ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢಾಕಾ: ಅವಶೇಷಗಳ ಅಡಿ 100 ಮಂದಿ ಸಮಾಧಿ

ಕುಸಿದ ಬಹುಮಹಡಿ ಕಟ್ಟಡ: 800ಕ್ಕೂ ಹೆಚ್ಚು ಜನರಿಗೆ ಗಾಯ
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಢಾಕಾ (ಐಎಎನ್‌ಎಸ್): ಇಲ್ಲಿನ ಹೊರವಲಯದಲ್ಲಿರುವ ಬಹುಮಹಡಿ ವಾಣಿಜ್ಯ ಕಟ್ಟಡ ಸಂಕೀರ್ಣವೊಂದು ಬುಧವಾರ ಬೆಳಿಗ್ಗೆ 9 ಗಂಟೆಗೆ (ಸ್ಥಳೀಯ ಕಾಲಮಾನ) ಕುಸಿದುಬಿದ್ದು ಕನಿಷ್ಠ 100 ಜನ ಸಮಾಧಿಯಾಗಿದ್ದು, 800ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸದಾ ಜನಜಂಗುಳಿಯಿಂದ ತುಂಬಿರುವ ಸವರ್ ಪ್ರದೇಶದ ಎಂಟು ಅಂತಸ್ತುಗಳ `ರಾಣಾ ಪ್ಲಾಜಾ' ಎಂಬ ಈ ವಾಣಿಜ್ಯ ಕಟ್ಟಡದಲ್ಲಿ 300ಕ್ಕೂ ಹೆಚ್ಚು ಅಂಗಡಿಗಳು, ಬ್ಯಾಂಕ್ ಕಚೇರಿಗಳು, ಸಿದ್ಧ ಉಡುಪು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.  

ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು ಅವಶೇಷಗಳ ಅಡಿ ಸಿಲುಕಿರುವ ಗಾಯಾಳುಗಳನ್ನು ಹೊರ ತೆಗೆಯಲಾಗುತ್ತಿದೆ. ಇದುವರೆಗೂ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವಶೇಷಗಳ ಅಡಿ ಇನ್ನೂ ನೂರಾರು ಜನರು ಸಿಲುಕಿರುವ ಶಂಕೆ ಇದೆ. ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸೇನೆ, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಜತೆ ಸ್ಥಳೀಯರು ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿರುವ ಕಾರಣ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.

ಎಂಟು ವರ್ಷಗಳ ಹಿಂದೆ (2005) ಇದೇ ಸವರ್ ಪ್ರದೇಶದಲ್ಲಿ ಸಿದ್ಧ ಉಡುಪು ಕಾರ್ಖಾನೆ ಕಟ್ಟಡ ಕುಸಿದು 70 ಕಾರ್ಮಿಕರು ಸಾವಿಗೀಡಾಗಿದ್ದರು. ಬಾಂಗ್ಲಾದೇಶದಲ್ಲಿ ಸಿದ್ಧ ಉಡುಪು ಕೈಗಾರಿಕೆಗಳಿಗೆ ಭಾರಿ ಬೇಡಿಕೆ ಇದ್ದು ನೂರಾರು ಸಂಖ್ಯೆಯಲ್ಲಿ ನಾಯಿಕೊಡೆಗಳಂತೆ ಕಾರ್ಖಾನೆಗಳು ತಲೆ ಎತ್ತಿವೆ. ಕಳೆದ ನವೆಂಬರ್‌ನಲ್ಲಿ ಇಲ್ಲಿಗೆ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಸಿದ್ಧ ಉಡುಪು ಕಾರ್ಖಾನೆಗೆ ಬೆಂಕಿ ತಗುಲಿ 112 ಕಾರ್ಮಿಕರು ಜೀವಂತವಾಗಿ ಸುಟ್ಟು ಕರಕಲಾಗಿದ್ದರು.

ಬಹುತೇಕ ವಾಣಿಜ್ಯ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಕಟ್ಟಡ ಕುಸಿತ ಇಲ್ಲಿ ಸಾಮಾನ್ಯ. ನಿರ್ಮಾಣ ಸಂಸ್ಥೆ ಮತ್ತು ವ್ಯಕ್ತಿಗಳು ಸುಲಭವಾಗಿ  ಮಾರ್ಗಸೂಚಿಗಳನ್ನು ಉಲ್ಲಂಘಿ ಕಟ್ಟಡ ನಿರ್ಮಿಸುವುದು ಇಲ್ಲಿ ಸಾಮಾನ್ಯ.

ಕುಸಿತದ ಮುನ್ಸೂಚನೆ

ಮಂಗಳವಾರವೇ ಕಟ್ಟಡದಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡಿದ್ದರೂ ಜನರನ್ನು ಸ್ಥಳಾಂತರಗೊಳಿಸುವ ಕುರಿತು ಮುಂಜಾಗ್ರತೆ ತೆಗೆದುಕೊಂಡಿರಲಿಲ್ಲ. ಕಾರ್ಖಾನೆ ವ್ಯವಸ್ಥಾಪಕರ ಒತ್ತಾಯದ ಮೇರೆಗೆ ಕೆಲಸಕ್ಕೆ ಹಾಜರಾಗಿದ್ದಾಗಿ  ಕಾರ್ಮಿಕರು ಆರೋಪಿಸಿದ್ದಾರೆ. ಕಳಪೆ ಮಟ್ಟದ ಕಟ್ಟಡ ನಿರ್ಮಾಣ ಕಾಮಗಾರಿ ಈ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT