ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ಸಂಜೆಯ ಇಂಪು ರೂಪಕ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಸ್ಸಂಜೆಯ ತಂಪಿನಲ್ಲೂ ಬೆಚ್ಚಗೆ ಮುದುಡಿ ಕುಳಿತಿದ್ದಾಗಲೇ ಸಂಗೀತ ಸುಧೆಯೊಂದು ಕಿವಿಯತ್ತ ಹರಿದು ಬರತೊಡಗಿತ್ತು. ಮತ್ತೆಮತ್ತೆ ಇಂಪು ನೀಡುತ್ತಿದ್ದ ಆ ಮಧುರ ಧ್ವನಿ ಅರಸಿ ಹೊರಟವಳಿಗೆ ರಾಮಾಂಜನೇಯ ದೇವಸ್ಥಾನದಲ್ಲಿ ಯಾವುದೋ ಕಾರ್ಯಕ್ರಮ ಇರುವುದಂತೂ ಪಕ್ಕಾ ಆಯಿತು. ಆದಾಗಲೇ ನಾಲ್ಕಾರು ಧ್ವನಿ ಒಟ್ಟಿಗೇ ಮೇಳೈಸಿ ಸುತ್ತಲೆಲ್ಲಾ ಇಂಪಿನ ತಂಪು.

ಸೊಂಪಾದ ಗಾಳಿಯ ತಂಪಾದ ಸ್ಪರ್ಶಕ್ಕೆ ತೆರೆದುಕೊಂಡಂತಿರುವ ಗುಡಿಯ ಎದುರಿಗಿರುವ ಮರದ ಕೆಳಗೇ ವೇದಿಕೆ. ಎಂದೂ ನೋಡದಂಥ ಸುಂದರ ನೈಸರ್ಗಿಕ ವೇದಿಕೆಯದು.
ಸಂಗೀತದ ಮಾಧುರ್ಯಕ್ಕೆ ಕಿವಿಗೊಟ್ಟು ಹೊರಟವಳಿಗೆ ಅಲ್ಲಿ ಕಾಣಿಸಿದ್ದು ಭರತನಾಟ್ಯ ಮಾಡುತ್ತಿರುವ ಗಣಪ. ಯಾವುದೋ ಭರತನಾಟ್ಯ ಕಾರ್ಯಕ್ರಮವಿರಬೇಕೆನ್ನಿಸಿತು. ಒಂದಾದ ಮೇಲೊಂದರಂತೆ ಪಾತ್ರಗಳು ವೇದಿಕೆಗೆ ಆಗಮಿಸಿದವು. ಪ್ರತೀ ಪಾತ್ರವೂ ನೃತ್ಯದ ತೋಳಲ್ಲೇ. ಅದರಲ್ಲೂ ಭಾರತೀಯರ ಪ್ರೀತಿಯ ಭರತನಾಟ್ಯ ಶೈಲಿಯಲ್ಲಿ. ಅಲ್ಲಲ್ಲಿ ತೆಲುಗು ಮಿಶ್ರಿತ `ಡೈಲಾಗ್~ಗಳು. ಕಂಸನ ಆರ್ಭಟ ಗೋಚರಿಸುತ್ತಿದ್ದಂತೆ ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ್ದ `ಕೃಷ್ಣ ಜನನ, ಕಂಸ ವಧ~ ನೃತ್ಯ ರೂಪಕ ಇದೇ ಇರಬೇಕು ಎಂದುಕೊಂಡೆ.

ಕರ್ನಾಟಕಿ ಸಂಗೀತ, ಭರತನಾಟ್ಯ, ನಾಟಕ ಮೂರೂ ಒಟ್ಟಾಗಿ ಮೇಳೈಸಿದ ಈ ನೃತ್ಯ ರೂಪಕ ಪ್ರದರ್ಶಿಸಿದ್ದು ತಮಿಳುನಾಡಿನ `ಭಾಗವತ ಮೇಳ~. ಇಂಥದ್ದೊಂದು ಪ್ರಯೋಗವೂ ಸಾಂಸ್ಕೃತಿಕ ವಲಯದಲ್ಲಿದೆ ಎಂಬುದು ಅರಿವಾದದ್ದು ಆಗಲೇ.

ಸುಮಾರು 72 ವರ್ಷದಿಂದ ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವತ ಮೇಳದ ವಿಶಿಷ್ಟತೆಯೇ ಅಂಥದ್ದು. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು ಅವರೇ ಹಾಕಿಕೊಂಡ ಕರ್ತವ್ಯದ ಕೊಂಡಿ.

ನಾಟಕದಲ್ಲಿ ದೇವಕಿ (ಶ್ರೀಕಾಂತ), ಯಶೋದಾ (ಎಸ್.ನಟರಾಜನ್), ಪೂತನಿ ಹೀಗೆ ಪ್ರತಿ ಸ್ತ್ರೀ ಪಾತ್ರವನ್ನೂ ಆ ತಂಡದ ಪುರುಷರು ಸಮರ್ಥವಾಗಿ ನಿರ್ವಹಿಸಿದ್ದು ಪ್ರಶಂಸನೀಯ. ಸ್ತ್ರೀ ಪಾತ್ರಧಾರಿ ಒಬ್ಬ ಪುರುಷ ಎಂಬ ಕುರುಹೂ ಸಿಗದಷ್ಟು ಉತ್ತಮ ಮೇಕಪ್ ಜೊತೆಗೆ ಭರತನಾಟ್ಯಕ್ಕೆ ಬೇಕಾದ ಆಂಗಿಕ ಅಭಿನಯ, ಬಾಗು ಬಳಕು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಈ ತಂಡದ ಇನ್ನೊಂದು ವಿಶೇಷತೆ ಎಂದರೆ ಇವರ‌್ಯಾರೂ ಪ್ರದರ್ಶನಕ್ಕಾಗಿ ವಾರಗಟ್ಟಲೆ, ವರ್ಷಗಟ್ಟಲೆ ತಯಾರಿ ನಡೆಸಿದ ವೃತ್ತಿಪರ ತಂಡದವರಲ್ಲ. ಒಬ್ಬರ ನಿವಾಸ ದುಬೈಯಲ್ಲಾದರೆ, ಇನ್ನೊಬ್ಬರಿರುವುದು ಬೆಂಗಳೂರಲ್ಲಿ. ಹೈದರಾಬಾದ್, ತಮಿಳುನಾಡು, ಮದ್ರಾಸ್, ಕಲ್ಲಿಕೋಟೆ, ಮೆಲಟೂರ್... ಹೀಗೆ ವಿವಿಧೆಡೆಯಲ್ಲಿರುವ ಕಲಾವಿದರೆಲ್ಲರೂ ವೃತ್ತಿಯಲ್ಲಿ ಉತ್ತಮ ಹುದ್ದೆ ಅಲಂಕರಿಸಿದವರೇ. ಆದರೆ ಅಪ್ಪಿಕೊಂಡ ಪ್ರವೃತ್ತಿ ಮಾತ್ರ ಬಿಡಲಾರದಷ್ಟು ಅಚ್ಚುಮೆಚ್ಚು. ಒಮ್ಮೆ ಕಾರ್ಯಕ್ರಮ ನಿಗದಿಯಾದರೆ ಇವರೆಲ್ಲಾ ಒಟ್ಟಾಗುತ್ತಾರೆ. ವೇದಿಕೆಯಲ್ಲೇ ತಯಾರಿ, ಪ್ರದರ್ಶನ ಎಲ್ಲಾ. `ದೇವರಲ್ಲಿ ಪ್ರೀತಿ ಇಟ್ಟು ಮಾಡ್ತೀವಿ. ಹೀಗಾಗಿ ನಮ್ಮ ಪ್ರದರ್ಶನ ಜನರಿಗೆ ಇಷ್ಟವಾಗುತ್ತದೆ~ ಎಂಬುದು ಭಾಗವತ ಮೇಳದ ಮುಖ್ಯಸ್ಥ ಎಸ್. ನಟರಾಜನ್ ಅವರ ನುಡಿ.

ಹಾಗೆ ನೋಡಿದರೆ ಯಾವ ತಯಾರಿಯೂ ಇಲ್ಲದೆ ನೇರವಾಗಿ ವೇದಿಕೆಯಲ್ಲಿಯೇ ತಮ್ಮೆಲ್ಲಾ ಚಾಕಚಕ್ಯತೆ ತೋರಿಸುವ ಪ್ರತಿಭೆ ಉಳಿದುಕೊಂಡಿರುವುದು ಯಕ್ಷಗಾನ ಹಾಗೂ ತಾಳಮದ್ದಲೆಯಲ್ಲಿ ಮಾತ್ರ. ಅಂಥದ್ದೇ ರೂಪಿನ ಮತ್ತೊಂದು ವಿಶಿಷ್ಟ ಶೈಲಿ ಭಾರತೀಯರ ಮಧ್ಯೆ ಉಳಿದುಕೊಂಡಿದೆ ಎಂಬುದು ಸಮಾಧಾನದ ಸಂಗತಿ.

ನಾಟಕಕ್ಕೆ ಮತ್ತೊಂದು ಮೆರುಗು ಪೂತನಿ ಪಾತ್ರ. ಅವರ ಅಭಿನಯಕ್ಕೆ ಜನರ ಮೆಚ್ಚುಗೆಯ ಚಪ್ಪಾಳೆಯ ಸುರಿಮಳೆ. 68 ತುಂಬಿದ್ದರೂ ಆರ್. ವರದರಾಜನ್ ಅವರದ್ದು ಯೌವನೋತ್ಸಾಹ. ಅವರ ಅಭಿನಯ, ಕುಣಿತದಲ್ಲಿಯ ಹುಮ್ಮಸ್ಸು ಅಲ್ಲಿರುವ ಯುವಜನರನ್ನೂ ನಾಚಿಸುವಂತಿತ್ತು.

ಕೃಷ್ಣ (ಪ್ರಸನ್ನ), ಬಲರಾಮ (ಸಾಯಿ), ಸೇವಕನ ಪಾತ್ರದಲ್ಲಿ ಅಭಿನಯಿಸಿದ ಯುವಕರೂ ಅತ್ಯಂತ ಶೃದ್ಧೆ, ಪ್ರೀತಿಯಿಂದ ಭರತನಾಟ್ಯದ ಶೈಲಿಗೆ ಒಗ್ಗಿಕೊಂಡಂತಿತ್ತು. ಕಲಾವಿದರಿಗೆ ಯಶಸ್ಸಿನ ಹುಮ್ಮಸ್ಸಾದರೆ, ಬೆಂಗಳೂರಿಗರಿಗೆ ಆಂಜನೇಯನ ಸನ್ನಿಧಿಯಲ್ಲಿ `ಕೃಷ್ಣ ಜನನ ಕಂಸ ಹನನ~ವನ್ನು ನೋಡಿದ ಸಂಭ್ರಮ.

ನರಸಿಂಹನ್, ವೆಂಕಟೇಶನ್, ಪ್ರಭಾಕರನ್ ಸಹೋದರರ ಹಿನ್ನೆಲೆ ಗಾಯನ. ಶ್ರೀರಾಮ್ ಮೃದಂಗ, ಗೋಕುಲ್ ಅವರ ಕೊಳಲು ಸಾಥ್. ಭಾವಾಭಿವ್ಯಕ್ತಿಗೆ ಬೇಕಾಗುವ ಎಲ್ಲವನ್ನೂ ಈ ಹಿನ್ನೆಲೆ ತಂಡ ಸಮರ್ಥವಾಗಿ ನಿರ್ವಹಿಸಿತು.

`ನಮಗೆ ಕಲಾವಿದರ ಕೊರತೆ ಇದೆ. ಬೇರೆ ಬೇರೆ ರಾಜ್ಯದ ಕಲಾವಿದರೇ ಇರುವ ನಮ್ಮ ತಂಡಕ್ಕೆ ಬಿಡುವಿನ ವೇಳೆ ನೋಡಿ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಕಲಾವಿದರು ಕುಟುಂಬದವರೇ ಆದ್ದರಿಂದ ಹೇಗೊ ಕಾರ್ಯಕ್ರಮ ನಿಭಾಯಿಸುತ್ತಿದ್ದೇವೆ. ನಮ್ಮ ಮೆಲಟೂರು ಉತ್ಸವಕ್ಕೆ ಬನ್ನಿ. 72 ವರ್ಷದಿಂದ ನಡೆಯುತ್ತಿರುವ ಆ ಕಾರ್ಯಕ್ರಮ  ಮೇ 18ಕ್ಕೆ ನಡೆಯುತ್ತದೆ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಆ ಉತ್ಸವ ನೋಡಿ. ಅಲ್ಲಿ ಪ್ರದರ್ಶನಗೊಳ್ಳುವ ಕಾರ್ಯಕ್ರಮ ನಿಮಗೆ ತುಂಬಾ ಇಷ್ಟವಾಗುತ್ತದೆ~ ಎಂದು ವಿಶ್ವಾಸ ತುಂಬಿದ ದನಿಯಲ್ಲಿ ಆಹ್ವಾನಿಸುತ್ತಾರೆ ನಾಟಕದಲ್ಲಿ ಕಂಸನ ಪಾತ್ರ ನಿರ್ವಹಿಸಿದ ಎಸ್. ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT