ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈನೊಸಾರ್: ಒಂದು ಅತಿ ಸಣ್ಣಕತೆಯ ಪತ್ತೇದಾರಿ

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸುಮಾರು 1998ರ ಆಸುಪಾಸಿನಲ್ಲಿ ಒಂದೇ ಸಾಲಿನ ಒಂದು ಅತಿ ಸಣ್ಣಕತೆ ನನ್ನನ್ನು ವಿಶೇಷವಾಗಿ ಆಕರ್ಷಿಸಿತು.  ಗ್ವಾಟೆಮಾಲಾದ ಕತೆಗಾರ ಅಗೂಸ್ತೊ ಮೊಂತೆರ್ರೋಸೊ ಬರೆದ, ಮೂಲ ಸ್ಪ್ಯಾನಿಶ್ ಭಾಷೆಯ ಆ ಕತೆ ಇಂಗ್ಲಿಷ್ ಅನುವಾದದಲ್ಲಿ ಹೀಗಿತ್ತು:  When I awoke, the dinosaur was still there.  ಇದನ್ನು ನಾನು ಅನುವಾದಿಸಿದ್ದು ಹೀಗೆ: ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು.  ಇಂಗ್ಲಿಷಿನಲ್ಲಿ ಎಂಟು ಪದಗಳಲ್ಲಿದ್ದದ್ದು ನನ್ನ ಕನ್ನಡ ಅನುವಾದದಲ್ಲಿ ಆರು ಪದಗಳಿಗೆ ಇಳಿದಿತ್ತು. 

2000ದಲ್ಲಿ ನಾನು ಹಲವು ವರ್ಷ ಇಷ್ಟಪಟ್ಟು, ಶ್ರಮವಹಿಸಿ ಅನುವಾದಿಸಿದ `ಜಗತ್ತಿನ ಅತಿ ಸಣ್ಣಕತೆಗಳು' ಎಂಬ ಅತಿಸಣ್ಣ ಕತೆಗಳ ಒಂದು ಸಂಕಲನ ಪ್ರಕಟವಾಯಿತು.  ಅದಕ್ಕೆ ನಾನು ಬರೆದ ಪ್ರಸ್ತಾವನೆಯಲ್ಲಿ ಇದೇ ಕತೆಯನ್ನು ಪ್ರಸ್ತಾಪಿಸಿದ್ದೆ. ಅದನ್ನು ಓದಿದ ಒಬ್ಬ ಕತೆಗಾರರೊಬ್ಬರು `ಇದರಲ್ಲೇನಿದೆ ಅಂಥ ವಿಶೇಷ? ಬರೀ ಕ್ಲವರ್ ರೈಟಿಂಗ್ ಅಷ್ಟೆ' ಎಂದುಬಿಟ್ಟರು. 

ಆ ಮಾತಿನಿಂದ ಅಷ್ಟೇನೂ ನಿರಾಶನಾಗದ ನಾನು ನನ್ನದೇ ರೀತಿಯಲ್ಲಿ ಈ ಕತೆಯನ್ನು ಬಗೆಯತೊಡಗಿದೆ. ಮೊದಲು ಈ ಕತೆ ಕಾಲದ ಬಗೆಗಾಗಲೀ ಸ್ಥಳದ ಬಗೆಗಾಗಲೀ ಏನೂ ಹೇಳುತ್ತಿಲ್ಲವೆಂಬುದನ್ನು ಗಮನಿಸಿದೆ.  ಈ ಕತೆಯನ್ನು ಓದುವವನಿಗೆ ಒಂದು ನಿರ್ದಿಷ್ಟ ಅರ್ಥವೇನಾದರೂ ಹೊಳೆದೀತೆ? ಎಂದು ಯೋಚಿಸಿದೆ. ಈ ಕತೆ ನಡೆಯುವುದು ಎಲ್ಲಿ? ಎಚ್ಚರಗೊಳ್ಳುವವರು ಯಾರು? `ಆತ'ನೊ? `ಆಕೆ'ಯೊ? `ಅದು' ಕೂಡ ಆಗಿರಬಹುದಲ್ಲವೆ? ಡೈನೊಸಾರ್‌ಎನ್ನುವುದು ವಾಸ್ತವಿಕವೊ ಕಾಲ್ಪನಿಕವೊ? ಎಚ್ಚರಗೊಂಡವನಿಗೂ ಡೈನೊಸಾರ್‌ಗೂ ಏನು ಸಂಬಂಧ? ಯಾವ ಬಗೆಯ ಡೈನೊಸಾರ್? ಕತೆಯ ಧಾಟಿ ಯಾವುದು? ಅಶುಭಸೂಚನೆಯೇನಾದರೂ ಇಲ್ಲಿದೆಯೆ? ನನ್ನಂಥ ಓದುಗರು ಬಿಡಿಸಬೇಕಾದ ಹಲವು ಸಂದಿಗ್ಧಾರ್ಥಗಳಲ್ಲಿ ಇವು ಕೆಲವು ಮಾತ್ರ.  ಆದರೂ ಈ ಕತೆ ಏಕಕಾಲಕ್ಕೆ ಒಂದು ಅದ್ಭುತ ಕತೆಯಾಗಿ, ನಗೆಹನಿಯಾಗಿ, ಅತಿವಾಸ್ತವಿಕ ಪ್ರತಿಮೆಯಾಗಿ, ಇಡೀ ಸಣ್ಣಕಥಾ ಪ್ರಕಾರದ ಒಂದು ಕಾವ್ಯಾತ್ಮಕ ರೂಪಾಂತರವಾಗಿ ನನ್ನನ್ನು ಕೆಣಕಿದ್ದುಂಟು. 

2002ರಲ್ಲಿ ಮೆಕ್ಸಿಕೋದ ಪ್ರಮುಖ ವಿಶ್ವವಿದ್ಯಾಲಯವೊಂದು ಈ ಕತೆಯನ್ನು ಕುರಿತ ವಿಮರ್ಶೆಗಳ `ದಿ ಅನೊಟೇಟೆಡ್ ಡೈನೊಸಾರ್' ಎಂಬ ಸಂಕಲನವನ್ನು ಪ್ರಕಟಿಸಿದೆಯಂತೆ. ಅದಿನ್ನೂ ನನಗೆ ಸಿಕ್ಕಿಲ್ಲ.

ಅದೇ ವರ್ಷ, ಅಂದರೆ 2002ರಲ್ಲಿ, ಅಮೆರಿಕಕ್ಕೆ ಹೋಗಿದ್ದ ನನ್ನ ಗೆಳೆಯರೊಬ್ಬರು ನನ್ನ ಮೆಚ್ಚಿನ ಅನುವಾದಕಿ ಎಡಿತ್ ಗ್ರಾಸ್‌ಮನ್ ಅನುವಾದಿಸಿದ್ದ ಮೊಂತೆರ್ರೋಸೋನ `ಕಂಪ್ಲೀಟ್ ವರ್ಕ್ಸ್ ಅಂಡ್ ಅದರ್ ಸ್ಟೋರೀಸ್' ಎಂಬ ಕಥಾ ಸಂಕಲನವನ್ನು ತಂದುಕೊಟ್ಟರು.  45 ಕತೆಗಳಿರುವ 152 ಪುಟಗಳ ಈ ಸಂಕಲನದಲ್ಲಿ 42ನೇ ಪುಟದಲ್ಲಿ ಒಂದೇ ಒಂದು ಸಾಲಾಗಿ ರಾರಾಜಿಸುತ್ತಿದ್ದ ಮೊಂತೆರ‌್ರೋಸೋನ ಅದೇ ಡೈನೊಸಾರ್ ಕತೆಯನ್ನು ನೋಡಿ ಸಂಭ್ರಮಿಸಿದೆ.  ಅದೇಕೋ, ಆ ಕತೆ ಇದ್ದಕ್ಕಿದ್ದಂತೆ ನನಗೆ ನಮ್ಮ ರಾಮಚಂದ್ರ ಶರ್ಮರು ಅನುವಾದಿಸಿದ ಅಮೆರಿಕನ್ ಕವಿ ರಾಬರ್ಟ್ ಲವೆಲ್‌ನ ಕವನವೊಂದರ ಈ ಸಾಲುಗಳನ್ನು ನೆನಪಿಸಿತು: 

ಹಿಮಾಲಯದ ತುತ್ತತುದಿ
ಮೆಟ್ಟಿ ನಿಂತವನಲ್ಲ ನೀನು.
ಆದರೂ, ನನ್ನ ಹಾದಿ
ಮಣ್ಣಲ್ಲಿ ಹೆಪ್ಪುಗಟ್ಟಿದ ಹಾಗೆ,
ತಂದೆ, ನಿನ್ನ ಡೈನೊಸಾರ್ ಪಾದ ಎದುರಿಗೆ. 

ಮರುವರ್ಷ, ಅಂದರೆ 2003ರಲ್ಲಿ, ಪ್ರಸಿದ್ಧ ಇಟಾಲಿಯನ್ ಲೇಖಕ ಇತಾಲೊ ಕಲ್ವಿನೊ ಬರೆದ `ಸಿಕ್ಸ್ ಮೆಮೋಸ್ ಫಾರ್ ದಿ ನೆಕ್ಸ್ಟ್ ಮಿಲೆನಿಯಂ' ಎಂಬ ಪ್ರಬಂಧಗಳ ಸಂಕಲನ ನನಗೆ ಸಿಕ್ಕಿತು.  ಇದು ಅವನು ಸಾಯುವುದಕ್ಕೆ ಸ್ವಲ್ಪ ಮುಂಚೆ (1985) ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ `ದಿ ಚಾರ್ಲ್ಸ್ ಎಲಿಯಟ್ ನಾರ್ಟನ್ ಲೆಕ್ಚರ್ಸ್' ಅಂಗವಾಗಿ ಮಂಡಿಸಲಿದ್ದ ಪ್ರಬಂಧಗಳ ಒಂದು ಸಂಕಲನ.  ಇದರಲ್ಲಿ `ಕ್ವಿಕ್‌ನೆಸ್' ಎಂಬ ಶೀರ್ಷಿಕೆಯಲ್ಲಿರುವ ಎರಡನೆಯ ಭಾಷಣದ ಕೊನೆಯಲ್ಲಿ ಅವನು ಇದೇ ಕತೆಯನ್ನು ಪ್ರಸ್ತಾಪಿಸುತ್ತ ಹೀಗೆಂದಿದ್ದಾನೆ:  `ಬೋರ್ಹೆಸ್ ಮತ್ತು ಬಿಯೋಯ್ ಕಸಾರೆಸ್ ಇಬ್ಬರೂ ಕೂಡಿ 1955ರಲ್ಲಿ (ಸ್ಪ್ಯಾನಿಶ್ ಭಾಷೆಯಲ್ಲಿ) `ಕುಯೆಂತೋಸ್ ಬ್ರೆವೆಸ್ ಯಿ ಎಕ್ಸ್‌ತ್ರಾರ್ದಿನಾರಿಯೋಸ್' ಎಂಬ ಅದ್ವಿತೀಯ ಸಣ್ಣಕತೆಗಳ ಒಂದು ಸಂಕಲನವನ್ನು ಸಂಕಲಿಸಿದ್ದುಂಟು. ನನಗೆ ಒಂದೇ ಒಂದು ವಾಕ್ಯವುಳ್ಳ ಕತೆಗಳ ಅಥವಾ ಒಂದೇ ಸಾಲುಳ್ಳ ಕತೆಗಳ ಸಂಕಲನವೊಂದನ್ನು ಸಂಪಾದಿಸುವ ಆಸೆ.  ಆದರೆ ಇದುವರೆಗೂ ನನಗೆ ಗ್ವಾಟೆಮಾಲಾದ ಲೇಖಕ ಅಗೂಸ್ತೊ ಮೊಂತೆರ್ರೋಸೊ ಬರೆದಿರುವ When I awoke, the dinosaur was still there ಎಂಬ ಕತೆಗೆ ಸರಿಸಾಟಿಯಾದ ಇನ್ನೊಂದು ಕತೆ ಸಿಕ್ಕಿಲ್ಲ'.

ಎರಡು ವರ್ಷಗಳ ನಂತರ, ಅಂದರೆ 2007ರಲ್ಲಿ, ಭಾಷಾಂತರ ಕಲೆಯನ್ನು ಕುರಿತು ಪ್ರಸಿದ್ಧ ಇಟಾಲಿಯನ್ ವಿಮರ್ಶಕ ಉಂಬರ್ತೊ ಈಕೊ ಬರೆದ `ಮೌಸ್ ಆರ್ ರ್ಯಾಟ್ - ಟ್ರಾನ್ಸ್‌ಲೇಷನ್ ಆಸ್ ನೆಗೋಶಿಯೇಷನ್' ಎಂಬ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ `ಫ್ರಮ್ ಸಬ್ಸ್‌ಸ್ಟೆನ್ಸ್ ಟು ಮ್ಯಾಟರ್' ಎಂಬ ಅಧ್ಯಾಯದಲ್ಲಿ `ಅನುಸರಣೆ'ಯ ಬಗ್ಗೆ ಬರೆಯುತ್ತಾ ಅವನು ಅಗೂಸ್ತೊ ಮೊಂತೆರ್ರೋಸೋನ ಇದೇ ಕತೆಯನ್ನು ಚಲನಚಿತ್ರವಾಗಿ ಮಾರ್ಪಡಿಸುವಾಗ ಎದುರಿಸಬೇಕಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾನೆ.  ಮೊಂತೆರ್ರೋಸೊ `ಪಾಶ್ಚಾತ್ಯ ಸಾಹಿತ್ಯದಲ್ಲೇ ಅತ್ಯಂತ ಸಣ್ಣದಾದ ಸಣ್ಣಕತೆ' ಬರೆದವನೆಂದು ಸೂಚಿಸುತ್ತ ಅವನು ಮಂಡಿಸುವ ವಿಚಾರಗಳ ಸಾರಾಂಶ ಇಷ್ಟು:When I awoke, the dinosaur was still there  ಇನ್ನೊಂದು ಭಾಷೆಗೆ ಅನುವಾದಿಸಬೇಕಾದರೆ ಈ ಇಂಗ್ಲಿಷ್ ಅನುವಾದದಿಂದ ಸ್ಪ್ಯಾನಿಶ್ ಮೂಲವನ್ನು ಹುಡುಕಿ ತೆಗೆಯುವುದೇನೂ ಕಷ್ಟವಲ್ಲ. `ಕುವಾಂದೊ ದೆಸ್ಪರ್ತೊ, ಎಲ್ ದೈನೊಸಾರೊ ತೊದಾವಿಯ ಎಸ್ತಬಾ ಅಯಿ'.

ಈ ಕತೆಯನ್ನು ನಿರ್ದೇಶಕನೊಬ್ಬ ಚಲನಚಿತ್ರಕ್ಕೆ `ಭಾಷಾಂತರಿಸು'ವಾಗ ಏನಾಗಬಹುದು? ಸಿನಿಮಾ ಕಥಾನಾಯಕನನ್ನೋ ಕಥಾನಾಯಕಿಯನ್ನೋ ತೋರಿಸಬೇಕಾಗುತ್ತದೆಯಷ್ಟೆ. ಹಾಗೆಂದು ನಿರ್ದೇಶಕ ಮಲಗಿಕೊಂಡಿರುವ ಒಬ್ಬನೋ/ಒಬ್ಬಾಕೆಯೋ ಎಚ್ಚರಗೊಂಡಾಗ ಒಂದು ಡೈನೊಸಾರನ್ನು ನೋಡುತ್ತಾನೆ/ನೋಡುತ್ತಾಳೆ ಎಂದು ಚಿತ್ರೀಕರಿಸಲಾಗುವುದಿಲ್ಲ.  ಅಂಥ ಸಂದರ್ಭದಲ್ಲಿ ನಿರ್ದೇಶಕನಿಗೆ ಈ ಪುಟಾಣಿ ಕತೆ ಕೊನೆಯ ಪಕ್ಷ ಎರಡು ವಿಭಿನ್ನ ವ್ಯಾಖ್ಯಾನಗಳನ್ನು ಸೂಚಿಸಬಹುದು: 1. ಒಬ್ಬ ವ್ಯಕ್ತಿ ಡೈಸೊಸಾರಿಗೆ ಹತ್ತಿರದಲ್ಲೇ ಎಚ್ಚರಗೊಂಡಿದ್ದಾನೆ; ಮನಸ್ಸನ್ನು ಘಾಸಿಗೊಳಿಸಬಲ್ಲ ಅಂಥ ಅನುಭವ ಬೇಡವೆಂದು ಅವನು/ಅವಳು ನಿದ್ದೆ ಮಾಡುತ್ತಾನೆ/ಮಾಡುತ್ತಾಳೆ. ಮತ್ತೆ ಎಚ್ಚರವಾದಾಗ ಆ ರಾಕ್ಷಸ ಪ್ರಾಣಿ ಇನ್ನೂ ಅಲ್ಲಿಯೇ ಇರುತ್ತದೆ. 

2. ಒಬ್ಬ ವ್ಯಕ್ತಿ ಎಚ್ಚರವಾಗಿದ್ದಾನೆ.  ಅವನ/ಅವಳ ಸುತ್ತ ಮುತ್ತ ಯಾವ ಡೈನೊಸಾರೂ ಇಲ್ಲ. ಆತ/ಆಕೆ ನಿದ್ದೆಮಾಡಿ ಒಂದು ಡೈನೊಸಾರಿನ ಕನಸು ಕಾಣುತ್ತಾರೆ.  ಎಚ್ಚರಗೊಂಡಾಗ ಅವನು/ಅವಳು ಕನಸಿನಲ್ಲಿ ಕಂಡ ಡೈನೊಸಾರ್ ಇನ್ನೂ ಅಲ್ಲಿಯೇ ಇದೆಯೆಂದು ಅರಿತುಕೊಳ್ಳುತ್ತಾರೆ. ಎರಡನೆಯ ಕತೆ ಮೊದಲನೆಯದಕ್ಕಿಂತ ಹೆಚ್ಚು ವಿನೋದಪೂರ್ಣವಾಗಿರುವುದಷ್ಟೇ ಅಲ್ಲ, ಅತಿವಾಸ್ತವಿಕವಾಗಿ, ಅಷ್ಟೇಕೆ `ಕಾಫ್ಕಾಯಿಸ್ಕ್' ಆಗಿ ಕೂಡ ಭಾಸವಾಗಬಹುದು.

ಮೂಲ ಕತೆಗೆ ತೀರ ನಿಷ್ಠವಾಗಿರುವ ಸಿನಿಮಾ ತಯಾರಿಸಲಾಗದಷ್ಟೆ.  ಆದ್ದರಿಂದ ಮೇಲೆ ಸೂಚಿಸಿದ ಎರಡು ವ್ಯಾಖ್ಯಾನಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು.  ನಿರ್ದೇಶಕನಾದವನು ಎರಡನೆಯ ವ್ಯಾಖ್ಯಾನವನ್ನು ಆಯ್ಕೆಮಾಡಿಕೊಳ್ಳುತ್ತಾನೆಂದು ಭಾವಿಸಿಕೊಳ್ಳೋಣ.  ಒಂದು ಸಿನಿಮಾ ಕೆಲವು ಸೆಕೆಂಡುಗಳಷ್ಟಾದರೂ ದೀರ್ಘವಾಗಿರಬೇಕಾದರೆ ಈ ನಾಲ್ಕು ಸಾಧ್ಯತೆಗಳು ಮಾತ್ರ ಇವೆ.

1. ಒಬ್ಬ ವ್ಯಕ್ತಿ ಒಂದು ಡೈನೊಸಾರಿನ ಕನಸು ಕಂಡು, ಆಮೇಲೆ ಎಚ್ಚರಗೊಂಡು ಡೈನೊಸಾರ್ ಇನ್ನೂ ಅಲ್ಲಿದೆಯೆಂದು ಕಂಡುಕೊಳ್ಳುವುದು; ನಂತರ ಮೂಲ ಕತೆ ಸ್ಪಷ್ಟಪಡಿಸದ, ನಿಜಕ್ಕೂ ಏನು ನಡೆಯಿತೆಂದು ವಿವರಿಸುವ, ತುಂಬ ಅತಿವಾಸ್ತವಿಕವೆನ್ನಿಸುವ ಅನೇಕ ಘಟನೆಗಳ ಒಂದು ಕತೆಯನ್ನು ಕಲ್ಪಿಸಿಕೊಳ್ಳುವುದು.

2. ದಿನನಿತ್ಯದ ಘಟನೆಗಳ ಒಂದು ಸರಮಾಲೆಯನ್ನು ಚಿತ್ರಿಸಿ, ಅವುಗಳನ್ನು ಗೋಜಲುಗೊಳಿಸುವ ಮೂಲಕ ಕನಸುಕಾಣುವ ಮತ್ತು ಎಚ್ಚರಗೊಳ್ಳುವ ಒಂದು ಪ್ರಕರಣದಿಂದ ಮುಕ್ತಾಯಗೊಳಿಸುವುದು.  3. ಕನಸಿನ ಮತ್ತು ಡೈನೊಸಾರಿನ ಅನುಭವಕ್ಕೆ ಅಂಟಿಕೊಂಡೇ ಮುಖ್ಯ ಪಾತ್ರದ ಬದುಕಿನ ವಿವಿಧ ಅಂಶಗಳನ್ನು ಕುರಿತು ಹೇಳುವುದು. 4. ಮೂರು ಗಂಟೆಗಳ ಕಾಲ ಅದೇ ದೃಶ್ಯವನ್ನು (ಕನಸು ಕಾಣುವ ಮತ್ತು ಎಚ್ಚರಗೊಳ್ಳುವ ದೃಶ್ಯವನ್ನು) ಪುನರಾವೃತ್ತಿಗೊಳಿಸುವ ಮೂಲಕ ಒಂದು ನವೋನವ್ಯ ಚಿತ್ರವನ್ನು ತಯಾರಿಸುವುದು.

ಈಗ ಈ ನಾಲ್ಕು ಬಗೆಯ ಸಿನಿಮಾಗಳ ಸಾರಾಂಶ ಏನೆಂದು ಪ್ರೇಕ್ಷಕರನ್ನು ಕೇಳೋಣ.  1ನೆಯ ಮತ್ತು 2ನೆಯ ಚಿತ್ರಗಳ ಪ್ರೇಕ್ಷಕರು ಸ್ವಪ್ನಸದೃಶ ಅನುಭವದ ಒಂದು ಅಂಶವನ್ನಷ್ಟೇ ಗುರುತಿಸಬಹುದು. (`ಆದರೆ ನಾನು ಚಿತ್ರ ನೋಡಿಲ್ಲದ ಕಾರಣ ಆ ಅಂಶವೇನೆಂದು ನನಗೆ ಗೊತ್ತಿಲ್ಲ').  3ನೆಯ ಸಾಧ್ಯತೆಯ ಸಿನಿಮಾ ಪ್ರೇಕ್ಷಕರು ಮೊದಲು ಸ್ವಪ್ನಸದೃಶ ಪ್ರಾಣಿಯಾಗಿದ್ದ ಮತ್ತು ನಂತರ ನಿಜವಾದ ಪ್ರಾಣಿಯೇ ಆಗಿಬಿಟ್ಟ ಡೈನೊಸಾರನ್ನು ಕುರಿತು ಮತ್ತೆ ಮತ್ತೆ ಪ್ರತ್ಯಕ್ಷವಾಗುವ ಸ್ವಪ್ನಸದೃಶ ಸನ್ನಿವೇಶದ ಬಗೆಗೇ ಹೇಳಬಹುದು. ನಾಲ್ಕನೇ ಸಾಧ್ಯತೆಯ ಸಿನಿಮಾ ನೋಡಿದವರು, ಗುಲ್ಲುಮಾಡುವವರಾದರೆ, ಈ ಕೆಳಕಂಡಂತೆ ಹೇಳಿಯಾರು:

ಅವನಿಗೆ ಎಚ್ಚರವಾದಾಗ, ಡೈನೊಸಾರಿನ್ನೂ ಅಲ್ಲಿಯೇ ಇತ್ತು.
ಅವನಿಗೆ ಎಚ್ಚರವಾದಾಗ, ಡೈನೊಸಾರಿನ್ನೂ ಅಲ್ಲಿಯೇ ಇತ್ತು.
ಅವನಿಗೆ ಎಚ್ಚರವಾದಾಗ, ಡೈನೊಸಾರಿನ್ನೂ ಅಲ್ಲಿಯೇ ಇತ್ತು.
ಅವನಿಗೆ ಎಚ್ಚರವಾದಾಗ, ಡೈನೊಸಾರಿನ್ನೂ ಅಲ್ಲಿಯೇ ಇತ್ತು.
(ಇದೇ ರೀತಿ ಅನಂತ ಕಾಲದವರೆಗೆ)

ಇದು ಹೆಚ್ಚು ಕಡಿಮೆ ಒಂದು ನವೋನವ್ಯ ಕವಿತೆಯಂತಿರುತ್ತದೆಯೇ ಹೊರತು ಒಂದು ಹೊಸ ಬಗೆಯ ಚಿತ್ರವಾಗಿರುವುದಿಲ್ಲ.
ಮರೀಯೊ ವರ್ಗಾಸ್ ಯೋಸ ಈಚೆಗೆ ನೊಬೆಲ್ ಪ್ರಶಸ್ತಿ ಪಡೆದ ಪೆರು ದೇಶದ ಪ್ರಸಿದ್ಧ ಲೇಖಕ. ಅವನು ಬರೆದಿರುವ `ಲೆಟರ್ಸ್ ಟು ಎ ಯಂಗ್ ನಾವಲಿಸ್ಟ್' ಎಂಬ ಪುಸ್ತಕವೊಂದಿದೆ. ಅದರಲ್ಲಿ ಕಾದಂಬರಿಯಲ್ಲಿ ಕಾಲದ ಸಂಯೋಜನೆ ಹೇಗಿರುತ್ತದೆಯೆಂದು ಬರೆಯುತ್ತ ಅವನು ಮೊಂತೆರ್ರೋಸೋನ ಇದೇ ಕತೆಯ ಬಗೆಗೆ ನಿರೂಪಿಸಿರುವ ವಿಚಾರಗಳಿವು:

`ಇದೊಂದು ಪರಿಪೂರ್ಣ ಕತೆ ಅಲ್ಲವೆ? ಇದರಲ್ಲಿ ಮನವೊಲಿಕೆಯ ಶಕ್ತಿಯಿದೆ, ಅದ್ವಿತೀಯ ಸಾಂದ್ರತೆಯಿದೆ, ಪರಿಪೂರ್ಣ ನಾಟಕೀಯತೆಯಿದೆ, ಬಣ್ಣವಿದೆ, ಧ್ವನಿಶಕ್ತಿಯಿದೆ, ಸ್ಪಷ್ಟತೆಯಿದೆ. ಇದೊಂದು ಆಸಕ್ತಿ ಹುಟ್ಟಿಸುವ ಕಥನ. ಏಕೆಂದರೆ ಇದರ ಸರಳತೆಯೇ ಇದನ್ನು ಸಂಕೀರ್ಣಗೊಳಿಸಿದೆ.  ಈ `ಮಿನಿಮಲಿಸ್ಟ್' ನಿರೂಪಣಾ ರತ್ನದ ತುಂಬ ಸಮೃದ್ಧವಾಗಿರುವ ಇತರ ಎಲ್ಲ ಸಂಭಾವ್ಯ ಓದುಗಳನ್ನು ನಮ್ಮಳಗೇ ಹತ್ತಿಕ್ಕಿಕೊಂಡು, ಕಾಲಕ್ಕೆ ಸಂಬಂಧಿಸಿದ ಇದರ ದೃಷ್ಟಿಕೋನದ ಮೇಲಷ್ಟೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ. ಈ ಕತೆಯನ್ನು ಯಾವ ಕಾಲದಲ್ಲಿ ನಿರೂಪಿಸಲಾಗಿದೆ?  ಸರಳವಾದ ಭೂತಕಾಲ: `ಅವನು ಎಚ್ಚರಗೊಂಡ'. ಅಂದರೆ ನಿರೂಪಕ ಭವಿಷ್ಯತ್‌ಕಾಲದಲ್ಲಿ ಇದ್ದಾನೆ -ನಡೆದದ್ದೆೀನನ್ನೋ ನಿರೂಪಿಸುತ್ತ.  ಯಾವಾಗ?....  ನಿರೂಪಕನ ಕಾಲಕ್ಕೆ ಸಂಬಂಧಿಸಿದ ಹಾಗೆ ಕತೆಯ ಕಾಲ ಹತ್ತಿರದ ಭೂತಕಾಲವಲ್ಲ, ಮಧ್ಯಮ ಭೂತಕಾಲ ಎಂದು ನನಗೆ ಹೇಗೆ ಗೊತ್ತು?  ಹೇಗೆಂದರೆ ಆ ಎರಡು ಕಾಲಗಳ ನಡುವೆ ಒಂದು ಪಾತಾಳವಿದ್ದು ಅದು ಎರಡರ ನಡುವಣ ಕೊಂಡಿಯನ್ನು (ಅಲ್ಪವಿರಾಮವನ್ನು) ಅಥವಾ ನಿರಂತರತೆಯನ್ನು ಅಳಿಸಿಹಾಕುತ್ತದೆ.

`ವಾಸ್ತವಿಕತೆಯ ಹಂತದಲ್ಲಿ ನೋಡಿದಾಗ ಈ ಕತೆಯಲ್ಲಿ ಯಾವ ದೃಷ್ಟಿಕೋನವಿದೆ?  ನಾವು ನೀವು ವಾಸಿಸುತ್ತಿರುವ ವಾಸ್ತವಿಕ ಜಗತ್ತಿನಲ್ಲಿ ನಮ್ಮ ಕನಸಿನಲ್ಲಿ ಅಥವಾ ದುಸ್ವಪ್ನದಲ್ಲಿ ಡೈನೊಸಾರ್‌ನಂಥ ಇತಿಹಾಸಪೂರ್ವ ಪ್ರಾಣಿಗಳು ಬೆಳಿಗ್ಗೆ ನಾವು ಕಣ್ಣು ತೆರೆದಾಗ ನಮ್ಮ ಮುಂದೆಯೇ ಕಾಣಿಸಿಕೊಳ್ಳುವುದು ಅಸಂಭವ.  ಆದ್ದರಿಂದ ಈ ಕತೆ ಸಂಪೂರ್ಣ ಕಾಲ್ಪನಿಕವಾದ ಅಥವಾ ಫ್ಯಾಂಟಾಸ್ಟಿಕ್ ಎನ್ನಬಹುದಾದ `ವಾಸ್ತವ'ದಲ್ಲಿ ನಡೆಯುವಂಥದು. ಇದರ ನಿರೂಪಕ ಅದೇ `ವಾಸ್ತವ'ದಲ್ಲಿದ್ದಾನೆಯೆ? ಇಲ್ಲ,  ಅವನಿರುವುದು ನಿಜವಾದ ವಾಸ್ತವದಲ್ಲಿ. ಹಾಗೆಂದು ನಮಗೆ ಹೇಗೆ ಗೊತ್ತಾಗುತ್ತದೆ?  ನಿರೂಪಕ ಓದುಗನಿಗೆ ಒದಗಿಸಿರುವ `ಇನ್ನೂ' ಎಂಬ  ಕ್ರಿಯಾ ವಿಶೇಷಣದಿಂದ.  ಈ ಶಬ್ದ ಒಂದು ಮಾಂತ್ರಿಕ ಘಟನೆಯನ್ನು ಸೂಚಿಸುವ ಕಾಲಸಂದರ್ಭವಷ್ಟೇ ಆಗಿರದೆ, ಆ ಅದ್ವಿತೀಯ ಘಟನೆ ಹುಟ್ಟಿಸುವ ಬೆರಗನ್ನೂ ಸೂಚಿಸುವಂತಿದೆ.  ಮೊಂತೆರ್ರೋಸೋನ `ಇನ್ನೂ' ಎಂಬ ಶಬ್ದ ನಡೆದಿರುವ ಘಟನೆಯ ಬಗ್ಗೆ ಆಶ್ಚರ್ಯಪಡಬೇಕೆಂದು ನಮ್ಮನ್ನು ಪ್ರೇರೇಪಿಸುತ್ತದೆ.  (ದಯವಿಟ್ಟು ಗಮನಿಸಿ: ಇಲ್ಲೇನು ನಡೆಯುತ್ತಿದೆ: ಡೈನೊಸಾರ್ ಇನ್ನೂ ಅಲ್ಲಿಯೇ ಇದೆ.  ನಿಜವಾದ ವಾಸ್ತವದಲ್ಲಿ ಇಂಥ ಘಟನೆಗಳು ನಡೆಯುವುದಿಲ್ಲವಾದ್ದರಿಂದ ಅದು ಅಲ್ಲಿರಬಾರದು.  ಅಂಥವು ಫ್ಯಾಂಟಾಸ್ಟಿಕ್ ವಾಸ್ತವದಲ್ಲಿ ಮಾತ್ರ ಸಾಧ್ಯ)'.

1920ರಲ್ಲಿ ಅಮೆರಿಕದ ಪ್ರಖ್ಯಾತ ಲೇಖಕ ಅರ್ನೆಸ್ಟ್ ಹೆಮಿಂಗ್‌ವೇಯ ಗೆಳೆಯರು ಕೆಲವರು ಕೇವಲ ಆರೇ ಶಬ್ದಗಳಲ್ಲಿ ಒಂದು ಸಂಪೂರ್ಣ ಕತೆ ಬರೆಯಬಲ್ಲೆಯ ಎಂದು ಅವನಿಗೆ ಸವಾಲೆಸೆದರಂತೆ.  ಅದಕ್ಕೆ ಉತ್ತರವಾಗಿ ಅವನು ಬರೆದದ್ದು ಇದು: `ಫಾರ್ ಸೇಲ್: ಬೇಬಿ ಶೂಸ್, ನೆವರ್ ಯೂಸ್ಡ್'.

`ಸಡನ್ ಫಿಕ್ಷನ್ ಇನಂಟರ್‌ನ್ಯಾಷನಲ್' ಎಂಬ ಅತಿ ಸಣ್ಣಕತೆಗಳ ಸಂಪಾದಕರಲ್ಲೊಬ್ಬನಾದ ರಾಬರ್ಟ್ ಷಪರ್ಡ್ ಬರೆದಿರುವ ಈ ಮಾತುಗಳನ್ನೂ ಓದಿ: `ಅತಿ ಸಣ್ಣಕತೆಯಲ್ಲಿರುವ ಶಬ್ದಗಳು ಕಾದಂಬರಿಯೊಂದರಲ್ಲಿರುವ ಶಬ್ದಗಳಿಗಿಂತ ಬೇರೆಯಾಗೇನೂ ಇರುವುದಿಲ್ಲ, ಅಲ್ಲವೆ?  ಅಂದರೆ ವೈಜ್ಞಾನಿಕ ಕಾದಂಬರಿಯ ಮಧ್ಯದಲ್ಲೆಲ್ಲೋ `ಡೈನೊಸಾರ್'ನ ಎಂಟು ಪದಗಳನ್ನು ಕಲ್ಪಿಸಿಕೊಳ್ಳುವುದು ಸುಲಭ. ಎಷ್ಟು ಸುಲಭವೆಂದರೆ `ರಾಜ ಸತ್ತ, ಆಮೇಲೆ ರಾಣಿಯೂ ಸತ್ತಳು' ಎಂಬ ವಾಕ್ಯ ಅಥವಾ (ಹೆಮಿಂಗ್ವೇ ಬರೆದ) `ಬೇಬಿ ಶೂಸ್' (ಇದೊಂದು ಜಾಹಿರಾತಿನ ಥರ ಇದೆಯಲ್ಲವೆ?) ಎಂಬ ಕತೆ ದೊಡ್ಡ ಕಾದಂಬರಿಯೊಂದರ ಭಾಗವೆಂದು ಕಲ್ಪಿಸಿಕೊಳ್ಳಬಹುದಾದಷ್ಟೇ ಸುಲಭ. ಆದರೂ ಕೇಂದ್ರ ಆಶಯದ ದೃಷ್ಟಿಯಿಂದ ನೋಡಿದಾಗ ವ್ಯತ್ಯಾಸ ಸುಸ್ಪಷ್ಟ. ಕೆಲವೇ ಪದಗಳನ್ನು ಒಂದು ಅತಿ ಸಣ್ಣಕತೆ ಎಂದು ನೀಡಿದಾಗ ಅವುಗಳನ್ನು ಖಾಲಿ ಜಾಗವಷ್ಟೇ ಸುತ್ತುವರಿದಿರುತ್ತದೆ.  ಕಾದಂಬರಿಯಲ್ಲಾದರೋ, ಆ ಕೆಲವೇ ಪದಗಳನ್ನು ಇತರ ಪದಗಳನ್ನೊಳಗೊಂಡ ವಿವಿಧ ಸಂದರ್ಭಗಳು ಸುತ್ತಿಕೊಂಡಿರುತ್ತವೆ'.  
 
1966ರಲ್ಲಿ `ಮಸಾಚುಸೆಟ್ಸ್ ರಿವೂ' ಎಂಬ ಅಮೆರಿಕನ್ ಪತ್ರಿಕೆಯಲ್ಲಿ ಅಗೂಸ್ತೊ ಮೊಂತೆರ್ರೋಸೊನ ಒಂದು ಸಂದರ್ಶನ ಪ್ರಕಟವಾಯಿತು.  ಅದರಲ್ಲಿ ಮೊಂತೆರ್ರೋಸೊ `ಡೈಸೊನಾರ್' ಬಗ್ಗೆ ಪ್ರಕಟವಾದ ಕೆಲವು ಪ್ರಾರಂಭದ ವಿಮರ್ಶೆಗಳನ್ನು ನೆನೆಪಿಸಿಕೊಳ್ಳುತ್ತ ಹೀಗೆಂದಿದ್ದಾನೆ: `ಮೊದಲಿಗೆ ವಿಮರ್ಶಕರು ಅದನ್ನು ಇಷ್ಟಪಡಲಿಲ್ಲ. ಆ ನಂತರ ಅದೊಂದು ಸಣ್ಣಕತೆಯೇ ಅಲ್ಲವೆಂದು ಸೂಚಿಸುವ ಅನೇಕಾನೇಕ ಆಕ್ಷೇಪಣೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದಕ್ಕೆ ನನ್ನ ಉತ್ತರವಿಷ್ಟೆ: ನಿಜ, ಅದು ಸಣ್ಣಕತೆ ಅಲ್ಲ. ನಿಜಕ್ಕೂ ಅದೊಂದು ಕಾದಂಬರಿ'.

ಇದನ್ನೆಲ್ಲ ಓದುತ್ತಿರುವಾಗ ನನಗೆ ಚೀನೀ ತಾವೊ ದಾರ್ಶನಿಕ ಚುವಾನ್ ತ್ಸುಂಗ್ (ಕ್ರಿ.ಪೂ.369-286) ಬರೆದ ಈ ಒಂದು ಅತಿಸಣ್ಣ ಕತೆ ಯಾಕೆ ನೆನಪಾಯಿತೋ ಗೊತ್ತಿಲ್ಲ. 

ಒಂದಾನೊಂದು ಕಾಲದಲ್ಲಿ ರೆಕ್ಕೆಬಡಿಯುತ್ತ ಅಲ್ಲ್ಲಲಿ ಹಾರಾಡುತ್ತಿರುವ ಒಂದು ಚಿಟ್ಟೆಯಾಗಿರುವಂತೆ ನಾನೊಂದು ಕನಸು ಕಂಡೆ. ಇದ್ದಕ್ಕಿದ್ದಂತೆ ಎಚ್ಚರವಾಯಿತು. ನೋಡಿದರೆ ನಾನು ನಾನಾಗಿಯೇ ಮಲಗಿದ್ದೆ. ಅದಕ್ಕೆ ಮೊದಲು ನಾನೇ ಒಂದು ಚಿಟ್ಟೆಯಾಗಿರುವಂತೆ ಕನಸು ಕಾಣುತ್ತಿದ್ದೆನೋ ಅಥವಾ ಈಗ ನಾನೇ ಒಬ್ಬ ಮನುಷ್ಯನಾಗಿರುವಂತೆ ಕನಸು ಕಾಣುತ್ತಿರುವ ಚಿಟ್ಟೆಯೋ ನನಗಂತೂ ಗೊತ್ತಿಲ್ಲ.
ಎ.ಕೆ. ರಾಮಾನುಜನ್ ಈ ಕತೆಯನ್ನೇ ಆಧರಿಸಿ ಒಂದು ಕವಿತೆ ಬರೆದರಲ್ಲವೆ?  ಹೆಸರು `ಬುದ್ಧಿವಂತರಿಗೆ ಕನಸು ಬಿದ್ದರೆ'. ಅದರ ಕೆಲವು ಸಾಲುಗಳಿವು:

  ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
  ಮನುಷ್ಯನೋ
ಚಿಟ್ಟೆಯೋ
  ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
  ರಾತ್ರಿಯ ಕನಸೋ
ತಿಳಿಯದೆ ಭ್ರಮೆ ಹಿಡಿಯಿತು.

ಮೊಂತೆರ್ರೋಸೊ ಬರೆದ `ನನಗೆ  ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು' ಅತ್ಯಂತ ಸಣ್ಣದಾದೊಂದು ಅತಿ ಸಣ್ಣಕತೆಯಾದರೂ ಇದರ ಬಗ್ಗೆ ಅನೇಕ ಡಾಕ್ಟೊರಲ್ ಪ್ರಬಂಧಗಳು ಪ್ರಕಟವಾಗಿವೆಯಂತೆ! ಮತ್ತೆ ಸ್ವೀಡನ್ನಿನ ಪ್ರಸಿದ್ಧ ಕಲಾವಿದ ಮಾರ್ಕಸ್ ಲಾಕೋನೆನ್ ಈ ಕತೆ ಓದಿ ಅದೆಷ್ಟು ಪ್ರಭಾವಿತನಾದನೆಂದರೆ ಅವನೊಂದು ಚಿತ್ರವನ್ನೇ ರಚಿಸಬೇಕಾಯಿತು.
ಮೇಲಿನದೆಲ್ಲವನ್ನೂ ನಾನು ಸ್ವತಃ ಓದಿದ್ದು ಕಾಲಕ್ರಮದಲ್ಲಿ. ಇದು ನಮ್ಮ ಚಿಂತಕರು/ವಿಮರ್ಶಕರು ಹೇಳುವ ಹಾಗೆ ಮೊಂತರ್ರೋಸೋನ ಪಠ್ಯಕ್ಕೆ ಸಂಬಂಧಪಟ್ಟ ಒಂದು ಅಪೂರ್ಣ ಡಿಸ್‌ಕೋರ್ಸ್ ಅಥವಾ ಸಂಕಥನ. ಇನ್ನು ಮುಂದೆ ನಮ್ಮ ಕನ್ನಡ ವಿಮರ್ಶಕರು ಕೂಡ ತಮ್ಮ ಒಳನೋಟಗಳಿಂದ ಈ ಅಪೂರ್ಣ ಸಂಕಥನವನ್ನು ಸ್ವಲ್ಪಮಟ್ಟಿಗಾದರೂ ಸಂಪೂರ್ಣತೆಯತ್ತ ಕೊಂಡೊಯ್ಯಬೇಕೆಂಬುದೇ ನನ್ನ ಆಶಯ.
ಬಾಲಂಗೋಚಿ: ಮೊಂತೆರ್ರೋಸೋನ ಕತೆಯನ್ನು ಕುರಿತು ನನ್ನ ವ್ಯಾಖ್ಯಾನವೇನು?  ಒಂದು ನಿದರ್ಶನ ಕೊಡುವುದಾದರೆ: ಕಾಲಾನಂತರ ನನ್ನ ಮೊಮ್ಮಕ್ಕಳೋ ಮರಿಮಕ್ಕಳೋ ಎಚ್ಚರಗೊಂಡಾಗ (ನೆಲಸಮವಾಗಿರುವ) ರಾಮಮಂದಿರ ಇನ್ನೂ ಅಲ್ಲಿಯೇ ಇರುತ್ತದೆ!
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT