ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿ-ಬಗ್ಗಿ ನಡೆಯುವೆ: ಬಿಎಸ್‌ವೈ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನು ಮುಂದೆ `ತಗ್ಗಿ-ಬಗ್ಗಿ~ ನಡೆಯುತ್ತಾರಂತೆ!

ಸ್ವತಃ ಯಡಿಯೂರಪ್ಪನವರೇ ಶುಕ್ರವಾರ ಈ ಮಾತನ್ನು ಸುದ್ದಿಗಾರರಿಗೆ ಹೇಳಿದರು. ಇಲ್ಲಿಯ ನಟರಾಜ ಪ್ರತಿಷ್ಠಾನ ಮತ್ತು ಹೊಸಮಠ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

`ನಾನು ಬದುಕಿರುವವರೆಗೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಿಂದಲೇ ಯಡಿಯೂರಪ್ಪ ಇರುವುದು. ಯಡಿಯೂರಪ್ಪ ಅತ್ಯಂತ ಸಾಮಾನ್ಯ ವ್ಯಕ್ತಿಗಳಲ್ಲಿ ಸಾಮಾನ್ಯ. ಜನ ನನಗೆ ಮನ್ನಣೆ ಕೊಡುತ್ತಿರುವುದು ಪಕ್ಷದ ವರ್ಚಸ್ಸಿನಿಂದಾಗಿ~ ಎಂದು ಹೇಳಿದರು.

`ಪ್ರತ್ಯೇಕ ಪಕ್ಷ ಕಟ್ಟುವ ವಿಚಾರ ನನಗಿಲ್ಲ. ಅಷ್ಟಕ್ಕೂ ಇಂದು ಯಾವುದೇ ಹೊಸ ಪಕ್ಷಕ್ಕೂ ಭವಿಷ್ಯವಿಲ್ಲ. ನನ್ನ ಹಾಗೂ ಈಶ್ವರಪ್ಪ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದೇ ಜಿಲ್ಲೆಯವರು ನಾವು. ಅವರು ಪಕ್ಷವನ್ನು ಬಲಗೊಳಿಸುತ್ತಿದ್ದು, ನಾನು ಪ್ರಚಾರವನ್ನು ಕೈಗೊಂಡಿದ್ದೇನೆ. ಸದಾನಂದಗೌಡರು ಉತ್ತಮ ಆಡಳಿತ ನೀಡುತ್ತಿದ್ದಾರೆ~ ಎಂದು ಹೇಳಿದ ಅವರು, `ಪಕ್ಷದಲ್ಲಿ ಯಾವುದೇ ಒಡಕಿಲ್ಲ~ ಎಂದು ಪುನರುಚ್ಚರಿಸಿದರು.


ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, `ನನ್ನದು ಪಕ್ಷದಿಂದ ನಿಯೋಜಿತವಾದ ಪ್ರವಾಸವಲ್ಲ. ಆದರೆ ನನ್ನದು ಖಾಲಿ ಕುಳಿತುಕೊಳ್ಳುವ ಜಾಯಮಾನವಲ್ಲ. ಇನ್ನೂ ಒಂದೂವರೆ ವರ್ಷದೊಳಗೆ ಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರಕ್ಕಾಗಿ ಎಲ್ಲ ಕ್ಷೇತ್ರಗಳಿಗೂ ಓಡಾಡುತ್ತಿದ್ದೇನೆ. ರಾಜ್ಯದಲ್ಲಿ ಈ ಬಾರಿ ಒಟ್ಟು 150 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಅದಕ್ಕಾಗಿ ಎಲ್ಲ 224 ಕ್ಷೇತ್ರಗಳಿಗೂ ಪ್ರವಾಸ ಹೋಗುತ್ತಿದ್ದೇನೆ.

ಅಲ್ಪಸಂಖ್ಯಾತ ಬಂಧುಗಳೂ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ~ ಎಂದು ಹೇಳಿದರು.
`ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಒಂದೂವರೆ ವರ್ಷದ ಅವಧಿ ಪ್ರಚಾರಕ್ಕೆ ಕಡಿಮೆ ಬೀಳುತ್ತದೆ.

ಪಕ್ಷಕ್ಕಾಗಿ ದುಡಿಯುವುದಷ್ಟೇ ನನ್ನ ಕೆಲಸ. ಕಳೆದ 4-5 ದಿನಗಳಿಂದ ವಿಜಾಪುರ ಮತ್ತು ಬಾಗಲಕೋಟೆಯಲ್ಲಿ ಪ್ರವಾಸ ಮಾಡಿದ್ದೇನೆ. ಇವತ್ತು ಇಲ್ಲಿಗೆ ಬಂದಿದ್ದೇನೆ. ಶನಿವಾರ ದಾವಣಗೆರೆಗೆ ಹೋಗುತ್ತೇನೆ. ಎಲ್ಲ ಕಡೆಯೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ~ ಎಂದರು.

ಗೊಂದಲ ಬಗೆಹರಿದಿಲ್ಲ: ಮುಖ್ಯಮಂತ್ರಿ

ಮೈಸೂರು:  `ಪಕ್ಷದಲ್ಲಿ ಗೊಂದಲ ಇರವುದು ನಿಜ. ವರಿಷ್ಠರು, ಆರ್‌ಎಸ್‌ಎಸ್ ಮುಖಂಡರು ಸಮಸ್ಯೆ ಇತ್ಯರ್ಥಕ್ಕೆ ಮುಂದಾದರೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ನಂಜನಗೂಡು ತಾಲ್ಲೂಕು ಸುತ್ತೂರು ಶಿವರಾತ್ರಿಶ್ವರ ಜಾತ್ರಾ ಉತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ನನ್ನ ಅಧಿಕಾರ ಅವಧಿಯಲ್ಲಿ ಮಾಜಿ ಸಇಎಂ ಯಡಿಯೂರಪ್ಪ ಯಾವತ್ತೂ ಹಸ್ತಕ್ಷೇಪ ಮಾಡಿಲ್ಲ. ಅವರು ಪಕ್ಷದ ಹಿರಿಯ ನಾಯಕರು. ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವ ಅಧಿಕಾರ ಅವರಿಗೆ ಇದೆ~ ಎಂದು ಹೇಳಿದರು.

ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಈಗಾಗಲೇ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಎರಡು ತಿಂಗಳ ಅವಧಿಯಲ್ಲಿ ಶೇ 95ರಷ್ಟು ಗುರಿ ತಲುಪುವ ವಿಶ್ವಾಸವಿದೆ~ ಎಂದರು.
`ಕೇಂದ್ರದ ಅನುದಾನ ದುರುಪಯೋಗ ಪಡಿಸಿಕೊಂಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಆರೋಪ ಮಾಡಿದ್ದಾರಲ್ಲ~ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, `ಕೇಂದ್ರದ ಅನುದಾನವನ್ನು ಬೇರೆ ರಾಜ್ಯಗಳಿಗಿಂತಲೂ ನಾವೇ ಸರಿಯಾಗಿ ಬಳಸಿಕೊಂಡಿದ್ದೇವೆ. ಆರೋಪ ಮಾಡುವವರು ಅಂಕಿ-ಅಂಶ, ದಾಖಲೆ ಸಮೇತ ಚರ್ಚೆಗೆ ಬಂದರೆ ಉತ್ತರ ನೀಡಲು ತಾವು ಸಿದ್ಧ~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT