ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಆಗಲಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾರತದ ರಾಜಕೀಯದಲ್ಲಿ ಮಕ್ಕಳು-ಅಳಿಯಂದಿರು ತಮ್ಮ ತಂದೆ-ಮಾವಂದಿರಿಗೆ ಮಗ್ಗುಲಮುಳ್ಳಾಗಿ ಕಾಡಿದ ಅನೇಕ ಉದಾಹರಣೆಗಳಿವೆ. ಕುಟುಂಬ ರಾಜಕಾರಣದ ದೌರ್ಬಲ್ಯದಿಂದ ಪಾರಾದ ರಾಜಕಾರಣಿಗಳು ಬಹಳ ಕಡಿಮೆ.

ಇಂತಹದ್ದೇ ಆರೋಪವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಏಕಮಾತ್ರ ಅಳಿಯ ರಾಬರ್ಟ್ ವಾದ್ರಾ ಈಗ ಎದುರಿಸುತ್ತಿದ್ದಾರೆ. ಹದಿನೈದು ವರ್ಷಗಳ ಹಿಂದೆ ರಾಜೀವ್-ಸೋನಿಯಾರ ಮಗಳು ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗಿದ್ದ ವಾದ್ರಾ, ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಕಡಿಮೆ.

ತಮ್ಮ ಕುಟುಂಬಕ್ಕೆ ಸೇರಿರುವ ಕಿರು ಉದ್ಯಮವನ್ನಷ್ಟೇ ನಡೆಸಿಕೊಂಡು ಬರುತ್ತಿದ್ದ ವಾದ್ರಾ ಆ ಕ್ಷೇತ್ರದಲ್ಲಿಯೂ ವಿಶೇಷವಾದ ಆಸಕ್ತ್ನಿ ತೋರಿಸಿರಲಿಲ್ಲ. ತಮ್ಮ ಕುಟುಂಬದ ಸದಸ್ಯರು ನೆಹರೂ ಕುಟುಂಬದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಎದುರಾದಾಗ ಕಾನೂನು ಪ್ರಕಾರ ಅವರ ಜತೆ ಸಂಬಂಧವನ್ನೇ ಅವರು ಕಡಿದುಕೊಂಡಿದ್ದರು.

ತಮ್ಮ ಅತ್ತೆ ಮತ್ತು ಭಾವನ ಚುನಾವಣಾ ಪ್ರಚಾರದಲ್ಲಿ ಮಾತ್ರ ಪತ್ನಿಯ ಜತೆ ಕಾಣಿಸಿಕೊಳ್ಳುತ್ತಿದ್ದ ಅವರು ರಾಜಕೀಯ ಆಸಕ್ತಿ ತೋರಿಸಿದ್ದು ಕೂಡಾ ಕಡಿಮೆ. ಆದರೆ ಇತ್ತೀಚಿನ ಉತ್ತರಪ್ರದೇಶದ ಚುನಾವಣೆ ವೇಳೆ ಇದ್ದಕ್ಕಿದ್ದ ಹಾಗೆ ತನ್ನ ರಾಜಕೀಯ ಆಕಾಂಕ್ಷೆಯನ್ನು ಹೊರಹಾಕಿ ಎಲ್ಲರ ಹುಬ್ಬೇರಿಸಿದ್ದರು, ಜತೆಗೆ ತಮ್ಮ ಕುಟುಂಬವನ್ನು ಮುಜುಗರಕ್ಕೀಡು ಮಾಡಿದ್ದರು.

ಈಗ  ನಿರ್ಮಾಣ ಸಂಸ್ಥೆ ಡಿಎಲ್‌ಎಫ್ ಜತೆಗಿನ ವ್ಯಾಪಾರಿ ಸಂಬಂಧ ವಾದ್ರಾ ಮತ್ತು ಸೋನಿಯಾ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಕಂಪೆನಿ ವಾದ್ರಾ ಅವರ ಭೂವ್ಯವಹಾರಕ್ಕೆ ಬಡ್ಡಿರಹಿತ ಸಾಲವನ್ನು ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಜಮೀನು ನೀಡಿರುವುದನ್ನು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲಾ ಪ್ರಶ್ನಿಸಿದ್ದಾರೆ.

ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವಿನ ವ್ಯವಹಾರ ಅಕ್ರಮವೆಂದು ಹೇಳುವ ಹಾಗಿಲ್ಲ, ಆದರೆ ಉದ್ಯಮ ಸಂಸ್ಥೆಯೊಂದು ದೇಶದ ಲಕ್ಷಾಂತರ ಯುವ ಉದ್ಯಮಿಗಳನ್ನೆಲ್ಲ ಬಿಟ್ಟು ಆಡಳಿತಾರೂಢ ಪಕ್ಷದ ನಾಯಕಿಯ ಅಳಿಯನನ್ನೇ ಆಯ್ಕೆ ಮಾಡಿ ಔದಾರ್ಯದ ಹೊಳೆ ಹರಿಸಿರುವುದು ಖಂಡಿತ ಕೆಲವು ನೈತಿಕ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.

2007-08ರಲ್ಲಿ   ಕೇವಲ 50 ಲಕ್ಷ ರೂಪಾಯಿ ಬಂಡವಾಳವನ್ನು ಹೊಂದಿದ್ದ ರಾಬರ್ಟ್ ವಾದ್ರಾ ಅವರ ಕಂಪೆನಿ ಮೂರೇ ವರ್ಷಗಳ ಅವಧಿಯಲ್ಲಿ ಡಿಎಲ್‌ಎಫ್‌ನಂತಹ ಸಂಸ್ಥೆ 80 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ಕೊಡುವ ಮಟ್ಟಿಗೆ ಬೆಳೆದದ್ದು ಹೇಗೆ ಎನ್ನುವುದನ್ನು ವಿವರಿಸುವುದು ಆಡಳಿತ ಪಕ್ಷದ ಸಮರ್ಥಕರಿಗೂ ಸಾಧ್ಯವಾಗಿಲ್ಲ.

ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ ವಾದ್ರಾ ಮತ್ತು ಡಿಎಲ್‌ಎಫ್ ಸಂಬಂಧದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾದ ಅಗತ್ಯ ಇದೆ. ವಾದ್ರಾ ಅವರು ಹೇಳುತ್ತಿರುವಂತೆ ಕೇಜ್ರಿವಾಲ್ ಮತ್ತು ಸ್ನೇಹಿತರು ಮಾಡುತ್ತಿರುವ ಆರೋಪ ಆಧಾರರಹಿತವೆಂದಾದರೆ ಅವರಿಗೂ ಶಿಕ್ಷೆಯಾಗಲಿ.

ಪ್ರಿಯಾಂಕಾ ಗಾಂಧಿ ಹಿಂದೊಮ್ಮೆ ಹೇಳಿರುವಂತೆ ರಾಬರ್ಟ್ ವಾದ್ರಾ ಅವರೊಬ್ಬ `ಯಶಸ್ವಿ ಉದ್ಯಮಿ~ಯಾಗಿದ್ದರೆ ಆ ಗೌರವ ಅವರಿಗೆ ಖಂಡಿತ ಸಲ್ಲಬೇಕು. ಆದರೆ ಈ ಯಶಸ್ಸಿನ ಹಿಂದೆ ಅನೈತಿಕ ಮತ್ತು ಅಪ್ರಾಮಾಣಿಕ ವ್ಯವಹಾರಗಳ ಕೊಡುಗೆಗಳಿದ್ದರೆ ಅದು ಕೂಡಾ ಬಯಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT