ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ದುರ್ಬಳಕೆ ಸಾಕು, ಸದ್ಬಳಕೆ ಬೇಕು!

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದ ದುಷ್ಪರಿಣಾಮ ಹೆಚ್ಚಿರುವ ಸಂದರ್ಭದಲ್ಲಿಯೇ, ತಂಬಾಕಿನ ಪರ್ಯಾಯ ಉಪಯೋಗಗಳ ಚರ್ಚೆ ಮಹತ್ವ ಪಡೆದುಕೊಂಡಿದೆ. ತಂಬಾಕಿನ ಮತ್ತೊಂದು ಮುಖದ ಪರಿಚಯ ಮಾಡಿಕೊಡುವ ಕೆಲಸ ಧಾರವಾಡದ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಗುತ್ತಿದೆ. 

‘ತಂಬಾಕು ನಿಷೇಧಿಸದಿದ್ದರೆ ಅದನ್ನು ಬಳಸುವವರ ಮೇಲೆ ದುಷ್ಪರಿಣಾಮವಾಗುತ್ತದೆ. ನಿಷೇಧಿಸಿದರೆ, ತಂಬಾಕು ಉದ್ಯಮವನ್ನು ನಂಬಿರುವ ಕೋಟ್ಯಂತರ ಜನ ಬೀದಿಗೆ ಬೀಳುತ್ತಾರೆ. ಆದರೆ, ತಂಬಾಕನ್ನು ಸದ್ಬಳಕೆ ಮಾಡಿಕೊಂಡರೆ ಈ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ಧಾರವಾಡ ಕೃಷಿ ವಿವಿಯ ತಂಬಾಕು ಬೆಳೆ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ ಎಂ.ವೈ. ಕಮತರ.

‘ತಂಬಾಕನ್ನು  ಅಡುಗೆ ಎಣ್ಣೆ, ಕೈಗಾರಿಕೆಗಳಲ್ಲಿ ಯಂತ್ರಗಳಿಗೆ ಬಳಸುವ ಎಣ್ಣೆ, ಪ್ರೋಟೀನ್‌ ಆಹಾರ ಮತ್ತು ಔಷಧಿಯ ತಯಾರಿಕೆಗಳಲ್ಲಿ ಉಪಯೋಗಿಸ­ಬಹುದು. ತಂಬಾಕು ಹಲವು ಉಪಯುಕ್ತ ರಾಸಾಯನಿಕ, ನಿಕೋಟಿನ್‌, ಸೊಲನೆಸಾಲ್‌, ಔಷಧಿ, ಸಸಾರಜನಕ (ಪ್ರೋಟೀನ್‌) ಎಣ್ಣೆ, ಜೀವಸತ್ವ, ಕೀಟನಾಶಕ ಮತ್ತು ಸಾವಯವ ಆಮ್ಲಗಳ ಮೂಲ ಆಗರವಾಗಿದೆ’ ಎಂದು ಅವರು ತಿಳಿಸಿದರು.

‘ತಂಬಾಕಿನಲ್ಲಿರುವ ಸೊಲನ್‌ಸಾಲ್‌ ರಾಸಾಯನಿಕವನ್ನು ಹೃದಯರೋಗ, ಮಧುಮೇಹ, ಅಕಾಲ ಮುಪ್ಪನ್ನು ತಡೆಗಟ್ಟುವ ಔಷಧಿ, ಇನ್ನಿತರ ಹಲವಾರು ಔಷಧಿಗಳ ಮತ್ತು ಜೀವಸತ್ವ ‘ಕೆ’ ಮತ್ತು ‘ಇ’ ಉತ್ಪಾದನೆಯಲ್ಲಿ ಉಪಯೋಗಿಸ­ಲಾಗುತ್ತಿದೆ. ತಂಬಾಕಿನಲ್ಲಿರುವ ನಿಕೋಟಿನ್‌ ಸಹ ಹಲವು ಔಷಧಿಗಳ ತಯಾರಿಕೆಗೆ ಬಳಸಲಾಗುತ್ತಿದೆ. ನಿಕೋಟಿನ್‌ ಸಲ್ಫೇಟ್‌ ಎಂಬ ದುಷ್ಪರಿಣಾಮ ಇಲ್ಲದ ಕೀಟನಾಶಕವನ್ನು ಕೂಡ ತಂಬಾಕಿನಿಂದ ಪಡೆಯಬಹುದು’ ಎಂದು ಅವರು ಮಾಹಿತಿ ನೀಡಿದರು .

ತಂಬಾಕಿನ ಬೀಜದಿಂದ ಎಣ್ಣೆ
‘ಕೈಗಾರಿಕೆ ಮತ್ತು ಆಹಾರದ ಬಳಕೆಗೆ ಉಪಯೋಗವಾಗುವಂತೆ ತಂಬಾಕಿನ ಹಸಿರೆಲೆಗಳಿಂದ ಪ್ರೋಟೀನ್‌ ಮತ್ತು ತಂಬಾಕಿನ ಬೀಜದಿಂದ ಎಣ್ಣೆಯನ್ನು ಪಡೆಯಬಹುದು.

ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ತಂಬಾಕು ಒಂದು ಮಾದರಿ ಸಸ್ಯವಾಗಿದೆ. ಭಾರತ ತಂಬಾಕಿನ ಉತ್ಪನ್ನ ಮತ್ತು ರಫ್ತು ಪ್ರಮಾಣ ಎರಡರಲ್ಲೂ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ತಂಬಾಕಿನ ವಾರ್ಷಿಕ ಆದಾಯವೇ ₨ 23,400 ಕೋಟಿ! ದೇಶದಲ್ಲಿ 3.6 ಕೋಟಿ ಜನ ತಂಬಾಕು ಉದ್ಯಮವನ್ನು ಅವಲಂಬಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತಂಬಾಕನ್ನು ನಿಷೇಧಿಸುವುದಕ್ಕಿಂತ ಅದರ ಪರ್ಯಾಯ ಬಳಕೆ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಇನ್ನೂ ಸಂಶೋಧನೆಗಳು ಆಗಬೇಕಿದೆ’ ಎಂದು ಕಮತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT