ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖಾ ಆಯೋಗ: ಮಾಹಿತಿ ಸಂಗ್ರಹ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಗೋವಾದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಆರೋಪಗಳ ಕುರಿತು ತನಿಖೆ ಕೈಗೊಂಡಿರುವ ನ್ಯಾಯಮೂರ್ತಿ ಎಂ.ಬಿ. ಷಾ ಆಯೋಗವು ಈಗಾಗಲೇ ರಾಜ್ಯದ ಕಬ್ಬಿಣ ಅದಿರು ಗಣಿಗಳಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಇಲ್ಲಿ ತಿಳಿಸಿದ್ದಾರೆ.

ಈ ರಾಜ್ಯದ ಕಬ್ಬಿಣ ಅದಿರು ಗಣಿಗಳಲ್ಲಿ ವಿವಿಧ ಹಂತಗಳಲ್ಲಿ ಸಾಕಷ್ಟು ಪ್ರಮಾಣದ ಅಕ್ರಮಗಳು ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ತನಿಖಾ ಸಮಿತಿಯ ಆರು ತಂಡಗಳು 90 ಸಕ್ರಿಯ ಗಣಿಗಳು ಮತ್ತು 32 ಸ್ಥಗಿತಗೊಂಡ ಗಣಿಗಳಲ್ಲಿ ತಪಾಸಣೆ ಮಾಡಿದ್ದು, ಈಗ ಆಯೋಗ ಈ ಅಂಕಿ-ಅಂಶಗಳ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ತನಿಖೆ ಕೇವಲ ಪ್ರಾಥಮಿಕ ಹಂತದಲ್ಲಿದ್ದು, ಅಂಕಿ-ಅಂಶಗಳ ಮಾಹಿತಿಯನ್ನು ಅವಲೋಕಿಸಲಾಗುತ್ತಿದೆ. ಅಗತ್ಯಬಿದ್ದರೆ ಹೆಚ್ಚಿನ ಸ್ಪಷ್ಟೀಕರಣ ಕೋರಲಾಗುವುದು ಎಂದೂ ಅವರು ನುಡಿದಿದ್ದಾರೆ.

ಶೀಘ್ರ ಕೇಂದ್ರಕ್ಕೆ ವರದಿ: ಕಳೆದ ತಿಂಗಳ ಮಧ್ಯಭಾಗದಲ್ಲಿ ತನಿಖೆ ಆರಂಭಿಸಿದ ಆಯೋಗವು ರಾಜ್ಯದ ಗಣಿ ಮತ್ತು ಭೂಗರ್ಭ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪಡೆದಿರುವ ಮಾಹಿತಿಗಳನ್ನು ಪರಿಶೀಲಿಸುತ್ತಿದೆ. ಗಣಿ ಗುತ್ತಿಗೆ ಪಡೆದವರು ಅಕ್ಕಪಕ್ಕದ ಭೂಮಿಗಳನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವ ಆರೋಪಗಳ ಕುರಿತು ಸಹ ಆಯೋಗ ತನಿಖೆ ಮಾಡುತ್ತಿದೆ. ಮುಂದಿನ 15 ದಿನಗಳಲ್ಲಿ ಈ ಬಗೆಗಿನ ವರದಿಯನ್ನು ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ನೋಟಿಸ್ ಜಾರಿ: ಈ ತನಿಖೆಯೊಂದಿಗೆ, ಅರಣ್ಯ ಇಲಾಖೆಯು ವನ್ಯಜೀವಿ ಧಾಮಗಳ ಮತ್ತು ರಾಷ್ಟ್ರೀಯ ಉದ್ಯಾನಗಳ ಬಳಿ ಗಣಿಗಾರಿಕೆ ನಡೆಸುತ್ತಿರುವ 19 ಗಣಿಗಳಿಗೆ ಕಾರ್ಯ ಸ್ಥಗಿತಗೊಳಿಸಲು ನೋಟಿಸ್ ಜಾರಿಮಾಡಿದೆ. ಅಂತೆಯೇ, ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆಯಡಿ ಅನುಮತಿ ಪಡೆಯದ 40 ಗಣಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಇದಲ್ಲದೆ, ಗೋವಾ ವಿಧಾನಸಭಾ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು (ಪಿಎಸಿ) ರಾಜ್ಯದ 48 ಗಣಿ ಗುತ್ತಿಗೆದಾರರಿಗೆ ನೋಟಿಸ್ ನೀಡಿದೆ.

ಅಕ್ರಮ ಗಣಿಗಾರಿಕೆಯ ತನಿಖೆ ಹಿನ್ನೆಲೆಯಲ್ಲಿ ಗೋವಾದ ದಿಗಂಬರ ಕಾಮತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ತಮ್ಮ ಮೇಲಿನ ಆರೋಪಗಳಿಗೆ ದಂಡ ತೆರುವ ಪರಿಸ್ಥಿತಿ ಎದುರಿಸುತ್ತಿದೆ. ಗೋವಾ ತನ್ನ ಎರಡು ಬಂದರುಗಳ ಮೂಲಕ ಸುಮಾರು 5.4 ಕೋಟಿ ಮೆಟ್ರಿಕ್ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ರಫ್ತು ಮಾಡಿದ್ದು, ಈ ಮೂಲಕ ದೇಶದ ಅತ್ಯಂತ ದೊಡ್ಡ ರಫ್ತುದಾರ ರಾಜ್ಯವಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT