ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಮಾರುಕಟ್ಟೆಗೆ ದಿಢೀರ್ ಭೇಟಿ

Last Updated 8 ಫೆಬ್ರುವರಿ 2011, 10:05 IST
ಅಕ್ಷರ ಗಾತ್ರ

ಹುಣಸೂರು: ಅಂತರ ರಾಷ್ಟ್ರೀಯ  ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವ ಕಂಪೆನಿ ಅಧಿಕಾರಿಗಳೊಂದಿಗೆ ಫೆ.9  ರಂದು ಸಭೆ ಕರೆದಿದ್ದು, ಸಭೆಯ ನಂತರದಲ್ಲಿ ತಂಬಾಕು ದರ ನಿರ್ಧಾರವಾಗಲಿದೆ ಎಂದು ಸಂಸದ ಎಚ್. ವಿಶ್ವನಾಥ್  ಹೇಳಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಂಡಳಿಗೆ ದಿಢೀರ್ ಭೇಟಿ  ನೀಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಂಬಾಕು ದರ ಸರಪಡಿಸಬೇಕು ಎಂಬ ಉದ್ದೇಶವಿದ್ದು ಈ ಬಗ್ಗೆ ಬೆಂಗಳೂರಿನಲ್ಲಿ ತಂಬಾಕು ಮಂಡಳಿಯ ಉನ್ನತಾಧಿಕಾರಿ ಸಭೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವ ಕಂಪೆನಿಗಳ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ ಎಂದರು.

 ಹರಾಜು ಮಾರುಕಟ್ಟೆಯಲ್ಲಿನ ರೈತನಿಗೆ ಮೂಲ ಸವಲತ್ತುಗಳಿಲ್ಲದ ಬಗ್ಗೆ ಕೆಂಡಮಂಡಲವಾದ ಸಂಸದರು,   ತಂಬಾಕು ಮಂಡಳಿ ರೈತ ಕಲ್ಯಾಣ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ಇದ್ದರೂ ರೈತನಿಗೆ ಮೂಲ ಸೌಲಭ್ಯ   ಕಲ್ಪಿಸದ ಬಗ್ಗೆ ದೂರವಾಣಿ ಮೂಲಕ ಹರಾಜು ಮಾರುಕಟ್ಟೆ ಅಧೀಕ್ಷಕಿ ಮಂಜುಳ ಪಿಳ್ಳೆ ಅವರಿಗೆ ತರಾಟೆಗೆ ತೆಗೆದುಕೊಂಡರು.
ಹರಾಜು ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯನ್ನು ಒಂದು ವಾರದೊಳಗೆ ಸರಿಪಡಿಸಬೇಕು ಎಂದು ಸೂಚಿಸಿದರು.  ಫೆ.15 ರ ನಂತರ ಹರಾಜು ಮಾರುಕಟ್ಟೆಗೆ ಕ್ಷೇತ್ರದ ಶಾಸಕರೊಂದಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಗುಡು ಗಿದರು. ತಂಬಾಕು ಮಂಡಳಿ ಅಧ್ಯಕ್ಷ ಕಮಲವರ್ಧನ್‌ರಾವ್ ಅವರೊಂದಿಗೆ ಸ್ಥಳೀಯ ಸಮಸ್ಯೆಗಳನ್ನು ಚರ್ಚೆ  ಮಾಡಲಿದ್ದು, ಸಮಸ್ಯೆ ಬಹುತೇಕ ಬಗೆಹರಿಯುವ ವಿಶ್ವಾಸವಿದೆ ಎಂದರು.

ಹರಾಜು ಮಾರುಕಟ್ಟೆಯಲ್ಲಿ ರೈತ ರೊಳಗೊಂಡ ಪ್ಲಾಟ್‌ಫಾರಂ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಸದಸ್ಯರ  ಸಭೆ ಪ್ರತಿ 15 ದಿನಕ್ಕೊಂದು ಬಾರಿ ಕರೆದು ಸಮಸ್ಯೆಗಳ ಪಟ್ಟಿ ಮತ್ತು ಪರಿಹಾರ ಮಾಡಬೇಕು ಎಂದರು.

ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ಅಧಿಕಾರಿಗಳು ನೆಪಮಾತ್ರಕ್ಕೆ ಸಮಿತಿ ರಚಿಸಿ ಅವರು  ಹೇಳಿದಂತೆ ಕೇಳುವ ರೈತರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಂಬಾಕು ಬೆಳೆಗಾರರು ಸಭೆಯಲ್ಲಿ ಆಪಾದಿಸಿದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಮಂಡಳಿ ತಂಬಾಕು ಬೆಳೆಗಾರನ ಹಿತ ಕಾಪಾಡುವಲ್ಲಿ ಸಂಪೂರ್ಣ  ವಿಫಲವಾಗಿದೆ. ರೈತನ ದೌರ್ಬಲ್ಯ ಮತ್ತು ಅಸಹಕಾರವನ್ನು ಅಧಿಕಾರಿಗಳು ಬಂಡವಾಳ ಮಾಡಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಸಮಸ್ಯೆಗಳು ಮುಂದಿನ ಒಂದು ವಾರದ ಗಡುವಿನೊಳಗೆ ಬಗೆಹರಿಸದಿದ್ದರೆ ಖುದ್ದು ತಾವೇ ಮಂಡಳಿ ಎದುರು  ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿ ದರು.
ಭೇಟಿ ಸಮಯದಲ್ಲಿ ಕಟ್ಟೆಮಳಲವಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ಗಾವಡಗೆರೆ ಗ್ರಾ.ಪಂ ಅಧ್ಯಕ್ಷ  ವೆಂಕಟರಾಜು, ತಾ.ಪಂ ಸದಸ್ಯ ರಂಗಸ್ವಾಮಿ, ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಸ್ವಾಮಿ, ಬಿಳಿಕರೆ ಬ್ಲಾಕ್ ಕಾರ್ಯ ದರ್ಶಿ ಬಸವರಾಜು, ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರೇಗೌಡ, ಜಿ.ಪಂ ಸದಸ್ಯ ರಮೇಶ್ ಮತ್ತು ಇತರರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT