ನ್ಯೂಯಾರ್ಕ್ (ಪಿಟಿಐ): `ಡೌನ್‌ಸಿಂಡ್ರೋಮ್' (ಮಾನಸಿಕ, ದೈಹಿಕ ನ್ಯೂನತೆ) ಇರುವ 15 ವರ್ಷದ ಅಮೆರಿಕದ ಬಾಲಕನೊಬ್ಬ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿ ದಾಖಲೆ ನಿರ್ಮಿಸಲು ಹೊರಟಿದ್ದಾನೆ.
ಎಲಿ ರೈಮರ್, ಕಳೆದ ತಿಂಗಳು ಪರ್ವತಾರೋಹಣ ಕೈಗೊಂಡಿದ್ದು, ಈವರೆಗೆ 17,600 ಅಡಿ ಎತ್ತರ ಏರಿದ್ದಾನೆ. `ನಡಿಗೆಯ ಮೂಲಕ ಇದುವರೆಗೆ ಸುಮಾರು 113 ಕಿ.ಮೀ ಕ್ರಮಿಸಿ ಈತ ವಿಜಯಪತಾಕೆ ಹಾರಿಸಿದ' ಎಂದು `ನ್ಯೂಯಾರ್ಕ್ ಡೈಲಿ ನ್ಯೂಸ್' ವರದಿ ಮಾಡಿದೆ.
ತಮ್ಮ ಕುಟುಂಬದ ಎಲಿಶಾ ಫೌಂಡೇಷನ್‌ಗೆ ಹಣ ಸಂಗ್ರಹಿಸುವ ಸಲುವಾಗಿ ಬಾಲಕ ಪರ್ವತಾರೋಹಣ ಕೈಗೊಂಡಿದ್ದು, ಮಗನ ಸಾಧನೆ ಬೆಂಬಲಿಸಿ ತಂದೆ ಜಸ್ಟಿನ್ ರೈಮರ್ ಕೂಡ ಕಳೆದ ತಿಂಗಳು ಪರ್ವತಾರೋಹಿಗಳ ತಂಡ ಸೇರಿದ್ದರು.