ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೌನ್‌ಹಿಲ್ ತಂತ್ರಜ್ಞಾನ

ಆಟೊ ಟೆಕ್
Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ತಂತ್ರಜ್ಞಾನ ಸುಧಾರಿಸಿದಂತೆ ಚಾಲಕ ಸ್ನೇಹಿ ಸೌಲಭ್ಯಗಳನ್ನು ನೀಡುವುದು ಸಾಮಾನ್ಯವೇ ಆಗಿದೆ. ಹೆಚ್ಚಿನ ಬೆಲೆಯ ಕಾರ್‌ಗಳಲ್ಲಂತೂ ಚಾಲಕ ಸ್ನೇಹಿ ಸೌಲಭ್ಯಗಳು ಕಡಿಮೆ ಇದ್ದರೆ, ಅವನ್ನು ಗ್ರಾಹಕರು ಕೊಳ್ಳುವುದೇ ಇಲ್ಲ. ತಂತ್ರಜ್ಞಾನ ಬೆಳೆದಂತೆ ಅನೇಕ ಸೌಲಭ್ಯಗಳು ಸೇರ್ಪಡೆ ಆಗುತ್ತವೆ. ಹಿಂದಿನ ಕಾಲದ ಕಾರ್‌ಗಳಲ್ಲಿ ಕಾರ್ ಚಾಲನೆಗೆ ಬೇಕಾದ ಸ್ಟೀರಿಂಗ್, ಕೆಲವು ಪೆಡಲ್‌ಗಳು, ಬ್ರೇಕ್, ಗಿಯರ್ ಶಿಫ್ಟರ್ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಸಣ್ಣ ಮ್ಯೂಸಿಕ್ ಸಿಸ್ಟಂ ಸಹ ಇರುತ್ತಿರಲಿಲ್ಲ.

ಈಗ ಎಸಿ, ಮ್ಯೂಸಿಕ್, ದೂರವಾಣಿ, ಬ್ಲೂಟೂತ್ ಸೌಲಭ್ಯಗಳ ಜತೆಗೆ ಅತ್ಯಾಧುನಿಕ ಜಿಪಿಎಸ್, ಚಾಲಕ ಮಾಹಿತಿ ಕೇಂದ್ರ ಮುಂತಾದ ಸೌಲಭ್ಯಗಳಿವೆ. ಇವೆಲ್ಲವನ್ನೂ ಒಟ್ಟಿಗೇ ನಿಭಾಯಿಸುವುದು ಕಷ್ಟವೇ ಸರಿ. ಹಾಗಾಗಿ ಈ ಕೆಲಸಗಳನ್ನು ಕಡಿಮೆ ಮಾಡಿಕೊಂಡು, ಕೇವಲ ಕಂಪ್ಯೂಟರ್ ಸಹಾಯದಿಂದಲೇ ಕಾರ್‌ನ ನಿಯಂತ್ರಣ, ಮನರಂಜನೆ ಎಲ್ಲವನ್ನೂ ಮಾಡಬಹುದಾದ ಅವಕಾಶವಿದೆ. ಒಮ್ಮೆ ಕಾರ್ ಹತ್ತಿ ಕುಳಿತರೆ ಕಾರ್ ತಂತಾನೇ ಎಲ್ಲವನ್ನೂ ನಿಯಂತ್ರಿಸುತ್ತದೆ. ಕಾರ್‌ಗೆ ದಿಕ್ಕು ತೋರಿಸುವುದಷ್ಟೇ ಈಗ ಚಾಲಕನ ಕೆಲಸ!

ಈ ಅನುಭವ ಸಾಮಾನ್ಯವಾಗಿ ಎಲ್ಲ ಕಾರ್ ಚಾಲಕರಿಗೂ ಆಗಿರುತ್ತದೆ. ಕಾರನ್ನು ಇಳಿಜಾರು ಅಥವಾ ದಿಣ್ಣೆಯಲ್ಲಿ ನಿಲ್ಲಿಸಿಕೊಂಡಿರುವಾಗ, ಬ್ರೇಕ್ ಮೇಲಿಂದ ಕಾಲು ತೆಗೆದ ತಕ್ಷಣ, ಕಾರ್ ಹಿಂದಕ್ಕೆ ಅಥವಾ ಮುಂದಕ್ಕೆ ಚಲಿಸಲು ಆರಂಭಿಸುತ್ತದೆ. ಇದನ್ನು ತಪ್ಪಿಸಲು ಹ್ಯಾಂಡ್ ಬ್ರೇಕ್ ಅನ್ನು ಹಾಕಿಕೊಂಡೇ ಇದ್ದು, ಗಿಯರ್‌ಗೆ ಕಾರ್ ಅನ್ನು ಹಾಕಿ, ಎಂಜಿನ್‌ಗೆ ಶಕ್ತಿ ಕೊಟ್ಟು, ಹ್ಯಾಂಡ್ ಬ್ರೇಕ್ ಬಿಟ್ಟರೆ ಕಾರು ಸರಾಗವಾಗಿ ಚಲಿಸುತ್ತಿತ್ತು. ಇಷ್ಟೆಲ್ಲಾ ತೊಂದರೆಯನ್ನು ತಪ್ಪಿಸಲು ಈಗ ಡೌನ್‌ಹಿಲ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ಚಾಲಕ ಮಾಡುವ ಕೆಲಸವನ್ನು ಕಂಪ್ಯೂಟರ್ ಮಾಡುತ್ತದೆ. ಕಾರ್ ಚಲನೆಯಲ್ಲಿಲ್ಲದೆ ನಿಂತಿರುವಾಗ, ಕಾರ್ ಕೊಂಚವೇ ಹಿಂದಕ್ಕೆ ಅಥವಾ ಮುಂದಕ್ಕೆ ಜರುಗಿದರೂ ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ಈ ತಂತ್ರಜ್ಞಾನ, ಹ್ಯಾಂಡ್ ಬ್ರೇಕ್ ಅನ್ನು ತಂತಾನೆ ಹಾಕಿಕೊಳ್ಳುತ್ತದೆ. ಕಾರ್ ಸರಾಗವಾಗಿ ಚಲಿಸಲು ಆರಂಭಿಸಿದಾಗ ಬ್ರೇಕ್ ರಿಲೀಸ್ ಆಗುತ್ತದೆ. ಇದರಿಂದ ಕಾರ್ ಚಾಲಕನ ನಿಯಂತ್ರಣ ಕಳೆದುಕೊಂಡು ಹೊರಳುವುದು ತಪ್ಪಿಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT