ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಡೆಂಗೆ ಸಾವು ಎರಡೇ; ಬೇರೆ ಗೊತ್ತಿಲ್ಲ'

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಉತ್ತರ
Last Updated 5 ಜುಲೈ 2013, 6:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಉಲ್ಬಣವಾಗಿರುವ ಡೆಂಗೆ ಜ್ವರದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳು ಹೇಳುತ್ತಾರೆ. ಡೆಂಗೆಯಿಂದ ಇಬ್ಬರು ಸತ್ತಿದ್ದು, ಉಳಿದ 25ಕ್ಕೂ ಹೆಚ್ಚು ಮಕ್ಕಳು ಸತ್ತಿರುವುದು ಯಾಕೆ ಎಂದು ನನಗೆ ಗೊತ್ತಿಲ್ಲ. ಆ ಮಕ್ಕಳು ಏಕೆ ಸತ್ತರು ಎಂಬುದನ್ನು ಡಿಎಚ್‌ಓ ತಿಳಿಸುತ್ತಾರೆ.

ಮಳೆಗಾಲದಲ್ಲಿಯೂ 10-15 ದಿನಕ್ಕೊಮ್ಮೆ ನೀರು ಏಕೆ ಪೂರೈಕೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ. ಎರಡೂ ವರ್ಷವಾದರೂ ಒಳಚರಂಡಿ ಕಾಮಗಾರಿ ಮುಗಿಯದೇ ರಸ್ತೆ ಹಾಳಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸುತ್ತಾರೆ...!

ಸುಮಾರು ಮೂರು ಗಂಟೆಗಳ ಕಾಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಅವರು ಪತ್ರಕರ್ತರಿಗೆ ನೀಡಿದ ಮಾಹಿತಿಯಿದು.

ಪ್ರಗತಿ ಪರಿಶೀಲನಾ ಸಭೆಯ ನಂತರ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ತಿಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಮುಂಗಾರು ಮಳೆ ಹಂಗಾಮಿಗೆ ಬೇಕಾದ ಬೀಜ, ಗೊಬ್ಬರ, ಕೀಟನಾಶಕ, ಜನ, ದನ ಆರೋಗ್ಯ, ವಿದ್ಯಾರ್ಥಿ ವಸತಿ ನಿಲಯಗಳ ಸಮಸ್ಯೆ, ಶಾಲಾ ಸಮವಸ್ತ್ರ ವಿತರಣೆ ಕುರಿತು ಚರ್ಚಿಸಲಾಗಿದ್ದು, ಅವುಗಳ ಅಂಕಿ ಸಂಖ್ಯೆಗಳು ತಮ್ಮ ಬಳಿ ಇಲ್ಲ. ಬೇಕಾದರೆ, ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಕೇಳಿ ಪಡೆಯಬಹುದು' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ಮಾಡಿದರು.

ಜಿಲ್ಲೆಯ ಡೆಂಗೆ ವ್ಯಾಪಕವಾಗಿ ಹರಡಿದೆ. ದಿನವೊಂದಕ್ಕೆ ಒಂದೆರಡು ಮಕ್ಕಳು ಸಾಯುತ್ತಿವೆ. ಆ ಬಗ್ಗೆ ಯಾವುದೇ ಚರ್ಚೆಯಾಗಲಿಲ್ಲವೇ, ಚರ್ಚೆಯಾಗಿದ್ದರೆ, ಏನು ಕ್ರಮ ಕೈಗೊಳ್ಳಲು ಸೂಚಿಸಿದ್ದೀರಿ ಎಂದು ಕೇಳಿದರೆ, ಜಿಲ್ಲೆಯಲ್ಲಿ ಡೆಂಗೆ ಇದ್ದರೂ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೊಳ್ಳೆಗಳಿಂದ ಹರಡುವ ಇಂತಹ ರೋಗಗಳನ್ನು ತಡೆಗಟ್ಟಲು ಸೊಳ್ಳೆ ನಿಯಂತ್ರಣ ಅವಶ್ಯ. ಅದಕ್ಕಾಗಿ ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಸೊಳ್ಳೆಗಳನ್ನು ತಿನ್ನುವ `ಗ್ಯಾಂಬೂಜಿಯಾ' ಮೀನು ಬಿಡುವಂತೆ ಸೂಚಿಸಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಡೆಂಗೆಯಿಂದ ಇಲ್ಲಿವರೆಗೆ ಒಬ್ಬರು ಮಾತ್ರ ಸತ್ತಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ. ಉಳಿದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಆಗ ಡೆಂಗೆಯಿಂದ ಇಬ್ಬರು ಸತ್ತಿದ್ದರೇ ಇದೊಂದು ತಿಂಗಳಲ್ಲಿ ಕನಿಷ್ಟ 25ಕ್ಕಿಂತ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಅವರು ಯಾವ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಡೆಂಗೆ ಕಾರಣವಾಗದಿದ್ದರೆ, ಯಾವುದಾದರೂ ಮಾರಣಾಂತಿಕ ಕಾಯಿಲೆ ಜಿಲ್ಲೆಯಲ್ಲಿ ಹರಡಿರಬಹುದಲ್ಲ ಎಂದು ಪ್ರಶ್ನಿದ್ದಕ್ಕೆ, ತಮಗೆ ಇಬ್ಬರು ಸತ್ತಿರುವುದು ಮಾತ್ರ ಗೊತ್ತು. ಉಳಿದವರು ಯಾಕೆ ಸತ್ತರು ಎಂಬುದನ್ನು ಡಿಎಚ್‌ಓ ಅವರೇ ನಿಮಗೆ ಮಾಹಿತಿ ನೀಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಾರಿಕೊಂಡರು.

ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 25ಕ್ಕೂ ಹೆಚ್ಚು ಜನ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ವಿಷಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಗಂಭೀರ ಎನಿಸಲೇ ಇಲ್ಲ. ಅದೊಂದು ಸಾಮಾನ್ಯ ಪ್ರಕ್ರಿಯೆ ಎನ್ನುವಂತೆ ಎಲ್ಲವನ್ನು ಡಿಎಚ್‌ಓ ಹೆಗಲಿಗೆ ಹೊರಿಸಿ ಸುಮ್ಮನಾಗಿದ್ದು, ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು.

ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಒಳಚರಂಡಿ ಕಾಮಗಾರಿ ಕುರಿತ ಕೇಳಿದ ಪ್ರಶ್ನೆಗೆ, ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳಿದ್ದಾರೆ. ಅವರೇ ನೀರಿನ ಸಮಸ್ಯೆ ಹಾಗೂ ಒಳಚರಂಡಿ ಕಾಮಗಾರಿ ಕುರಿತು ನೋಡಿಕೊಳ್ಳುತ್ತಾರೆ.

ಸಮಸ್ಯೆಯನ್ನು ಈಗ ಗಮನಕ್ಕೆ ತಂದಿದ್ದೀರಿ, ಎರಡು ತಿಂಗಳಿಗೊಮ್ಮೆ ಜಿಲ್ಲೆಗೆ ಬರುತ್ತೇನೆ. ಇನ್ನೆರಡು ತಿಂಗಳು ಬಿಟ್ಟು ಜಿಲ್ಲೆಗೆ ಬಂದಾಗ ಆ ಕಾಮಗಾರಿ ಪರಿಶೀಲನೆ ಮಾಡುವುದಾಗಿ ಹೇಳುತ್ತಲೇ ಅಲ್ಲಿಂದ ಕಾಲ್ಕಿತ್ತರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿ.ಪಂ. ಸಿಇಒ ಅಧಿಕಾರಿ ಉಮೇಶ ಕುಸುಗಲ್, ಎಸ್ಪಿ ಡಾ.ಚೇತನ್‌ಸಿಂಗ್ ರಾಥೋರ್ ಹಾಜರಿದ್ದರು.

ಹತ್ತು ದಿನಗಳಲ್ಲಿ ಗೊಬ್ಬರ
ಹಾವೇರಿ:
ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಅದನ್ನು 10 ದಿನಗಳೊಳಗಾಗಿ ತರಿಸಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ 8 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತಂದು 10 ದಿನಗಳಲ್ಲಿ ಜಿಲ್ಲೆಗೆ ತರಿಸಲಾಗುತ್ತದೆ. ಅದನ್ನು ಬಿಟ್ಟರೆ, ಬೀಜ ಸೇರಿದಂತೆ ಬೇರೆರಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.

ಕೆಎಸ್‌ಎಸ್‌ಐಡಿಸಿಯಿಂದ ರಾಣೆಬೆನ್ನೂರ ತಾಲ್ಲೂಕಿನ ಮಾಗೋಡು ಹತ್ತಿರ ಉದ್ಯಮ ಸ್ಥಾಪನೆಗಾಗಿ 300 ಎಕರೆ ಜಮೀನು ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಅದೇ ರೀತಿ ಕೆಐಡಿಬಿಯಿಂದ 120 ಎಕರೆ ಜಮೀನನ್ನು ಸ್ಪೈಸ್ ಪಾರ್ಕ್‌ಗೆ ವಶಪಡಿಸಿಕೊಳ್ಳಲಾಗುತ್ತದೆ. ಇವೆರಡನ್ನು ಬಿಟ್ಟರೆ, ಜಿಲ್ಲೆಯಲ್ಲಿ ಬೇರಾವುದೇ ಜಮೀನು ವಶಪಡಿಸಿಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT