ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಆಳಕ್ಕಿಳಿಯಲಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯಸಭಾ ಸದಸ್ಯ ಅಮರ್‌ಸಿಂಗ್ ಸೇರಬೇಕಾಗಿದ್ದ ಸ್ಥಳವನ್ನು ಕೊನೆಗೂ ಸೇರಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿದ್ದ ವೋಟಿಗಾಗಿ ನೋಟು ಹಗರಣದ ಪ್ರಮುಖ ರೂವಾರಿಯೆನ್ನಲಾದ ಅಮರ್‌ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ತಿಹಾರ್ ಜೈಲು ಸೇರಿದ್ದಾರೆ. ಜೈಲಿಗೆ ಹೋಗಬೇಕಾಗಿ ಬಂದ ಕಾರಣದಿಂದಾಗಿ ಈ ಪ್ರಕರಣ ಎಲ್ಲರ ಗಮನ ಸೆಳೆದಿದೆ.ಆದರೆ ಅಮರ್ ಸಿಂಗ್ ಕಳೆದೆರಡು ದಶಕಗಳಲ್ಲಿ ನಡೆಸಿದ ಭಾನಗಡಿಗಳು ಹತ್ತಾರು. ಅನಾಮಿಕನಂತೆ ರಾಜಕೀಯ ಪ್ರವೇಶಿಸಿ ಅಚ್ಚರಿಪಡುವಂತೆ ಬೆಳೆದ ಅಮರ್‌ಸಿಂಗ್ ಸಾಂಪ್ರದಾಯಿಕ ರಾಜಕಾರಣಿಯಲ್ಲ. ನೇರ ಚುನಾವಣೆಯಲ್ಲಿ ಸೆಣೆಸಿ, ಬಿದ್ದು, ಎದ್ದು ರಾಜಕೀಯ ಅಧಿಕಾರವನ್ನು ಪಡೆದವರಲ್ಲ. ಅವರೊಬ್ಬ ರಾಜಕೀಯ ದಲ್ಲಾಳಿ. ಅವರದ್ದೇನಿದ್ದರೂ ಅಡ್ಡದಾರಿ. ಗುರಿ ಇಲ್ಲವೇ ದಾರಿಯ ಪಾವಿತ್ರ್ಯದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಸಂಪರ್ಕ ಜಾಲವನ್ನು ಹೆಣೆದು ಅದರಲ್ಲಿ ಅಧಿಕಾರಸ್ಥರನ್ನು ಕೆಡವಿ ಹಾಕಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಂಡು ತಿಂದುಂಡು ಬೆಳೆದವರು. ಪ್ರಭಾವಶಾಲಿ ರಾಜಕಾರಣಿಗಳ ಶಕ್ತಿ-ದೌರ್ಬಲ್ಯಗಳನ್ನೆಲ್ಲ  ಅರಿತಿರುವ ಕಾರಣದಿಂದಾಗಿ ಯಾರೂ ಇಂತಹವರ ಮೈಮುಟ್ಟಲು ಹೋಗುವುದಿಲ್ಲ. ತಮ್ಮ ಹುಳುಕುಗಳು ಬಯಲಾಗಬಹುದೆಂಬ ಭೀತಿ ಇದಕ್ಕೆ ಕಾರಣ. ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ನೇಮಿಸಿದ್ದ ಸದನ ಸಮಿತಿ ಕೂಡಾ ಹಗರಣದ ಆಳಕ್ಕಿಳಿದು ತನಿಖೆ ನಡೆಸದೆ ತಿಪ್ಪೆಸಾರಿಸಿ ಬಿಟ್ಟಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಹಗರಣದ ತನಿಖೆ ಜೀವ ಪಡೆದು ಅಮರ್‌ಸಿಂಗ್ ಜೈಲಿಗೆ ಹೋಗುವಂತಾಯಿತು.

ಅಮರ್‌ಸಿಂಗ್ ಅವರಂತಹ ರಾಜಕೀಯ ದಲ್ಲಾಳಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಬರಬಹುದು. ಇಂತಹವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕು. ಆದರೆ ಅಷ್ಟರಿಂದಲೇ ರಾಜಕಾರಣವನ್ನು ಬಾಧಿಸುತ್ತಿರುವ ಕಾಯಿಲೆಗಳು ವಾಸಿಯಾಗುವುದಿಲ್ಲ. ಇದಕ್ಕಾಗಿ ಅಮರ್‌ಸಿಂಗ್ ಅಂತಹವರನ್ನು ಬಳಸಿಕೊಂಡವರ ಮುಖಗಳು ಕೂಡಾ ಅನಾವರಣಗೊಳ್ಳಬೇಕು. ಚಿತ್ರನಟ ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಉದ್ಯಮಿ ಅನಿಲ್ ಅಂಬಾನಿ ವರೆಗೆ ಹಲವಾರು ಗಣ್ಯರು ಅವರ ಸ್ನೇಹಜಾಲದಲ್ಲಿ ಇದ್ದರು. ಎಡಪಕ್ಷಗಳಿಂದ ಹಿಡಿದು ಕಾಂಗ್ರೆಸ್ ಪಕ್ಷದ ವರೆಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕೂಡಾ ಒಂದಲ್ಲ ಒಂದು ಸಂದರ್ಭದಲ್ಲಿ ಅವರ ಜತೆ ಕೈಜೋಡಿಸಿದವರೇ ಆಗಿದ್ದರು. ವೋಟಿಗಾಗಿ ನೋಟು ಹಗರಣದಲ್ಲಿ ಕೂಡಾ ಅಮರ್‌ಸಿಂಗ್ ಒಂದು ದಾಳ ಮಾತ್ರ. ಅದರ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಇದ್ದರು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದೇ ರೀತಿ ವಿರೋಧ ಪಕ್ಷವಾದ ಬಿಜೆಪಿ ತನ್ನ ಸಂಸದರಿಗೆ ಲಂಚದ ಆಮಿಷವೊಡ್ಡಿದವರ ವಿರುದ್ಧ ಪೊಲೀಸರಿಗೆ ಇಲ್ಲವೇ ಲೋಕಸಭಾಧ್ಯಕ್ಷರಿಗೆ ದೂರು ನೀಡದೆ ಟಿವಿ ಕುಟುಕು ಕಾರ‌್ಯಾಚರಣೆ ಮೂಲಕ ತಪ್ಪಿತಸ್ಥರನ್ನು ಬಯಲು ಮಾಡಲು ಹೊರಟಿದ್ದು ಕೂಡಾ ಸರಿಯಾದ ಕ್ರಮ ಅಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅಮರ್‌ಸಿಂಗ್ ಮತ್ತು ಆರೋಪಿ ಮಾಜಿ ಸಂಸದರನ್ನಷ್ಟೇ ಗುರಿಯಾಗಿಟ್ಟುಕೊಳ್ಳದೆ ವೋಟಿಗಾಗಿ ನೋಟು ಹಗರಣದ ಆಳ-ವಿಸ್ತಾರಗಳನ್ನು ಶೋಧಿಸಿ ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ತಂದು ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT