ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೌ ಪ್ರಾಯೋಜಕತ್ವ ರದ್ದು ಮಾಡದ ಐಒಸಿ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ `ಡೌ ಕೆಮಿಕಲ್ಸ್~ ನೀಡಿರುವ ಪ್ರಾಯೋಜಕತ್ವ ರದ್ದು ಮಾಡುವುದಿಲ್ಲವೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸ್ಪಷ್ಟಪಡಿಸಿದೆ.

ಭೋಪಾಲ್ ಅನಿಲ ದುರಂತಕ್ಕೆ ಡೌ ಕೆಮಿಕಲ್ಸ್ ಹೊಣೆಯಲ್ಲ. ಯೂನಿಯನ್ ಕಾರ್ಬೈಡ್ ಕೊಂಡು ಕೊಂಡಿರುವ ಮಾತ್ರಕ್ಕೆ ಘಟನೆಗೆ ಇದೇ ಕಂಪೆನಿ ಕಾರಣ ಎನ್ನುವಂತೆ ಬಿಂಬಿಸುವುದೂ ಸೂಕ್ತವಲ್ಲ ಎನ್ನುವುದು ಐಒಸಿ ಅಭಿಪ್ರಾಯ. ಆದ್ದರಿಂದಲೇ ಡೌ ಅನ್ನು ಪ್ರಾಯೋಜಕತ್ವವನ್ನು ಮುಂದುವರಿಸಲಾಗುತ್ತದೆಂದು ತಿಳಿಸಿದೆ.

ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಾರಣ. ಅಂಥದೊಂದು ಕಂಪೆನಿಯನ್ನು ಖರೀದಿಸಿದ ಡೌ ಸೂಕ್ತವಾದ ಪರಿಹಾರವನ್ನು ಸಂತ್ರಸ್ತರಿಗೆ ನೀಡಿಲ್ಲವೆಂದು ದೂರಿ ನಿರಂತರವಾಗಿ ಪ್ರತಿಭಟನೆಗಳು ನಡೆದಿವೆ. ಅಷ್ಟೇ ಅಲ್ಲ ಒಲಿಂಪಿಕ್‌ನಿಂದ ಅದನ್ನು ದೂರ ಇಡಬೇಕೆಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಕೂಡ ಆಗ್ರಹಿಸಿತ್ತು. ಆದರೆ ಈ ಒತ್ತಡಕ್ಕೆ ಐಒಸಿ ಮಣಿದಿಲ್ಲ. `ಪ್ರಾಯೋಜಕತ್ವ ರದ್ದು ಮಾಡಲು ಸೂಕ್ತ ಕಾರಣವಿಲ್ಲ~ ಎಂದು ಹೇಳಿ ಕೈತೊಳೆದುಕೊಂಡಿದೆ.

ಐಒಸಿ ಮುಖ್ಯಸ್ಥ ಜಾಕ್ ರಾಗ್ ಅವರು ಈ ವಿಷಯವಾಗಿ ಐಒಎ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ. `1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತವು ಭಾರತ ಮಾತ್ರವಲ್ಲ ವಿಶ್ವವೇ ಕಂಡಿರುವ ದೊಡ್ಡ ದುರ್ಘಟನೆ. ಈ ಅಂಶವನ್ನು ಐಒಸಿ ಕೂಡ ಅಲ್ಲಗಳೆಯುವುದಿಲ್ಲ.

ಮೃತಪಟ್ಟವರು ಹಾಗೂ ಸಂತ್ರಸ್ತರ ಬಗ್ಗೆ ಅನುಕಂಪವೂ ಇದೆ. ಆ ಭಾಗದಲ್ಲಿ ನೆಲೆಸಿರುವವರು ಈಗಲೂ ಎದುರಿಸುತ್ತಿರುವ ಕಷ್ಟ ಎಂಥದೆಂದು ಕೂಡ ತಿಳಿದಿದ್ದೇವೆ~ ಎಂದಿರುವ ಅವರು `ಇಂಥದೊಂದು ಘಟನೆಗೆ ಪ್ರತ್ಯಕ್ಷವಾಗಿ ಕಾರಣವಾಗಿಲ್ಲದ ಡೌ ಅನ್ನು ಒಲಿಂಪಿಕ್ ಪ್ರಾಯೋಜಕತ್ವದಿಂದ ಕೈಬಿಡುವುದು ಸಾಧ್ಯವಿಲ್ಲ~ ಎಂದು ತಿಳಿಸಿದ್ದಾರೆ.

`ಡೌ ಕೆಮಿಕಲ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ನಾವು ಎಲ್ಲ ಅಂಶಗಳನ್ನು ಪರಿಶೀಲಿಸಿದ್ದೇವೆ. ಅದು ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿ ಮಾಡಿದ್ದು ಗೊತ್ತಿತ್ತು~ ಎಂದು ಹೇಳಿರುವ ರಾಗ್ `ದುರಂತ ನಡೆದ ನಂತರ ಹದಿನಾರು ವರ್ಷಗಳವರೆಗೆ ಯೂನಿಯನ್ ಕಾರ್ಬೈಡ್‌ನಲ್ಲಿ ಡೌ ಯಾವುದೇ ರೀತಿಯಲ್ಲಿ ಪಾಲುಗಾರಿಕೆ ಹೊಂದಿರಲಿಲ್ಲ. ಮಾಲೀಕತ್ವ ಪಡೆದ ಹನ್ನೆರಡು ವರ್ಷಗಳ ನಂತರ ಭಾರತದ ಸುಪ್ರೀಂ ಕೋರ್ಟ್ ಪ್ರಕಾರ 47000 ಲಕ್ಷ ಡಾಲರ್ ಪರಿಹಾರ ನೀಡುವ ಒಪ್ಪಂದವಾಗಿದ್ದನ್ನೂ ಪರಿಶೀಲಿಸಿದ್ದೇವೆ~ ಎಂದು ವಿವರಿಸಿದ್ದಾರೆ.


`ಇದೇ ಒಪ್ಪಂದವನ್ನು ನ್ಯಾಯಾಲಯ ಕೂಡ 1991 ಹಾಗೂ 2007ರಲ್ಲಿ ಎತ್ತಿಹಿಡಿದಿದೆ. ಪುನರ್ ಪರಿಶೀಲನೆ ವಿಷಯವಾಗಿಯೂ ಮಾಹಿತಿ ಪಡೆದಿದ್ದೇವೆ. ಒಟ್ಟಾರೆ ಪ್ರಕರಣ ಎಷ್ಟೊಂದು ಸೂಕ್ಷ್ಮವೆಂದು ಕೂಡ ಅರಿವಿದೆ. ಜೊತೆಗೆ ಡೌ ಹೊಣೆಗಾರಿಕೆ ಎಷ್ಟರ ಮಟ್ಟಿಗೆ ಎನ್ನುವುದನ್ನೂ ವಿಶ್ಲೇಷಣೆ ಮಾಡಲಾಗಿದೆ. ಆದ್ದರಿಂದ ಅದನ್ನು ಒಲಿಂಪಿಕ್‌ನಿಂದ ದೂರ ಇಡುವುದಕ್ಕೆ ಆಗದು~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಐಒಎಗೆ ತೃಪ್ತಿ ನೀಡದ ಐಒಸಿ ವಿವರಣೆ: ಐಒಸಿ ನೀಡಿರುವ ಈ ವಿವರಣೆಯು ಐಒಎಗೆ ತೃಪ್ತಿಕರ ಎನಿಸಿಲ್ಲ. `ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಒಪ್ಪುವಂಥ ವಾದವನ್ನು ಮುಂದಿಟ್ಟಿಲ್ಲ.
 
ಅನಿಲ ದುರಂತ ಸಂತ್ರಸ್ತರ ಸಂಕಷ್ಟಗಳಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಡೌ ಕಂಪೆನಿಯನ್ನು ಲಂಡನ್ ಒಲಿಂಪಿಕ್ ಪ್ರಾಯೋಜಕತ್ವದಿಂದ ಕೈಬಿಡುವುದೇ ಸೂಕ್ತ~ ಎಂದು ಐಒಎ ಹಂಗಾಮಿ ಅಧ್ಯಕ್ಷ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಭಾರತ ಸರ್ಕಾರವು ಈ ವಿಷಯದಲ್ಲಿ ತನ್ನ ಸ್ಪಷ್ಟವಾದ ನಿಲುವನ್ನು ಪ್ರಕಟಿಸುವ ಮೂಲಕ ಐಒಎ ಮುಂದಿನ ಹೆಜ್ಜೆ ಇಡಲು ಹಾದಿ ಸುಗಮಗೊಳಿಸಬೇಕೆಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT