ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆಕೆರೆ ಬೆಟ್ಟದ ರಂಗನ ರಥೋತ್ಸವ

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ಮಾಗಡಿ: ಐತಿಹಾಸಿಕ ಹಿನ್ನಲೆಯುಳ್ಳ ಮಾಗಡಿಯ ಸುತ್ತ ವೈವಿಧ್ಯಮಯ ದೇವಾಲಯಗಳಿವೆ. ಪ್ರತಿ ದೇವಾಲಯದ ಹಿಂದೆ ಒಂದೊಂದು ರಾಜರ ಆಳ್ವಿಕೆಯ ಕಥೆಯಿದೆ. ಅಂಥ ದೇವಾಲಯಗಳಲ್ಲಿ ಸೋಲೂರು ಹೋಬಳಿ ತಟ್ಟೆಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯ ಕೂಡ ಒಂದು.

ಇತಿಹಾಸ: ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ರಂಗನಾಥ ಸ್ವಾಮಿ ದೇವಾಲಯವಿದು. ವಿಶಾಲವಾದ ಬೆಟ್ಟದ ಬಂಡೆಯ ಮೇಲೆ ಚೋಳರು ದ್ರಾವಿಡ ಶೈಲಿಯ ಗರ್ಭಗೃಹ ಮತ್ತು ಪುಟ್ಟ ಪ್ರಾಂಗಣವನ್ನು ನಿರ್ಮಿಸಿದ್ದಾರೆ. ನಂತರ ಬಂದ ವಿಜಯನಗರದ ಅಚ್ಯುತರಾಯರು, ಹೊಯ್ಸಳರು, ಸೋಲೂರು ಸೀಮೆಯನ್ನು ಆಳಿದ ಪಾಳೆಯಗಾರರು ಮತ್ತು ಕೆಂಪೇಗೌಡರು ಬೆಟ್ಟದ ರಂಗನಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ಮೂಲಕ ದಾನದತ್ತಿ ಕೊಟ್ಟಿದ್ದಾರೆ.

ದೇವಾಲಯದ ಪ್ರಾಂಗಣದಲ್ಲಿನ ಕಂಬವೊಂದರ ಮೇಲೆ ಶಿಲಾ ಶಾಸನವಿದೆ. ಬಾಗಿಲು ವಾಡದ ಮೇಲೆ ನಡುವೆ ದೇವತೆಯಿದ್ದು ಎರಡು ಕಡೆಗಳಲ್ಲಿ ಆನೆಗಳು ಹಾರ ಅರ್ಪಿಸುತ್ತಿವೆ. ಕಂಬದ ಮೇಲೆ ರಂಗನಾಥಸ್ವಾಮಿಯನ್ನು ಕೆತ್ತಲಾಗಿದೆ. ದ್ವಾರದ ಎರಡು ಕಡೆಗಳಲ್ಲಿ ಜಯ, ವಿಜಯರ ವಿಗ್ರಹಗಳು ನಯನ ಮನೋಹರವಾಗಿವೆ.

ಕಂಬಗಳಲ್ಲಿ ರಾಜನೊಬ್ಬನ ಉಬ್ಬು ಚಿತ್ರವಿದೆ.  ವೇಣುಗೋಪಾಲ, ವೀಣಾಪಾಣಿ ಸ್ತ್ರೀ ವಿಗ್ರಹವಿದೆ. ಮುನಿಯೊಬ್ಬರು ಗರುಡನಿಗೆ ನಮಿಸುತ್ತಿರುವ ಉಬ್ಬು ಶಿಲ್ಪವಿದೆ. ಗರ್ಭ ಗುಡಿಯ ಎದರು ಎತ್ತರವಾದ ಗರುಡಗಂಭವಿದೆ. ದೇವಾಲಯದ ಹೊರಬಾಗದಲ್ಲಿ ತುಳಸಿಕಟ್ಟೆ ಇದೆ. ಒಳಗಿನ ಪುಟ್ಟಗುಡಿಯಲ್ಲಿ ರಾಮಾನುಜಾ ಚಾರ್ಯರು ಮತ್ತು ಆಳ್ವಾರರ ವಿಗ್ರಹಗಳಿವೆ. ಇತ್ತೀಚೆಗೆ ಸುಂದರವಾದ ಪುಷ್ಕರಣಿಯನ್ನು ನಿರ್ಮಿಸಲಾಗಿದೆ.

ಧಾರ್ಮಿಕ ಹಿನ್ನೆಲೆ:  ಪುರಾಣ ಪುರುಷ ದೂರ್ವಾಸ ಮುನಿ ಈ ದೇವಾಲಯವನ್ನು ಸ್ಥಾಪಿಸಿದರೆಂದು, ಜನಮೇಜಯರಾಯ ಪೂಜಿಸಿದನೆಂದು ನಂಬಲಾಗಿದೆ. ಜೈಮಿನಿ ಭಾರತದ ಕತೃ ಲಕ್ಷ್ಮೀಶ ಕವಿ ತನ್ನ ಕೃತಿಯಲ್ಲಿ ಬೆಟ್ಟದ ರಂಗನನ್ನು ಸ್ಮರಿಸಿದ್ದಾನೆ.

ತಟ್ಟೆಕೆರೆಯ ಟಿ.ಡಿ.ಮಾರಣ್ಣ ಅವರು ಶಿಥಿಲವಾಗಿದ್ದ ಬೆಟ್ಟದ ರಂಗನ ದೇಗುಲವನ್ನು ಭಕ್ತರ ನೆರವಿನೊಂದಿಗೆ ಮೊದಲ ಬಾರಿಗೆ ದುರಸ್ತಿಪಡಿಸಿ ಭಕ್ತರ ದರ್ಶನಕ್ಕೆ ಅರ್ಪಿಸಿದರು. ಅವರು ತಮ್ಮ ಮನೆ ದೇವರಾದ ಬೆಟ್ಟದ ರಂಗನನ್ನು ಕುರಿತು ರಚಿಸಿರುವ `ಭಕ್ತಿ ಸುಧಾವಳಿ~ಯಲ್ಲಿ ಈ ರೀತಿ ವರ್ಣಿಸಿದ್ದಾರೆ.

`ಪರಮ ಪರತರ ಪರಮ ಮಂಗಳ ಸರ್ವ ಲೋಕಾದ್ಧಾರ ಪೂಜಿತ, ವರದ ಶ್ರೀರಂಗನಾಥ ಸ್ವಾಮಿಯೇ ಭಕ್ತಜನ ನಮಿತ, ಪರಮ ಮುನಿ ದುರ್ವಾಸ ಸೇವಿತ ಧರೆಯೋಳತಿ ಶಯದಿಂದ ಮೆರೆಯುವ ವರದ ತಟ್ಟೆಕೆರೆಯ ರಂಗನ ಪಾಲಿಸುಗೆ ಜಗಮ~

ಅದ್ಭುತ ಪರಿಸರ: ಬೆಟ್ಟದ ಮೇಲೆ ದೇವಾಲಯವಿದೆ. ಸುತ್ತಲೂ ಸುಂದರ ಪರಿಸರದ ನಡುವೆ ಕಂಗೊಳಿಸುವ ಬೆಟ್ಟದ ರಂಗನಾಥ ಸ್ವಾಮಿಗೆ ತಟ್ಟೆಕೆರೆಯ ಶ್ರೀನಿವಾಸಯ್ಯ, ಸೋಲೂರಿನ ನರಸಿಂಹಯ್ಯ, ಗೋವಿಂದರಾಜು, ಆರ್.ಮುನಿಯಪ್ಪ ಇತರರು ಭಕ್ತರ ನೆರವಿನೊಂದಿಗೆ ರೂ.6.50ಲಕ್ಷ ವೆಚ್ಚದಲ್ಲಿ ನೂತನ ರಥವನ್ನು ನಿರ್ಮಿಸಿದ್ದಾರೆ. ಸೋಮವಾರ(ಜ.30) ರಥಸಪ್ತಮಿಯ ದಿನ ನಡೆಯುವ ಬ್ರಹ್ಮರಥೋತ್ಸವದಂದು ದೇವರಿಗೆ ಸಮರ್ಪಣೆಯಾಗಲಿದೆ.

ಇಂದು ಬ್ರಹ್ಮರಥೋತ್ಸವ
ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ತಟ್ಟೇಕೆರೆ ಬೆಟ್ಟದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಮಧ್ಯಾಹ್ನ12ರಿಂದ 1 ಗಂಟೆಯೊಳಗೆ ನಡೆಯಲಿದೆ.

ಮಾರ್ಗ: ಸೋಲೂರಿನಿಂದ 2 ಕಿ.ಮಿ.ದೂರದಲ್ಲಿದೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯ. ಉತ್ತಮ ರಸ್ತೆ ವ್ಯವಸ್ಥೆ ಇದೆ. ಸೋಲೂರಿನ ಕೆರೆಯ ಏರಿ ಮೂಲಕವೂ ದೇವಾಲಯ ತಲುಪಬಹುದು. ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಶಿವಗಂಗೆಯ ರಸ್ತೆಯಲ್ಲಿ ತೆರಳಿ ಕನ್ನಸಂದ್ರದ ಬಳಿ ಎಡಕ್ಕೆ ಹೋಗುವ ಡಾಂಬರು ರಸ್ತೆಯಲ್ಲಿಯೂ ಹೋಗಬಹುದು. ಭಕ್ತರಿಗೆ ರಾತ್ರಿ ತಂಗಲು ಛತ್ರದ ವ್ಯವಸ್ಥೆ ಇದೆ. ಆಸಕ್ತರು ಎಸ್.ರಂಗನಾಥ್ (9901006529) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT