ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಬಂದ ಅಧಿಕಾರಿಗಳಿಗೆ ಮಂಗಳಾರತಿ

Last Updated 20 ಜುಲೈ 2012, 6:05 IST
ಅಕ್ಷರ ಗಾತ್ರ

ಮೈಸೂರು: ತಡವಾಗಿ ಬಂದ ಅಧಿಕಾರಿಗಳು, ಸಿಗದ ದಾಖಲೆಗಳು, ಸಿಟ್ಟಿಗೆದ್ದ ಜಿಲ್ಲಾಧಿಕಾರಿ..!
-ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯ ಮುಖ್ಯಾಂಶಗಳಿವು.

ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕೆಲವು ಇಲಾಖೆಗಳ ಪ್ರತಿನಿಧಿಗಳು ತಡವಾಗಿ ಸಭೆಗೆ ಬಂದಿದ್ದರಿಂದ ಕುಂದುಕೊರತೆಗಳಿಗೆ ಸಂಬಂಧಿಸಿದ ವಿವರಣೆ ದಾಖಲೆಗಳು ಸಿಗದೇ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ತೀವ್ರ ಅಸಮಾಧಾನಗೊಂಡರು.

`ಸಭೆ ಬೆಳಿಗ್ಗೆ ಒಂಬತ್ತು ಗಂಟೆಗೆ ಶುರುವಾಗುತ್ತದೆ. ಹತ್ತು ನಿಮಿಷ ಮೊದಲೇ ಇಲಾಖೆಯ ಪ್ರತಿನಿಧಿಗಳು ಬಂದು ತಮ್ಮ ಎಲ್ಲ  ದಾಖಲೆಗಳನ್ನೂ ನೀಡಬೇಕು. ಆದರೆ ನೀವು ಬಂದಿರುವುದು 10.30ಕ್ಕೆ, ಇನ್ನೇನು ಸಭೆ ಮುಗಿಯುವ ಹೊತ್ತಾಗಿದೆ. ಇಷ್ಟು ಬೇಜಾವಾಬ್ದಾರಿ ಇದ್ದರೆ ಹೇಗೆ? ನಿಮ್ಮ ಇಲಾಖೆಗಳ ಜಂಟಿ ನಿರ್ದೇಶಕರಿಗೆ ಅಥವಾ ಮೇಲಧಿಕಾರಿಗಳಿಗೆ ನಾನು ಒಂದು ಪತ್ರ ಬರೆದರೆ ಅಮಾನತ್ತು ಗೊಳ್ಳುತ್ತೀರಿ. ಷೋಕಾಸ್ ನೋಟಿಸ್ ಕೊಡಬೇಕಾ ಗುತ್ತದೆ. ಇದು ಕೊನೆಯ ಎಚ್ಚರಿಕೆ, ಮುಂದಿನ ಬಾರಿ ಹೀಗಾದರೆ ಕಠಿಣ ಕ್ರಮ ಎದುರಿಸುತ್ತೀರಿ~ ಎಂದು ಕಟುವಾಗಿ ಎಚ್ಚರಿಸಿದರು.

`ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ  ಸಿಗುತ್ತಿಲ್ಲ ಎಂದು ಹಲವರು ದೂರು ನೀಡಿದ್ದಾರೆ. ಆದ್ದರಿಂದ ಪ್ರತಿ ಸೋಮವಾರ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಭೇಟಿಯಗಲೇಬೇಕು. ಇದಕ್ಕಾಗಿ ಒಂದು ವೇಳೆ ನಿಗದಿಗೊಳಿಸಿ, ಎಲ್ಲ ಅಧಿಕಾರಿಗಳ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು~ ಎಂದರು.

ಬರದ್ದೇ ಸದ್ದು: ಸಭೆಯಲ್ಲಿ ಇಪ್ಪತ್ತು ಜನರು ವಿವಿಧ ತಾಲ್ಲೂಕುಗಳಿಂದ ಕರೆ ಮಾಡಿದ್ದರು. ಅದರಲ್ಲಿ ಬಹು ತೇಕ ಬರಗಾಲಕ್ಕೆ ಮತ್ತು ಜಮೀನು ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿ ದ್ದವು.  ಎಚ್.ಡಿ.ಕೋಟೆ ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕುಗಳಿಂದ ಹೆಚ್ಚಿನ ಕರೆ ಇದ್ದವು.

ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಕೊರತೆ, ವಿದ್ಯುತ್ ಸಮಸ್ಯೆಗಳ ದೂರುಗಳ ಪರಿಹಾರ ಕ್ಕಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಾರಾಯಿ ಅಂಗಡಿ, ಚೀಟಿ ಸಮಸ್ಯೆ: ಪಿರಿಯಾಪಟ್ಟಣ ತಾಲ್ಲೂಕಿನ ಕಂಬದಹಳ್ಳಿಯಲ್ಲಿ ಸರ್ಕಾರಿ ಶಾಲೆಯ ಬಳಿಯ ಮನೆಯೊಂದರಲ್ಲಿ ಅನಧಿಕೃತವಾಗಿ ಮದ್ಯ ಮಾರಲಾಗುತ್ತಿದೆ. ಇದರಿಂದ ಬಡಜನರು ತಮ್ಮ ಕೂಲಿ ಆದಾಯವನ್ನೆಲ್ಲ ಮದ್ಯಕ್ಕೆ ಸುರಿಯುತ್ತಿದ್ದಾರೆ. ಊರಿನ ವಾತಾವರಣ ಹಾಳಾಗುತ್ತಿದೆ ಎಂದು ಮಲ್ಲೇಶ್ ದೂರು ನೀಡಿದರು.

ಇದರ ಬಗ್ಗೆ ವಿವರಗಳನ್ನು ಪಡೆದ ಜಿಲ್ಲಾಧಿಕಾರಿ ಗಳು, ಪೊಲೀಸ್ ವರಿಷ್ಠಾಧಿಕಾರಿಗಳು  ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ವಿದ್ಯಾರ್ಥಿನಿಯೊಬ್ಬಳು ಚೀಟಿ ಸಮಸ್ಯೆಯ ಬಗ್ಗೆ ಕರೆ ಮಾಡಿದ್ದು ವಿಶೇಷವಾಗಿತ್ತು. ಎಚ್.ಡಿ ಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಚೀಟಿ ವ್ಯವಹಾರ ವೊಂದರ ಕುರಿತು ದೂರು ನೀಡಿದ್ದು ಎಲ್ಲರ ಗಮನ ಸೆಳೆಯಿತು. ಇದರಲ್ಲಿ ವಂಚನೆ ನಡೆಯುವ ಶಂಕೆಯಿದ್ದು, ಅಕ್ರಮ ಚೀಟಿ ವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

`ನಿಮ್ಮ ಊರಿನಲ್ಲಿ ಮೇವು, ನೀರು, ಕರೆಂಟ್ ಸಮಸ್ಯೆ ಇಲ್ಲವೇ? ಚೀಟಿ ಸಮಸ್ಯೆ ಮಾತ್ರವೇ?~ ಎಂದು ಮರುಪ್ರಶ್ನೆ ಹಾಕಿದ ಜಿಲ್ಲಾಧಿಕಾರಿಗಳಿಗೆ, `ಬಡಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ನನ್ನ ತಾಯಿಯೂ ಚೀಟಿ ಹಾಕಿದ್ದಾರೆ ಸರ್~ ಎಂದು ಪ್ರತ್ಯುತ್ತರ ಸಿಕ್ಕಿತ್ತು. ಆಗ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ, ಪೊಲೀಸ್ ಇಲಾಖೆಗೂ ಸೂಚನೆ ನೀಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಕುಮುದ ಗಿರೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ಬಸವರಾಜ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT