ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್ ಕಪ್: ಭೂಪತಿ-ಬೋಪಣ್ಣಗೆ ಜಯ

Last Updated 17 ಸೆಪ್ಟೆಂಬರ್ 2011, 19:55 IST
ಅಕ್ಷರ ಗಾತ್ರ

ಟೋಕಿಯೋ (ಐಎಎನ್‌ಎಸ್): ಸಿಂಗಲ್ಸ್‌ನಲ್ಲಿನ ಸೋಲಿನ ಸೇಡು ತೀರಿಸಿಕೊಂಡ ಭಾರತದ ಡಬಲ್ಸ್ ಜೋಡಿ ಇಲ್ಲಿ ನಡೆಯುತ್ತಿರುವ ಜಪಾನ್ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಎರಡನೇ ದಿನದ ಪಂದ್ಯದಲ್ಲಿ ಗೆಲುವು ಪಡೆಯಿತು.

ಶನಿವಾರ ನಡೆದ ಪಂದ್ಯದಲ್ಲಿ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೋಡಿ 7-5, 3-6, 6-3, 7-6ರಲ್ಲಿ ಜಪಾನ್‌ನ ಯೂಚಿ ಸುಗಿತಾ-ತತ್ಸುಮಾ ಇಟೋ ಜೋಡಿಯನ್ನು ಮಣಿಸಿತು. ಈ ಮೂಲಕ ಭಾರತ ಆತಿಥೇಯ ಜಪಾನ್ ಭಾರಿ ಅಂತರದ ಮುನ್ನಡೆ ಸಾಧಿಸಲು ತಡೆ ಒಡ್ಡಿತು.

ಒಟ್ಟು 3 ಗಂಟೆ ಆರು ನಿಮಿಷಗಳ ಕಾಲ ನಡೆದ ಭರ್ಜರಿ ಹೋರಾಟದಲ್ಲಿ ಭಾರತದ ಜೋಡಿಗೆ ಗೆಲುವು ಸುಲಭವಾಗಿ ದಕ್ಕಲಿಲ್ಲ. ಈ ಜೋಡಿ ಮೊದಲ ಸೆಟ್‌ನಲ್ಲಿ 3-1ರಲ್ಲಿ ಮುನ್ನಡೆಯಲ್ಲಿತ್ತು. ನಂತರ ಆತಿಥೇಯ ಜೋಡಿ ಮರು ಹೋರಾಟ ನಡೆಸಿತು.

ಎರಡನೇ ಸೆಟ್‌ನಲ್ಲಿ  ಭೂಪತಿ-ಬೋಪಣ್ಣ ಅವರು ಸೋಲು ಕಂಡರು. ಅತ್ಯುತ್ತಮ ಸರ್ವ್‌ಗಳನ್ನು ಮಾಡಿದ ಆತಿಥೇಯ ತಂಡ ಭಾರತದ ಜೋಡಿಗೆ ಭಾರಿ ಪ್ರತಿರೋಧ ತೋರಿತು. ಅದರಲ್ಲೂ ಸುಗಿತಾ ಅತ್ಯುತ್ತಮ ಸರ್ವ್ ಮಾಡಿ ಗಮನ ಸೆಳೆದರು. ತವರು ನೆಲದ ಅಂಗಳ ಆಟಗಾರರಿಗೆ ನೆರವು ನೀಡಿತು.

ಎರಡು ಬ್ರೇಕ್ ಪಾಯಿಂಟ್‌ಗಳನ್ನು ಎದುರಿಸಿದ ಭೂಪತಿ-ಬೋಪಣ್ಣ ಜೋಡಿ ನಿರ್ಣಾಯಕ ನಾಲ್ಕನೇ ಸೆಟ್‌ನಲ್ಲಿ 4-4ರಲ್ಲಿ ಸಮಬಲ ಸಾಧಿಸಿದರು. ಆದರೆ ಒಂದು ಹಂತದಲ್ಲಿ ಆತಿಥೇಯರು 5-4 ಮುನ್ನಡೆ ಗಳಿಸಿದರು. ಈ ವೇಳೆ ಭಾರತ ಸೆಟ್ ಕಳೆದುಕೊಳ್ಳುವ ಆತಂಕದಲ್ಲಿತ್ತು.

ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ಶುಕ್ರವಾರದ ಮೊದಲ ದಿನದ ಪಂದ್ಯದಲ್ಲಿ ಸೋಮದೇವ್ ದೇವವರ್ಮನ್ ಹಾಗೂ ರೋಹನ್ ಬೋಪಣ್ಣ ಅವರು   ಸಿಂಗಲ್ಸ್‌ನಲ್ಲಿ ಸೋಲು ಕಂಡಿದ್ದರು.

ಭಾನುವಾರ ನಡೆಯುವ ರಿವರ್ಸ್ ಸಿಂಗಲ್ಸ್ ನಲ್ಲಿ ಭಾರತ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವುದು ಅಗತ್ಯವಿದೆ. ಸೋಮದೇವ್-ಕೈ ನಿಷಿಕೋರಿ ಮೇಲೂ, ರೋಹನ್ ಬೋಪಣ್ಣ-ಸುಗಿತಾ ಎದುರು ಆಡಲಿದ್ದಾರೆ. ಆದರೆ ಸೋಮದೇವ್‌ಗೆ ಭುಜದ ನೋವಿನ ಸಮಸ್ಯೆ ಕಾಡುತ್ತಿದೆ. ಭಾನುವಾರ 23ನೇ ವರ್ಷಕ್ಕೆ ಕಾಲಿಡುತ್ತಿರುವ ಸುಗಿತಾ ತಮ್ಮ ತಂಡಕ್ಕೆ ಹುಟ್ಟುಹಬ್ಬದ ಗೆಲುವಿನ `ಉಡುಗೊರೆ~ ನೀಡುವ ಆಸೆ ಹೊಂದಿದ್ದಾರೆ.

ಸೋಮ್ ಆಡುವುದು ಅನುಮಾನ: ಭುಜದ ನೋವಿನಿಂದ ಬಳಲುತ್ತಿರುವುದರಿಂದ ಸೋಮದೇವ್ ಭಾನುವಾರ ನಡೆಯುವ ರಿವರ್ಸ್ ಸಿಂಗಲ್ಸ್‌ನಲ್ಲಿ ಆಡುವುದು ಅನುಮಾನವಾಗಿದೆ.

ಶುಕ್ರವಾರ ಮೊದಲ ಪಂದ್ಯವನ್ನಾಡುವಾಗ ಈ ಆಟಗಾರ ಗಾಯಗೊಂಡಿದ್ದರು. ಇದರಿಂದ ಭಾರತ ತಂಡ ಜಪಾನ್ ವಿರುದ್ಧ ಗೆಲ್ಲುವ ಕನಸಿಗೆ ಗಾಯದ ಸಮಸ್ಯೆ ಅಡ್ಡಿಯಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT