ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಆಗ್ರಹಿಸಿ ಗ್ರಾಮಸ್ಥರ ಧರಣಿ

Last Updated 1 ಜೂನ್ 2011, 8:20 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ದೇವಲಾಪೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಪತ್ತಿನ ಸೊಸೈಟಿಯಲ್ಲಿ ರಾಜ್ಯ ಸರ್ಕಾರದ ಸಹಾಯಧನ ದುರುಪಯೋಗವಾಗಿದ್ದು, ಈ ಕುರಿತು ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಹಸೀಲದಾರ ಕಾರ್ಯಾಲಯದ ಎದುರು ಧರಣಿ ನಡೆಸಿದರು.

ಈ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿರುವ ಅವರು, ಕೃಷಿ ಪತ್ತಿನಲ್ಲಿ ಸಾಲ ಪಡೆದ 400 ಸದಸ್ಯರಿದ್ದು, 2001ರಿಂದ 2008 ಅವಧಿಯಲ್ಲಿ ರೈತರಿಗೆ ಕೊಡಬೇಕಾದ ಅಮಾನತಿನಲ್ಲಿದ್ದ ಹಣ ದುರ್ಬಳಕೆಯಾಗಿರುವ ಕುರಿತು ಆಡಿಟ್ ವರದಿಯಲ್ಲಿ ಬೆಳಕಿಗೆ ಬಂದಿದೆ ಎಂದು  ವರದಿಯಲ್ಲಿನ ಅಂಶಗಳನ್ನು ವಿವರಿಸಿದ್ದಾರೆ.

2001ರಿಂದ 2005 ವರೆಗೆ  ಸತತ ಬರಗಾಲ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಯಿಂದ ರೈತರ ಸಂಕಷ್ಟ ಪರಿಹಾರಕ್ಕೆ ರಾಜ್ಯ ಸರ್ಕಾರ 3 ಮಾರ್ಚ್ 2004 ರಿಂದ 30 ಜೂನ್ 2005 ವರೆಗೆ ಸಾಲ ಮರುಪಾವತಿ ಮಾಡಿದ ರೈತರ ಸಾಲಗಳ ಮೇಲಿನ ಬಡ್ಡಿ ಮತ್ತು ದಂಡದ ಬಡ್ಡಿ ಮನ್ನಾ ಮಾಡುವಂತೆ ಆದೇಶ ಹೊರಡಿಸಿತ್ತು.

ಆದರೆ ಆಡಳಿತ ಮಂಡಳಿ ಸರ್ಕಾರದ ಆದೇಶ ಮುಚ್ಚಿಟ್ಟು, ರೈತರನ್ನು ವಂಚಿಸಿ ಬಡ್ಡಿ ವಸೂಲು ಮಾಡಿ, ಹಣವನ್ನು ಅಮಾನತಿನಲ್ಲಿಟ್ಟಿದ್ದಲ್ಲದೇ ರೈತರು ಬಡ್ಡಿ ಪಾವತಿಸಿದ್ದರೂ, ಬಡ್ಡಿ ಪಾವತಿಸಿಲ್ಲವೆಂದು ತಪ್ಪು ಮಾಹಿತಿ ನೀಡಿ ಸರ್ಕಾರದಿಂದ ರೂ.54,70,422 ರೈತರು ತುಂಬಬೇಕಾದ ಬಡ್ಡಿಯನ್ನು ಪಡೆದಿದೆ.

2006 ಜನವರಿ 1ರಿಂದ ಡಿಸೆಂಬರ್ 31 ವರೆಗಿನ ಅವಧಿಯಲ್ಲಿ ರೂ.25 ಸಾವಿರ ಬೆಳೆಸಾಲ ಪಡೆದ ರೈತರಿಗೆ ಸಿಗಬೇಕಾದ ಸಾಲ ಮನ್ನಾ ಕುರಿತು ಮಾಹಿತಿ ನೀಡದೇ, ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ರೈತರ ಹೆಸರಿನಲ್ಲಿ ತಾವೇ ಸಾಲ ಮರುಪಾವತಿ ಮಾಡಿ, ರೈತರಿಗೆ ಸಿಗಬೇಕಾದ ಸಾಲಮನ್ನಾ ಸೌಲಭ್ಯದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ರೈತರು ಸಾಲದಿಂದ ಮುಕ್ತರಾಗದೇ ಸಾಲದ ಸುಳಿಯಲ್ಲಿ ಸಿಕ್ಕು ಸಂಕಷ್ಟಕೊಳಗಾಗುವಂತೆ  ಮಾಡಿದ್ದಾರೆ.  ಡಿವಿಡೆಂಡ್ ವಿತರಣೆಯ್ಲ್ಲಲೂ ಹಣ ದುರುಪಯೋಗವಾಗಿದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಬಡ್ಡಿ ಮನ್ನಾ, ದಂಡದ ಬಡ್ಡಿ ಮನ್ನಾ ಹಾಗೂ ಸಾಲ ಮನ್ನಾ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ರೈತರ ಪಟ್ಟಿಯನ್ನು ಕೇಳಿದರೆ ಒದಗಿಸಿಲ್ಲ. ಈ ಕುರಿತು ಎ.ಆರ್, ಡಿ.ಆರ್.  ಹಾಗೂ ಸಹಾಯಕ ಜಂಟಿ ರಿಜಿಸ್ಟ್ರಾರ್ ಅವರಿಗೆ  ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ರೈತರು ಮನವಿಯಲ್ಲಿ ಆರೋಪಿಸಿದ್ದಾರೆ.

ಧರಣಿ ನಿರತರ ಜೊತೆಯಲ್ಲಿ ತಹಸೀಲದಾರ ಲೋಕೇಶ ಪಿ.ಎನ್. ಚರ್ಚಿಸಿದರು. ಈ ಸಂದರ್ಭದಲ್ಲಿ ತನಿಖಾಧಿಕಾರಿ ರಂಜನಗಿ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸೊಸೈಟಿಯ ಆಡಳಿತ ಮಂಡಳಿ ತಮಗೆ ಸೂಕ್ತ ಮಾಹಿತಿ ನೀಡಿಲ್ಲ. ಜೂ.6 ಒಳಗಾಗಿ ತನಿಖೆ ಕೈಗೊಂಡು ವರದಿ ಸಲ್ಲಿಸುವುದಾಗಿ ಧರಣಿ ನಿರತರಿಗೆ ತಿಳಿಸಿದರು.

ಜೂ.6 ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಸುರೇಶಗೌಡ ಪಾಟೀಲ, ಜಿ.ಪಂ.ಮಾಜಿ ಸದಸ್ಯ ಶಂಕರ ಮಾಡಲಗಿ ಮತ್ತಿತರರು ತಿಳಿಸಿದ್ದಾರೆ.

ಸಂಗಪ್ಪ ಕರಿಶೀರಿ, ಎಸ್.ಎಸ್.ಪಾಟೀಲ, ಗ್ರಾ.ಪಂ. ಸದಸ್ಯ ಜಯಪಾಲ ಬಾಂವಿ, ಯಶವಂತ ಮಾಳಣ್ಣವರ, ಪ್ರಕಾಶ ಗಾಡದ, ಶಿವಾನಂದ ದೇಶನೂರ, ವೀರನಗೌಡ ದಾನಗೌಡ್ರ, ಬಿ.ಬಿ. ಸಾಧುನವರ, ಪಿ.ಜಿ.ಪಾಟೀಲ, ಮಲಕಾಜಪ್ಪ ಬಂದಕ್ಕನವರ ಹಾಗೂ ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT