ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ನನಾ... ಹಾಡುಹಕ್ಕಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಗರಿ

Last Updated 22 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಪಡುಪೆರಾರ: ಗುಡ್ಡದ ಇಳಿಜಾರಿನ ಅಂಚಿನಲ್ಲಿ ನಿಸರ್ಗದ ಮಡಿಲಲ್ಲೊಂದು ಮನೆ. ಅಲ್ಲೊಂದು ಹಾಡುಹಕ್ಕಿ. ತನ್ನ ಒಡನಾಡಿಯೊಂದಿಗೆ, ಕಳೆದ 45 ವರ್ಷದಿಂದ ಹಾಡುತ್ತಾ ಬಂದ ಹಾಡುಹಕ್ಕಿಯ ಉತ್ಸಾಹ ಇಳಿವಯಸ್ಸಿನಲ್ಲೂ ಬತ್ತಿಲ್ಲ. ಆರು ವರ್ಷದ ಹಿಂದೆ ಒಡನಾಡಿಯನ್ನು ಕಳೆದುಕೊಂಡರೂ, ಹಾಡುವ ಉಮೇದಿಗೆ ದೇಹ ಸಹಕರಿಸದಿದ್ದರೂ ಹಾಡುವ ತವಕ ಕಡಿಮೆ ಆಗಿಲ್ಲ. ಈವರೆಗಿನ ಜೀವನದಲ್ಲಿಡೀ ಹಾಡುತ್ತಾ ಕಳೆದ ಈ ಹಾಡುಹಕ್ಕಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.

ಈ ಹಾಡು ಹಕ್ಕಿಯೇ ಪಡುಪೆರಾರ ಗ್ರಾಮದ ಭವಾನಿ ತೋಕೆಮನೆ.‘ಪಾಡ್ದನ ಕಣಜ’ ಭವಾನಿ ಅವರಿಗೆ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ದಿನ ಕುಟುಂಬದ ನೆಚ್ಚಿನ ಪೆರಾರದಲ್ಲಿ ಜಾತ್ರೆ ಸಂಭ್ರಮ. ಊರ ಜಾತ್ರೆಗೆಂದು ಬಂದಿದ್ದ ನೆಂಟರು 63ರ ಹರೆಯದ ಅಜ್ಜಿಗೆ ಪ್ರಶಸ್ತಿ ಬಂದುದಕ್ಕೆ ಸಂಭ್ರಮಿಸಿದರು.

ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡ ಭವಾನಿ ಸೋಮವಾರ ‘ಪ್ರಜಾವಾಣಿ’ ಜತೆ ಮನ ಬಿಚ್ಚಿ ಮಾತನಾಡಿದರು. ಗತ ಬದುಕನ್ನು ಮೆಲುಕು ಹಾಕಿದರು. ಮಧ್ಯಾಹ್ನದ ಮಟಮಟ ಬಿಸಿಲನ್ನೂ ಲೆಕ್ಕಿಸದೆ ‘ಪಾಡ್ದನ’ ಹಾಡಲು ಶುರುಹಚ್ಚಿಕೊಂಡರು. ಅವರ ಕಂಠಮಾಧುರ್ಯದಿಂದ ತುಳು ಜಾನಪದ ಕಥೆಗಳು ಹಾಡಾಗಿ ಹೊಮ್ಮುತ್ತಿದ್ದಂತೆ ಅಲ್ಲೇ ಬಿದ್ದುಕೊಂಡಿದ್ದ ಮನೆಯ ನಾಯಿಯೂ ಕಿವಿ ನಿಮಿರಿಸಿ ಒಡತಿಯತ್ತ ಮುಖಮಾಡಿತು.

ಒಂಟಿ ಕಾಲಿನಲ್ಲೇ ಅಂಗಳದಲ್ಲಿ ಅಡ್ಡಾಡಿ ಕೂಳು ಹೆಕ್ಕುತ್ತಿದ್ದ ಕೋಳಿ ಲಯಬದ್ಧ ರಾಗ ಹೊಮ್ಮಿಸಿ ಸಾಥ್ ನೀಡಿತು. ಮನೆ ಎದುರಿನ ಮರದಲ್ಲಿ ಜೋಕಾಲಿಯಾಡುತ್ತಿದ್ದ ಮೊಮ್ಮಗಳು ‘ಖುಷಿ’ಗೆ ಪಾಡ್ದನದ ಹಾಡೇ ಲಾಲಿಯಾಯಿತು.ಭವಾನಿ ತೋಕೆಮನೆ ಹುಟ್ಟಿದ್ದು ಮಂಜೇಶ್ವರ ಸಮೀಪದ ಕುಂಜತ್ತೂರು ಅಂಬೆತ್ತಡಿ ಮನೆಯಲ್ಲಿ. ಐತ ಬಂಗೇರ-ಮುಳ್ಳಿ ಪೆರ್ಗಡೆ ದಂಪತಿಯ ಐವರು ಮಕ್ಕಳಲ್ಲಿ ಒಬ್ಬರು. 18ನೇ ವರ್ಷಕ್ಕೆ ಕತ್ತಲಸಾರಿನ ಗುರುವಪ್ಪ ಬಂಗೇರ ಅವರೊಂದಿಗೆ ಮದುವೆ.

ಗುರುವಪ್ಪ ನೇಮ ಕಟ್ಟುವುದರಲ್ಲಿ ಪ್ರಖ್ಯಾತರು. ತಂದೆ ಮನೆಯಲ್ಲಿ ಅಲ್ಪಸ್ವಲ್ಪ ಕಲಿತಿದ್ದ ಪಾಡ್ದನ ಹಾಡು ಪತಿಯ ಗರಡಿಯಲ್ಲಿ ಮತ್ತಷ್ಟು ಪಕ್ವವಾಯಿತು. ಪತಿಯ ಜತೆ ರಾಜಂ ದೈವಕ್ಕೆ ನೇಮಕ್ಕೆ ಹೋಗುವಾಗ ಪಾಡ್ದನ ಹಾಡುವುದರಲ್ಲಿ ಮತ್ತಷ್ಟು ಸಿದ್ಧಿ ದಕ್ಕಿತು. ಹೀಗೆಯೇ ಹತ್ತಾರು ಪಾಡ್ದನಗಳ ಸಾವಿರಾರು ಪದ್ಯಗಳು ಬಾಯಿಪಾಠ ಆದವು. ಭವಾನಿ ಈಗ ಅಣ್ಣಪ್ಪ ಪಂಜುರ್ಲಿ, ಬಲಾಂಡಿ, ಜುಮಾದಿ, ಸಿರಿ, ಕಾಂತೇರ ಜುಮಾದಿ ದೈವಗಳ ಪಾಡ್ದನಗಳನ್ನು ಸುಲಲಿತವಾಗಿ ಹಾಡಿ ಮೋಡಿ ಮಾಡಬಲ್ಲ ಹಾಡುಗಾರ್ತಿ.

ವಯಸ್ಸು ಕೇಳುತ್ತಿಲ್ಲ: ‘ಇತ್ತೀಚಿನ ದಿನಗಳಲ್ಲಿ ನೇಮಗಳಲ್ಲಿ ಪಾಡ್ದನ ಹಾಡುವುದನ್ನು ಕಡಿಮೆ ಮಾಡಿದ್ದೇನೆ. ವಯಸ್ಸಾದ ಕಾರಣ ಜಾಸ್ತಿ ನಿದ್ರೆ ಬಿಡಲಿಕ್ಕೆ ಆಗುವುದಿಲ್ಲ. ಸಮಾರಂಭಗಳಿಗೆ ಆಹ್ವಾನ ಬಂದಾಗ ಅಲ್ಲಿ ಪಾಡ್ದನ ಹೇಳುತ್ತೇನೆ. ನಾಟಿ ಗದ್ದೆಗಳಲ್ಲಿ ಸಹ ಪಾಡ್ದನ ಹೇಳುವುದುಂಟು’ ಎನ್ನುವಾಗಲೂ ಭವಾನಿ ಅವರಲ್ಲಿ ಹಾಡುವ ತವಕ ಬತ್ತಿಲ್ಲ ಎಂಬ ಸುಳಿವು ಮುಖದಲ್ಲಿ ಕಾಣಿಸಿತ್ತು.

ನಿರಾಶೆ ಸಲ್ಲದು: ಯುವ ಜನಾಂಗಕ್ಕೆ ಜಾನಪದ ಹಾಡುಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ನಾಟಿ ಗದ್ದೆಗಳಲ್ಲಿ ನಡುವಯಸ್ಸಿನ ಮಹಿಳೆಯರು ಹಾಡು ಹೇಳಿ ಕೊಡಿ ಎಂದು ಈಗಲೂ ದುಂಬಾಲು ಬೀಳುತ್ತಾರೆ. ಆಸಕ್ತರಿಗೆ ಹೇಳಿಕೊಡುತ್ತೇನೆ. ಪಾಡ್ದನಗಳು ಗತ ಕಾಲದ ಸತ್ಯಕಾವ್ಯಗಳು. ಅವು ನಶಿಸುತ್ತವೆ ಎಂಬುದೆಲ್ಲ ಸುಳ್ಳು. ಅವುಗಳೂ ಚಿರಾಯುವಾಗಿ ಉಳಿಯುತ್ತವೆ’ ಎಂದು ಧೃಡಚಿತ್ತದಿಂದ ಹೇಳುತ್ತಾರೆ ಭವಾನಿ. ‘ಅಕಾಡೆಮಿ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಪತ್ರಿಕೆಗಳಲ್ಲಿ ಸುದ್ದಿ ಬಂದ ಮೇಲೆ ಪ್ರಶಸ್ತಿ ಸಿಕ್ಕಿದ್ದು ಗೊತ್ತಾಯಿತು’ ಎನ್ನುವಾಗ, ಪ್ರಶಸ್ತಿ ಬಂದರೂ ಬಾರದಿದ್ದರೂ ತಮ್ಮೊಡಲ ಹಾಡು ನಿಲ್ಲುವುದಿಲ್ಲ ಎಂಬ ಸಂದೇಶ ಅವರ ಮಾತಿನಲ್ಲಿ ಅಡಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT