ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮಳೆ ಬಿರುಸು: ಇನ್ನಿಬ್ಬರ ಸಾವು

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಳೆಯ ಆರ್ಭಟ ಶುಕ್ರವಾರ ಕಡಿಮೆಯಾಗಿದ್ದರೂ,  ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು ಮತ್ತು ಕಾವೇರಿ ನದಿಯಲ್ಲಿ ಕೊಚ್ಚಿಹೋಗಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬೊಳಿಬಾಣೆ ರಸ್ತೆಯು ಜಲಾವೃತಗೊಂಡಿದ್ದು, ಈ ಸ್ಥಳದಲ್ಲಿ ಶುಕ್ರವಾರ ಬೆಳಿಗ್ಗೆ ಹೊದವಾಡ ಗ್ರಾಮದ ನಿವಾಸಿ ಮಂಡೇಪಂಡ ಭೀಮಯ್ಯ (55) ಕಾವೇರಿ ನದಿಯ ಪಾಲಾಗಿದ್ದು, ಮೃತದೇಹ ದೊರೆತಿದೆ. ಮಧ್ಯಾಹ್ನ 2.30ಕ್ಕೆ ಪೊನ್ನಂಪೇಟೆಯ ಕುಟ್ಟಂದಿ ಗ್ರಾಮದ ಕೊಲ್ಲೆರ ಯು. ಪೂಣಚ್ಚ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯರವರ ಕರಿಯ (50) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಗಂಜಿ ಕೇಂದ್ರ ಸ್ಥಾಪನೆ: ಹಲವು ಕಡೆ ಮನೆಗಳ ಕುಸಿತ ವರದಿಯಾಗಿದ್ದು, ಗಂಜಿ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ. ವಿರಾಜಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿಯಲ್ಲಿ  ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ನದಿ ದಡದ ನಿವಾಸಿಗಳನ್ನು ಬೆಟ್ಟದಕಾಡು ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಗಂಜಿಕೇಂದ್ರವನ್ನು ತೆರೆಯಲಾಗಿದೆ.

ಇಲ್ಲಿ ಮೂರು ಕುಟುಂಬಗಳ 10 ಸದಸ್ಯರನ್ನು ಸದ್ಯಕ್ಕೆ ಸ್ಥಳಾಂತರಿಸಲಾಗಿದ್ದು, ನೀರಿನ ಪ್ರವಾಹ ಹೆಚ್ಚಾದರೆ ಇನ್ನಷ್ಟು ಜನರನ್ನು ಇಲ್ಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಈ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾಯಂ ಪರಿಹಾರ ರೂಪಿಸಬೇಕಾಗಿದೆ. ಈ ಭಾಗದಲ್ಲಿ ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ಬಿಡಿಸಿ, ಇವರಿಗೆ ಹಂಚಲಾಗುವುದು. ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಭಾಗಮಂಡಲದಲ್ಲಿ ನೀರಿನ ರಭಸ ಕಡಿಮೆಯಾಗಿದ್ದು, ರಸ್ತೆ ಸಂಚಾರ ಪುನರಾರಂಭಗೊಂಡಿದೆ. ಪ್ರವಾಹ ಬಂದಾಗ ಜನರ ಸಾಗಾಟಕ್ಕೆ ಅನುವು ಮಾಡಿಕೊಡಲು ಹೊಸ ರಬ್ಬರ್ ದೋಣಿ (ರ‌್ಯಾಫ್ಟ್) ಖರೀದಿಸಲು ಜಿಲ್ಲಾಡಳಿತ, ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 91.6 ಮಿ.ಮೀ. ಮಳೆಯಾಗಿದೆ. ಮಡಿಕೇರಿಯಲ್ಲಿ 117 ಮಿ.ಮೀ. ಸಂಪಾಜೆಯಲ್ಲಿ 144.2 ಮಿ.ಮೀ ಹಾಗೂ ಒಟ್ಟಾರೆ ಜಿಲ್ಲೆಯಲ್ಲಿ ಸರಾಸರಿ 53.33 ಮಿ.ಮೀ. ಮಳೆಯಾಗಿದೆ.

ವಿರಾಜಪೇಟೆ ತಾಲೂಕಿನ ವ್ಯಾಪ್ತಿಯ ಬೇತ್ರಿ ಕರಡಿಗೋಡು ಕಿರೇಹೊಳೆ, ಪೂಜಿಕಲ್ಲು ಇವುಗಳಲ್ಲಿ ನೀರಿನಮಟ್ಟ ಜಾಸ್ತಿಯಾಗಿದ್ದು, ಹೊಳೆದಡದಲ್ಲಿ ವಾಸಿಸುತ್ತಿರುವ ಸಾರ್ವಜನಿಕರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ಲಕ್ಷ್ಮಣ ತೀರ್ಥ ಹೊಳೆಯ ಸೇತುವೆ ಮೇಲೆ 2 ಅಡಿ ನೀರು ಬಂದಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾನೂರು ಮಾರ್ಗವಾಗಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ನಾಪತ್ತೆ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಸಮೀಪದ ಜತ್ರಾಟ ಗ್ರಾಮದಲ್ಲಿ ಹಾಲಪ್ಪಾ ಸಿದ್ಧು ದುರಗಣ್ಣವರ (32) ಗುರುವಾರ ವೇದಗಂಗಾ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನದಿ ತೀರದಲ್ಲಿ ಬಹಿರ್ದೆಸೆಗಾಗಿ ಹೋದಾಗ, ಈತ ಆಯತಪ್ಪಿ ನದಿಯಲ್ಲಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋದನೆಂದು ಸ್ಥಳೀಯರು ತಿಳಿಸಿದ್ದಾರೆ. ಶುಕ್ರವಾರ ಸಂಜೆಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಪ್ರವಾಹ ಮುನ್ನೆಚ್ಚರಿಕೆ: ಕಾಳಿ ನದಿ ಯೋಜನೆಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದೆ. ಇದರಿಂದ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದ್ದು, ಪ್ರವಾಹದ ಉಂಟಾಗುವ ಸಾಧ್ಯತೆಯಿದೆ.

ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ  ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಕದ್ರಾ ಅಣೆಕಟ್ಟಿನ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ನೀರಿನ ಮಟ್ಟ ಹೆಚ್ಚಾಗಿ ಹೊಸರಿತ್ತಿ, ಕೊರಡೂರು ಮುಂತಾದ ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿ, ಹಾವನೂರು ಮತ್ತು ಗಳಗನಾಥ ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ.
ಒಳ ಹರಿವು ಹೆಚ್ಚಳ: ಆಲಮಟ್ಟಿ ಜಲಾಶಯದ ಒಳಹರಿವು ಶುಕ್ರವಾರ ಸ್ವಲ್ಪ ಹೆಚ್ಚಳವಾಗಿದೆ. ಜಲಾಶಯದಲ್ಲಿ 513.75 ಮೀಟರ್ (ಗರಿಷ್ಠ 519.6 ಮೀ.) ವರೆಗೆ ನೀರು ಸಂಗ್ರಹವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ, ಶರಾವತಿ, ಕುಮುದ್ವತಿ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ಮಂಡಗದ್ದೆ ಬಳಿ ತುಂಗಾ ನದಿ ಪ್ರವಾಹ ಇಳಿದಿದೆ. ಜಲಾವೃತವಾಗಿದ್ದ ತೀರ್ಥಹಳ್ಳಿ- ಶಿವಮೊಗ್ಗ ರಸ್ತೆ ಸಂಚಾರಕ್ಕ ಸಂಚಾರ ಮುಕ್ತವಾಗಿದೆ.  ಲಿಂಗನಮಕ್ಕಿ, ತುಂಗಾ ಜಲಾಶಯಗಳಲ್ಲಿ ಒಳಹರಿವು ಕುಸಿದಿದ್ದು, ಭದ್ರಾ ಜಲಾಶಯದಲ್ಲಿ ಮಾತ್ರ ಒಳಹರಿವು ಏರಿಕೆ ಆಗಿದೆ.

ಭದ್ರಾ ಜಲಾಶಯದಲ್ಲಿ ಒಂದೇ ದಿನದಲ್ಲಿ 6 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ಮಟ್ಟ 148.10 ಅಡಿ ಮುಟ್ಟಿದೆ. 46,130 ಕ್ಯೂಸೆಕ್ ಒಳಹರಿವು ಇದೆ. ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,779.75 ಅಡಿ ಇದ್ದು, 34,063 ಕ್ಯೂಸೆಕ್ ಒಳಹರಿವು ಇದೆ. ಜಲಾನಯನ ಪ್ರದೇಶದಲ್ಲಿ 72.8 ಮಿ.ಮೀ ಮಳೆ ಆಗಿದೆ. ತುಂಗಾ ಜಲಾಶಯಕ್ಕೂ ಒಳ ಹರಿವು ಕುಸಿದಿದ್ದು, 74,136 ಕ್ಯೂಸೆಕ್‌ಗೆ ಇಳಿದಿದೆ. ಜಲಾಶಯದಿಂದ 74,088 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಎಡೆಬಿಡದೆ ಬಿದ್ದ ಧಾರಾಕಾರ ಮಳೆಯಿಂದ ಸುಮಾರು ರೂ 1.60 ಕೋಟಿ  ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಜನಜೀವನ ಸಹಜ ಸ್ಥಿತಿಗೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮುಖ್ಯವಾಗಿ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೆರೆ ಬಂದು ತತ್ತರಿಸಿ ಹೋಗಿದ್ದ ಕರಾವಳಿಯಲ್ಲಿ ಶುಕ್ರವಾರ ಮಳೆ ಕ್ಷೀಣಿಸಿತ್ತು. ಹೀಗಾಗಿ ಎಲ್ಲಾ ಕಡೆ ನೆರೆ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಸಹ ಆಗಾಗ ಮುಳುಗುತ್ತಿತ್ತು. ಆದರೆ ಬಳಿಕ ಮಳೆ ಕಡಿಮೆಯಾಗಿರುವುದರಿಂದ ಶುಕ್ರವಾರ ಹಗಲಿಡೀ ಸೇತುವೆಯಲ್ಲಿ ವಾಹನ ಓಡಾಟ ಸಾಧ್ಯವಾಯಿತು. ಆದರೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಶುಕ್ರವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಸುಬ್ರಹ್ಮಣ್ಯ ಪೇಟೆಯಲ್ಲಿ ಬಿಕೋ ಎಂಬ ವಾತಾವರಣ ಇತ್ತು.

ನೇತ್ರಾವತಿ ನದಿ ನೀರಿನಿಂದ ನೆರೆ ಹಾವಳಿ ಉಂಟಾಗಿದ್ದ ಉಪ್ಪಿನಂಗಡಿ, ಬಂಟ್ವಾಳ, ಉಳ್ಳಾಲ ಸಹಿತ ಹಲವೆಡೆ ಶುಕ್ರವಾರ ಸಹಜ ಸ್ಥಿತಿ ನೆಲೆಸಿತ್ತು. ಹೀಗಾಗಿ ಗಂಜಿ ಕೇಂದ್ರಗಳು ಮತ್ತು ತಾತ್ಕಾಲಿಕ ನೆಲೆಗಳಿಗೆ ತೆರಳಿದ್ದ ನೆರೆ ಪೀಡಿತ ಮನೆಗಳ ಮಂದಿ ಮತ್ತೆ ತಮ್ಮ ಮನೆಗಳಿಗೆ ಹಿಂದಿರುಗತೊಡಗಿದ್ದಾರೆ. ಮಳವೂರು ಕಿಂಡಿ ಅಣೆಕಟ್ಟೆಯ ದಂಡೆ ಒಡೆದ ಸ್ಥಳದಲ್ಲಿ ಫಲ್ಗುಣಿ ನದಿ ಪಡುಶೆಡ್ಡೆ ವಸತಿ ಪ್ರದೇಶಗಳಿಗೆ ಹರಿಯುವುದು ಕಡಿಮೆಯಾಗಿದ್ದರೂ, ಗುರುವಾರ ಬಿರುಸಿನಿಂದ ನೀರು ಹರಿದುದರಿಂದ ದಂಡೆಯಲ್ಲಿ ದೊಡ್ಡ ಕಂದಕ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಮಳೆಗೆ ಒಟ್ಟು 12 ಮಂದಿ ಸತ್ತಿದ್ದು, 72 ಲಕ್ಷ ರೂಪಾಯಿಗಳಷ್ಟು ಮಳೆ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT