ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ ಜ್ವರ: ಸುಳ್ಳು ಮಾಹಿತಿಗೆ ಆಕ್ಷೇಪ

Last Updated 13 ಡಿಸೆಂಬರ್ 2012, 7:50 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಡೆಂಗೆ ಜ್ವರದ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಹಾಕಲು ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು ಪ್ರಯತ್ನಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಬುಧವಾರ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2009ರಿಂದ ಈವರೆಗೆ 4,701 ಡೆಂಗೆ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, 41 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಆದರೆ, ಸಚಿವರ ಉತ್ತರವನ್ನು ಒಪ್ಪದ ಹಲವು ಶಾಸಕರು, `ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಡೆಂಗೆ ಜ್ವರದ ಪ್ರಕರಣಗಳನ್ನು ಮುಚ್ಚಿಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅವರು ನೀಡಿದ ಸುಳ್ಳು ಮಾಹಿತಿಯನ್ನು ಸಚಿವರು ಸದನಕ್ಕೆ ನೀಡುತ್ತಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಪ್ರತಿಕ್ರಿಯಿಸಿದ ಲಿಂಬಾವಳಿ, `ನಾನು ಆರೋಗ್ಯ ಸಚಿವನಾಗಿ ಅಧಿಕಾರ ಸ್ವೀಕರಿಸುವ ಮುನ್ನ ಇಲಾಖೆಯ ಅಧಿಕಾರಿಗಳು ಕೆಲವು ಸಂದರ್ಭದಲ್ಲಿ ಡೆಂಗೆ ಜ್ವರದ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನಿಸಿರುವುದು ನಿಜ. ಆದರೆ, ಆ ರೀತಿ ಮಾಡದಂತೆ ನಾನು ಅಧಿಕಾರ ವಹಿಸಿಕೊಂಡ ತಕ್ಷಣವೇ ಸೂಚನೆ ನೀಡಿದ್ದೆ. ಈಗ ಅಂತಹ ಪ್ರಯತ್ನ ನಡೆಯುತ್ತಿಲ್ಲ' ಎಂದರು.

2009ರಲ್ಲಿ 1,764, 2010ರಲ್ಲಿ 2,285, 2011ರಲ್ಲಿ 405 ಮತ್ತು ಪ್ರಸಕ್ತ ವರ್ಷದ ನವೆಂಬರ್‌ವರೆಗೆ 3,704 ಡೆಂಗೆ ಜ್ವರದ ಪ್ರಕರಣಗಳು ಪತ್ತೆಯಾಗಿವೆ. 2009ರಲ್ಲಿ ಎಂಟು ಜನರು, 2010ರಲ್ಲಿ 10 ಜನರು, 2011ರಲ್ಲಿ 5 ಮತ್ತು ಈ ವರ್ಷದ ನವೆಂಬರ್ ಅಂತ್ಯದವರೆಗೆ 21 ಮಂದಿ ಡೆಂಗೆ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಚರ್ಚಿಸಿ ಕ್ರಮ: 200 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಸಂಬಂಧ 2007ರಲ್ಲಿ ಹೊರಡಿಸಿದ್ದ ಆದೇಶದಲ್ಲಿ 83 ಕೇಂದ್ರಗಳನ್ನು ರದ್ದು ಮಾಡಿರುವುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಆಯಾ ಕ್ಷೇತ್ರಗಳ ಶಾಸಕರ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಮಳವಳ್ಳಿ ತಾಲ್ಲೂಕಿನ ಎರಡು ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಮಂಜೂರಾತಿ ಆದೇಶ ಹೊರಡಿಸಿ, ಬಳಿಕ ರದ್ದು ಮಾಡಿರುವ ಕುರಿತು ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಆರೋಗ್ಯ ಸಚಿವರಿಗೆ ಪ್ರಶ್ನೆ ಕೇಳಿದರು. ಆಗ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಹಲವು ಸದಸ್ಯರೂ ಅದಕ್ಕೆ ದನಿಗೂಡಿಸಿದರು.

`ನಮ್ಮ ಕ್ಷೇತ್ರಗಳಿಗೆ ನೀಡಿದ್ದ ಆರೋಗ್ಯ ಕೇಂದ್ರಗಳನ್ನು ರದ್ದುಮಾಡಿ, ಆಡಳಿತ ಪಕ್ಷದ ಸದಸ್ಯರ ಕ್ಷೇತ್ರಗಳಿಗೆ ಮಂಜೂರು ಮಾಡಲಾಗಿದೆ' ಎಂದು ದೂರಿದರು. ಎಲ್ಲ ಆರೋಗ್ಯ ಕೇಂದ್ರಗಳನ್ನೂ 2007ರ ಮಂಜೂರಾತಿಯ ಪ್ರಕಾರವೇ ಸ್ಥಾಪಿಸುವಂತೆ ಒತ್ತಾಯಿಸಿ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು.

ಮೊದಲಿನ ಆದೇಶದಂತೆಯೇ ಆರೋಗ್ಯ ಕೇಂದ್ರ ಸ್ಥಾಪಿಸುವ ಭರವಸೆ ಸಚಿವರಿಂದ ಬರಲಿಲ್ಲ. ಆಗ, ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಸರ್ಕಾರ ಕೆಲವರನ್ನು ತೃಪ್ತಿಪಡಿಸಲು ಆರೋಗ್ಯ ಕೇಂದ್ರಗಳ ಮಂಜೂರಾತಿ ಆದೇಶ ರದ್ದು ಮಾಡಿರುವುದು ಸರಿಯಲ್ಲ. ಮೂಲ ಮಂಜೂರಾತಿಯಂತೆಯೇ ಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಬೇಕು' ಎಂದು ಆಗ್ರಹಿಸಿದರು.

ಬಳಿಕ ಉತ್ತರಿಸಿದ ಶೆಟ್ಟರ್, `ಸಂಬಂಧಿಸಿದ ಕ್ಷೇತ್ರಗಳ ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸುತ್ತೇನೆ.  ಶಾಸಕರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುತ್ತೇನೆ' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT