ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕಿಗೆ ಸಿಗದ ಉತ್ತಮ ಬೆಲೆ: ಸಂಕಷ್ಟದಲ್ಲಿ ರೈತ

Last Updated 12 ಅಕ್ಟೋಬರ್ 2011, 6:40 IST
ಅಕ್ಷರ ಗಾತ್ರ

ಹುಣಸೂರು: ತಂಬಾಕು ಹರಾಜು ಮಾರುಕಟ್ಟೆ ಆರಂಭಗೊಂಡು ತಿಂಗಳು ಕಳೆದರೂ ಸೂಕ್ತ ದರ ಸಿಗದೆ ರೈತರು ಕಂಗಾಲಾಗಿದ್ದಾರೆ. ಸಂಸದರು ಮತ್ತು ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ ಎಂದು ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರೇಗೌಡ ಆರೋಪಿಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಣಿಜ್ಯ ಬೆಳೆ ತಂಬಾಕಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ದರ ಕೊಡಿಸುವ ಭರವಸೆ ನೀಡಿದ್ದ ಸಂಸದರು ಈವರಗೊ ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಿಲ್ಲ. ಅಂತರರಾಷ್ಟ್ರೀಯ ಮಾರು ಕಟ್ಟೆಯ ಕಂಪೆನಿಗಳನ್ನು ಮಾರುಕಟ್ಟೆಗೆ ಕರೆ ತರುವ ಭರವಸೆ ನೀಡಿದ್ದ ಸಂಸದರು ಈವರಗೆ ಯಾವುದೇ ಕಂಪೆನಿಗಳನ್ನು ಕರೆತರುವ ಪ್ರಯತ್ನ ನಡೆಸಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ತಂಬಾಕಿಗೆ ರೂ. 118-125 ನೀಡುತ್ತಿದ್ದು, ಸರಾಸರಿ  ರೂ. 80 ಸಿಗುವ ರೀತಿ ಹರಾಜು ನಡೆಯುತ್ತಿದೆ. ಇದೇ ದರದಲ್ಲಿ ಮಾರುಕಟ್ಟೆ ಮುಂದುವರೆದಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

ತಂಬಾಕು ಮಂಡಳಿ ಅಧ್ಯಕ್ಷ ಕಮಲವರ್ಧನ್ ರಾವ್ 2 ವರ್ಷದಿಂದ ಮಾರುಕಟ್ಟೆಯ ಸ್ಥಿತಿಗತಿ ಅರಿತುಕೊಳ್ಳುವ ಪ್ರಯತ್ನ ನಡೆಸಿಲ್ಲ. ಆಸಕ್ತಿ ಇಲ್ಲದ ವ್ಯಕ್ತಿಗಳಿಗೆ ಮಾರುಕಟ್ಟೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರೈತರನ್ನು ಬಲಿಪಶು ಮಾಡುತ್ತಿದೆ ಎಂದು ಆಪಾದಿಸಿದರು.

ಇ-ಹರಾಜು: ತಂಬಾಕು ಮಾರು ಕಟ್ಟೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಇ-ಹರಾಜು ಆರಂಭಿಸು ವುದಾಗಿ ಅಂದಿನ ವಾಣಿಜ್ಯ ಸಚಿವ ಜಯರಾಂ ರಮೇಶ್ ಘೋಷಿಸಿ ಪ್ರಾಯೋಗಿಕವಾಗಿ ಮಾರುಕಟ್ಟೆಯಲ್ಲಿ ಅನುಷ್ಠಾನಗೊಳಿಸಿದ್ದರು. ಮಾದರಿ ಹರಾಜಿನಿಂದ ರೈತನಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಿಳಿಸಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಬಾರದ ಬಗ್ಗೆ ವ್ಯವಸ್ಥಿತವಾಗಿ ತಂಬಾಕು ಕಂಪೆನಿ ಸೇರಿದಂತೆ ಕಾಣದ ಕೈಗಳು ಸಂಚು ಮಾಡಿ ರೈತನಿಗೆ ಮೋಸ ಮಾಡಿದ್ದಾರೆ ಎಂದರು.

ಕಾರ್ಯದರ್ಶಿ ನಂಜುಂಡೇಗೌಡ ಮಾತನಾಡಿ, ಸಂಸದ ವಿಶ್ವನಾಥ್ ಮತ್ತು ಶಾಸಕ ಎಚ್.ಪಿ.ಮಂಜುನಾಥ್ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತನ ಕಷ್ಟ ಅರಿಯುವ ಸೌಜನ್ಯವನ್ನೂ ತೋರಿಸಿಲ್ಲ ಎಂದು ಆಕ್ಷೇಪಿಸಿದರು.

ತಂಬಾಕು ಬೇಸಾಯಗಾರನನ್ನು ದರ ಸಮರದಲ್ಲಿ ಸಾಯಿಸುವ ಬದಲಿಗೆ 2020ರೊಳಗೆ ತಂಬಾಕು ಸಂಪೂರ್ಣ ನಿಷೇದಿಸಲು ಸಿದ್ಧವಿರುವ ಸರ್ಕಾರ ರೈತನ ಪರವಾನಗಿಗೆ ಕನಿಷ್ಠ ರೂ. 5 ಲಕ್ಷ ಪರಿಹಾರ ನೀಡಿದಲ್ಲಿ ಈಗಲೇ ಪರವಾನಗಿ ಹಿಂದಿರುಗಿಸಲು ಸಿದ್ಧವಿದ್ದೇವೆ ಎಂದರು.

ನಿರ್ದೇಶಕ ನಾಗಪ್ಪ ಮಾತನಾಡಿ, ತಂಬಾಕು ಬೆಳೆಗಾರರ ಮುಖಂಡರ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅ.15ರಂದು ಕರೆದಿದ್ದು, ನಂತರದಲ್ಲಿ ಮಾರುಕಟ್ಟೆಗೆ ಸ್ಪಂದಿಸಬೇಕೇ ಬೇಡವೆ ಎಂದು ತೀರ್ಮಾನಿಸಲಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಎಸ್.ಪ್ರಭಾಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT