ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಚುರುಕಿಗೆ ಬಳ್ಳಾರಿಯಲ್ಲಿ ಸಿಬಿಐ ಕಚೇರಿ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತಂಡ ನಗರದಲ್ಲಿ ತಾತ್ಕಾಲಿಕ ಕಚೇರಿ ತೆರೆಯಲಿದೆ. ಸಿಬಿಐನ ಮನವಿಯ ಮೇರೆಗೆ ಜಿಲ್ಲಾಡಳಿತವು ಅನಂತಪುರ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಅಮೆರಿಕನ್ ಗೆಸ್ಟ್‌ಹೌಸ್‌ನ ಒಂದು ಭಾಗವನ್ನು ಬಾಡಿಗೆಗೆ ನೀಡಿದೆ.

ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲಿರುವ ಗಣಿಗಳಲ್ಲಿ ನಡೆದಿರುವ ಅಕ್ರಮದ ಕುರಿತ ತನಿಖೆಯನ್ನು ಚುರುಕುಗೊಳಿಸಲು ಅನುಕೂಲವಾಗುವಂತೆ ನಗರದಲ್ಲೇ ಕಚೇರಿ ತೆರೆಯಲು ಸೂಕ್ತ ಕಟ್ಟಡ ನೀಡುವಂತೆ ಸಿಬಿಐ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಕಟ್ಟಡವನ್ನು ಜಿಲ್ಲಾಡಳಿತ ಮಾಸಿಕ 22800 ರೂಪಾಯಿ ಬಾಡಿಗೆಗೆ ನೀಡಿದೆ.

ಈ ಕಟ್ಟಡದಲ್ಲೇ ಸಿಬಿಐ ಸಿಬ್ಬಂದಿ ತಂಗುವುದಕ್ಕೂ ಅನುಕೂಲವಾಗುವಂತೆ ಐದು ಮಲಗುವ ಕೊಠಡಿಗಳು, ಸ್ನಾನಕ್ಕೆ ಬಚ್ಚಲುಗಳು ಇವೆ. ಅಲ್ಲದೆ, ಇಲ್ಲಿ ಸುಸಜ್ಜಿತವಾದ ಸಭಾಂಗಣ, ವಶಪಡಿಸಿಕೊಂಡ ದಾಖಲೆಗಳನ್ನು ಭದ್ರವಾಗಿ ಇರಿಸಲು ಅನುಕೂಲವಾಗುವಂತಹ ಕೊಠಡಿಗಳೂ ಇವೆ.

ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ, ಅಕ್ರಮದಲ್ಲಿ ಭಾಗಿಯಾದವರ ಬಳ್ಳಾರಿಯಲ್ಲೇ ವಿಚಾರಣೆ ನಡೆಸಲು ಮತ್ತು ದಾಳಿ ನಡೆಸಿದ ನಂತರ ದೊರೆಯುವ ದಾಖಲೆಗಳನ್ನು ಪರಿಶೀಲಿಸಲು ಈ ಕಚೇರಿ ತೆರೆಯಲಿದ್ದು, ನಿತ್ಯವೂ ಈ ಕಚೇರಿಯ ಕಾವಲಿಗಾಗಿ ಸರದಿಯಂತೆ ಮೂವರು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆಗಳು ಇವೆ.

ಸಿಬಿಐ ಕೋರಿಕೆಯ ಹಿನ್ನೆಲೆಯಲ್ಲಿ ಕಟ್ಟಡ ನೀಡುವಂತೆ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರಿಂದ, ಈ ಕಟ್ಟಡವನ್ನು ಸಜ್ಜುಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಟ್ಟಡಕ್ಕೆ ಬಣ್ಣ ಬಳಿದು ವಿದ್ಯುದ್ದೀಪ, ನೀರು ಮತ್ತಿತರ ಸೌಲಭ್ಯ ಕಲ್ಪಿಸುವ ಕೆಲಸಗಳನ್ನೂ ಕೈಗೆತ್ತಿಕೊಳ್ಳಲಾಗಿದೆ.

ಗುರುವಾರ ಬೆಳಿಗ್ಗೆ ಸಿಬಿಐನ ಇಬ್ಬರು ಸಿಬ್ಬಂದಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪೀಠೋಪಕರಣ ಜೋಡಿಸುವ ಕಾರ್ಯ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಗಣಿಗಳಿಗೆ ಭೇಟಿ: ಏತನ್ಮಧ್ಯೆ, ಗುರುವಾರ ಬೆಳಿಗ್ಗೆ ಸಿಬಿಐನ ಹೆಚ್ಚುವರಿ ಎಸ್‌ಪಿ  ಆರ್.ಎಂ. ಖಾನ್ ನೇತೃತ್ವದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಂಧ್ರದ ಓಬಳಾಪುರಂ ಮೈನಿಂಗ್ ಕಂಪೆನಿ ಗಣಿ ಪ್ರದೇಶದ ಪರಿಶೀಲನೆಗೆ ತೆರಳಿದ್ದು, ಕೆಲವರು ಸಂಡೂರು ಮತ್ತು ಹೊಸಪೇಟೆ ತಾಲ್ಲೂಕಿನ ಗಣಿಗಳಿಗೆ ತೆರಳಿದ್ದಾರೆ.ಕೆಲವು ಗಣಿ ಮಾಲೀಕರ ಬ್ಯಾಂಕ್ ಖಾತೆಗೆಳ ಪರಿಶೀಲನೆ ಕಾರ್ಯವನ್ನೂ ಸಿಬಿಐ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT