ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ತಿದ್ದಿದ ಪ್ರತಿಭೆ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಟ ಲೋಕೇಶ್ ತಮ್ಮ ಕೊನೆಗಾಲದಲ್ಲಿ ಟೀವಿ ಮುಂದೆ ಕೂತು ತಮ್ಮ ಕುಟುಂಬದ ಎಲ್ಲಾ ಕಲಾವಿದರನ್ನು ಕುರಿತು ಮುಕ್ತವಾಗಿ ವಿಮರ್ಶೆ ಮಾಡುತ್ತಿದ್ದರು. ನಟನೆಯಲ್ಲಿ ತಮ್ಮ ಮಗಳಿಗೆ ಪತ್ನಿಗಿಂತ ಹೆಚ್ಚು ಅಂಕ ಕೊಡುತ್ತೇನೆಂದು ಹೇಳಿದ್ದ ಅವರಿಗೆ ಆಗ ಮಗ ನಟನಾಗಿ ಅಷ್ಟೇನೂ ರುಚಿಸಿರಲಿಲ್ಲ.

ಆದರೆ, ಈಗ ಅವರ ಮಗ ಸೃಜನ್ ಟೀವಿ ನಿರೂಪಣೆಯಲ್ಲಿ ಲವಲವಿಕೆ ತೋರುವುದರ ಮೂಲಕ ಅಪ್ಪನಿಗೆ ತಕ್ಕ ಮಗ ಎನ್ನಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ಆಗೀಗ ಬಣ್ಣಹಚ್ಚುತ್ತಿರುವ ಸೃಜನ್ ಮೊನ್ನೆಮೊನ್ನೆ  ಮನಬಿಚ್ಚಿ ಮಾತಾಡಿದರು.

`ಹಿರಿಯರು ಸಾಗಿದ ಹಾದಿಯಲ್ಲೇ ಸಾಗುತ್ತಿದ್ದೇನೆ. ಬಣ್ಣದ ಲೋಕದಲ್ಲಿ ಅವರೊಂದು ಗುರಿ ಸಾಧಿಸಿದವರು. ಕನಸನ್ನು ಬಿತ್ತಿದವರು. ಬದುಕು ಕಟ್ಟಿದವರು. ಬೆಳೆಸಿದವರು.

ನಾನವರ ವರ್ತಮಾನದ ಪ್ರತಿನಿಧಿಯಷ್ಟೆ. ಆದರೆ ಅವರ ಹೆಸರಿನ ನೆರಳಿನಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲ. ನನಗೆ ನನ್ನದೇ ಆದ ಐಡೆಂಟಿಟಿ ಬೇಕೆಂಬ ತುಡಿತವಿದೆ. ಅವರು ನನ್ನಲ್ಲಿ ಬಯಸಿದ್ದು, ಬೆಳೆಸಿದ್ದು ಅದೇ ಗುಣವನ್ನು. ಅದು ಸಾಕಾರಗೊಳ್ಳುವ ದಿನಗಳು ಶುರುವಾಗಿದೆ~- ಇದು ಸೃಜನ್ ಲೋಕೇಶ್ ಆತ್ಮವಿಶ್ವಾಸದ ಮಾತು.

ಅಜ್ಜ ಸುಬ್ಬಯ್ಯ ನಾಯ್ಡು, ತಂದೆ ಲೋಕೇಶ್, ತಾಯಿ ಗಿರಿಜಾ ಲೋಕೇಶ್ ಹೆಸರು ಚಿತ್ರರಂಗದಲ್ಲಿ ಶಾಶ್ವತ. ಚಿತ್ರರಂಗದಲ್ಲಿ ತಾನು ನೆಲೆಯೂರಲು ಈ ಕಲಾಪರಂಪರೆಯೇ ಕಾರಣ.

ಆದರೆ ಜನ ಅವರ ಹೆಸರಿನಿಂದ ನನ್ನನ್ನು ಗುರುತಿಸುವಂತಾಗಬಾರದು ಎನ್ನುವ ಸೃಜನ್ `ಲೋಕೇಶ್ ಮಗ ಸೃಜನ್ ಎಂದು ಜನ ನಿನ್ನನ್ನು ಗುರುತಿಸುವ ಬದಲು, ಸೃಜನ್ ತಂದೆ ಲೋಕೇಶ್ ಎಂದು ಕರೆಯುವಂತಾಗಬೇಕು~ ಎಂದು ತಂದೆ ಹೇಳಿದ್ದ ಮಾತುಗಳನ್ನು ನೆನಪಿನ ಬುತ್ತಿಯಿಂದ ಬಿಚ್ಚಿಡುತ್ತಾರೆ. ಆ್ಯಕ್ಟಿಂಗ್‌ನಿಂದ ಅಡುಗೆ ಮಾಡುವವರೆಗೂ ಎಲ್ಲದಕ್ಕೂ ಅವರಿಗೆ ತಂದೆಯೇ ಗುರು.  
 
`ನೀಲ ಮೇಘ ಶ್ಯಾಮ~ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸೃಜನ್‌ಗೆ ಮುಂದೆ ನಾಯಕರಾಗುವ ಅವಕಾಶ ಸಿಗಲಿಲ್ಲ. ಹಾಗಂತ ಬೆಳ್ಳಿತೆರೆಯಿಂದ ಹಿಂದೆ ಸರಿಯಲಿಲ್ಲ.

ನೆಗೆಟಿವ್ ಪಾತ್ರದ `ನವಗ್ರಹ~ ಹೆಸರು ಮಾಡಿತ್ತು. `ಪೊರ್ಕಿ~ಯಲ್ಲಿ ಸಪೋರ್ಟಿಂಗ್ ರೋಲ್, `ಚಿಂಗಾರಿ~ಯಲ್ಲಿ ಪೊಲೀಸ್, `ಸ್ನೇಹಿತರು~ ಚಿತ್ರದಲ್ಲಿ ಕಾಮಿಡಿ, `ದಿಲ್‌ಕುಶ್~ನಲ್ಲಿ ಕಾಲೇಜ್ ವಿದ್ಯಾರ್ಥಿ...

ಹೀಗೆ ತಾವು ಕಾಣಿಸಿಕೊಳ್ಳುತ್ತಿರುವ ವೈವಿಧ್ಯಮಯ ಪಾತ್ರಗಳ ಬಗ್ಗೆ ಸೃಜನ್‌ಗೆ ತೃಪ್ತಿ ಇದೆ. ಮತ್ತೊಮ್ಮೆ ನಾಯಕರಾಗಿ ಬಣ್ಣಹಚ್ಚುವ ಹಂಬಲ ಅವರದು. ಅದಕ್ಕಾಗಿ ಕಥೆಯೂ ಸಿದ್ಧವಾಗಿದೆ. ಆದರೆ ಮುಹೂರ್ತ ಕೂಡಿಬರುತ್ತಿಲ್ಲ. ಇನ್ನೂ ಹೆಸರಿಡದ ಈ ಚಿತ್ರ ಮುಂದಿನ ವರ್ಷ ಸೆಟ್ಟೇರುವುದು ಖಚಿತ ಎನ್ನುತ್ತಾರೆ ಅವರು.

ಚಿತ್ರರಂಗದಲ್ಲಿ ಸಿಗದ ಹೆಸರು ಕೆಲವೇ ತಿಂಗಳಲ್ಲಿ ಕಿರುತೆರೆಯಲ್ಲಿ ಸಿಕ್ಕಿತು ಎಂಬುದು ಸೃಜನ್ ಹೆಮ್ಮೆ. “ಸುವರ್ಣ ವಾಹಿನಿಯಲ್ಲಿ ಅವರು ನಡೆಸಿಕೊಡುತ್ತಿದ್ದ `ಮಜಾ ವಿತ್ ಸೃಜಾ~ ಅಪಾರ ಜನಪ್ರಿಯತೆ ಗಳಿಸಿತು.

ಈ ಕಾರ್ಯಕ್ರಮದ ಮೂಲಕ ನನ್ನನ್ನು ನಾನು ಗುರುತಿಸಿಕೊಳ್ಳುವಂತಾಗಬೇಕೆಂಬ ಆಸೆ ಈಡೇರಿತು. 40-45 ವರ್ಷದಿಂದ ಚಿತ್ರರಂಗದಲ್ಲಿರುವ ಅಮ್ಮನನ್ನು ನನ್ನ ಹೆಸರಿನಿಂದ ಗುರುತಿಸುವ ಮಟ್ಟಕ್ಕೆ ಜನಪ್ರಿಯತೆ ಸಿಕ್ಕಿದೆ” ಎಂದು ಖುಷಿ ಪಡುತ್ತಾರೆ.

ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಎಡರು ತೊಡರುಗಳು ಇದ್ದದ್ದೇ. ಇದೊಂದು ಪಯಣವಿದ್ದಂತೆ. ಹಲವು ಬಾರಿ ಟೈರ್ ಪಂಕ್ಚರ್ ಆಗಿದೆ. ಸರಿ ಮಾಡಿಕೊಂಡು ಸಾಗುತ್ತಿದ್ದೇನೆ ಎನ್ನುವ ಸೃಜನ್‌ರದ್ದು ದೃಢಮನಸ್ಸು.

ಗಟ್ಟಿಯಾಗಿ ನಿಂತು ಯಾವುದೇ ಸನ್ನಿವೇಶವನ್ನು ಎದುರಿಸುವ ಛಾತಿ ಅವರದು. ಇದಕ್ಕೆ ಕೂಡ ತಂದೆಯೇ ಪ್ರೇರಣೆ ಎನ್ನುತ್ತಾರೆ ಅವರು. ಸೃಜನ್ ಪಿಯುಸಿಯಲ್ಲಿ ಇದ್ದಾಗ ಲೋಕೇಶ್ ಮೊದಲ ಬಾರಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಪಕ್ಕದಲ್ಲಿ ಅಳುತ್ತಾ ಕುಳಿತಿದ್ದ ಸೃಜನ್‌ಗೆ, `ಹೀಗೆ ಅಳುತ್ತಾ ಕುಳಿತರೆ ಮುಂದೆ ಕಷ್ಟಗಳು ಬಂದರೆ ಹೇಗೆ ಎದುರಿಸುತ್ತೀಯಾ? ನನಗೆ ಏನಾದರೂ ಆದಾಗ ಅಳುತ್ತಾ ಕುಳಿತರೆ ನನ್ನನ್ನು ಉಳಿಸಿಕೊಳ್ಳಲು ಆಗುವುದಿಲ್ಲ.
 
ಗಟ್ಟಿಯಿದ್ದರೆ ಮಾತ್ರ ಆ ಕ್ಷಣದಲ್ಲಿ ನನ್ನನ್ನು ಉಳಿಸಿಕೊಳ್ಳಲು ಸಾಧ್ಯ~ ಎಂದಿದ್ದರು. `ಮುಂದೆ ಅವರು ಸತ್ತಾಗಲೂ ನಾನು ಅಳಲಿಲ್ಲ. ಅವರ ಇಚ್ಛೆಯಂತೆ ಮೃತದೇಹವನ್ನು ಆಸ್ಪತ್ರೆಗೆ ದಾನ ಮಾಡಿದೆ. ಅವರಿಂದ ಇಬ್ಬರಿಗೆ ಕಣ್ಣು ಬಂದವು~ ಎಂದು ಲೋಕೇಶ್ ನಿಧನರಾದ ದಿನಗಳನ್ನು ನೆನೆಸಿಕೊಳ್ಳುತ್ತಾ ಸೃಜನ್ ಹನಿಗಣ್ಣಾಗುತ್ತಾರೆ.

`ತಂದೆ ಬದುಕಿಗೆ ಆದರ್ಶ. ಅಮ್ಮ ಸರ್ವಸ್ವ~ ಎನ್ನುವ ಸೃಜನ್ ಪಾಲಿಗೆ ಗಿರಿಜಾ ಲೋಕೇಶ್ ಅಮ್ಮ ಮಾತ್ರವಲ್ಲ. ಮಾರ್ಗದರ್ಶಕಿ, ಗೆಳತಿ, ಸಹೋದರಿ ಎಲ್ಲವೂ. ಟೀವಿ ಮತ್ತು ಸಿನಿಮಾಗಳೆರಡೂ ಒಂದನ್ನೊಂದು ಅವಲಂಬಿಸಿರುವ ಮಾಧ್ಯಮಗಳು.

ಇವೆರಡೂ ನಾನು ಪಯಣಿಸುವ ದೋಣಿಗಳು ಎನ್ನುವ ಸೃಜನ್‌ಗೆ ಸಿನಿ ಸಾಗರದ ಪಯಣದಲ್ಲಿ ತಂದೆಯ ಸಾಧನೆಗಳಾಚೆಗಿನ ಗುರಿಮುಟ್ಟುವ ಉತ್ಕಟತೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT