ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡರಾತ್ರಿ ನೀರು, ಪ್ರತಿಭಟನೆ ಜೋರು: ಭುಗಿಲೆದ್ದ ಆಕ್ರೋಶ

Last Updated 1 ಅಕ್ಟೋಬರ್ 2012, 7:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಭಾನುವಾರ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಅನತಿ ದೂರದಲ್ಲಿ ಪ್ರತಿಭಟನೆ ನಡೆಸಿದರು.

ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕುಗಳ ನೂರಾರು ರೈತರು ಬೃಂದಾವನಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು ಎರಡು ತಾಸು ಧರಣಿ ನಡೆಸಿದರು. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರು ಜಲಾಶಯದ ಬಳಿಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಬಂಧಿಸಿದರು.

ಕೆ.ಎಸ್.ಪುಟ್ಟಣ್ಣಯ್ಯ, ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ಹೊಸಕೋಟೆ ವಿಜಯಕುಮಾರ್, ಪಿ.ಕೆಂಪೇಗೌಡ ಇತರರನ್ನು ಬಂಧಿಸಿ ಕೆಆರ್‌ಎಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಂಧಿಸಿದ ಅರ್ಧ ಗಂಟೆ ನಂತರ ಬಿಡುಗಡೆ ಮಾಡಲಾಯಿತು.

ರೈತ ಸಂಘದ ಯುವ ಅಧ್ಯಕ್ಷ ಕಡತನಾಳು ಬಾಬು, ಪಾಂಡು, ನಂಜುಂಡಪ್ಪ, ಬಿ.ಸಿ.ಕೃಷ್ಣೇಗೌಡ, ಕರವೇ ಮುಖಂಡ ಸಿ.ಸ್ವಾಮಿಗೌಡ, ಕೃಷಿಕ ಸಮಾಜ ನಿರ್ದೇಶಕ ಬಾಲಕೃಷ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಸಿ.ಎಸ್.ಪುಟ್ಟರಾಜು ಪ್ರತಿಭಟನೆ

ಶ್ರೀರಂಗಪಟ್ಟಣ: ಶನಿವಾರ ರಾತ್ರಿ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುವುದನ್ನು ತಡೆಯಲು ಮುಂದಾಗಿ ಬಂಧನಕ್ಕೆ ಒಳಗಾಗಿದ್ದ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಭಾನುವಾರ ಬೆಳಿಗ್ಗೆ ಕೂಡ ತಮ್ಮ ಬೆಂಬಲಿಗರ ಜತೆಗೂಡಿ ಕೆಆರ್‌ಎಸ್ ಬಳಿ ಪ್ರತಿಭಟನೆ ನಡೆಸಿದರು.

 ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದ ಶಾಸಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜವರೇಗೌಡ, ಲೋಕೇಶ್, ಚೇತನ್, ಮಹೇಶ್, ರಾಜಶೇಖರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಬಿಎಸ್‌ಆರ್ ಕಾಂಗ್ರೆಸ್: ತಾಲ್ಲೂಕಿನ ಕೆಆರ್‌ಎಸ್ ಬಳಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕಟ್ಟೇರಿ ಉದಯಕುಮಾರ್, ರಾಜೇಶ್, ವಿಜಯಕುಮಾರ್, ಜಯರಾಂ, ಕೃಷ್ಣ, ಅನಂತರಾಮು ಇತರರು ಪಾಲ್ಗೊಂಡಿದ್ದರು.


ಬೆಳಗೊಳ: ತಾಲ್ಲೂಕಿನ ಬೆಳಗೊಳ ಗ್ರಾಮಸ್ಥರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಭಾನುವಾರ ಮೈಸೂರು-ಕೆಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಚಿಕ್ಕ ಯಜಮಾನ್ ವಿಷಕಂಠೇಗೌಡ, ಸುನಿಲ್, ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ವಿಷಕಂಠು, ಬಸವರಾಜು, ವಿಟಿಎಲ್ ಮಂಜುನಾಥ್, ಶಶಿಕುಮಾರ್ ಭಾಗವಹಿಸಿದ್ದರು.

ನದಿಗಿಳಿದು ಪ್ರತಿಭಟನೆ, ಉರುಳು ಸೇವೆ
ಶ್ರೀರಂಗಪಟ್ಟಣ
: ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ ತಾಲ್ಲೂಕಿನ ರಾಂಪುರ ಗ್ರಾಮಸ್ಥರು ಭಾನುವಾರ ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದರು.

ಪಟ್ಟಣ- ರಾಂಪುರ ಸಂಪರ್ಕ ಸೇತುವೆ ಬಳಿ ಒಂದು ತಾಸಿಗೂ ಹೆಚ್ಚು ಕಾಲ ನದಿಯಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದ ವರೆಗೆ ಅರೆ ಬೆತ್ತಲೆ ಮೆರವಣಿಗೆ, ಹೆದ್ದಾರಿ ವೃತ್ತದಲ್ಲಿ ಉರುಳು ಸೇವೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎನ್.ಗುರುಪ್ರಸಾದ್, ಶ್ರೀಕಂಠು, ಅಚ್ಚಪ್ಪನಕೊಪ್ಪಲು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಾಜೇಶ್, ಶೇಷಪ್ಪ, ಬೋರೇಗೌಡ, ಮಹದೇವು ಇದ್ದರು.

ಬಿಜೆಪಿ ಪ್ರತಿಭಟನೆ: ಗಂಜಾಂ ಹಾಗೂ ಪಟ್ಟಣದ ಬಿಜೆಪಿ ಕಾರ್ಯಕರ್ತರು ಭಾನುವಾರು ಪಟ್ಟಣದ ಕುವೆಂಪು ಪ್ರತಿಮೆ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಬಲರಾಂ, ಎಂ.ಸಂತೋಷ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಪುರಸಭೆ ಸದಸ್ಯೆ ಪದ್ಮಮ್ಮ, ಉಮೇಶ್‌ಕುಮಾರ್, ಪುಟ್ಟರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ದೊಡ್ಡಪಾಳ್ಯ ಶಿವಕುಮಾರ್, ದಲಿತ ಮುಖಂಡ ಕುಬೇರಪ್ಪ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ, ಕರವೇ ಮುಖಂಡ ಸ್ವಾಮಿಗೌಡ, ಚಂದಗಾಲು ಶಂಕರ್ ಭಾಗವಹಿಸಿದ್ದರು.


ಕಾವೇರಿ: ಬೈಕ್‌ರ‌್ಯಾಲಿ
ಶ್ರೀರಂಗಪಟ್ಟಣ:
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಭಾನುವಾರ ಪಟ್ಟಣದಿಂದ ಕೆಆರ್‌ಎಸ್ ವರೆಗೆ ಬೈಕ್ ರ‌್ಯಾಲಿ ನಡೆಸಿದರು.
ಮಧ್ಯಾಹ್ನ 12.30ರ ವೇಳೆಗೆ ಪಟ್ಟಣದ ಕುವೆಂಪು ಪುತ್ಥಳಿ ಬಳಿಯಿಂದ ರ‌್ಯಾಲಿ ಶುರುವಾಯಿತು.

ಪಶ್ಚಿಮವಾಹಿನಿ, ಪಾಲಹಳ್ಳಿ, ಪಿ.ಹೊಸಹಳ್ಳಿ, ಪಂಪ್‌ಹೌಸ್, ಬೆಳಗೊಳ, ಹೊಸ ಆನಂದೂರು, ಹುಲಿಕೆರೆ ಮಾರ್ಗವಾಗಿ ರ‌್ಯಾಲಿ ಕೆಆರ್‌ಎಸ್ ತಲುಪಿತು.  ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಮಾತನಾಡಿದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ರಾಜ್ಯದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಪಾಂಡು, ಕೃಷ್ಣೇಗೌಡ, ಮರಳಾಗಾಲ ರಾಮಕೃಷ್ಣ, ರಾಂಪುರ ವೆಂಕಟೇಶ, ಕಡತನಾಳು ಕುಮಾರ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಕಾವೇರಿ: ಹೆದ್ದಾರಿಗೆ ಕಲ್ಲಿಟ್ಟು ಪ್ರತಿಭಟನೆ
ಮದ್ದೂರು:
ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಪ್ರತಿಭಟನೆ ನಡೆಸಿದರು.

ಗೆಜ್ಜಲಗೆರೆ:
ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ರೈತಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆದ್ದಾರಿಗೆ ಕಲ್ಲುಗಳನ್ನು ಅಡ್ಡವಿಟ್ಟು, ಎತ್ತಿನಗಾಡಿ ಎತ್ತು, ಎಮ್ಮೆ, ಕುರಿಯೊಂದಿಗೆ ಹೆದ್ದಾರಿಗಿಳಿದು ಪ್ರತಿಭಟನೆ ಆರಂಭಿಸಿದರು.

ರೈತಸಂಘದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಚಂದ್ರು, ರವಿ, ಸಿದ್ದೇಗೌಡ, ನಾಗರಾಜು, ಲಿಂಗಾಪ್ಪಾಜಿ ಸೇರಿದಂತೆ ಶತಾಯುಷಿ ಚೆನ್ನಮ್ಮ ಎಂಬುವರನ್ನು ಪೊಲೀಸರು ಬಂಧಿಸಿದರು. ಬಂಧನದ ಸುದ್ದಿ ತಿಳಿದ ಗ್ರಾಮಸ್ಥರು ರೈತನಾಯಕಿ ಸುನಂದ ಜಯರಾಂ ನೇತೃತ್ವದಲ್ಲಿ ಮತ್ತೆ ಹೆದ್ದಾರಿಯಲ್ಲಿ ಕುಳಿತು ಧರಣಿ ಆರಂಭಿಸಿದರು.  ಈ ನಡುವೆ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಮಾಜಿ ಸಚಿವ ಬೆಂಕಿ ಮಹದೇವು ಕಾರಿನಿಂದ ಇಳಿದು ಬಂದು ರೈತರ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಅರೆಬೆತ್ತಲೆ ಪ್ರದರ್ಶನ: ಸಮೀಪದ ನಿಡಘಟ್ಟ ಬಳಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅರೆ ಬೆತ್ತಲೆ ಪ್ರದರ್ಶನ ನಡೆಸಿ ಹೆದ್ದಾರಿ ತಡೆ ನಡೆಸಿದರು. ಪಕ್ಷದ ಮುಖಂಡ ಅಪ್ಪು ಪಿ.ಗೌಡ, ಚೇತನ್, ಅಂಬರೀಷ್, ಆನಂದ್, ಚಿಕ್ಕಸ್ವಾಮಿ, ಅರ್ಜುನ್, ಅಜೇಯ್, ಪುಟ್ಟಸ್ವಾಮಿ, ಪ್ರಭಾಕರ್, ಶ್ರೀನಿವಾಸ್, ಗೀತಾ, ರತ್ನಮ್ಮ, ರೂಪ  ಪಾಲ್ಗೊಂಡಿದ್ದರು.

ತಮಿಳು ಪತ್ರಿಕೆಗಳಿಗೆ ಬೆಂಕಿ: ಪಟ್ಟಣದ ಸಾರಿಗೆ ಬಸ್‌ನಿಲ್ದಾಣದ ಎದುರು ಗುಂಪುಗೂಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ತಮಿಳು ಪತ್ರಿಕೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

 ಮಹಿಳಾ ಸದಸ್ಯರು ಖಾಲಿ ಕೊಡಗಳ ಪ್ರದರ್ಶನ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಅಧ್ಯಕ್ಷ ಅಶೋಕ್, ಮಹಿಳಾಧ್ಯಕ್ಷೆ ಸೆಲ್ವಿ, ವಾಸು ಸೇರಿದಂತೆ ಹಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ತಮಿಳು ಕಾಲೊನಿಯ ತಮಿಳಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಪ್ರತಿಭಟನೆ: ಪಟ್ಟಣದ ಸಾರಿಗೆ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಂದರ್ಶ, ಗಿರೀಶ್, ಕೆ.ಎಸ್.ನಾಗೇಶ್, ಪ್ರಶಾಂತ್, ತಿಮ್ಮಣ್ಣ, ಯರಗನಹಳ್ಳಿ ಮಹಾಲಿಂಗು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಒಕ್ಕಲಿಗರ ಸಂಘ: ಪಟ್ಟಣದ ಟಿ.ಬಿ.ವೃತ್ತದಲ್ಲಿ ಒಕ್ಕಲಿಗರ ಸಂಘ ಹಾಗೂ ವಿಶ್ವ ಒಕ್ಕಲಿಗರ ಜನಜಾಗೃತಿ ಸಂಘದ ಸದಸ್ಯರು ಟೈರುಗಳನ್ನು ಸುಟ್ಟು ಹೆದ್ದಾರಿ ತಡೆ ನಡೆಸಿದರು. ಸಂಘದ ರಾಜ್ಯಾಧ್ಯಕ್ಷ ಎಂ.ಸಿ.ಲಿಂಗರಾಜು, ಕಾರ್ಯದರ್ಶಿ ಸೋಮಶೇಖರ್, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಮಾರಸಿಂಗನಹಳ್ಳಿ ರಾಮಚಂದ್ರು, ಉಪಾಧ್ಯಕ್ಷರಾದ ರವಿಕುಮ್ಾ, ಪುರುಷೋತ್ತಮ್, ಸಂಚಾಲಕರಾದ ವಿ.ಹರ್ಷ, ಡಿ.ಪಿ.ಶಿವಪ್ಪ, ಮಹೇಶ್, ಮರಿಯಪ್ಪ ಇದ್ದರು.

ಜೆಡಿಎಸ್: ಪಟ್ಟಣದ ಸಾರಿಗೆ ಬಸ್‌ನಿಲ್ದಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶಕಂಠಿ, ಚನ್ನವೀರೇಗೌಡ, ಸುರೇಶ್, ನಾಗೇಶ್ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ವರ್ತಕರ ಪ್ರತಿಭಟನೆ: ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಯ ವರ್ತಕರು, ಹಮಾಲಿಗಳು, ಕೂಲಿಕಾರರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.  ವರ್ತಕರ ಸಂಘದ ಅಧ್ಯಕ್ಷ ಸಿ.ಎಚ್.ರವಿಚನ್ನಸಂದ್ರ, ಪದಾಧಿಕಾರಿಗಳಾದ ರಾಜು, ಕಾಳೀರಯ್ಯ, ಸುರೇಶ, ಮಹೇಶ್, ಉಮೇಶ್, ಕೂಲಿಕಾರರ ಸಂಘದ ಅಧ್ಯಕ್ಷ ಶಿವು ಪಾಲ್ಗೊಂಡಿದ್ದರು.
ಕೊಪ್ಪ: ಇಲ್ಲಿನ ರೈತಸಂಘದ ಕಾರ್ಯಕರ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ಮಾಡಿದರು. ರೈತಸಂಘದ ಅಧ್ಯಕ್ಷ ಕೀಳಘಟ್ಟ ನಂಜುಂಡಯ್ಯ, ಹುರುಗಲವಾಡಿ ಉಮೇಶ್, ಹರಳಕೆರೆ ಮಂಜು, ಪ್ರಭು, ಸಿದ್ದರಾಜು, ಸುನೀಲ್ ಭಾಗವಹಿಸಿದ್ದರು.

ಸೊಳ್ಳೆಪುರ: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 300ಕ್ಕೂ ಹೆಚ್ಚು ವಾಹನಗಳು ಹೆದ್ದಾರಿ ತಡೆಯಿಂದಾಗಿ ಹನಕರೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸೊಳ್ಳೆಪುರಕ್ಕೆ ಬಂದಾಗ ಗ್ರಾಮ ಪಂಚಾಯಿತಿ ಸದಸ್ಯರಾದ ನಂದಕುಮಾರ್, ಎಸ್.ಸಿ.ರಾಮು, ಮಾಜಿ ಸದಸ್ಯ ರಮೇಶ್, ಕೆ.ಸಿ.ಸಿದ್ದು, ಸತೀಶ್ ಅವರುಗಳ ನೇತೃತ್ವದಲ್ಲಿ ಗ್ರಾಮಸ್ಥರು ತಡೆವೊಡ್ಡಿ ಪ್ರತಿಭಟನೆ ನಡೆಸಿದರು.


ಬೆಸಗರಹಳ್ಳಿ: ಇಲ್ಲಿನ ಅಡ್ಡ ರಸ್ತೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ನೇತೃತ್ವದಲ್ಲಿ ರಸ್ತೆ ತಡೆ ಚಳವಳಿ ನಡೆಯಿತು. ರೈತಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಉಮೇಶ್, ಜೆಡಿಎಸ್ ಮುಖಂಡ ಬಿ.ವಿಜಯೇಂದ್ರ, ಆನಂದ್, ರಾಮಪುರಸ್ವಾಮಿ, ರಾಮಲಿಂಗಯ್ಯ, ಮೊಗಣ್ಣ, ವರದಪ್ಪ ನೇತೃತ್ವ ವಹಿಸಿದ್ದರು.

ಕೆ.ಹೊನ್ನಲಗೆರೆ: ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮ ಖಂಡಿಸಿ ಭಾನುವಾರ ಕರೆ ನೀಡಲಾಗಿದ್ದ ಕೆ.ಹೊನ್ನಲಗೆರೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಪ್ರಕಾಶ್ ನೇತೃತ್ವದಲ್ಲಿ ಕೆ.ಹೊನ್ನಲಗೆರೆ-ಹಲಗೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟು, ಸದಸ್ಯರಾದ ಕೆಂಗಲಗೌಡ, ಶಿವಲಿಂಗೇಗೌಡ, ಕೆಂಪಣ್ಣ, ಶಿವಮಾಧು, ಪುಟ್ಟಸ್ವಾಮಿ, ಮಹದೇವು ಇದ್ದರು.
ಗೊರವನಹಳ್ಳಿ: ಇಲ್ಲಿನ ಗ್ರಾಮಸ್ಥರು ಮಳವಳ್ಳಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಮುಖಂಡರಾದ ಮಹೇಶ್, ಸಂತೋಷ್, ಕಾರ್ತಿಕ್, ಪ್ರಮೋದ್, ಕುಮಾರ್, ಸುಭಾಷ್ ಭಾಗವಹಿಸಿದ್ದರು.

ರಸ್ತೆ ತಡೆ: ಸಂಚಾರ ಅಸ್ತವ್ಯಸ್ತ
ಪಾಂಡವಪುರ
: ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ತಾಲ್ಲೂಕಿನಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾಯಿಸಿದ ಜನರು ರಸ್ತೆ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ ವರೆಗೂ ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೇಳಿದ ಪೊಲೀಸರ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದರಿಂದ ಕೆಲ ಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಅಣ್ಣೇಗೌಡ ಅವರು ಮಾತಿಗೆ ಒಪ್ಪಿದ ನಂತರ ರಸ್ತೆ ಸಂಚಾರ ಸುಗಮವಾಗಿದ್ದರೂ ಸಾರಿಗೆ ಬಸ್‌ಗಳು ಸಂಚರಿಸಲೇ ಇಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿಯುಂಟಾಯಿತು.

ಶಾಸಕ ಸಿ.ಎಸ್.ಪುಟ್ಟರಾಜು, ರೈತ ಸಂಘದ ಮುಖಂಡ ನುಗ್ಗಹಳ್ಳಿ ಅರುಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ರಾಮಕೃಷ್ಣ, ಬಿಜೆಪಿ ಮುಖಂಡರಾದ ಎಚ್.ಎನ್.ಮಂಜುನಾಥ್, ರಾಜಕುಮಾರ, ಬ್ರಾಹ್ಮಣರ ಸಂಘದ ಜನಾರ್ಧನ್, ಇ.ಎಸ್.ಸೀತಾರಾಮಯ್ಯ ಭಾಗವಹಿಸಿದ್ದರು.


ಬ್ರಾಹ್ಮಣರ ಸಂಘ: ತಾಲ್ಲೂಕಿನ ಬ್ರಾಹ್ಮಣರ ಸಂಘದ ಸದಸ್ಯರು ಕಾವೇರಿ ನೀರಿನ ಹೋರಾಟಕ್ಕೆ ಬೆಂಬಲ ಸೂಚಿಸಿ ಪಟ್ಟಣದ ಐದು ದೀಪ ವೃತ್ತದಲ್ಲಿ ಧರಣಿ ನಡೆಸಿದರು.

ಪತ್ರಕರ್ತರ ಸಂಘ: ತಾಲ್ಲೂಕು ಕಾರ‌್ಯನಿರತ ಪತ್ರಕರ್ತರ ಸಂಘದಿಂದ ಧರಣಿ ನಡೆಸಿ ಕಾವೇರಿ ನೀರಿನ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕ್ರೈಸ್ತರಿಂದ ಪ್ರಾರ್ಥನೆ: ಕಾವೇರಿ ನೀರಿನ ಹೋರಾಟಕ್ಕೆ ಬೆಂಬಲಿಸಿ ಪಟ್ಟಣದ    ಚರ್ಚ್‌ನಲ್ಲಿ ಫಾದರ್ ಡೇವಿಡ್ ಸಗಾಯ್‌ರಾಜ್ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರೈಲ್ವೆ ನಿಲ್ದಾಣದಲ್ಲಿ: ತಾಲ್ಲೂಕಿನ ರೈಲ್ವೆ ನಿಲ್ದಾಣದಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರಾಜ್ಯ ಸರ್ಕಾರ ವಿಫಲ: ರಾಜ್ಯದ ಹಿತಕಾಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಸರ್ಕಾರ ಈ ಮೊದಲು ತೆಗೆದುಕೊಂಡು ನಿರ್ಧಾರಕ್ಕೆ ಬದ್ದವಾಗಲಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಕೃಷ್ಣರಾಜಪೇಟೆ
: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶಿಸಿರುವ ಸುಪ್ರೀಂಕೋರ್ಟ್ ಮತ್ತು ಕೇಂದ್ರ  ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೈಸೂರು ಚನ್ನರಾಯಪಟ್ಟಣ ರಸ್ತೆಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಎ.ಸಿ.ಕಾಂತರಾಜು, ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ತಾಲ್ಲೂಕು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರಫೀಕ್ ಅಹಮದ್, ಕಾರ್ ಮಾಲೀಕರು ಮತ್ತು ಚಾಲಕರ ಸಂಘದ ಚಂದ್ರಶೇಖರ್,ಕುಮಾರ್, ನಂದಾ, ಮಂಜು, ಉಮೇಶ್, ಮೋಹನ್, ಆಟೊ ಮಾಲೀಕರು ಮತ್ತು ಚಾಲಕರ ಸಂಘದ ರವಿ, ಚಂದ್ರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಶಾಸಕರಿಂದ ಪ್ರತಿಭಟನೆ
ಮಳವಳ್ಳಿ:
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಅವರ ಬೆಂಬಲಿಗರು ಪಟ್ಟಣದ ಅನಂತರಾಂ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ನೀರು ಬಿಟ್ಟಿದೆ. ಸುಪ್ರೀಂಕೋರ್ಟ್ ಸಹ ಅವೈಜ್ಞಾನಿಕ ತೀರ್ಪು ನೀಡಿದೆ. ಇದರಿಂದ ರಾಜ್ಯದ ಜನತೆ ತೀವ್ರ ತೊಂದರೆಗೆ ಒಳಗಾಗಿ ಮುಂದಿನ ದಿನಗಳಲ್ಲಿ ನೀರು ಮೇವಿಗೂ ಪರಿತಪಿಸಬೇಕಾಗುತ್ತದೆ. ಇದನ್ನು ವಿರೋಧಿಸಿ ಹೋರಾಟ ಮಾಡಲು ಪಕ್ಷಬೇಧ ಮರೆತು ಸಂಘಟಿತರಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೌಡಯ್ಯ ಮಾತನಾಡಿದರು ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಲಿಂಗಯ್ಯ, ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಗಂಗರಾಜೇಅರಸು, ಅಮೃತ್‌ಕಂಠೇಶ್, ಸುರೇಶ್, ಜಯಣ್ಣ, ರಾಜೇಶ್ ಇದ್ದರು.

ಜೆಡಿಎಸ್ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಭಾನುವಾರ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಅನಂತರಾಂವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸದಸ್ಯರಾದ ನಂದಕುಮಾರ್, ಬಸವರಾಜು, ಮುಖಂಡರಾದ ಪಾಷ, ಸದಾನಂದ, ಶಿವಣ್ಣ, ಪ್ರಭು.ಎಲ್.ಗೌಡ, ಕಂಬರಾಜು ಇತರರು ಇದ್ದರು. ತಾಲ್ಲೂಕಿನ ಹಾಡ್ಲಿ-ಮೇಗಳಪುರ ವೃತ್ತದಲ್ಲೂ ಕೆಲ ಸಮಯ ರಸ್ತೆ ತಡೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಹಲಗೂರು:
ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಲಗೂರು ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದವು.
ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಅದರನ್ವಯ ತಕ್ಷಣ ಜಾರಿಗೆ ಬರುವಂತೆ ನೀರು ಬಿಡಲು ಆದೇಶಿಸಿದೆ. ಕುಡಿಯುವ ನೀರಿಗೂ ತೊಂದರೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದರು. ನವಕರ್ನಾಟಕ ಯುವಶಕ್ತಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಕುಮಾರ್, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಕನ್ನಡಗಿರೀಶ್, ಕರವೇ ಪ್ರವೀಣ್‌ಶೆಟ್ಟಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರು, ಹೋಬಳಿ ಘಟಕದ ಅಧ್ಯಕ್ಷ ಗೊಲ್ಲರಹಳ್ಳಿ ಸತೀಶ್, ರಮೇಶ್, ನಾಗರಾಜು, ರಾಮು ಇದ್ದರು.

ಸಂಚಾರ ದಟ್ಟಣೆ: ಜಿಲ್ಲೆಯಲ್ಲಿ ಕಾವೇರಿ ಕಾವು ಹೆಚ್ಚಿದ ಹಿನ್ನೆಲೆಯಲ್ಲಿ ಹಲಗೂರು ಮಾರ್ಗವಾಗಿ ಚಲಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿ ಭಾನುವಾರ ಸಂಚಾರ ದಟ್ಟಣೆ ಉಂಟಾಯಿತು. ಬೆಂಗಳೂರು, ಕೊಳ್ಳೇಗಾಲ, ಮೈಸೂರು ನಗರಗಳಿಗೆ ಮಂಡ್ಯ ಮೂಲಕ ವಾಹನಗಳು ಹಾದುಹೋಗಬೇಕು. ಜಿಲ್ಲಾ ಕೇಂದ್ರ, ಮದ್ದೂರು, ಭಾರತಿನಗರ, ಶ್ರೀರಂಗಪಟ್ಟಣ  ಸೇರಿದಂತೆ ಮೈಸೂರು-ಬೆಂಗಳೂರು ಹೆದ್ದಾರಿಯ ಹಲವು ಗ್ರಾಮಗಳಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆದವು. ಇದರಿಂದಾಗಿ ವಾಹನಗಳು ಬನ್ನೂರು, ಮಳವಳ್ಳಿ, ಹಲಗೂರು (ರಾ.ಹೆ.209) ಮಾರ್ಗವಾಗಿ ಚಲಿಸಿದವು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಭಾರತೀನಗರ:
ಸುಪ್ರೀಂಕೋರ್ಟ್ ಸೂಚನೆಯಂತೆ ಶನಿವಾರ ತಡರಾತ್ರಿಯಿಂದ ತಮಿಳು ನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಭಾರತೀನಗರದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾನುವಾರ ರಸ್ತೆತಡೆ ನಡೆಸಿದರು. ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಹಲಗೂರು ವೃತ್ತದಲ್ಲಿ ಧರಣಿ ಕುಳಿತರು. ಇದರಿಂದ 1 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.
 
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಎಸ್.ರಾಜೀವ್, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ, ರೈತ ಸಂಘದ ಮುಖಂಡರಾದ ಅಣ್ಣೂರು ಸಿದ್ದೇಗೌಡ, ರಾಮಲಿಂಗೇಗೌಡ, ರವಿಕುಮಾರ್, ಮಹೇಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಚಿಕ್ಕವೆಂಕಟೇಗೌಡ, ಮುಖಂಡರಾದ ವಿನಯ್, ಕುಮಾರ್, ಸ್ವಾಮಿ, ಸಿದ್ದೇಗೌಡ ಭಾಗವಹಿಸಿದ್ದರು.

ಬೋರಾಪುರ ಗೇಟ್: ಇಲ್ಲಿಗೆ ಸಮೀಪದ ಬೋರಾಪುರ ಗೇಟ್ ಬಳಿ ರೈತ ಸಂಘದ ಮುಖಂಡ ಶಂಕರೇಗೌಡ ನೇತೃತ್ವದಲ್ಲಿ ನೂರಾರು ರೈತರು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT