ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗಳು ಬಿಸಿಯೂಟದ ಸುತ್ತ ಅನುಮಾನ:ಶಾಲೆಯಲ್ಲಿ ವೈದ್ಯರ ಮೊಕ್ಕಾಂ

Last Updated 11 ಜುಲೈ 2012, 8:00 IST
ಅಕ್ಷರ ಗಾತ್ರ

ಕೋಲಾರ: ಹಲವು ಮಕ್ಕಳು ಅಸ್ವಸ್ಥರಾಗಲು ಮತ್ತು ಇಬ್ಬರ ಸ್ಥಿತಿ ಗಂಭೀರಗೊಳ್ಳಲು ಕಾರಣವಾಗಿರುವ ತಾಲ್ಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ `ತಂಗಳು~ ಬಿಸಿಯೂಟ ಹಲವು ಅನುಮಾನಗಳಿಗೆ ಈಡಾಗಿದೆ. ಘಟನೆ ಹಿನ್ನೆಲೆಯಲ್ಲಿ ಒಬ್ಬ ವೈದ್ಯರೂ ಸೇರಿದಂತೆ ಆರು ವೈದ್ಯಕೀಯ ಸಿಬ್ಬಂದಿ ಮತ್ತು ಒಂದು ಅಂಬುಲೆನ್ಸ್ ಶಾಲೆಯಲ್ಲಿ ಮೊಕ್ಕಾಂ ಹೂಡುವಂತೆ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ ಚಿತ್ರಾನ್ನ ಸೇವಿಸಿದ ಒಂದು ಗಂಟೆ ಬಳಿಕ ಮಕ್ಕಳು ವಾಂತಿ ಮಾಡಲಾರಂಭಿದರು ಮತ್ತು ಅಸ್ವಸ್ಥಗೊಂಡರು ಎಂಬ ಮಾಹಿತಿ ಮೇರೆಗೆ ಅಲ್ಲಿನ ನೀರು, ಅಡುಗೆಗೆ ಬಳಸಿದ ಎಣ್ಣೆ ಹಾಗೂ ಚಿತ್ರಾನ್ನವನ್ನು ತಪಾಸಣೆಗೆ ಪಡೆಯಲು ಹೋದ ವೈದ್ಯ ಸಿಬ್ಬಂದಿಗೆ ನೀರು ಮತ್ತು ಎಣ್ಣೆ ಮಾತ್ರ  ದೊರೆತಿದೆ. ಆದರೆ ಮಕ್ಕಳಿಗೆ ಬಡಿಸಲಾದ ಚಿತ್ರಾನ್ನದ ಪಾತ್ರೆಗಳನ್ನು ತೊಳೆದಿಟ್ಟಿದ್ದರಿಂದ ಆಹಾರದ ಮಾದರಿ ದೊರೆಯಲಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಚಿತ್ರಾನ್ನ ಸೇವಿಸಿದ ಬಳಿಕವೇ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅದರಲ್ಲಿ ಏನಿತ್ತು ಎಂಬುದನ್ನು ಪರಿಶೀಲಿಸಬೇಕು. ಆದರೆ ಪದಾರ್ಥದ ಮಾದರಿ ದೊರೆತಿಲ್ಲ. ಹೀಗಾಗಿ ಮಕ್ಕಳ ಅಸ್ವಸ್ಥತೆಯ ಸ್ಪಷ್ಟ ಕಾರಣವನ್ನು ಪತ್ತೆ ಹಚ್ಚುವುದು ಸುಲಭ ಸಾಧ್ಯವಲ್ಲ. ಎರಡು ಮಾದರಿಗಳನ್ನು ಜಿಲ್ಲಾ ಸರ್ವೇಕ್ಷಣಾಲಾಯಕ್ಕೆ ಕಳುಹಿಸಲಾಗಿದೆ  ಎಂದರು.

ಮೊಕ್ಕಾಂ: ಇಬ್ಬರು ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು ಹೆಚ್ಚಾದ ಪರಿಣಾಮ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಶಾಲೆಯಲ್ಲಿ ಒಬ್ಬ ವೈದ್ಯರು, ಇಬ್ಬರು ಸ್ಟಾಫ್ ನರ್ಸ್‌ಗಳು, ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ಅವರು ರಾತ್ರಿ ಶಾಲೆಯಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ. ಅವರೊಂದಿಗೆ ಇಬ್ಬರು  ಶಿಕ್ಷಕರನ್ನೂ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಂಗಳು: ಮಧ್ಯಾಹ್ನದ ಬಿಸಿಯೂಟವನ್ನು ಬಿಸಿಯಾಗಿ ನೀಡುವ ಬದಲು ಸಿಬ್ಬಂದಿ ಬೆಳಿಗ್ಗೆಯೇ ತಯಾರಿಸಿ ತಂಗಳನ್ನು ಬಡಿಸುತ್ತಿದ್ದರು ಎಂದು ಕೆಲವು ಪೋಷಕರು ಜಿಲ್ಲಾ ಆಸ್ಪತ್ರೆಯಲ್ಲಿ ಶಿಕ್ಷಣಾಧಿಕಾರಿಗಳ ಮುಂದೆಯೇ ಆರೋಪಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 11ರ ವೇಳೆಗೆ ಚಿತ್ರಾನ್ನ ಸಿದ್ಧಪಡಿಸಲಾಗಿತ್ತು ಎಂದು ಕೆಲವರು ಆರೋಪಿಸಿದರೆ, ಇನ್ನೂ ಕೆಲವರು 9ರ ವೇಳೆಗೆ ಸಿದ್ಧಪಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಮುಚ್ಚಿಟ್ಟ ಪದಾರ್ಥದಲ್ಲಿ ಅನಾರೋಗ್ಯಕಾರಿ ಅಂಶಗಳು ಸೇರಿಕೊಳ್ಳದಂತೆ ಸಿಬ್ಬಂದಿ ಎಚ್ಚರಿಕೆ ವಹಿಸಿಲ್ಲ ಎಂದೂ ಪೋಷಕರು ಆರೋಪಿಸಿದ್ದಾರೆ.

ಪರಿಶೀಲಿಸಿ ಕ್ರಮ: ಪ್ರಸ್ತುತ ಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಅಡುಗೆ ಸಿಬ್ಬಂದಿ ಬೆಳಿಗ್ಗೆಯೇ ಚಿತ್ರಾನ್ನ ಸಿದ್ಧಪಡಿಸಿದ್ದರು ಎಂದು ತಿಳಿದುಬಂದಿದೆ. ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು  ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಉಮಾದೇವಿ ತಿಳಿಸಿದ್ದಾರೆ.

ಮುಖ್ಯಶಿಕ್ಷಕರು ಜಾಗರೂಕತೆ ವಹಿಸಬೇಕಾಗಿತ್ತು. ಖಾಸಗಿ ಕಾರ್ಯಕ್ರಮದ ನಿಮಿತ್ತ ಅಡುಗೆ ಸಿಬ್ಬಂದಿ ಬೆಳಿಗ್ಗೆಯೇ ಅಡುಗೆ ಸಿದ್ಧಪಡಿಸುವ ಅಗತ್ಯವಿರಲಿಲ್ಲ. ಬೆಳಿಗ್ಗೆಯೇ ಅಡುಗೆ ಮಾಡಲು ಸಿಬ್ಬಂದಿಗೆ ಮುಖ್ಯಶಿಕ್ಷಕರು ಅನುಮತಿ ನೀಡಬಾರದಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT