ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಪಂದ್ಯದಲ್ಲಿ ಭಾರತ ‘ಎ’ ತಂಡ

ಕ್ರಿಕೆಟ್: ಜುನೇಜಾ 193, ಸರಣಿ ಸಮಬಲ
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶಾಖ ಪಟ್ಟಣ (ಪಿಟಿಐ): ಭಾರತ ‘ಎ’ ಮತ್ತು ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯವು ನಿರೀಕ್ಷೆಯಂತೆಯೇ ನೀರಸ ಡ್ರಾದಲ್ಲಿ ಅಂತ್ಯ ಕಂಡಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿ ಡ್ರಾ ಆಯಿತು.

ವೈಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂ­ಗ­ಣದಲ್ಲಿ ನಡೆದ ನಾಲ್ಕು ದಿನಗಳ ಎರಡನೇ ಟೆಸ್ಟ್‌ ಪಂದ್ಯವು ಡ್ರಾ ದಲ್ಲಿ ಅಂತ್ಯ ಕಾಣುವುದು ಮೂರನೇ ದಿನವೇ ಖಚಿತವಾಗಿತ್ತು.

ನ್ಯೂಜಿಲೆಂಡ್‌ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ ಕಲೆ ಹಾಕಿದ್ದ 437 ರನ್‌ಗೆ ಪ್ರತಿಯಾಗಿ ಅಭಿಷೇಕ್‌ ನಾಯರ್‌ ಸಾರಥ್ಯದ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 135.3 ಓವರ್‌ಗಳಲ್ಲಿ 430 ರನ್‌ ಕಲೆ ಹಾಕುವಷ್ಟರಲ್ಲಿ ಆಲ್ಔಟ್‌ ಆಯಿತು. ಏಳು ರನ್‌ಗಳನ್ನು ಗಳಿಸಿದ್ದರೆ ಆತಿಥೇಯರು ಇನಿಂಗ್ಸ್‌ ಮುನ್ನಡೆ ಪಡೆಯುತ್ತಿದ್ದರು.

ಮೂರನೇ ದಿನವಾದ ಬುಧವಾರದ ಅಂತ್ಯಕ್ಕೆ ಭಾರತ 124 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 408 ರನ್‌ ಗಳಿಸಿತ್ತು. ಕೊನೆಯ ದಿನ ಕೇವಲ 28 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌್ ಹಿನ್ನಡೆ ಅನುಭವಿಸಿತು. ಇದರಲ್ಲಿ 15 ರನ್‌ ಮನ್‌ಪ್ರೀತ್‌ ಜುನೇಜಾ ಗಳಿಸಿದ್ದರು.

ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್‌ ನಡೆಸಿದ ಪ್ರವಾಸಿ ತಂಡ 51.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 176 ರನ್‌ ಕಲೆ ಹಾಕಿತ್ತು. ಈ ವೇಳೆ ಅಂತಿಮ ದಿನದಾಟಕ್ಕೆ ತೆರೆ ಬಿತ್ತು.

ಈಡೇರದ ದ್ವಿ ಶತಕದ ಗುರಿ: ಬುಧವಾರದ ಆಟದ ಅಂತ್ಯಕ್ಕೆ 178 ರನ್‌ ಗಳಿಸಿದ್ದ ಜುನೇಜಾ ಕೊನೆಯ ದಿನ ವೇಗವಾಗಿ ರನ್‌ ಗಳಿಸಿ ದ್ವಿಶತಕದತ್ತ ಹೆಜ್ಜೆ ಹಾಕಿದ್ದರು. ಆದರೆ, 134ನೇ ಓವರ್‌ನಲ್ಲಿ  ಮಾರ್ಕ್‌ ಗಿಲಿಪ್ಸೇಯಿ ಎಸೆತದಲ್ಲಿ ಆ್ಯಂಡರ್‌ಸನ್‌ ಕೈಗೆ ಕ್ಯಾಚ್‌ ನೀಡಿದರು. ಈ ವೇಳೆ ಜುನೇಜಾ ವೈಯಕ್ತಿಕ ಮೊತ್ತ 193 ಆಗಿತ್ತು. 362 ಎಸೆತಗಳನ್ನು ಎದುರಿಸಿದ ಗುಜರಾತ್‌ನ ಜುನೇಜಾ 20 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ ‘ಎ’ 121.1 ಓವರ್‌ಗಳಲ್ಲಿ 437 ಮತ್ತು ದ್ವಿತೀಯ ಇನಿಂಗ್ಸ್‌ 51.2 ಓವರ್‌ಗಳಲ್ಲಿ 3 ವಿಕೆಟ್‌ಗೆ 176. (ಟಾಮ್‌ ಲಥಮ್‌ 61, ಕಾರ್ಲ್‌ ಚಚೊಪ್‌ 76, ಕ್ಯಾರಿ ಜೆ. ಆ್ಯಂಡರ್‌ಸನ್‌ ಔಟಾಗದೆ 26; ಧವಳ್‌ ಕುಲಕರ್ಣಿ 12ಕ್ಕೆ1, ರಾಕೇಶ್‌ ಧ್ರುವ್‌ 45ಕ್ಕೆ2); ಭಾರತ ‘ಎ’ 135.3 ಓವರ್‌ಗಳಲ್ಲಿ 430. (ಮನ್‌ಪ್ರೀತ್‌ ಜುನೇಜಾ 193, ವಿ.ಎ. ಜಗದೀಶ್‌ 91, ಜಲಜ್‌ ಸಕ್ಲೇನಾ 20, ಧವಳ್‌ ಕುಲಕರ್ಣಿ 10, ಇಮ್ತಿಯಾಜ್‌ ಅಹ್ಮದ್‌ ಔಟಾಗದೆ 33; ಮಾರ್ಕ್‌ ಗಿಲಿಪ್ಸೇಯಿ 80ಕ್ಕೆ4, ಡಗ್‌ ಬ್ರೇಸ್‌ವೆಲ್‌ 88ಕ್ಕೆ3, ಟೊಡ್‌ ಅಸ್ಲೆ 96ಕ್ಕೆ2).

ಫಲಿತಾಂಶ: ಡ್ರಾ ಹಾಗೂ ಎರಡು ಪಂದ್ಯಗಳ ಸರಣಿ ಸಮಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT