ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ: ಮೂರು ದಿನ ಲಾರ್ವಾ ಸಮೀಕ್ಷೆ

Last Updated 1 ಜೂನ್ 2013, 10:35 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ ಡೆಂಗೆ ಹಾಗೂ ಚಿಕುನ್ ಗುನ್ಯ ರೋಗಗಳು ಜೂನ್-ಜುಲೈ ತಿಂಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶಗಳಲ್ಲಿ ಜೂನ್ 3ರಿಂದ ಮೂರು ದಿನಗಳ ಲಾರ್ವಾಗಳ ಕುರಿತ ತ್ವರಿತ ಸಮೀಕ್ಷೆ ನಡೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ ಸೂಚಿಸಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಡೆಂಗೆ, ಚಿಕುನ್‌ಗುನ್ಯ ನಿಯಂತ್ರಣದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಮಿತಿಗಳು ಮನೆ ಮನೆಗೆ ಭೇಟಿ ನೀಡಿ ಸೊಳ್ಳೆಗಳ ಲಾರ್ವಾ ಇರುವಿಕೆಯ ಸಮೀಕ್ಷೆ ಮಾಡಿ ಡೆಂಗೆ ನಿಯಂತ್ರಕ ಕ್ರಮಗಳ ಕುರಿತು ತಿಳಿವಳಿಕೆ ಹಾಗೂ ಅವಶ್ಯಕ ಕ್ರಮ ಜರುಗಿಸಬೇಕು. ಇದರ ಸೂಕ್ತ ದಾಖಲಾತಿ ಮಾಡಬೇಕು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲೂ ಕೂಡ ಸೊಳ್ಳೆ ನಿಯಂತ್ರಣದ ತ್ವರಿತ ಸಮೀಕ್ಷೆಯನ್ನು ಅದೇ ರೀತಿ ನಡೆಸಬೇಕು ನಗರ ಪ್ರದೇಶದ ನಾಲಾ, ಗಟಾರ ಹಾಗೂ ಗ್ರಾಮಿಣ ಪ್ರದೇಶಗಳಲ್ಲೂ ಸ್ವಚ್ಚತೆಯ ವಿಶೇಷ ಕಾರ್ಯಕ್ರಮ ಜರುಗಿಸಬೇಕು. ತಾಲ್ಲೂಕು ಮಟ್ಟದಲ್ಲಿ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಜರುಗಿಸಿ ಸಾಮಾಜಿಕ ಆರೋಗ್ಯ ಕಾಪಾಡಲು ಸಾಂಕ್ರಾಮಿಕ ರೋಗ ತಡೆಗೆ ಅವರು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಬೇಕು ಎಂದರು.

ಡಾ.ಎಸ್.ಎಂ.ಹೊನಕೇರಿ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆ ಮುನ್ನೆಚ್ಚರಿಕೆ ಅದರಲ್ಲೂ ವಿಶೇಷವಾಗಿ ಡೆಂಗೆ ಮತ್ತು ಚಿಕುನ್ ಗುನ್ಯ ರೋಗಗಳ ಕುರಿತ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ.ಅಂಗಡಿ, ಜಿಲ್ಲೆಯಲ್ಲಿ ಕೈಕೊಂಡಿರುವ ರೋಗ ತಡೆ ಮುನ್ನೆಚ್ಚರಿಕೆ ಕ್ರಮಗಳು ಈಗಾಗಲೇ ಜಾರಿಯಲ್ಲಿದ್ದು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಸಮೀಕ್ಷೆ ಹಾಗೂ ಜನಜಾಗೃತಿ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಅವಳಿ ನಗರದಲ್ಲಿ ಸುಮಾರು 2 ಲಕ್ಷ ಕುಟುಂಬಗಳಿದ್ದು, ಆ ಮನೆಗಳಿಗೆ ಸಮೀಕ್ಷಾ ತಂಡಗಳ ಭೇಟಿ ನೀಡಲು ಪಾಲಿಕೆಯ ಆರೋಗ್ಯ ವಿಭಾಗ ಸಹಕರಿಸಲಿದೆ. ವಾಹನ ಹಾಗೂ ಅಗತ್ಯ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಾಗೂ ಸ್ವಚ್ಛತೆ ಕುರಿತು ಹೆಚ್ಚಿನ ಗಮನ ನೀಡಲು ಎಲ್ಲ ಕ್ರಮ ಜರುಗಿಸುವುದಾಗಿ ಪಾಲಿಕೆ ಆಯುಕ್ತ ವೈ.ಎಸ್.ಪಾಟೀಲ ನುಡಿದರು.

ಕಿಮ್ಸನ ನಿರ್ದೇಶಕಿ ಡಾ.ವಸಂತಾ ಕಾಮತ್, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಸಮೀಕ್ಷಣಾ ಅಧಿಕಾರಿ ಡಾ.ಸುಭಾಷ ಬಬ್ರುವಾಡ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಬಿರಾದಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಶಿಧರ ಕಟಕೋಳ ಇದ್ದರು.

ಜಾತ್ರಾ ಮಹೋತ್ಸವ
ಧಾರವಾಡ: ಇಲ್ಲಿನ ಭೂಸಪ್ಪ ಚೌಕ ಬಳಿಯ ಕುರುಬರ ಓಣಿಯಲ್ಲಿನ ಯಲ್ಲಮ್ಮ ದೇವಿ ಮತ್ತು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮೇ 31ಕ್ಕೆ ಆರಂಭವಾಗಿದ್ದು, ಜೂನ್ 3ರವರೆಗೆ ಮುಂದುವರೆಯಲಿದೆ.

ಜೂನ್ 2ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಯಲ್ಲಮ್ಮ ದೇವಿ ಮತ್ತು ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮಂಗಳವಾದ್ಯಗಳ ಸಮೇತ ಸಂಭ್ರಮದಿಂದ ನೆರವೇರಲಿದೆ. ಜೂನ್ 3ರಂದು ಮುಂಜಾನೆ 9ಕ್ಕೆ ಭಂಡಾರ ಒಡೆಯುವುದು, ಬಳಿಕ ಮಹಾಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಲವಾಗುವುದು ಎಂದು ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.

ಕಿಸಾನ್ ಕಾಂಗ್ರೆಸ್‌ಗೆ ನೇಮಕ
ಧಾರವಾಡ: ಹುಬ್ಬಳ್ಳಿ-ಧಾರವಾಡ ಕಿಸಾನ್‌ಖೇತ್ ಮಜದೂರ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹ್ಮದಅಲಿ ಬಡಬಡೆ ಅವರನ್ನು ನೇಮಿಸಲಾಗಿದೆ.

ಕರ್ನಾಟಕ ರಾಜ್ಯ ಕಿಸಾನಖೇತ ಉಪಾದ್ಯಕ್ಷರ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT