರಕಾರ, ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 9 ಜನರು  ಡೆಂಗೆ ಜ್ವರಕ್ಕೆ ಬಲಿಯಾಗಿದ್ದಾರೆ.
 
ಬೆಂಗಳೂರು ನಗರವೊಂದರಲ್ಲೇ ಕಳೆದ ವಾರ ಇಬ್ಬರು, ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿತ್ತು. ಈಗ ಈ ಎರಡು ಸಾವುಗಳಲ್ಲಿ ಒಂದು ಮಾತ್ರ ಡೆಂಗೆ ಜ್ವರದಿಂದ ಸಂಭವಿಸಿದೆ ಎಂದು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸ್ಪಷ್ಟನೆ ನೀಡಿದೆ.

ಈ ಅಂಕಿಅಂಶಗಳ ಗೊಂದಲ ಏನೇ ಇರಲಿ, ಡೆಂಗೆ ಜ್ವರ ನಿಯಂತ್ರಣದ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳುವುದು ಸಾಧ್ಯವಿಲ್ಲ. ಡೆಂಗೆ ಜ್ವರ ರಾಜ್ಯವನ್ನು ಕಾಡುತ್ತಿರುವುದು ಇದೇ ಮೊದಲೇನಲ್ಲ. ಮಳೆಗಾಲ ಕಾಲಿರಿಸುತ್ತಿದ್ದಂತೆ ಸೊಳ್ಳೆಗಳ ಉಪದ್ರವಗಳ ಜೊತೆಗೇ ಕಾಯಿಲೆಗಳು ಮಾಮೂಲು.

ಸೊಳ್ಳೆಗಳಿಂದ ಹರಡುವ  ಡೆಂಗೆ, ಚಿಕುನ್‌ಗುನ್ಯ ಹಾಗೂ ಮಲೇರಿಯ  ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ಬೃಹತ್ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ನಮ್ಮನ್ನಾಳುವವರಿಗೂ ಬಿಸಿ ತಟ್ಟಿಸಿದೆ. ನೈರ್ಮಲ್ಯದ ಅಭಾವ ಇರುವ ಕೊಳಕು ಪರಿಸರದಲ್ಲಿ ವಾಸ ಮಾಡುವವರಿಗೆ ಮಾತ್ರ ಈ ಕಾಯಿಲೆಗಳು ಬರುತ್ತದೆ ಎಂದೇನೂ ಅಂದುಕೊಳ್ಳಬೇಕಿಲ್ಲ.
 
2006ರಲ್ಲಿ ಪ್ರಧಾನಿಯವರ ಇಬ್ಬರು ಮೊಮ್ಮಕ್ಕಳು ಹಾಗೂ ಅಳಿಯ ಡೆಂಗೆ ಜ್ವರ ಪೀಡಿತರಾಗಿ ಆಸ್ಪತ್ರೆ ಸೇರಿದ್ದುದನ್ನು ಇಲ್ಲಿ ಸ್ಮರಿಸಬಹುದು. ಅದೇ ಸಂದರ್ಭದಲ್ಲೇ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದಕ್ಕಾಗಿ, ಡೆಂಗೆ  ಜ್ವರ ತಡೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿತ್ತು.

ಈಗ ಡೆಂಗೆ ನಿರ್ಮೂಲನೆ ಹಾಗೂ ಈ ಜ್ವರದಿಂದ ಸತ್ತವರಿಗೆ ಪರಿಹಾರಕ್ಕಾಗಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಜಾರಿ ಮಾಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಕಳೆದ ವಾರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ದಾಖಲಾಗಿರುವುದನ್ನೂ ಉಲ್ಲೇಖಿಸಬಹುದು.

ಸ್ಥಳೀಯ ಸಂಸ್ಥೆಗಳ ಜೊತೆ ಆರೋಗ್ಯ ಇಲಾಖೆ ಕೈಜೋಡಿಸಿ ಡೆಂಗೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಳೆಗಾಲ ಅಡಿ ಇಡುವ ಮುಂಚೆಯೇ ಈ ಸಿದ್ಧತೆಗಳು ಆರಂಭವಾಗಬೇಕು.
 
ಆದರೆ ರಾಜಕೀಯ ಜಗಳಗಳಲ್ಲೇ ಮುಳುಗಿರುವ ಸರ್ಕಾರದಲ್ಲಿ ಆಡಳಿತ ಎನ್ನುವುದು ನಿಷ್ಕ್ರಿಯವಾಗಿದೆ. ಈ ಕಾಯಿಲೆಯಿಂದಾಗಿ ಜೀವ ನಷ್ಟವಾಗುವುದನ್ನು ತಪ್ಪಿಸಲಾಗುತ್ತಿಲ್ಲ ಎಂಬುದು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವೈಫಲ್ಯ.
 
ಡೆಂಗೆ ಜ್ವರ ಪತ್ತೆ ಹಾಗೂ ಚಿಕಿತ್ಸೆಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಮೂಲ ಸೌಕರ್ಯಗಳು ಸೃಷ್ಟಿಯಾಗುವುದು ಅಗತ್ಯ.  ಡೆಂಗೆ ಜ್ವರವನ್ನು ಸೊಳ್ಳೆಗಳನ್ನು  ನಿಯಂತ್ರಿಸುವ ಮೂಲಕವಷ್ಟೇ ಪರಿಹರಿಸಬಹುದು.
 
ಇದಕ್ಕಾಗಿ ಜನವಸತಿ ಪ್ರದೇಶಗಳಲ್ಲಿನ ಕಸ ವಿಲೇವಾರಿ, ನೀರು ನಿಲ್ಲದಂತೆ  ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಚರಂಡಿಗಳಲ್ಲಿನ ಹೂಳೆತ್ತುವ ಕೆಲಸಗಳು  ನಿರಂತರವಾಗಿರಬೇಕು. ಅಷ್ಟೇ ತೀವ್ರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT