ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ ಸ್ವಚ್ಛತೆಯೇ ಪರಿಹಾರ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಈಗ ಎಲ್ಲಿ ನೋಡಿದರೂ ಡೆಂಗೆ ಜ್ವರದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಸರ್ಕಾರದ ಮಟ್ಟದಲ್ಲಿ, ಜನರ ಬಾಯಲ್ಲಿ... ಹೀಗೆ ಎಲ್ಲೆಡೆಯೂ ಈ ಮಾರಿಯ ಬಗ್ಗೆಯೇ ಚರ್ಚೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಡೆಂಗೆ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿ ಸಾಗಿದೆ. ಜನರನ್ನು  ಆತಂಕಕ್ಕೆ ದೂಡಿರುವ ಈ ಕಾಯಿಲೆಯ ಬಗ್ಗೆ ಒಂದಷ್ಟು ಅರಿಯೋಣ.

ಏನಿದು ಡೆಂಗೆ ಜ್ವರ? 
ಡೆಂಗ್ಯೂ ಅಥವಾ ಡೆಂಗೆ ಜ್ವರ ಇತ್ತೀಚೆಗೆ ಹುಟ್ಟಿದ ಕಾಯಿಲೆಯಲ್ಲ. ಶತಮಾನಗಳ ಹಿಂದೆಯೇ ದಾಖಲಾಗಿರುವ ರೋಗ ಇದು. ಡೆಂಗ್ಯೂ ವೈರಾಣುಗಳಿಂದ ಬರುವ ಈ ರೋಗ ಪ್ರಮುಖವಾಗಿ `ಈಡಿಸ್ ಈಜಿಪ್ಟೆ' ಎಂಬ ಸೊಳ್ಳೆಗಳಿಂದ ಹರಡುತ್ತದೆ. ಡೆಂಗೆ ಜ್ವರದಿಂದ ಬಳಲುತ್ತಿರುವ ರೋಗಿಯ ರಕ್ತ ಹೀರಿದ ಸೊಳ್ಳೆಗಳು ನಂತರ ಆರೋಗ್ಯವಂತ ಮನುಷ್ಯರನ್ನು ಕಚ್ಚಿದಾಗ, ವೈರಾಣುಗಳು ಅವರ ದೇಹ ಸೇರಿ ಕಾಯಿಲೆ ಹುಟ್ಟುಹಾಕುತ್ತವೆ. ತುಸು ಕರಿ ದೇಹದ, ಅಲ್ಲಲ್ಲಿ ಬಿಳಿ ಪಟ್ಟೆ ಹೊಂದಿರುವ ಈಡಿಸ್ ಸೊಳ್ಳೆಗಳನ್ನು ಗುರುತಿಸುವುದು ಸುಲಭ.

ಇವು ಸಾಮಾನ್ಯವಾಗಿ ಹಗಲು ಹೊತ್ತು ಹೆದರಿಕೆಯಿಲ್ಲದೆ ಆಕ್ರಮಣ ಮಾಡಿ ಕಚ್ಚುತ್ತವೆ. ಅದರಲ್ಲೂ ಬೆಳಿಗ್ಗೆ ಮತ್ತು ಮುಸ್ಸಂಜೆ ಈ ಸೊಳ್ಳೆಗಳ ಹಾವಳಿ ಜಾಸ್ತಿ. ರೋಗಿಯ ನೇರ ಸಂಪರ್ಕದಿಂದ ಕಾಯಿಲೆ ಬರುವುದಿಲ್ಲ. ಸಾಮಾನ್ಯವಾಗಿ ರೋಗಾಣುಗಳು ಆರೋಗ್ಯವಂತರ ದೇಹ ಸೇರಿದ ಒಂದು ವಾರದೊಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗ ಲಕ್ಷಣ
ಡೆಂಗೆ ರೋಗಾಣುವಿನಲ್ಲಿ ನಾಲ್ಕು ವಿಧಗಳಿವೆ. ಸೋಂಕು ತಗುಲಿದ ಎಲ್ಲರಲ್ಲೂ ಕಾಯಿಲೆ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ. ವ್ಯಕ್ತಿಯ ರೋಗ ನಿರೋಧಕ ಶಕ್ತಿ, ರೋಗಾಣುಗಳ ವಿಧವನ್ನು ಅವಲಂಬಿಸಿ ರೋಗದ ತೀವ್ರತೆ ನಿರ್ಧಾರವಾಗುತ್ತದೆ. ಲಕ್ಷಣಗಳನ್ನು ಆಧರಿಸಿ ಡೆಂಗೆ ಜ್ವರದಲ್ಲಿ ಎರಡು ರೂಪಗಳನ್ನು ಗುರುತಿಸಬಹುದು- ಸೌಮ್ಯ ಮತ್ತು ಉಗ್ರ ರೂಪ.

ಸೌಮ್ಯ ರೂಪ: ಹೆಚ್ಚಿನವರಲ್ಲಿ ಯಾವುದೇ ಲಕ್ಷಣ ತೋರಿಸದೆ ಕಾಯಿಲೆ ಹಾಗೆಯೇ ಬಂದು ಹೋಗಬಹುದು. ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಕ್ಕಳು, ವೃದ್ಧರಲ್ಲಿ ರೋಗದ ತೀವ್ರತೆ ತುಸು ಹೆಚ್ಚು. ಇದ್ದಕ್ಕಿದ್ದಂತೆ ಬರುವ ಏರು ಜ್ವರ (104-105 ಡಿಗ್ರಿ ಎಫ್), ಹಣೆಯ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ಅಸಾಧ್ಯ ನೋವು, ಕಣ್ಣುಗಳ ಚಲನೆಯಿಂದ ಈ ನೋವು ಮತ್ತಷ್ಟು ಹೆಚ್ಚುತ್ತದೆ. ದೇಹದ ಮಾಂಸಖಂಡ, ಕೀಲುಗಳಲ್ಲಿ ವಿಪರೀತ ನೋವು ಕಾಣಿಸುತ್ತದೆ. ಆದ್ದರಿಂದಲೇ ಈ ಕಾಯಿಲೆಗೆ ಮೂಳೆ ಮುರಿಯುವ ಜ್ವರ (ಬ್ರೇಕ್ ಬೋನ್ ಫೀವರ್) ಎಂದೂ ಕರೆಯುತ್ತಾರೆ. ಹೆಚ್ಚಿನವರಲ್ಲಿ ಮೂರ‌್ನಾಲ್ಕು ದಿನಗಳಲ್ಲಿ ಈ ಲಕ್ಷಣಗಳು ತಂತಾನೇ ಕಡಿಮೆಯಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ.

ಉಗ್ರ ರೂಪ: ಇಲ್ಲಿ ತೀವ್ರ ಸ್ವರೂಪದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀಕ್ಷ್ಣವಾದ ಜ್ವರದ ಜೊತೆಯಲ್ಲಿ ಒಂದೇ ಸಮನೆ ಕಾಡುವ ಹೊಟ್ಟೆ ನೋವು, ಮೈಯಲ್ಲಿ ತುರಿಕೆ, ಚರ್ಮದ ಮೇಲೆ ದಢಾರದಂತೆ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಕಾಣಿಸುತ್ತವೆ. ಮೈಊತ, ವಾಕರಿಕೆ, ವಾಂತಿ, ಭೇದಿ ಕಾಣಿಸುತ್ತದೆ. ಜ್ವರ ಬಂದ 3-5 ದಿನಗಳ ನಂತರ ಮೂಗು ಮತ್ತು ವಸಡಿನಲ್ಲಿ ರಕ್ತಸ್ರಾವದ ಚಿಹ್ನೆಗಳು ತೋರುತ್ತವೆ. ಈ ಹಂತದಲ್ಲಿ ರಕ್ತವಾಂತಿ ಆಗಬಹುದು. ಡಾಂಬರಿನಂತಹ ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ನಿಶ್ಶಕ್ತಿಯಿಂದ ಬಳಲುವ ರೋಗಿಯ ಚರ್ಮ ತಣ್ಣಗಾಗಿ ಬಿಳುಚಿಕೊಳ್ಳುತ್ತದೆ. ರಕ್ತಹೀನತೆ ಮತ್ತು ರಕ್ತದ ಒತ್ತಡ ಕುಸಿಯುವ ಕಾರಣ ರೋಗಿ ಆಘಾತದಿಂದ ಮರಣ ಹೊಂದುತ್ತಾನೆ. ಸಾಮಾನ್ಯವಾಗಿ ಡೆಂಗೆ ರಕ್ತಸ್ರಾವದ ಜ್ವರ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಚಿಕಿತ್ಸೆ ಹೇಗೆ
ಡೆಂಗೆ ಜ್ವರವು ವೈರಾಣುಗಳಿಂದ ಬರುವುದರಿಂದ ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದಾಗ್ಯೂ ಕಾಯಿಲೆಯನ್ನು ಮೊದಲ ಹಂತದಲ್ಲೇ ಊಹಿಸಿ ಲಕ್ಷಣಗಳನ್ನು ಶಮನಗೊಳಿಸಲು ಸರಿಯಾದ ಔಷಧಿ ನೀಡಿದಲ್ಲಿ ಮುಂದೆ ಆಗಬಹುದಾದ ತೊಂದರೆ ಮತ್ತು ಮರಣವನ್ನು ತಪ್ಪಿಸಬಹುದು. ಡೆಂಗೆ ಜ್ವರದಲ್ಲಿ ಜ್ವರ, ಮೈಕೈ ನೋವಿಗೆ ಆಸ್ಪಿರಿನ್, ಬ್ರೂಫೆನ್ ಮುಂತಾದ ಮಾತ್ರೆಗಳನ್ನು ಕೊಡಬಾರದು. ಇವುಗಳನ್ನು ಕೊಡುವುದರಿಂದ ರಕ್ತಸ್ರಾವ, ಹೊಟ್ಟೆ ನೋವು ಉಲ್ಬಣಿಸಬಹುದು. ವೈದ್ಯರ ಸಲಹೆ ಮೇರೆಗೆ ಸೂಕ್ತ ಮಾತ್ರೆಗಳನ್ನು ಕೊಡಬಹುದು.

ಸಂಪೂರ್ಣ ವಿಶ್ರಾಂತಿಯ ಜೊತೆಯಲ್ಲಿ ರೋಗಿ ಹೆಚ್ಚು ಹೆಚ್ಚು ದ್ರವಾಹಾರ ಸೇವಿಸುವಂತೆ ನೋಡಿಕೊಳ್ಳಬೇಕು. ರಕ್ತಸ್ರಾವದ ಲಕ್ಷಣಗಳು ಕಾಣಿಸಿದರೆ ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು. ತೀವ್ರ ರಕ್ತಸ್ರಾವ ಇದ್ದಾಗ ರಕ್ತದ ಮರುಪೂರಣ ಚಿಕಿತ್ಸೆ ಉಪಯುಕ್ತ.

ರೋಗ ನಿಯಂತ್ರಣ
ಈ ಕಾಯಿಲೆ ಬಾರದಂತೆ ತಡೆಯಲು ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲ. ಹಾಗಾಗಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ. ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ರೋಗ ಪ್ರಸಾರವನ್ನು ತಡೆಯಲು ಸಾಧ್ಯ. ಸಾಮಾನ್ಯವಾಗಿ ಮಳೆಗಾಲದಲ್ಲಿ  ಡೆಂಗೆ ಉಪಟಳ ಜಾಸ್ತಿ.

ಈಡಿಸ್ ಸೊಳ್ಳೆಗಳು ಶುದ್ಧ ನೀರು ಅಥವಾ ಹೆಚ್ಚು ಕಲುಷಿತಗೊಳ್ಳದ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಮನೆಯಲ್ಲಿರುವ ನೀರು ಶೇಖರಣೆಯ ಸಿಮೆಂಟ್ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳು, ಹೂವಿನ ಕುಂಡ ಮುಂತಾದವುಗಳಲ್ಲದೆ, ಸುತ್ತ ಮುತ್ತ ಎಸೆದ ಎಳನೀರಿನ ಚಿಪ್ಪುಗಳು, ಪ್ಲಾಸ್ಟಿಕ್ ಲೋಟಗಳು, ಪಿಂಗಾಣಿ ವಸ್ತುಗಳು, ಬಾಟಲ್‌ಗಳು, ಟೈರುಗಳು, ಒಡೆದ ಬಕೆಟ್‌ನಂತಹ ವಸ್ತುಗಳಲ್ಲಿ ಕೃತಕವಾಗಿ ನೀರು ಕಲೆತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗುತ್ತವೆ. ಇಂತಹ ಜಾಗಗಳಲ್ಲಿ ಈಡಿಸ್ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಎಂಟು ಹತ್ತು ದಿವಸದಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಹಾಗೆಯೇ ಏರ್ ಕೂಲರ್‌ಗಳು, ಶೀತಲ ಪೆಟ್ಟಿಗೆಗಳ ಕೆಳಭಾಗದಲ್ಲಿ ಶೇಖರಣೆಗೊಂಡ ನೀರಿನಲ್ಲೂ ಸೊಳ್ಳೆಗಳು ಮರಿ ಮಾಡಬಹುದು. ಸಮೀಕ್ಷೆಗಳ ಪ್ರಕಾರ ಮನೆಯ ಹೊರಗಿಗಿಂತಲೂ ಒಳಗೆ ಸಂಗ್ರಹಿಸಿದ ನೀರಿನಲ್ಲಿ ಈ ಸೊಳ್ಳೆಗಳ ಸಂತಾನಾಭಿವೃದ್ಧಿಯ ಪ್ರಮಾಣ ಅಧಿಕ!

ಒಟ್ಟಿನಲ್ಲಿ ಮನುಕುಲವನ್ನು ಆಗಾಗ್ಗೆ ಬೆಚ್ಚಿ ಬೀಳಿಸುವ ಡೆಂಗೆ, ಮಲೇರಿಯ, ಚಿಕುನ್ ಗುನ್ಯ ಮುಂತಾದ ರೋಗಗಳನ್ನು ತಡೆಗಟ್ಟಲು ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೊಂದೇ ಪರಿಹಾರ.       

ಹೀಗೆ ಮಾಡಿ...
ಮನೆಯಲ್ಲಿನ ನೀರು ಸಂಗ್ರಹಣಾ ತೊಟ್ಟಿಗಳನ್ನು ವಾರಕ್ಕೆ ಎರಡು ಸಲ ಖಾಲಿ ಮಾಡಿ, ಒಣಗಿಸಿ, ಮತ್ತೆ ಭರ್ತಿ ಮಾಡಿ ಮುಚ್ಚಳಗಳಿಂದ ಭದ್ರವಾಗಿ ಮುಚ್ಚಬೇಕು. ಕುಡಿಯುವ ನೀರು ಸಂಗ್ರಹಿಸಿಟ್ಟ ಪಾತ್ರೆಗಳನ್ನು ಸರಿಯಾಗಿ ಮುಚ್ಚಿಡಬೇಕು. ಏರ್ ಕೂಲರ್‌ಗಳ ನೀರನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ, ಅಲ್ಲಿ ಕಲೆತ ತ್ಯಾಜ್ಯಗಳಲ್ಲಿ ನೀರು ಸಂಗ್ರಹ ಆಗುವುದನ್ನು ತಪ್ಪಿಸಬೇಕು. ಊರಿನ ನೈರ್ಮಲ್ಯ ಕಾಪಾಡಲು ಸಾರ್ವಜನಿಕರು ಸ್ಥಳೀಯ ಆಡಳಿತ ಸಂಸ್ಥೆಗಳ ಜೊತೆ ಕೈ ಜೋಡಿಸಬೇಕು.

ಈಡಿಸ್ ಸೊಳ್ಳೆಗಳು ಹಗಲು ಹೊತ್ತು ಕಡಿಯುವುದರಿಂದ ಹಗಲಿನಲ್ಲಿ ನಿದ್ರಿಸುವ ಮಕ್ಕಳು, ವಿಶ್ರಾಂತಿ ಪಡೆಯುವ ವಯಸ್ಸಾದವರು ತಪ್ಪದೇ ಸೊಳ್ಳೆ ಪರದೆ ಬಳಸಬೇಕು. ರೋಗಿಗಳೂ ಸೊಳ್ಳೆ ಪರದೆ ಬಳಸುವುದರಿಂದ ರೋಗ ಹರಡುವುದನ್ನು ತಪ್ಪಿಸಬಹುದು. ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಿಕೊಳ್ಳಬೇಕು. ಸೊಳ್ಳೆ ನಿವಾರಕ ಮುಲಾಮುಗಳನ್ನು ಬಳಸಿ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಬಹುದು. ಮಂದ ಬೆಳಕಿನಲ್ಲೂ ಈಡಿಸ್ ಸೊಳ್ಳೆಗಳು ಕಚ್ಚುತ್ತವೆ. ಸಮಸ್ಯೆ ಜಾಸ್ತಿಯಿರುವ ಜಾಗಗಳಲ್ಲಿ ಓಡಾಡುವಾಗ ಮೈ ಪೂರಾ  ಮುಚ್ಚುವಂತೆ ಬಟ್ಟೆ ಧರಿಸಬೇಕು.

ರೋಗ ಪತ್ತೆ ಹೇಗೆ?      
ರೋಗ ಲಕ್ಷಣಗಳ ಆಧಾರದ ಮೇಲೆ ರೋಗವನ್ನು ಶಂಕಿಸಬಹುದು. ಒಮ್ಮಮ್ಮೆ ಚಿಕುನ್ ಗುನ್ಯಾ, ಮಲೇರಿಯಾ ಮುಂತಾದ ರೋಗಗಳಲ್ಲೂ ಇಂತಹುದೇ ಲಕ್ಷಣಗಳು ಕಾಣಿಸುವುದರಿಂದ ಆ ಪ್ರದೇಶದಲ್ಲಿ ವರದಿಯಾಗಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ನಿರ್ಧಾರಕ್ಕೆ ಬರಬೇಕಾಗುತ್ತದೆ.
ಬಿಳಿರಕ್ತ ಕಣಗಳು, ರಕ್ತ ಹೆಪ್ಪುಗಟ್ಟಿಸುವ ಪ್ಲೇಟ್ಲೆಟ್ ಕಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಆಗಿರುವುದನ್ನು ರಕ್ತ ಪರೀಕ್ಷೆಯಿಂದ ತಿಳಿಯಬಹುದು. ಪ್ರಯೋಗಾಲಯದ ಪರೀಕ್ಷೆಗಳಿಂದ ಕಾಯಿಲೆಯನ್ನು ದೃಢಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT