ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಡ್ರೀಮ್‌ಲೈನರ್'ಗೆ ತಾತ್ಕಾಲಿಕ ತಡೆ

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಅಮೆರಿಕದ ವಿಮಾನ ಯಾನ ರಂಗದ ದೈತ್ಯ ಸಂಸ್ಥೆಯಾಗಿರುವ ಬೋಯಿಂಗ್ ತನ್ನ `787 ಡ್ರೀಮ್‌ಲೈನರ್'ನ 50 ವಿಮಾನಗಳ ಹಾರಾಟವನ್ನು ವಿಶ್ವದಾದ್ಯಂತ ಮೊನ್ನೆ ಹಠಾತ್ತಾಗಿ ಸ್ಥಗಿತಗೊಳಿಸಿದೆ. ಇದರಲ್ಲಿ ದೇಶಿ ವಿಮಾನ ಯಾನ ಸಂಸ್ಥೆ `ಏರ್ ಇಂಡಿಯಾ'ದ ಬೆಂಗಳೂರು  - ದೆಹಲಿ, ಚೆನ್ನೈ, ದುಬೈ, ಪ್ಯಾರಿಸ್ ಮತ್ತು ಫ್ರಾಂಕ್‌ಫರ್ಟ್‌ಗೆ ಸಂಪರ್ಕ ಕಲ್ಪಿಸುತ್ತಿದ್ದ 6 ವಿಮಾನಗಳೂ ಸೇರಿವೆ. ಜಾಗತಿಕ ವಿಮಾನಗಳ ನಿರ್ಮಾಣ ಉದ್ದಿಮೆಯಲ್ಲಿ ಅಮೆರಿಕದ ಬೋಯಿಂಗ್ ಮತ್ತು ಯೂರೋಪ್‌ನ ಏರ್‌ಬಸ್ ಮುಂಚೂಣಿಯಲ್ಲಿ ಇವೆ.

ವೈಶಿಷ್ಟ್ಯಗಳು
ಅಲ್ಯುಮಿನಿಯಂ ಬದಲಿಗೆ ಅತಿ ಹಗುರವಾದ ಸಂಯುಕ್ತ ಪದಾರ್ಥಗಳನ್ನು ಬಳಸಿದ, ವಿಶಿಷ್ಟ ವಿದ್ಯುನ್ಮಾನ ವ್ಯವಸ್ಥೆ ಅಳವಡಿಸಿಕೊಂಡಿರುವ   ಅತ್ಯಾಧುನಿಕ ತಂತ್ರಜ್ಞಾನದ ಮೊದಲ ವಿಮಾನ ಇದಾಗಿದೆ. `ಬೋಯಿಂಗ್ 787' ವಿಮಾನ `ಡ್ರೀಮ್‌ಲೈನರ್' ಎಂದೇ  ಜನಪ್ರಿಯವಾಗಿದೆ.

ಬ್ಯಾಟರಿ ವೈಫಲ್ಯದ ಕಾರಣ
ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ಹೊಗೆ - ಬೆಂಕಿ, ಇಂಧನ ಸೋರಿಕೆ ಮತ್ತು ಕಾಕ್‌ಪಿಟ್ ಕಿಟಕಿಯಲ್ಲಿ ಬಿರುಕು  ಸೇರಿದಂತೆ ಅನೇಕ ಸಮಸ್ಯೆಗಳು ಹಾರಾಟದ ಸಂದರ್ಭದಲ್ಲಿ ಕಂಡು ಬಂದಿದ್ದವು. ಈಗ ವಿಮಾನದ ಮುಖ್ಯ ವಿದ್ಯುನ್ಮಾನ (ಎಲೆಕ್ಟ್ರಿಕಲ್) ವ್ಯವಸ್ಥೆಯ ಬ್ಯಾಟರಿಯಲ್ಲಿ  ಹೊಗೆ ಕಾಣಿಸಿಕೊಂಡಿರುವುದು ಹೆಚ್ಚು ಆತಂಕ ಮೂಡಿಸಿದೆ.

ಲೋಹಗಳಲ್ಲಿ ಅತಿ ಕಡಿಮೆ ಸಾಂದ್ರತೆ ಹೊಂದಿರುವ ಮತ್ತು  ಮೃದು ಲೋಹವಾಗಿರುವ ಲಿಥಿಯಮ್ - ಅಯಾನ್ ಬಳಸಿ ತಯಾರಿಸಿರುವ  ಬ್ಯಾಟರಿಯು(lithium ion battery) ವಿಮಾನದ ಪ್ರಮುಖ ವಿದ್ಯುತ್ ಘಟಕವಾಗಿದೆ. ಈ ವಿಶಿಷ್ಟ ಬ್ಯಾಟರಿಯಲ್ಲಿ ಅಧಿಕ ತಾಪಮಾನದಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ನೀಲಿ ಬಣ್ಣದ ಪೆಟ್ಟಿಗೆಯಲ್ಲಿನ ಬ್ಯಾಟರಿಯ ಎಂಟು ಕೋಶಗಳು ಅತಿಯಾದ ಉಷ್ಣತೆಯಿಂದ ಸುಟ್ಟು ಹೋಗಿ ವಿರೂಪಗೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಎಲ್ಲೆಲ್ಲಿ ಸೇವೆ?
ಅಮೆರಿಕ, ಭಾರತ, ಚಿಲಿ, ಇಥಿಯೋಪಿಯಾ, ಜಪಾನ್, ಪೋಲಂಡ್, ಕತಾರ್‌ಗಳಲ್ಲಿ `ಡ್ರೀಮ್‌ಲೈನರ್' ಹಾರಾಟ ನಡೆಸುತ್ತಿವೆ.

ಭರವಸೆ
`ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, `ಡ್ರೀಮ್‌ಲೈನರ್'ನಲ್ಲಿ ಸದ್ಯಕ್ಕೆ ಕಂಡುಬಂದಿರುವ ದೋಷಗಳನ್ನು ಶೀಘ್ರದಲ್ಲಿಯೇ ನಿವಾರಿಸುವುದಾಗಿ' ಬೋಯಿಂಗ್ ಅಧ್ಯಕ್ಷ ಜಿಮ್ ಮ್ಯಾಕ್‌ನೆರ್ನಿ ಹೇಳಿದ್ದಾರೆ.
ಏರ್ ಇಂಡಿಯಾದ ಮೇಲೆ ಪರಿಣಾಮ

ದೇಶಿ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಾಗಿರುವ `ಏರ್ ಇಂಡಿಯಾ'ದ 6  ಡ್ರೀಮ್‌ಲೈನರ್‌ಗಳೂ ಸದ್ಯಕ್ಕೆ ಹಾರಾಟ ಸ್ಥಗಿತಗೊಳಿಸಿವೆ. ಈ ಹಿಂದೆ 1990ರಲ್ಲಿ ಗಂಭೀರ ಸ್ವರೂಪದ ತಾಂತ್ರಿಕ ವೈಫಲ್ಯದ ಕಾರಣಕ್ಕೆ ಇಂಡಿಯನ್ ಏರ್‌ಲೈನ್ಸ್‌ನ 18 `ಏರ್‌ಬಸ್ ಎ-320' ವಿಮಾನಗಳ ಹಾರಾಟವನ್ನು 8 ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ತನಿಖೆ
ವಿದ್ಯುತ್ ಕೋಶದಲ್ಲಿನ (ಬ್ಯಾಟರಿ)   ದ್ರಾವಣವು ದಹನಗೊಂಡು ಅಧಿಕ ಉಷ್ಣತೆಯ ಫಲವಾಗಿ ಹೊಗೆ ಕಾಣಿಸಿಕೊಂಡಿತ್ತು. ಈ ಬ್ಯಾಟರಿ ದೋಷದ ಮೂಲ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಈ ದೋಷ ಸರಿಪಡಿಸದಿದ್ದರೆ ವಿಮಾನದ ಸೂಕ್ಷ್ಮ ವ್ಯವಸ್ಥೆಗೆ ಧಕ್ಕೆ ಒದಗಿ, ವಿದ್ಯುನ್ಮಾನ ಬಿಡಿಭಾಗಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದವು.

`ಡ್ರೀಮ್‌ಲೈನರ್' ವಿಶೇಷತೆ
ಇತರ ವಿಮಾನಗಳಿಗೆ ಹೋಲಿಸಿದರೆ ಶೇ 20ರಷ್ಟು ಕಡಿಮೆ ಇಂಧನ ಬಳಕೆ, ನಿರ್ವಹಣಾ ವೆಚ್ಚ ಶೇ 26ರಷ್ಟು ಕಡಿಮೆ, 16 ಸಾವಿರ ಕಿ. ಮೀ ದೂರದ ಅಂತರವನ್ನು ನಿಲುಗಡೆ ರಹಿತವಾಗಿ ಕ್ರಮಿಸುವ ಸಾಮರ್ಥ್ಯ ಮುಂತಾದವು ಇದರ ವಿಶೇಷತೆಗಳಾಗಿವೆ.

ಸದ್ಯಕ್ಕೆ ಏರ್ ಇಂಡಿಯಾ- ದೂರ ಅಂತರದ ಮಾರ್ಗಗಳಿಗೆ ಬಳಸುವ ವಿಮಾನಗಳನ್ನು ಕಡಿಮೆ ಅಂತರದ ಮಾರ್ಗಗಳಿಗೆ ಬಳಸುತ್ತಿದೆ. ಇದು ಕೂಡ ನಷ್ಟಕ್ಕೆ ಒಂದು ಕಾರಣವಾಗಿದೆ. ಸಂಸ್ಥೆಯು ಸರಕುಗಳ ಸಾಗಾಣಿಕೆಗೆ ಪ್ರತ್ಯೇಕ ವಿಭಾಗ ಆರಂಭಿಸುವ ಆಲೋಚನೆಯಲ್ಲಿದ್ದು, ಈ ಉದ್ದೇಶಕ್ಕೆ `ಡ್ರೀಮ್‌ಲೈನರ್' ಬಳಸಿದರೆ ವರಮಾನ ಹೆಚ್ಚುವ ಸಾಧ್ಯತೆಗಳಿವೆ.

ಒಟ್ಟು 27 `ಬೋಯಿಂಗ್ 787' ವಿಮಾನಗಳ ಖರೀದಿಗೆ ಏರ್ ಇಂಡಿಯಾ 2006ರಲ್ಲಿ ಮುಂದಾಗಿತ್ತು. ಇದುವರೆಗೆ ಕೇವಲ 6 ವಿಮಾನಗಳನ್ನು ಮಾತ್ರ ಪೂರೈಸಲಾಗಿದೆ. ಮುಂಬರುವ ವರ್ಷಗಳಲ್ಲಿ ಉಳಿದ ವಿಮಾನಗಳು ಸೇರ್ಪಡೆಯಾಗಲಿವೆ.

ವಿಮಾನದ ವಿದ್ಯುನ್ಮಾನ ವ್ಯವಸ್ಥೆ ಮತ್ತು ಬ್ಯಾಟರಿಯಲ್ಲಿನ ದೋಷಗಳನ್ನು ಸುರಕ್ಷತಾ ಪರಿಣತರು ಪರೀಕ್ಷಿಸುತ್ತಿದ್ದು, ಅವರು ಹಸಿರು ನಿಶಾನೆ ತೋರಿಸುವವರೆಗೆ ಮತ್ತು ಅಮೆರಿಕದ ವಿಮಾನಯಾನ ನಿಯಂತ್ರಣ ಸಂಸ್ಥೆಯು (Federal Aviation Administration - FAA)ಅನುಮತಿ ನೀಡುವವರೆಗೆ  ಈ ವಿಮಾನಗಳು ಮತ್ತೆ ಹಾರಾಟ ನಡೆಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT