ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣ್ಣನೆ ನೀರಿಗೆ ಮಣ್ಣಿನ ಮಡಿಕೆ

Last Updated 13 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೇಸಿಗೆ ಬಂದಾಗಿದೆ. ಬಿಸಿಲ ಧಗೆಗೆ ತಂಪು ತಂಪಾದ ಪಾನೀಯ, ಐಸ್‌ಕ್ರೀಂಗಳನ್ನು ತಿನ್ನಬೇಕು ಎಂದು ಮನಸು ಕಾತರಿಸುತ್ತದೆ. ಹಾಗಂತ ಅದನ್ನೇ ಸೇವಿಸುವಂತಿಲ್ಲ. ಸದಾ ಬಾಯಾರಿಕೆ ನೀಗಲು ತಂಪಾದ ನೀರೇ ಬೇಕು. ಪದೇ ಪದೇ ಕೈಕೊಡುವ ಕರೆಂಟು. ಆದರೆ, ಫ್ರಿಜ್, ಕರೆಂಟು ಎರಡೂ ಇಲ್ಲದೆ ನೀರನ್ನು ತಂಪಾಗಿಡುವ ಮಾರ್ಗವೆಂದರೆ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ತುಂಬಿಡುವುದು.

ನಾಗರಿಕತೆಯುದ್ದಕ್ಕೂ ಆವಿಷ್ಕಾರಗೊಂಡ ಎ್ಲ್ಲಲಾ ಪಾತ್ರೆ ಪಗಡೆಗಳಿಗೂ ಮಣ್ಣಿನ ಮಡಿಕೆಯೇ ಮಾದರಿ. ಮಣ್ಣಿನ ಮಡಿಕೆಯ ಇತಿಹಾಸ ಎಷ್ಟು ಹಿಂದಿನದೆಂದು ತಿಳಿಯಲು ಕೃಷ್ಣನ ನೆನಪೇ ಸಾಕು. ಬಾಲಕೃಷ್ಣ ಎಂದಾಗ ಕಣ್ಣಿಗೆ ಕಟ್ಟುವುದೇ ಬೆಣ್ಣೆ ತುಂಬಿದ ಗಡಿಗೆಯಿಂದ ಬೆಣ್ಣೆ ತಿನ್ನುವ ಮಗುವಿನ ಚಿತ್ರ.

ರೆಫ್ರಿಜರೇಟರ್‌ಗಳು ಬಂದು ದಶಕಗಳೇ ಕಳೆದಿವೆ. ಅದು ನಗರ, ಗ್ರಾಮೀಣ ಎಂಬ ಭೇದವಿಲ್ಲದೆ ಆವರಿಸಿದೆ. ಗ್ಯಾಸ್ ಸ್ಟೌಗಳು ಅಡುಗೆ ಮನೆ ಪ್ರವೇಶಿಸಿದಾಗ ಮಣ್ಣಿನ ಮಡಿಕೆಗಳು ಮಸಣದ ಯಾತ್ರೆಗಷ್ಟೇ ಸೀಮಿತ ಎಂದೇ ಭಾವಿಸಲಾಗಿತ್ತು. ಆದರೆ ಬೇಸಿಗೆ ಬಂದರೆ ಸಾಕು ಅದೇ ಸಾಂಪ್ರದಾಯಿಕ ಮಣ್ಣಿನ ಮಡಿಕೆಗಳ ಮಾರಾಟದ ಭರಾಟೆ ಜೋರಾಗುತ್ತದೆ. ಇದು ಮಹಾನಗರವನ್ನೂ ಬಿಟ್ಟಿಲ್ಲ.

ನಗರದೆಲ್ಲೆಡೆ ಈಗ ಮಣ್ಣಿನ ಮಡಿಕೆಗಳು ಮತ್ತು ಹೂಜಿಗಳ ಮಾರಾಟ ಜೋರಾಗಿದೆ. ಮಾಗಡಿ ರಸ್ತೆ, ವಿಜಯನಗರ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆಯ ಅನೇಕ ಕಡೆ ಕುಂಬಾರರು ಬೀಡುಬಿಟ್ಟಿದ್ದಾರೆ. ಮಣ್ಣಿನ ಮಡಿಕೆಗಳಿಗೆ ಸಾವಿರಾರು ರೂಪಾಯಿ ತೆರಬೇಕಾಗಿಲ್ಲ, ಇಡಲು ಸ್ವಲ್ಪವೇ ಜಾಗ ಸಾಕು. ಹಾಗಾಗಿ ಖರ್ಚಿಲ್ಲದೆ ತಂಪು ನೀರು ಸಂಗ್ರಹಿಸಿಟ್ಟುಕೊಳ್ಳುವ ಸುಲಭ ವಿಧಾನ ಇದು. ವ್ಯಾಪಾರಕ್ಕೂ ವಿಶಾಲವಾದ ಜಾಗವೇನೂ ಬೇಕಾಗಿಲ್ಲ. ಹಾಗಾಗಿ ಇದು ಬಡವರ ಫ್ರಿಜ್ ಎಂದೇ ಕರೆಸಿಕೊಂಡಿದೆ.

ಮಣ್ಣಿಗೂ ಬರ
ಮೂರು ದಶಕಗಳಿಂದ ಕುಂಬಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿರುವ ಮಾಗಡಿ ರಸ್ತೆಯ ಕಮಲ ಅವರ ಅನುಭವದ ಮಾತು ಕೇಳಿ-
`ಬೆಂಗಳೂರಿಗೆ ಮಣ್ಣಿನ ಮಡಿಕೆಗಳು ದೇವನಹಳ್ಳಿ ಕಡೆಯಿಂದ ಬರುತ್ತವೆ. ಕೆರೆಯ ಮಣ್ಣಿನಿಂದ ಮಡಿಕೆಗಳನ್ನು ತಯಾರಿಸಲಾಗುತ್ತದೆ. ಆದರೆ ಕೆರೆಗಳೆಲ್ಲ ಮಾಯವಾಗಿ ವಸತಿ ಸಮುಚ್ಚಯಗಳು ತಲೆಯೆತ್ತಿದ ಪರಿಣಾಮವಾಗಿ ಮಣ್ಣಿಗೂ ಬರ ಬಂದಿದೆ. ಹಳ್ಳಿಗಳಿಂದ ಕೆರೆಯ ಮಣ್ಣು ಸಂಗ್ರಹಿಸಬೇಕು. ಹಾಗಾಗಿ ಕುಂಬಾರರ ಬದುಕು ಅಷ್ಟೇನೂ ಹಸನಾಗಿಲ್ಲ. ನೂರು ಮಡಿಕೆ ತಯಾರಿಸಿದರೆ ಐವತ್ತು ಒಡೆದುಹೋಗುತ್ತದೆ' ಎಂದು ಕಷ್ಟ ತೋಡಿಕೊಳ್ಳುತ್ತಾರೆ ಕಮಲ.
`ಚಿತ್ತಾರದ ಪುಟ್ಟ ಮಡಿಕೆಗಳನ್ನು ವರ್ಷವಿಡೀ ಮದುವೆ, ಹಬ್ಬ ಮುಂತಾದ ಸಮಾರಂಭಗಳಿಗೆ ಬಳಸುವ ಕಾರಣ ಬೇಡಿಕೆ ಇದ್ದೇ ಇರುತ್ತದೆ. ದೃಷ್ಟಿಬೊಂಬೆಗಳು, ಹೋಮಗಳಿಗೆ ಬಳಸುವ ಮಡಿಕೆಗಳು, ಕೆಲ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಇದೆ.

ಇನ್ನು, ಮಾರ್ವಾಡಿ ಜನಾಂಗದವರು ಪ್ರತಿ ಅಮವಾಸ್ಯೆ ದಿನ ಮಣ್ಣಿನ ಮಡಿಕೆಗಳನ್ನು ದಾನ ನೀಡುವ ಸಂಪ್ರದಾಯವಿದೆ. ಎಲ್ಲ ವಸ್ತುಗಳ ಬೆಲೆ ಏರುತ್ತಿದ್ದಂತೆ ಮಡಿಕೆಗೂ ಬೆಲೆ ಏರುತ್ತಿದೆ. ಕೆರೆಗಳ ನಾಶದಿಂದ ಮಣ್ಣಿನ ಕೊರತೆ ತೀವ್ರವಾಗಿದೆ. ಹಳ್ಳಿಗಳಿಂದ ಕೆರೆ ಮಣ್ಣು ಸಂಗ್ರಹಿಸಿ ತರುವುದು ಹೆಚ್ಚಿನ ಖರ್ಚಿನ ಬಾಬತ್ತು' ಎಂಬುದು ಅವರ ವಿವರಣೆ.

`ಎರಡು ಬಿಂದಿಗೆ ನೀರು ತುಂಬುವಷ್ಟು  ದೊಡ್ಡ ಗಾತ್ರದ ಮಡಿಕೆಗಳಿಗೆ ರೂ 80ರಿಂದ 150ರವರೆಗೂ ಬೆಲೆ ಇದೆ. ಹೂಜಿಗಳ ಬೆಲೆ ಇನ್ನೂ ಅಧಿಕವಾಗಿದೆ. ಮಡಿಕೆ ಕೊಂಡು ತಂದು ನಗರದಲ್ಲಿ ಮಾರುವವರ ಸ್ಥಿತಿಯೂ ಭಿನ್ನವಾಗಿಲ್ಲ. ಒಂದು ಲೋಡು ಮಡಿಕೆಗೆ ರೂ 15,000ರಿಂದ 20.000 ಬೆಲೆ ಇದೆ. ಒಂದು ಲೋಡಿನಲ್ಲಿ ಸುಮಾರು 50 ಮಡಿಕೆಗಳಿರುತ್ತವೆ. ಇದರಲ್ಲಿ ಕೆಲವು ಸಾಗಾಟದ ವೇಳೆ ಒಡೆದು ನಷ್ಟವಾಗುತ್ತದೆ. ಇನ್ನು ವ್ಯಾಪಾರದ ಜಾಗದಲ್ಲಿ ಕೈಜಾರಿ ಕೆಲವು ಒಡೆದು ಹೋಗುವುದೂ ಇದೆ. ಮಳೆಗಾಲದಲ್ಲಿ ತಿಂಗಳಿಗೆ ಒಂದೂ ಮಾರಾಟವಾಗದಿರುವ ಸಂದರ್ಭವೂ ಇದೆ' ಎನ್ನುತ್ತಾರೆ ಕಮಲ.

ತಿಪಟೂರಿನ ಮಡಿಕೆ ಗುಟ್ಟು
ಅಂಬೇಡ್ಕರ್ ಕಾಲೇಜಿನ ಬಳಿ (ಕೆಂಗುಂಟೆ ವೃತ್ತ) ಸುಮಾರು 11ವರ್ಷಗಳಿಂದ ಮಣ್ಣಿನ ಮಡಿಕೆ ಮಾರಾಟ ಮಾಡುತ್ತಿರುವ ಪಾರ್ವತಮ್ಮ ಅಲ್ಲೇ ಚಹಾ ಅಂಗಡಿಯನ್ನೂ ನಡೆಸುತ್ತಿದ್ದಾರೆ. ಅವರು ಹೇಳುವಂತೆ ತಿಪಟೂರು ಕಡೆಯ ಮಡಿಕೆ ತುಂಬ ಬಾಳಿಕೆ ಬರುತ್ತದಂತೆ.


`ಮಣ್ಣಿನ ಗುಣವೋ ಏನೋ ತಿಪಟೂರು ಕಡೆಯ ಮಡಿಕೆ ಹೆಚ್ಚು ಬಾಳಿಕೆ ಬರುತ್ತದೆ. ಹಾಗಾಗಿ ನಾನು ತಿಪಟೂರು ಕಡೆಯ ಮಡಿಕೆಯನ್ನೇ ತಂದು ಮಾರುತ್ತೇನೆ. ಬೆಂಗಳೂರು ಸುತ್ತಮುತ್ತಲಿನ ಮಡಿಕೆಗಳ ಬಾಳಿಕೆ ಕಡಿಮೆ. ಮಡಿಕೆ ಸೋರುತ್ತಿದೆ ಎಂದು ಗ್ರಾಹಕರು ಮತ್ತೆ ಮತ್ತೆ ಹಿಂದಕ್ಕೆ ತರುತ್ತಾರೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಖರ್ಚು ಹೆಚ್ಚಾದರೂ ತಿಪಟೂರಿನಿಂದಲೇ ತರುತ್ತೇನೆ'

`ಬೆಂಗಳೂರಿನಲ್ಲಿ ಬೇಸಿಗೆಯುದ್ದಕ್ಕೂ ದೊಡ್ಡ ಮಡಿಕೆಗೆ ಹೆಚ್ಚು ಬೇಡಿಕೆ. ಒಂದು ಬಿಂದಿಗೆ ನೀರು ತುಂಬುವ ಮಡಿಕೆಯಿಂದ ಮೂರು ಬಿಂದಿಗೆ ನೀರು ತುಂಬುವ ಮಡಿಕೆಗೆ ಹೆಚ್ಚು ಬೇಡಿಕೆ ಇದೆ. ರೂ120ರಿಂದ ರೂ500ವರೆಗೆ ಬೆಲೆ ಇದೆ. ಎಲ್ಲ ಬಗೆಯ ಜನರೂ ಮಡಿಕೆ, ಹೂಜಿಗಳನ್ನು ಕೊಳ್ಳುತ್ತಿದ್ದಾರೆ. ಪೂಜೆ, ಗೃಹಪ್ರವೇಶ, ಮದುವೆ, ಶಾಲಾ ವಾರ್ಷಿಕೋತ್ಸವ ನೃತ್ಯಗಳಲ್ಲಿ ಬಳಸುವ ಆಲಂಕಾರಿಕ ಮಡಿಕೆಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಪ್ರತಿದಿನ ವ್ಯಾಪಾರವಿದೆ. ಮೂರು ತಿಂಗಳಲ್ಲಿ ರೂ1ಲಕ್ಷದವರೆಗೂ ವ್ಯಾಪಾರವಾಗುವ ನಿರೀಕ್ಷೆ ಇದೆ' ಎಂದು ವಿಶ್ವಾಸದ ನಗೆ ಸೂಸುತ್ತಾರೆ ಪಾರ್ವತಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT