ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಡ್ರೋಣ್ ದಾಳಿ ಗೋಪ್ಯ ಒಪ್ಪಂದ ನಿಜ'

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ):  ಭಯೋತ್ಪಾದಕರ ಅಡಗುತಾಣದ ಮೇಲೆ ಸಿಐಎ ಡ್ರೋಣ್ ದಾಳಿ ನಡೆಸುವುದಕ್ಕೆ ಸಂಬಂಧಿಸಿದಂತೆ ತಾವು ಅಧಿಕಾರದಲ್ಲಿ ಇದ್ದಾಗ ಅಮೆರಿಕದ ಜತೆ ಗೋಪ್ಯ ಒಪ್ಪಂದ ಮಾಡಿಕೊಂಡಿದ್ದು ನಿಜ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ.

ಈ ರೀತಿ ರಹಸ್ಯ ಒಪ್ಪಂದ ಮಾಡಿಕೊಂಡಿದ್ದನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ಪಾಕಿಸ್ತಾನದ ಮೊದಲ ಉನ್ನತ ವ್ಯಕ್ತಿ ಮುಷರಫ್ ಆಗಿದ್ದಾರೆ.

ಒಪ್ಪಂದದಲ್ಲಿ ಡ್ರೋಣ್ ದಾಳಿಗೆ ಮುಕ್ತ ಅವಕಾಶ ನೀಡಿರಲಿಲ್ಲ. ಭಯೋತ್ಪಾದಕರ ಮೇಲೆ ನೇರ ದಾಳಿ ಮಾಡಲು ಸಾಧ್ಯವಾಗದಂತಹ ಅಡಗುತಾಣಗಳ ಮೆಲೆ ಡ್ರೋಣ್ ನೆರವಿನಿಂದ ಕ್ಷಿಪಣಿ ದಾಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು, ದಾಳಿ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ವಿಶೇಷ ಪಡೆಗಳು ಮತ್ತು ಸೇನಾ ಪಡೆಗಳು ತತ್‌ಕ್ಷಣಕ್ಕೆ ದಾಳಿ ಮಾಡಲು ಸಾಧ್ಯವಾಗದಂತಹ ಅಡಗುತಾಣಗಳ ಮೇಲೆ ದಾಳಿ ಮಾಡುವುದಕ್ಕೆ ಸಂಬಂಧಿಸಿದ ಈ ಒಪ್ಪಂದಕ್ಕೆ ಸೇನೆಯ ಗುಪ್ತಚರ ವಿಭಾಗದ ಒಪ್ಪಿಗೆ ಇತ್ತು ಎಂದೂ ಮುಷರಫ್ ಹೇಳಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ಡ್ರೋಣ್ ದಾಳಿ ನಡೆದಿತ್ತು ಎಂದು ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಡು ವೈರಿಗಳು ಕ್ಲಿಷ್ಟಕರವಾದ ಪರ್ವತ ಪ್ರದೇಶಗಳಲ್ಲಿ ಅವಿತು ಕುಳಿತಿರುವಾಗ ತತ್‌ಕ್ಷಣ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕ್ಷಿಪಣಿ ದಾಳಿ ನಡೆಸಿ ಭಯೋತ್ಪಾದಕರ ನೆಲೆಯನ್ನು ನಾಶಪಡಿಸಬೇಕಾಗುತ್ತದೆ. ಅದಕ್ಕಾಗಿ ಡ್ರೋಣ್ ದಾಳಿಗೆ ಅನುಮತಿ ನೀಡಲಾಗಿತ್ತು ಎಂದು ಮುಷರಫ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕ್ಷಿಪಣಿ ದಾಳಿಯೊಂದರಲ್ಲಿ ಅಲ್ ಖೈದಾ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ ಬುಡಕಟ್ಟು ಪ್ರದೇಶದ ಯುದ್ಧದಾಹಿ ನೇಕ್ ಮೊಹಮದ್‌ನ ಹತ್ಯೆಯಾಗಿತ್ತು ಎಂಬುದನ್ನೂ ಅವರು ತಿಳಿಸಿದ್ದಾರೆ.

ಮುಷರಫ್ ಅವರು ಮೊದಲೆಲ್ಲ ಡ್ರೋನ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಹೇಳುತ್ತಿದ್ದರು. ಇದೇ ಮೊದಲ ಬಾರಿಗೆ ಡ್ರೋಣ್ ದಾಳಿಗೆ ಅಧಿಕೃತವಾಗಿ ಒಪ್ಪಿಗೆ ನೀಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಡ್ರೋಣ್ ದಾಳಿಯು ಉಗ್ರರ ವಿರುದ್ಧ ನಡೆಯುತ್ತಿರುವ ಸಮರದ ಯಶಸ್ಸಿಗೆ ತೊಡರುಗಾಲಾಗಿದ್ದು, ರಾಷ್ಟ್ರದ ಸಾರ್ವಭೌಮತ್ವದ ಉಲ್ಲಂಘನೆ ಎಂದೆಲ್ಲಾ ಪಾಕಿಸ್ತಾನದ ವಿದೇಶಾಂಗ ಕಚೇರಿ ಮೂಲಗಳು ಟೀಕಿಸುತ್ತಿದ್ದವು.

2004ರಲ್ಲಿ ಅಲ್ ಖೈದಾ ಭಯೋತ್ಪಾದಕರು, ತಾಲಿಬಾನ್ ಉಗ್ರರು ಸೇರಿದಂತೆ ಡ್ರೋಣ್ ದಾಳಿಯಿಂದ ನೂರಾರು ಜನರು ಸತ್ತಿದ್ದಾರೆ. ಜತೆಗೆ, ಡ್ರೋಣ್ ದಾಳಿಗಳಿಂದಾಗಿ ಅನೇಕ ನಾಗರಿಕರೂ ಸತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳು ಆಪಾದಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT