ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಂತ್ರಜ್ಞಾನದಿಂದಲೂ ಭಾಷೆ ಉಳಿಯಲಿ'

ಮೂಡಿಗೆರೆ: 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
Last Updated 19 ಜನವರಿ 2013, 10:46 IST
ಅಕ್ಷರ ಗಾತ್ರ

ಪೂರ್ಣಚಂದ್ರ ತೇಜಸ್ವಿ ವೇದಿಕೆ (ಮೂಡಿಗೆರೆ): ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ತಂತ್ರಾಂಶ ಬಳಕೆಯಾದರೆ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ ಎಂದು ಮೈಸೂರಿನ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಹೇಳಿದರು. ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಸಮಾರೋಪ ಭಾಷಣವನ್ನು ಅವರು ಮಾಡಿದರು. 

ತಂತ್ರಜ್ಞಾನದ ಬೆಳವಣಿಗೆಯಿಂದ ಭಾಷೆಗಳು ನಶಿಸುತ್ತಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ ಆದರೆ ತಂತ್ರಜ್ನಾನ ಬಳಕೆಯಿಂದ ಭಾಷೆ ನಶಿಸದೇ ಪುನರ್‌ಸೃಷ್ಟಿಯಾಗುತ್ತದೆ. ಈಗ ತಂತ್ರಜ್ಞಾನದ ಬಳಕೆಯಿಂದ ಕನ್ನಡಕ್ಕೆ ಹಿನ್ನೆಡೆಯಾಗುತ್ತಿರುವುದು ಕನ್ನಡದ ತಂತ್ರಾಂಶದ ಕೊರತೆಯಿಂದ. ಅದಕ್ಕಾಗಿ ಕನ್ನಡದ ತಂತ್ರಂಶ ಬಳಕೆಗೆ ಬಂದರೆ ಮಾತ್ರ ಕನ್ನಡ ಭಾಷೆಗೆ ಪೈಪೋಟಿಯಾಗಿರುವ ಆಂಗ್ಲ ಭಾಷೆಯನ್ನು ಹಿಂದಿಕ್ಕಲು ಸಾಧ್ಯ ಎಂದರು.

ಮಲೆನಾಡಿನ ವಿವಿಧ ಭಾಗಗಳಲ್ಲಿ ಕುವೆಂಪು ಅವರಿಗಿಂತಲೂ ತೇಜಸ್ವಿ ಅವರ ಛಾಯೆಯನ್ನು ಯುವ ಬರಹಗಾರರಲ್ಲಿ ಕಾಣ ಬಹುದು. ಮಾನವತೆಯ ಶಾಸ್ತ್ರಕ್ಕೆ ಮನ್ನಣೆ ಸಿಗದಿದ್ದರೆ ಸಾಹಿತ್ಯದಲ್ಲಿ ಸಮಗ್ರತೆ ಸಾಧ್ಯವಿಲ್ಲ. ಕುವೆಂಪು ಅವರ ಮನುಜಮತ, ವಿಶ್ವ ಪಥದಲ್ಲಿ ರಾಜಕಾರಣದ ಪ್ರವೇಶವನ್ನು ದೂರವಿಟ್ಟಿದ್ದರು. ಕುವೆಂಪು ಅವರ ಮನುಜ ಮತವನ್ನು ನವ್ಯ ಬರಹಗಾರರು ವಕ್ರ ದೃಷ್ಟಿಯಿಂದ ನೋಡಿದರಾದರೂ, ಇಂದು ಮನುಜ ಮತವೇ ಉತ್ತುಂಗದಲ್ಲಿದೆ ಎಂದರು.

ಕನ್ನಡದ ಉಳಿವು ಆಡು ಭಾಷೆಯೊಂದಿಗೆ ಸಂಬಂಧ ಹೊಂದಿದ್ದು, ಆಡು ಭಾಷೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸಿಕೊಳ್ಳದೇ ಚಲನಶೀಲಗೊಳಿಸಿ ಭಧ್ರಪಡಿಸಿಕೊಳ್ಳಬೇಕು ಎಂದರು.

`ಮಾತೃಭಾಷಾ ಶಿಕ್ಷಣ ಆದ್ಯತೆಯಾಗಲಿ'
ಸಾಹಿತ್ಯ ವ್ಯಕ್ತಿಯನ್ನು ಮಾನವನನ್ನಾಗಿ ರೂಪಿಸುವ ಶಕ್ತಿ ಹೊಂದಿದೆ ಎಂದು ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಪ್ರಾಂಶುಪಾಲ ಸಿ.ಕೆ. ಸುಬ್ಬರಾಯ ಅಭಿಪ್ರಾಯಪಟ್ಟರು.

ಪಟ್ಟಣದ ಅಡ್ಯಂತಾಯ ರಂಗಮಂದಿರದ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ನಡೆದ ಕಸಾಪ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಂತ್ರಿಕ, ವೈದ್ಯಕೀಯ ವಿಷಯಗಳನ್ನೂ ಒಳಗೊಂಡಂತೆ ಎಲ್ಲಾ ವಿಷಯಗಳನ್ನು ಮಾತೃಭಾಷೆಯಲ್ಲಿಯೇ ನೀಡುವಂತಹ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಕ್ಷೇತ್ರದಲ್ಲಿರುವ ಯುವ ಬರಹಗಾರರಿಗೆ ವೇದಿಕೆಯಾಗಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ನಾನಾ ಮೂಲೆಗಳಲ್ಲಿರುವ ಸಾಹಿತ್ಯ ಸಂಪನ್ಮೂಲ ವ್ಯಕ್ತಿಗಳ ಸಮ್ಮಿಲ ನವಾಗಿ ಹೊಸ ವಿಚಾರಗಳು ಹೊರ ಹೊಮ್ಮಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಹಳೆಕೋಟೆ ರಮೇಶ್ ಅವರಿಗೆ ಸಮ್ಮೇಳನದಲ್ಲಿ ನೀಡುವ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಸಮಾರೋಪ ನುಡಿಗಳನ್ನಾಡಿದರು. ಶಾಸಕ ಎಂ.ಪಿ. ಕುಮಾರಸ್ವಾಮಿ, ರಾಜ್ಯ ಅರಣ್ಯ ಮತ್ತು ವಸತಿ ವಿಹಾರಧಾಮ ನಿಗಮದ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ಗೌರಮ್ಮ ಬಸವೇಗೌಡ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಎಚ್.ಎಂ. ನಾಗರಾಜ್‌ರಾವ್, ಕಸಾಪ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮುಂತಾದವರಿದ್ದರು.

ಉದಯೋನ್ಮುಖ ಕವಿಗೋಷ್ಠಿ 
ಸಮ್ಮೇಳನದ ಅಂತಿಮ ದಿನ ನಡೆದ ಕವಿಗೋಷ್ಠಿಯಲ್ಲಿ ವಿವಿಧ ವಿಷಯಗಳ ಮೇಲೆ ಉದಯೋನ್ಮುಖ ಕವಿಗಳು ತಮ್ಮ ಕವನ ವಾಚಿಸಿದರು.

ಇತ್ತೀಚೆಗೆ ನಡೆದ ದೆಹಲಿ ಅತ್ಯಾಚಾರ ಪ್ರಕರಣದ ವಸ್ತುವನ್ನು ಒಳಗೊಂಡ ತರೀಕೆರೆಯ ದಾದಾಪೀರ್ ಅವರ ಕವನ, ಮೀನಾಕ್ಷಿ ಕಾಂತರಾಜ್ ಅವರ ಅಂಗವಿಕಲತೆಯ ಬಗೆಗಿನ ವಸ್ತುವನ್ನೊಳಗೊಂಡ ಕವನ, ಅಲ್ಲದೇ ನಾಡಿನ ನೆಲ, ಜಲ, ಭಾಷೆ, ಜನಾಂಗಕ್ಕೆ ಒತ್ತುಕೊಟ್ಟು ರಚನೆಯಾಗಿದ್ದ ಕವನಗಳು ಕೇಳುಗರನ್ನು ಮನಸೂರೆಗೊಳಿಸಿದವು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ಎಸ್. ಜಯಪ್ಪಗೌಡ ವಹಿಸಿದ್ದರು. ಕಸಾಪ ಕೋಶಾಧ್ಯಕ್ಷ ನೆ.ಲ. ಸುಬ್ರಮಣ್ಯ, ಸಾಹಿತಿ ಗೌ.ರು. ಓಂಕಾರಯ್ಯ, ಭಗವಾನ್, ಶೃಂಗೇರಿ ಶಿವಣ್ಣ, ಹಾ.ಬಾ. ನಾಗೇಶ್, ಬೆಟ್ಟಗೆರೆ ಸಂಪತ್, ನಾಗರಾಜ್ ಮುಂತಾದವರಿದ್ದರು.

ಬಿಲ್ಲವ ವೇದಿಕೆ ಭೋಜನ: ಮೂರು ದಿನಗಳಿಂದ ನಡೆದ  ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಸಾಹಿತ್ಯಾಸಕ್ತರಿಗೂ ತಾಲ್ಲೂಕು ಬಿಲ್ಲವ ಯುವ ವೇದಿಕೆಯ ನೇತೃತ್ವದ ಪಡೆ ಯಶಸ್ವಿ ಭೋಜನ ವ್ಯವಸ್ಥೆ ಮಾಡಿತ್ತು. ಭೋಜನಾ ವ್ಯವಸ್ಥೆಯನ್ನು ತಾಲ್ಲೂಕು ಬಿಲ್ಲವ ಯುವ ವೇದಿಕೆಗೆ ಕಲ್ಪಿಸಿಕೊಡಲಾಗಿತ್ತು. 40 ಕ್ಕೂ ಹೆಚ್ಚು ಕಾರ್ಯಕರ್ತರು  ಭೋಜನ ವ್ಯವಸ್ಥೆ  ಮಾಡಿದರು.

ಸಮ್ಮೇಳನ ನಿರ್ಣಯಗಳು
1. ಲಕ್ಷ್ಮೀಶನ ಜನ್ಮ ಸ್ಥಳ ಕಡೂರಿನ ದೇವನೂರು ಮತ್ತು ಎಸ್.ವಿ. ಪರಮೇಶ್ವರ ಭಟ್ಟರ ಅಂಕಿತವಾದ ವಿದ್ಯಾರಣ್ಯಪುರದ ಸದಾಶಿವ ದೇವಸ್ಥಾನ ಇರುವ ಜಾಗವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಕವಿಗಳ ಸ್ಮಾರಕ ನಿರ್ಮಿಸಿ, ಪ್ರತಿ ವರ್ಷ ಕಾರ್ಯಕ್ರಮ ನಡೆಸಬೇಕು. ಮತ್ತು ಕುವೆಂಪು ಪ್ರತಿಷ್ಠಾನದಂತೆ ತೇಜಸ್ವಿ ಪ್ರತಿಷ್ಠಾನಕ್ಕೂ ಆದ್ಯತೆ ನೀಡಿ 30 ಎಕರೆ ಭೂಮಿ ನೀಡಬೇಕು.

2. ಸ್ತ್ರೀ ಸಂವೇದನೆಗೆ ಸ್ಪಂದಿಸಿ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರದಂತಹ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮಹಿಳಾ ತ್ವರಿತ ನ್ಯಾಯಾಲಯ ಸ್ಥಾಪನೆಯಾಗಬೇಕು.

3. ತೇಜಸ್ವಿಯವರ ಆಶಯದಂತೆ ಪರಿಸರ ಮತ್ತು ಕಾಡು ಪ್ರಾಣಿ - ಪಕ್ಷಿಗಳ ಸಂರಕ್ಷಣೆಗಾಗಿ ಒತ್ತು ನೀಡಬೇಕು. ಹುಲಿ ಯೋಜನೆಯನ್ನು ಕೈಬಿಡಬೇಕು.

4. ತಾಲ್ಲೂಕಿನ ಕಳಸ ಹೋಬಳಿಯಲ್ಲಿ ಸಾವಿರಾರು ವರ್ಷಗಳಿಂದ ವಾಸವಾಗಿರುವ ರೈತರನ್ನು ಇನಾಂ ಭೂಮಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು. ಇನಾಂ ಭೂಮಿ ಕಾಯ್ದೆಯನ್ನು ರದ್ದುಗೊಳಿಸಬೇಕು.

5. ಜಿಲ್ಲೆಯ ಡಾ. ಅಂಬಳೆ ಕೃಷ್ಣಶಾಸ್ತ್ರಿಗಳ ಹುಟ್ಟುರಾದ ಅಂಬಳೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಮಾರಕ ಭವನದ ಕಾಮಗಾರಿ ನೆನೆಗುದ್ದಿಗೆ ಬಿದ್ದಿದ್ದು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು, ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು.

6. ಪರಿಸರ ಸಂರಕ್ಷಣೆಗೆ ಸವಾಲಾಗಿರುವ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಬೇಕು. ಇದರಿಂದ ನದಿಯ ಒಡಲು ಬತ್ತಿಹೋಗುತ್ತಿರುವುದನ್ನು ತಡೆಯಬೇಕು.

7. ಹೊಯ್ಸಳರ ಮೂಲ ಸ್ಥಾನವಾದ ಮೂಡಿಗೆರೆ ತಾಲ್ಲೂಕಿನ ಅಂಗಡಿ ಕ್ಷೇತ್ರದಲ್ಲಿ ಹಂಪಿ ಉತ್ಸವದ ಮಾದರಿಯಲ್ಲಿ ಹೊಯ್ಸಳ ಸಿರಿ ಉತ್ಸವವನ್ನು ಮೂಡಿಗೆರೆ ಪಟ್ಟಣದಲ್ಲಿ ಪ್ರತಿ ವರ್ಷ ಶಾಶ್ವತ ಕಾರ್ಯಕ್ರಮವಾಗಿ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT